ಕೊರೊನಾ ಯೋಧರಿಗೆ ತನ್ನ ಎಂಟು ಹೋಟೆಲ್ ಬಿಟ್ಟುಕೊಟ್ಟ ಖ್ಯಾತ ನಿರ್ದೇಶಕ
ಕೊರೊನಾ ವೈರಸ್ ಭಾರತವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಮೇ 3 ರ ವರೆಗೆ ಲಾಕ್‌ಡೌನ್ ಮುಂದುವರೆಸಲಾಗಿದ್ದು, ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ.
Recommended Video
ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಈ ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಜೀವದ ಮೇಲಿನ ಹಂಗು ತೊರೆದು ದೇಶವನ್ನುಳಿಸಲು ಮುಂಚೂಣಿಯಲ್ಲಿ ನಿಂತು ಸೇವೆ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಾದಿಯಾಗಿ ನಾಗರೀಕರೆಲ್ಲಾ ಈ ಆರೋಗ್ಯ ಯೋಧರ ಸೇವೆಗೆ ವಂದನೆ ತಿಳಿಸಿದೆ. ಸೆಲೆಬ್ರಿಟಿಗಳು ಆರೋಗ್ಯ ಯೋಧರ ಸಹಾಯಕ್ಕೆ ದೇಣಿಗೆ ನೀಡಿದ್ದಾರೆ. ಹೀಗೆ ಕೊರೊನಾ ಯೋಧರಿಗೆ ನೆರವಾದವರ ಪಟ್ಟಿಗೆ ಹೊಸ ಸೇರ್ಪಡೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ.

ತಮ್ಮ ಐಶಾರಾಮಿ ಹೋಟೆಲ್‌ಗಳನ್ನು ಬಿಟ್ಟುಕೊಟ್ಟ ರೋಹಿತ್
ಕರ್ನಾಟಕ ಮೂಲದ ರೋಹಿತ್ ಶೆಟ್ಟಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಪೊಲೀಸರ ಸಹಾಯಕ್ಕೆ ಧಾವಿಸಿದ್ದು, ಅವರಿಗಾಗಿ ತನ್ನ ಐಶಾರಾಮಿ ಹೋಟೆಲ್ ಅನ್ನೇ ಬಿಟ್ಟುಕೊಟ್ಟಿದ್ದಾರೆ. ಪೊಲೀಸರ ಶೌರ್ಯ, ಸಾಹಸಭರಿತ ಕತೆಗಳನ್ನೇ ಹೆಚ್ಚಾಗಿ ತಮ್ಮ ಸಿನಿಮಾದಲ್ಲಿ ತೋರಿಸುವ ನಿರ್ದೇಶಕ ರೋಹಿತ್ ಶೆಟ್ಟಿ, ಕೊರೊನಾ ಸಮಯದಲ್ಲಿ ಪೊಲೀಸರ ಸಹಾಯಕ್ಕೆ ಮುಂದಾಗಿದ್ದಾರೆ.

ಎಂಟು ಹೋಟೆಲ್‌ಗಳನ್ನು ಪೊಲೀಸರಿಗೆ ಬಿಟ್ಟುಕೊಟ್ಟಿದ್ದಾರೆ
ರೋಹಿತ್ ಶೆಟ್ಟಿ ಅವರು ಮುಂಬೈನಲ್ಲಿನ ತಮ್ಮ ಎಂಟು ಹೋಟೆಲ್‌ಗಳನ್ನು ಪೊಲೀಸರಿಗಾಗಿ ಉಚಿತವಾಗಿ ಬಿಟ್ಟುಕೊಟ್ಟಿದ್ದು, ಪೊಲೀಸರು ತಂಗಲು ವ್ಯವಸ್ಥೆ ಮಾಡಿಕೊಟ್ಟಿರುವುದಲ್ಲದೆ, ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ.

ರೋಹಿತ್ ಶೆಟ್ಟಿಗೆ ಧನ್ಯವಾದ ಹೇಳಿದ ಮುಂಬೈ ಪೊಲೀಸ್
ರೋಹಿತ್ ಶೆಟ್ಟಿ ಸಹಾಯದ ಬಗ್ಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, ರೋಹಿತ್ ಶೆಟ್ಟಿ ನೀಡಿರುವ ನೆರವಿಗೆ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಕಚೇರಿಯನ್ನೇ ಕೊಟ್ಟಿರುವ ಶಾರುಖ್ ಖಾನ್
ಶಾರುಖ್ ಖಾನ್ ತಮ್ಮ ನಾಲ್ಕಂತಸ್ತಿನ ಕಚೇರಿಯನ್ನು ಕೊರೋನಾ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಟ್ಟಿದ್ದರು. ನಟ ಸೋನು ಸೂದ್ ಅವರು ತಮ್ಮ ಪಂಚತಾರಾ ಹೋಟೆಲ್ ಅನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆಂದು ಬಿಟ್ಟುಕೊಟ್ಟಿದ್ದರು. ಈಗ ರೋಹಿತ್ ಶೆಟ್ಟಿ ಪೊಲೀಸರಿಗಾಗಿ ಹೋಟೆಲ್ ಅನ್ನು ಬಿಟ್ಟುಕೊಟ್ಟಿದ್ದಾರೆ.


Click it and Unblock the Notifications











