»   » ಸಮಂತಾ, ಕಾಜಲ್ ಇಲ್ಲಾಂದ್ರೆ ಕನ್ನಡ ಸಿನಿಮಾ ಹಿಟ್ ಆಗಲ್ವಾ?

ಸಮಂತಾ, ಕಾಜಲ್ ಇಲ್ಲಾಂದ್ರೆ ಕನ್ನಡ ಸಿನಿಮಾ ಹಿಟ್ ಆಗಲ್ವಾ?

Posted By:
Subscribe to Filmibeat Kannada

ಕನ್ನಡ ಸಿನಿಮಾಗಳು ಹಿಟ್ ಆಗಬೇಕಿದ್ರೆ ಬಹುಬೇಡಿಕೆಯ ಪರಭಾಷಾ ನಟಿಯರು ಬೇಕಾಗಿಲ್ಲ ಅಥವಾ ಸನ್ನಿ ಲಿಯೋನ್ ಐಟಂ ಸಾಂಗೂ ಬೇಕಾಗಿಲ್ಲ ಎನ್ನುವುದನ್ನು ಎಷ್ಟೋ ಬಾರಿ ಕನ್ನಡಿಗರು ಪ್ರೂವ್ ಮಾಡಿದ್ದಾರೆ.

ಯಾವುದಾದರೂ ದೊಡ್ಡ ಸಿನಿಮಾ ಸೆಟ್ಟೇರಿದಾಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ಚಿತ್ರೋದ್ಯಮದಿಂದ ಅವರು ಬರುತ್ತಾರೆ, ಇವರು ಆಯ್ಕೆಯಾಗಿದ್ದಾರೆ ಎನ್ನುವ ಗಿಮಿಕ್ ಸುದ್ದಿಗಳಿಗೆ ನಮ್ಮಲ್ಲಿ ಬರವಿಲ್ಲ.

ಜೋಗಯ್ಯ ಚಿತ್ರದ ಸನ್ನಿವೇಶವೊಂದರಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಕಾಣಿಸಿಕೊಳ್ಳಲಿದ್ದಾರೆಂದು ನಿರ್ದೇಶಕ ಪ್ರೇಮ್ ಗಿಮಿಕ್ ಮಾಡಿದ್ದರು. ನಂತರ ಸ್ವತಃ ರಜನೀಕಾಂತ್ ಅವರೇ ಆ ಸುದ್ದಿಯನ್ನು ಅಲ್ಲಗಳೆದಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. (ಯಶ್ ಜೊತೆ ಸಮಂತಾ)

ಪರಭಾಷೆಯ ಬೇಡಿಕೆಯ ನಟ/ನಟಿಯರ ಡೇಟ್ಸ್ ಅಧಿಕೃತವಾಗಿ ಪಕ್ಕಾ ಆಗದೇ, ಸುಖಾಸುಮ್ಮನೆ ತಮ್ಮ ಸಿನಿಮಾದ ಬಗ್ಗೆ ಗಾಳಿಸುದ್ದಿ ಹಬ್ಬಿಸಿ ಚಿತ್ರತಂಡದವರು ಅದ್ಯಾಕೆ ಆನಂದ ಅನುಭವಿಸುತ್ತಿರೋ ದೇವರೇ ಬಲ್ಲ.

ಟಾಲಿವುಡ್/ ಕಾಲಿವುಡ್ ಚಿತ್ರೋದ್ಯಮದ ಬಹುಬೇಡಿಕೆಯ ನಟಿ ಸಮಂತಾ ಇನ್ನೇನು ಕನ್ನಡ ಸಿನಿಮಾಕ್ಕೆ ಬಂದೇ ಬಿಟ್ಟರು ಎಂದು ಸುದ್ದಿಯಾಗಿದ್ದೇ ಆಗಿದ್ದು. ಸದ್ಯದ ಸುದ್ದಿಯ ಪ್ರಕಾರ ಸಮಂತಾ ಯಾವುದೇ ಡೇಟ್ಸ್ ಕನ್ನಡ ಸಿನಿಮಾಗೆ ನೀಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೊಬ್ರಿ ಮಂಜು ಹೇಳಿದ್ದು

ನನ್ನ ಮುಂದಿನ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಶೂಟಿಂಗ್ ನಲ್ಲಿರುವ ಮಾಸ್ಟರ್ ಪೀಸ್ ಚಿತ್ರದ ನಂತರ ಯಶ್ ನನ್ನ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರಕ್ಕೂ ಮುನ್ನ ಚಿತ್ರೀಕರಣ ಆರಂಭವಾಗಲಿದೆ ಎಂದು ಕೊಬ್ರಿ ಮಂಜು ಹೇಳಿದ್ದರು.

ಸಮಂತಾ ಹೀರೋಯಿನ್

ಸಮಂತಾ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಲಿದ್ದಾರೆ. ಈಗಾಗಲೇ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಡೇಟ್ಸ್ ಹೊಂದಾಣಿಕೆಯಾದರೆ ಅವರೇ ನನ್ನ ಸಿನಿಮಾದ ನಾಯಕಿ. ಒಂದು ವೇಳೆ ಡೇಟ್ಸ್ ಹೊಂದಾಣಿಕೆಯಾಗಿಲ್ಲಾಂದ್ರೆ ಕಾಜಲ್ ಅಗರವಾಲ್ ನನ್ನ ಸಿನಿಮಾದಲ್ಲಿ ನಟಿಸಲಿದ್ದಾರೆಂದು ನಿರ್ಮಾಪಕ ಕೊಬ್ರಿ ಮಂಜು ಹೇಳಿದ್ದರು.

ಆದರೆ ಸಮಂತಾ ವಕ್ತಾರ ಹೇಳೋದೇ ಬೇರೆ

ಕನ್ನಡ ಸಿನಿಮಾದಲ್ಲಿ ನಟಿಸುವ ಯಾವುದೇ ಆಫರ್ ಸಮಂತಾ ಒಪ್ಪಿಲ್ಲ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಮಂತಾ ಬ್ಯೂಸಿಯಾಗಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಲು ಸದ್ಯ ಅವರಿಗೆ ಪುರುಷೊತ್ತಿಲ್ಲ ಎಂದು ಸಮಂತಾ ವಕ್ತಾರರು ಸ್ಪಷ್ಟ ಪಡಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಾಜಲ್ ಸುತ್ತ ಸುದ್ದಿ

ಇನ್ನು ಕೊಬ್ರಿ ಮಂಜು ಚಿತ್ರಕ್ಕೆ ನಾಯಕಿ ಯಾರು ಆಗುತ್ತಾರೆ ಎನ್ನುವ ಸುದ್ದಿ ಕಾಜಲ್ ಅಗರವಾಲ್ ಸುತ್ತ ತಿರುಗಿದರೆ ಆಶ್ಚರ್ಯ ಪಡಬೇಕಾಗಿಲ್ಲ. ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದಲ್ಲಿ ಕಾಜಲ್ ಅಗರವಾಲ್ ನಟಿಸಲಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಆ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದು ರುಚಿತಾ ರಾಮ್.

ಸುದೀಪ್ ಚಿತ್ರಕ್ಕೂ ಸುದ್ದಿಯಾಗಿತ್ತು

ಈ ಮೊದಲು ಕೂಡಾ ನಟಿ ಸಮಂತಾ, ಸುದೀಪ್‌ಗೆ ನಾಯಕಿಯಾಗಿ ಬರುತ್ತಾರೆಂದು ಸುದ್ದಿಯಾಗಿತ್ತು, ನಂತರ ಆ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ ಎಂದು ವರದಿಯಾಗಿತ್ತು. ಮಾಸ್ಟರ್ ಪೀಸ್ ಚಿತ್ರದ ನಂತರ ಕೊಬ್ರಿ ಮಂಜು ನಿರ್ಮಾಣದ ಯಶ್ ಹೊಸ ಸಿನಿಮಾ ಸೆಟ್ಟೇರಲಿದೆ. ಚಿತ್ರವನ್ನು ಮುರಳಿ ಮೀಟ್ಸ್ ಮೀರಾ ಚಿತ್ರದ ನಿರ್ದೇಶಕ ಮಹೇಶ್ ರಾವ್ ನಿರ್ದೇಶಿಸಲಿದ್ದಾರೆ.

English summary
Samantha busy with Telugu and Tamil films, no time for Kannada movies right now, Samantha spokes person.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada