»   » ಮತ್ತೆ ಎಸ್ ನಾರಾಯಣ್ ಜೊತೆ ರಮೇಶ್, ಮೋಹನ್

ಮತ್ತೆ ಎಸ್ ನಾರಾಯಣ್ ಜೊತೆ ರಮೇಶ್, ಮೋಹನ್

Posted By:
Subscribe to Filmibeat Kannada
S Narayan
ಎಸ್ ನಾರಾಯಣ್, ಎಸ್ ಮೋಹನ್ ಹಾಗೂ ರಮೇಶ್ ಅರವಿಂದ್ ನಟನೆಯಲ್ಲಿ 'ಕ' ಕಾರದಿಂದ ಪ್ರಾರಂಭವಾದ ಪ್ರಾಣಿಗಳ ಹೆಸರಿರುವ ಚಿತ್ರಗಳು ಬಂದು ಅವು ಸಾಕಷ್ಟು ಯಶಸ್ವಿಯೂ ಆಗಿದ್ದವು. ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಹಾಗೂ ಕತ್ತೆಗಳು ಸಾರ್ ಕತ್ತೆಗಳು ಎಂಬ ಹೆಸರಿನ ಆ ಚಿತ್ರಗಳನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದರು. ಈಗ ಎಸ್ ನಾರಾಯಣ್ ಆ ಚಿತ್ರಗಳಲ್ಲಿದ್ದ ತಮ್ಮ ಸಹನಟರ ಜೊತೆ ಇನ್ನೊಂದು ಚಿತ್ರ ಮಾಡಲು ಹೊರಟಿದ್ದಾರೆ. ಹೆಸರೇನು ಕೇಳಬೇಡಿ!

ಆದರೆ ಈ ಬಾರಿ ಸ್ವಲ್ಪ ಬದಲಾವಣೆಯಿದೆ. ಅದೆಂದರೆ, ಆ ಚಿತ್ರವನ್ನು ಈ ಮೊದಲಿನ ಹಾಗೆ ರಾಜೇಂದ್ರ ಸಿಂಗ್ ನಿರ್ದೇಶಿಸುವ ಬದಲಿಗೆ ಎಸ್ ನಾರಾಯಣ್ ಅವರೇ ನಿರ್ದೇಶಿಸಲಿದ್ದಾರೆ. ನಟನೆ ಜೊತೆಗೆ ನಿರ್ದೇಶನವನ್ನು ಮಾಡಲಿರುವ ನಾರಾಯಣ್, ಈ ಚಿತ್ರಕ್ಕೆ ತಾವೇ ಕಥೆ, ಚಿತ್ರಕಥೆ-ಸಂಭಾಷಣೆ ಹಾಗೂ ಸಂಗೀತವನ್ನೂ ನೀಡಲಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರವನ್ನು ಅವರೇ ತಮ್ಮ ಮತ್ತೊಬ್ಬ ಪುತ್ರ ಪವನ್ ಕಾರ್ತಿಕ್ ಹೆಸರಲ್ಲಿ ನಿರ್ಮಾಣವನ್ನೂ ಮಾಡಲಿದ್ದಾರೆ.

ಬರಲಿರುವ ಹೊಸ ಚಿತ್ರಕ್ಕೆ ಹೆಸರು ಸೂಚಿಸಲಾಗಿದೆ. ಸೂಕ್ತ ಶೀರ್ಷಿಕೆಯನ್ನು ಸಿನಿಪ್ರೇಕ್ಷಕರೇ ಸೂಚಿಸಬೇಕು ಎಂಬ ಮನವಿ ಬಂದಿದೆ. ಆಯ್ಕೆಯಾದ ಶೀರ್ಷಿಕೆಗೆ ನವೆಂಬರ್ 23ರಂದು ಬೆಂಗಳೂರಿನಲ್ಲಿ ನಡೆಯುವ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದಂತೆ. ಆಸಕ್ತರು ಅವರ ಚಿತ್ರಕ್ಕೆ ತಮ್ಮ ಶೀರ್ಷಿಕೆಯನ್ನು ಈ ವಿಳಾಸಕ್ಕೆ ಕಳುಹಿಸಬಹುದು. ವಿಳಾಸ: ನಂ.17, 2ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, ಲಕ್ಷ್ಮೀ ನಗರ, ಬಸವೇಶ್ವರ ನಗರ, ಬೆಂಗಳೂರು- 560 079.

ಸ್ವಲ್ಪ ಕಾಲದ ಹಿಂದೆ ಇನ್ನು ನಿರ್ದೇಶನ ಮಾಡುವುದಿಲ್ಲ ಎಂದು ಸ್ವಯಂ ನಿವೃತ್ತಿ ಘೋಷಿಸಿದ್ದ ಎಸ್ ನಾರಾಯಣ್, ಆನಂತರ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಹಿತವಚನದಂತೆ ಮತ್ತೆ ನಿರ್ದೇಶನ ಮಾಡಲು ಒಪ್ಪಿದ್ದರು. ಆದರೆ ಮನಸ್ಸು ಬದಲಾಯಿಸಿದ್ದ ಅವರು ತಕ್ಷಣಕ್ಕೆ ಅಪ್ಪಿಕೊಂಡಿದ್ದು ಕಿರುತೆರೆಯನ್ನು. ಜೀ ಕನ್ನಡದಲ್ಲಿ 'ಲಕ್ಷ್ಮೀ ಸಂಸಾರ' ಧಾರಾವಾಹಿಯ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದ ಅವರು ಇದೀಗ ಹೊಸ ಚಿತ್ರವನ್ನು ಘೋಷಿಸಿದ್ದಾರೆ.

ಈ ಮೊದಲಿನಂತೆ 'ಕ' ಅಕ್ಷರದಿಂದಲೇ ಪ್ರಾರಂಭವಾಗುವ ಶೀರ್ಷಿಕೆ ಬೇಕೆಂದು ಅವರೇನೂ ಹೇಳಿಲ್ಲ. ಆದರೆ ಯಾರೋ ಒಬ್ಬರು 'ಕ' ಕಾರದಿಂದಲೇ ಪ್ರಾರಂಭವಾಗುನ 'ಕುನ್ನಿಗಳು ಸಾರ್ ಕುನ್ನಿಗಳು ಅಥವಾ 'ಕಾಗೆಗಳು ಸಾರ್ ಕಾಗೆಗಳು' ಎಂದು ಹೆಸರಿಡಬೇಕೆಂದು ಪತ್ರ ಬರೆಯಲು ಸಿದ್ಧವಾಗಿರುವ ಸುದ್ದಿ ಗಾಂಧಿನಗರದಿಂದ ಬಂದಿದೆ. ಅದೆಷ್ಟು ಹೆಸರುಗಳು ಎಸ್ ನಾರಾಯಣ್ ಮನೆಬಾಗಿಲು ತಲುಪುತ್ತೋ, ಯಾವ ಟೈಟಲ್ ಫೈನಲ್ ಆಗುತ್ತೋ ಎಂಬ ಕುತೂಹಲ ಎಲ್ಲರಲ್ಲಿದೆ. (ಒನ್ ಇಂಡಿಯಾ ಕನ್ನಡ)

English summary
Senior Kannada Director S Narayan to produce and direct a movie very shortly. S Narayana, Ramesh Aravind and S Mohan to act and in this movie which includes story, screenplay, dialogues and music by S Narayan himself. 
 
Please Wait while comments are loading...