»   » 'ರಿಂಗ್ ರೋಡ್ ಶುಭ'ಗೆ ಟೈಟಲ್ ಟ್ರಬಲ್

'ರಿಂಗ್ ರೋಡ್ ಶುಭ'ಗೆ ಟೈಟಲ್ ಟ್ರಬಲ್

Posted By:
Subscribe to Filmibeat Kannada

ಸಿನಿಮಾಗಳಿಗಿಂತ ಹೆಚ್ಚಾಗಿ ಗಾಂಧಿನಗರ ಸದ್ದು ಮಾಡುತ್ತಿರುವುದೇ ಟೈಟಲ್ ವಿಷಯದಲ್ಲಿ. ಈ ಟೈಟಲ್ ನಂದು! ಆ ಟೈಟಲ್ ಸರಿಯಿಲ್ಲ! ಮತ್ತೊಂದು ಟೈಟಲ್ ತುಂಬಾ ಕಾಂಟ್ರವರ್ಸಿ! ಟೈಟಲ್ ಚೇಂಜ್ ಮಾಡುವವರೆಗೂ ಬಿಡುವುದಿಲ್ಲ! ಅಂತ ವಾಣಿಜ್ಯ ಮಂಡಳಿಯಲ್ಲಿ ದಿನಕ್ಕೊಂದು ಟೈಟಲ್ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.

ರಾಜ್ ಸ್ಮಾರಕದ ಸಂಭ್ರಮದಲ್ಲಿ ಕೆಲ ದಿನಗಳಿಂದ ಸೈಲೆಂಟಾಗಿದ್ದ ವಾಣಿಜ್ಯ ಮಂಡಳಿಯಲ್ಲಿ ಇದೀಗ ಮತ್ತೊಂದು 'ಟೈಟಲ್' ವಿವಾದ ಸೃಷ್ಟಿಸಿದೆ. ಅದೇ, ಹೆಣ್ಮಕ್ಕಳೆಲ್ಲಾ ಸೇರಿ ಮಾಡಿರುವ ಸಿನಿಮಾ 'ರಿಂಗ್ ರೋಡ್ ಶುಭ'.

ಎರಡು ವರ್ಷಗಳಿಂದ ಚಿತ್ರೀಕರಣ ನಡೆಸುತ್ತಿರುವ 'ರಿಂಗ್ ರೋಡ್ ಶುಭ' ಚಿತ್ರತಂಡ ಈ ವರ್ಷದ ಕೊನೆಗೆ, ತಪ್ಪಿದ್ರೆ ಮುಂದಿನ ವರ್ಷಾರಂಭಕ್ಕೆ ಚಿತ್ರವನ್ನು ತೆರೆಮೇಲೆ ತರುವ ತಯಾರಿಯಲ್ಲಿದೆ. ಶೂಟಿಂಗ್ ಗೆ ಕುಂಬಳಕಾಯಿ ಹೊಡೆದು ಪೋಸ್ಟ್ ಪ್ರೊಡಕ್ಷನ್ ಕೂಡ ಮುಗಿಸಿರುವ 'ರಿಂಗ್ ರೋಡ್ ಶುಭ' ಇದೀಗ ಸೆನ್ಸಾರ್ ಅಂಗಳಕ್ಕೆ ಹೋಗ್ಬೇಕಿತ್ತು. ಅಷ್ಟರಲ್ಲೇ ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿಯಿಂದ ಆಘಾತ ಎದುರಾಗಿದೆ. [ನಿರ್ಲಿಪ್ತಳಾದ ವಕೀಲೆ ಶುಭಾಗೆ ಜಾಮೀನು ಸಿಕ್ಕಿದ್ದೇಕೆ?]

ಸೆನ್ಸಾರ್ ಗೆ ಹೋಗುವ ಮುನ್ನ ವಾಣಿಜ್ಯ ಮಂಡಳಿಯಿಂದ ಪತ್ರ ಪಡೆಯೋದಕ್ಕಂತ, ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ KFCC ಮೆಟ್ಟಿಲೇರಿದ್ದಾರೆ. ಅಲ್ಲಿ ಟೈಟಲ್ ಬಗ್ಗೆ ತಗಾದೆ ತೆಗೆದ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಟೈಟಲ್ ಚೇಂಜ್ ಮಾಡುವವರೆಗೂ ಸೆನ್ಸಾರ್ ಗೆ ಲೆಟರ್ ಕೊಡುವುದಿಲ್ಲ ಅಂದಿದ್ದಾರೆ.

Ring Road Shubha2

''ಸಿನಿಮಾ ಶುರುಮಾಡುವುದಕ್ಕೂ ಮುನ್ನವೇ ಟೈಟಲ್ ರಿಜಿಸ್ಟರ್ ಮಾಡಿಸಲಾಗಿತ್ತು. ಅಂದು ಟೈಟಲ್ ಗೆ ಒಪ್ಪಿಗೆ ನೀಡಿದ್ದಕ್ಕೆ, ಅದೇ ಹೆಸರಲ್ಲಿ ನಾವು ಪ್ರಚಾರ ಮಾಡಿದ್ದೀವಿ. ಈಗ ಟೈಟಲ್ ಕೊಡುವುದಿಲ್ಲ ಅನ್ನುತ್ತಿದ್ದಾರೆ. ರಿಲೀಸ್ ಸಮಯದಲ್ಲಿ ಈ ಸಮಸ್ಯೆ ಯಾಕೆ ಅನ್ನುವುದು ಅರ್ಥವಾಗುತ್ತಿಲ್ಲ'', ಅಂತ ಟೈಟಲ್ ಸಮಸ್ಯೆ ಕುರಿತಾಗಿ 'ಫಿಲ್ಮಿಬೀಟ್ ಕನ್ನಡ'ಗೆ ಪ್ರಿಯಾ ಬೆಳ್ಳಿಯಪ್ಪ ತಿಳಿಸಿದರು.

''ಕೆಲವೊಂದು ಟೈಟಲ್ ಗಳಿಂದ ವಿವಾದ ಏಳುತ್ತಿದೆ. ಇನ್ಮುಂದೆ ಹೀಗಾಗಬಾರದೆಂಬ ಕಾರಣಕ್ಕೆ ಎಚ್ಚರವಹಿಸಲಾಗುತ್ತಿದೆ. 'ರಿಂಗ್ ರೋಡ್ ಶುಭ' ಅನ್ನುವ ಟೈಟಲ್ ಕೂಡ ವಿವಾದ ಸೃಷ್ಟಿಸುವ ಸಾಧ್ಯತೆಗಳಿವೆ. ಈಗಾಗಲೇ 'ಅಡ್ವೊಕೇಟ್ ಶುಭ' ಕುರಿತಾದ ಕೇಸ್ ಕೋರ್ಟ್ ನಲ್ಲಿದೆ. ಹೀಗಾಗಿ ಶುಭ ಅನ್ನುವ ಹೆಸರು ಮಾತ್ರ ತೆಗೆಯಿರಿ ಅನ್ನುವುದನ್ನ ಸೂಚಿಸಿದ್ದೀವಿ'', ಅಂತ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು ಹೇಳಿದ್ದಾರೆ.

Ring Road Shubha3

ಈ ಬಗ್ಗೆ ಪ್ರಿಯಾ ಬೆಳ್ಳಿಯಪ್ಪ ಮಾತನಾಡುತ್ತಾ ''ಭಾರತದಲ್ಲೇ ಎಷ್ಟೋ ಜನ ಶುಭ ಅನ್ನುವವರಿದ್ದಾರೆ. ಕೇಸ್ ಕಾರಣ ಕೊಟ್ಟು ಟೈಟಲ್ ಚೇಂಜ್ ಮಾಡಿ ಅಂದ್ರೆ ಹೇಗೆ? ಅದೊಂದೇ ಕೇಸ್ ಕುರಿತಾಗಿ ಇಡೀ ಸಿನಿಮಾ ಮಾಡಿಲ್ಲ. ಟೈಟಲ್ ನಲ್ಲಿ 'ಶುಭ' ಅನ್ನುವ ಹೆಸರು ತುಂಬಾ ಮುಖ್ಯ. ಈಗ ವಾಣಿಜ್ಯ ಮಂಡಳಿಗೆ ಮತ್ತೆ ಹೋಗುತ್ತಿದ್ದೀನಿ. ಮತ್ತೊಂದು ಸುತ್ತಿನ ಮಾತುಕತೆ ಮಾಡುತ್ತೀನಿ.'' ಅಂದರು.

'ರಿಂಗ್ ರೋಡ್ ಶುಭ' ಆಡಿಯೋ ರಿಲೀಸ್ ಗೆ ತೆರಳಿದ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಅಂದು ಗಮನಕ್ಕೆ ಬಾರದ ವಿಷಯ, ಇಂದು ಸಡ್ಡನ್ನಾಗಿ ಜ್ಞಾನೋದಯವಾಗಿರುವ ಕಾರಣ 'ರಿಂಗ್ ರೋಡ್ ಶುಭ' ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ. ಇಂದು 'ರಿಂಗ್ ರೋಡ್'ಗೆ ಕಿಡಿ ತಲುಪಿರುವ ವಿವಾದ ಮುಂದೆ ಎಲ್ಲಿವರೆಗೆ ಹೋಗಿ ತುಲುಪತ್ತೋ ಕಾದುನೋಡಬೇಕು. (ಫಿಲ್ಮಿಬೀಟ್ ಕನ್ನಡ)

English summary
Newcomer Priya Belliyappa directed 'Ring Road Shubha' is facing title trouble. KFCC has decided to give a nod only for 'Ring Road' and not 'Ring Road Shubha', since Advocate Shubha's case is still in court.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada