»   » 'ನಮ್ಮ ನಾಡು, ನಮ್ಮ ಧ್ವಜ'ಕ್ಕೆ ಕನ್ನಡ ಚಿತ್ರರಂಗದ ಸಾಥ್

'ನಮ್ಮ ನಾಡು, ನಮ್ಮ ಧ್ವಜ'ಕ್ಕೆ ಕನ್ನಡ ಚಿತ್ರರಂಗದ ಸಾಥ್

Posted By:
Subscribe to Filmibeat Kannada

ಕನ್ನಡದ ನಾಡ ಧ್ವಜಕ್ಕೆ ಕಾನೂನಾತ್ಮಕ ಮನ್ನಣೆ ಸಿಗಬೇಕು ಎಂದು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದೇ ವಿಷಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸರ್ಕಾರದ ಈ ನಿರ್ಧಾರ ಕೆಲವರಿಗೆ ಸರಿ ಎನಿಸಿದರೆ ಇನ್ನೂ ಕೆಲವರಿಗೆ ಅನವಶ್ಯಕ ಎನಿಸಿದೆ.

'ನನ್ನ ರಾಜ್ಯ, ನನ್ನ ಬಾವುಟ'ಕ್ಕೆ ಭರ್ಜರಿ ಬೆಂಬಲ ನೀಡುತ್ತಿರುವ 'ಶಿವು ಅಡ್ಡ'

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ನಿರ್ದೇಶಕರ ಸಂಘದ ಅಧ್ಯಕ್ಷರಾದ ವಿ.ನಾಗೇಂದ್ರ ಪ್ರಸಾದ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ.

ಸಾ.ರಾ.ಗೋವಿಂದು ಹೇಳಿಕೆ

''ಸರ್ಕಾರದ ಈ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಏಕೆಂದರೆ ಇದರಿಂದ ಯಾವುದೇ ತೊಂದರೆ ಆಗಲ್ಲ. ನಾವು ನಮ್ಮದೇ ಆದ ನಾಡಗೀತೆ ಮಾಡಿಕೊಂಡಿಲ್ವಾ.. ಇದು ಕೂಡ ಅದೇ ರೀತಿ. ನಾವು ಭಾರತದ ಐಕ್ಯತೆ ಕಾಪಾಡುವುದರ ಜೊತೆಗೆ ನಮ್ಮ ನಾಡಿನ ಅಸ್ತಿತ್ವವನ್ನು ಇದರ ಮೂಲಕ ಉಳಿಸಿಕೊಳ್ಳಬೇಕು'' - ಸಾ.ರಾ.ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷ

ಸರ್ಕಾರ ಮಾನ್ಯತೆ ಮಾಡಿದರೆ

''ನಮ್ಮ ಬಾವುಟಗಳನ್ನು MES ನವರು ಹರಿದು ಹಾಕುವುದು, ಸುಟ್ಟು ಹಾಕುವುದು ಇವೆಲ್ಲ ನಡೆಯುತ್ತಿದೆ. ಈಗ ಸರ್ಕಾರ ಮಾನ್ಯತೆ ಮಾಡಿದರೆ ಮುಂದಿನ ದಿನದಲ್ಲಿ ಅದಕ್ಕೆ ಶಿಕ್ಷೆ ಆಗುತ್ತದೆ. ಸರ್ಕಾರದ ನಿಲುವನ್ನು ಯಾರು ವಿರೋಧಿಸುತ್ತಾರೆಯೋ ಅದನ್ನು ನಾನು ಖಂಡಿಸುತ್ತೇನೆ'' - ಸಾ.ರಾ.ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷ

ಕನ್ನಡ ಬಾವುಟ: ಇದು ಚುನಾವಣೆಯ 'ವ್ಯೂಹ' ಎಂದ ನಟ ಜಗ್ಗೇಶ್

ವಿ.ನಾಗೇಂದ್ರ ಪ್ರಸಾದ್ ಮಾತು

''ಭಾರತದ ಸಂವಿಧಾನ ರಾಷ್ಟ್ರಧ್ವಜ ಬಿಟ್ಟರೆ ಬೇರೆ ಧ್ವಜಕ್ಕೆ ಅಂಗೀಕಾರ ಕೊಡುವುದಿಲ್ಲ. ನಮ್ಮ ಕನ್ನಡ ಧ್ವಜಕ್ಕೆ ಯಾವ ಅಂಗೀಕಾರವು ಬೇಕಿಲ್ಲ. ನಮ್ಮದು ಭಾವನಾತ್ಮಕ ಧ್ವಜ. ಅದನ್ನು ಕಾನೂನಾತ್ಮಕವಾಗಿ ಶಿಫಾರಸ್ಸು ಮಾಡುವ ಅಗತ್ಯ ಇಲ್ಲ'' - ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕರ ಸಂಘದ ಅಧ್ಯಕ್ಷ.

ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದೇವೆ

''ನಮ್ಮ ಧ್ವಜವನ್ನು ಏಕೀಕರಣದ ಸಂದರ್ಭದಿಂದ ಇವತ್ತಿನ ವರೆಗೂ ಭಾವನಾತ್ಮಕವಾಗಿ ಒಪ್ಪಿಕೊಂಡು ಬಂದಿದ್ದೇವೆ. ಅದನ್ನು ಯಾರಾದರೂ ವಿರೋಧಿಸಿದಲ್ಲಿ ಆ ಪ್ರಶ್ನೆ ಬರುತ್ತದೆ. ಯಾರು ಅದನ್ನು ವಿರೋಧಿಸಿಲ್ಲ ಯಾಕಂದ್ರೆ, ಯಾರಿಗೂ ಅದರಿಂದ ತೊಂದರೆಯಾಗುತ್ತಿಲ್ಲ'' - ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕರ ಸಂಘದ ಅಧ್ಯಕ್ಷ.

ಕನ್ನಡಿಗರ ಮನಸ್ಸಿನಲ್ಲಿದೆ

''ನಮಗೆ ಕನ್ನಡ ಅಂತ ಹೇಳಿದ ತಕ್ಷಣ ಕೆಂಪು ಹಳದಿ ಬಾವುಟ ಕಣ್ಣು ಮುಂದೆ ಬರುತ್ತದೆ. ನಮ್ಮ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಕೃ, ಮಾ.ರಾಮ್ ಮೂರ್ತಿ ಅಂಥವರು ಆ ಬಾವುಟ ಹಿಡಿದು ಜನರ ಮನಸ್ಸಿನಲ್ಲಿ ಅದನ್ನು ಸ್ಥಾಪನೆ ಮಾಡಿದ್ದಾರೆ. ಈಗ ಅದನ್ನು ಯಾವುದೇ ಕಾನೂನು ಕಿತ್ತು ಹಾಕುವುದಕ್ಕೆ ಸಾಧ್ಯ ಇಲ್ಲ'' - ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕರ ಸಂಘದ ಅಧ್ಯಕ್ಷ.

English summary
KFCC President Sa Ra Govindu And Directors Association President V.Nagendra Prasad Supports 'My State My Flag' Campaign.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada