ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ 'ಸಲಗ' ಟೀಂ
ನಟ ದುನಿಯ ವಿಜಯ್ ಬಹುದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. 'ಕುಸ್ತಿ' ಅಖಾದಲ್ಲಿ ಬ್ಯುಸಿ ಇದ್ದ ವಿಜಿ 'ಕುಸ್ತಿ'ಯನ್ನು ಅರ್ಧಕ್ಕೆ ನಿಲ್ಲಿಸಿ ಈಗ 'ಸಲಗ' ಆಗಲು ಹೊರಟಿದ್ದಾರೆ. ಅಚ್ಚರಿ ಅಂದ್ರೆ 'ಸಲಗ'ಗೆ ದುನಿಯ ವಿಜಯ್ ಅವರೆ ಮಾವುತ. ಹೌದು, 'ಸಲಗ' ಚಿತ್ರದಲ್ಲಿ ನಾಯಕನಾಗಿ ಮಿಂಚುವ ಜೊತೆಗೆ ವಿಜಿ ಮತ್ತೊಂದು ದೊಡ್ಡ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
'ಸಲಗ' ಚಿತ್ರದ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ ವಿಜಿ. ಈಗಾಗಲೆ ಚಿತ್ರದ ಒಂದಿಷ್ಟು ಕೆಲಸಗಳು ಪೂರ್ಣಡೊಂಡಿದ್ದು ಇತ್ತೀಚಿಗಷ್ಟೆ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿದೆ ಚಿತ್ರತಂಡ. ವಿಶೇಷ ಅಂದ್ರೆ ಸವದತ್ತಿ ಯಲ್ಲಮ್ಮನ ಸನ್ನಿಧಿಗೆ ಭೇಟಿ ನೀಡಿ ಯಲ್ಲಮ್ಮನ ಬಳಿ ಸ್ಕ್ರಿಪ್ಟ್ ಇಟ್ಟು ಪೂಜೆ ಮಾಡಿದೆ ಚಿತ್ರತಂಡ.
ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟ ಮತ್ತು ನಿರ್ದೇಶಕ ದುನಿಯ ವಿಜಯ್, ಪತ್ನಿ ಕೀರ್ತಿ ಮತ್ತು ಮಗ ಸಾಮ್ರಾಟ್ ಸೇರಿದಂತೆ ಇಡಿ ಚಿತ್ರತಂಡ ವಿಶೇಷ ಪೂಜೆ ಮಾಡಿ ದೇವಿ ದರ್ಶನ ಪಡೆದು ಸಂತಸಪಟ್ಟಿದ್ದಾರೆ.

ಒಂದೊಳ್ಳೆ ಕತೆ ರೆಡಿ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ 'ಸಲಗ' ಟೀಂಗೆ ಯಲ್ಲಮ್ಮನ ಆಶೀರ್ವಾದ ಸಿಕ್ಕಿದೆ. 'ಟಗರು' ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕರು 'ಸಲಗ' ಚಿತ್ರಕ್ಕೂ ಕೆಲಸಮಾಡುತ್ತಿದ್ದಾರೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಮತ್ತು ನಟರಾದ ಡಾಲಿ ಧನಂಜಯ್, ಕಾಕ್ರೋಚ್ ಸುಧೀಂದ್ರ ಕೂಡ ಸೇರ್ಪಡೆಯಾಗಿದ್ದಾರೆ.

ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿರುವ 'ಸಲಗ' ಚಿತ್ರದಲ್ಲಿ ದೊಡ್ಡ ತಂತ್ರಜ್ಞರ ಬಳಗವೆ ಇದೆ. ಸದ್ಯ ಪೂಜೆ ಮುಗಿಸಿರುವ ಚಿತ್ರತಂಡ ಜೂನ್ 6ರಿಂದ ಚಿತ್ರೀಕರಣಕ್ಕೆ ಹೊರಡುವ ಸಾಧ್ಯತೆ ಇದೆ.


Click it and Unblock the Notifications











