ಅಯ್ಯೋ, ಆ ಮಗುವಿಗೆ ಸಹಾಯ ಮಾಡಲಾಗುತ್ತಿಲ್ಲವಲ್ಲಾ..: ಸಂಚಾರಿ ವಿಜಯ್ ಹಂಚಿಕೊಂಡ ನೋವಿನ ಘಟನೆ
ವಿಚಿತ್ರ ರೀತಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಐದೂವರೆ ವರ್ಷದ ಸಣ್ಣ ಮಗು, ಆಸ್ಪತ್ರೆ ಬೆಡ್ ಮೇಲೆ ಮಲಗಿ, ಬಾಯಿಂದ ರಕ್ತ ಒಸರುತ್ತಿದ್ದರೂ, ಆ ನೋವಿನಲ್ಲೂ ನಗುತ್ತಿರುವ ಹೃದಯ ಹಿಂಡುವ ಚಿತ್ರವೊಂದನ್ನು ನಟ ಸಂಚಾರಿ ವಿಜಯ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
Recommended Video
ಐದೂವರೆ ವರ್ಷದ ಮಗುವಿನ ಬಾಯಿಂದ ರಕ್ತ ಚಿಮ್ಮುತ್ತಿರುವ ಚಿತ್ರಗಳು ನೋಡಲು ಮನಸ್ಸಿಗೆ ಹಿಂಸೆ ಎನಿಸುತ್ತದೆ. ಆದರೆ ಅದನ್ನು ಉದ್ದೇಶಪೂರ್ವಕವಾಗಿಯೇ ಹಂಚಿಕೊಂಡಿದ್ದಾರೆ ಸಂಚಾರಿ ವಿಜಯ್. ಜೊತೆಗೆ ಆ ಚಿತ್ರಗಳ ಹಿಂದಿನ ನೋವಿನ ಕತೆಯನ್ನೂ ಸಹ ಹೇಳಿದ್ದಾರೆ.
ಸಂಚಾರಿ ವಿಜಯ್ ಹಂಚಿಕೊಂಡಿರುವ ಚಿತ್ರದಲ್ಲಿನ ಮಗು ಅದೇ ಅವಸ್ಥೆಯಲ್ಲಿ ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿದೆ. ಆ ಮಗುವಿಗೆ leukocyte adhesion ಎಂಬ ವಿರಳಾತಿವಿರಳ ಕ್ಯಾನ್ಸರ್ ಆಗಿದೆ. ಮಗುವಿನ ಪೋಷಕರಿಗೆ ಇರುವುದು ಒಂದೇ ಮಗು ಅದನ್ನು ಉಳಿಸಿಕೊಳ್ಳಲು ತಮ್ಮದೆಲ್ಲವನ್ನೂ ಪಣಕ್ಕಿಟ್ಟಿದ್ದಾರೆ, ಆದರೆ ಯಾವುದೂ ಸಾಕಾಗುತ್ತಿಲ್ಲ.

ತಿಂಗಳ ಬಾಡಿಗೆ ಕಟ್ಟಲು ಪರದಾಟ
ತಿಂಗಳಿಗೆ 12 ಸಾವಿರ ಬಾಡಿಗೆ ಕೊಡಲು ಒದ್ದಾಡುತ್ತಿರುವ ಪೋಷಕರಿಗೆ ಮಗನನ್ನು ಕ್ಯಾನ್ಸರ್ ಮಹಾಮಾರಿಯಿಂದ ಉಳಿಸಿಕೊಳ್ಳಲು 40-50 ಲಕ್ಷ ಹಣದ ಅವಶ್ಯಕತೆ ಇದೆ. ಸಂಚಾರಿ ವಿಜಯ್ ಸತತ ಒಂದು ವಾರದಿಂದ ಮಗುವಿನ ಸಹಾಯ ಮಾಡಲು ಪ್ರಯತ್ನ ಪಡುತ್ತಲೇ ಇದ್ದಾರೆ ಆದರೆ ಸಾಧ್ಯವಾಗುತ್ತಿಲ್ಲವೆಂದು ನೋವಿನಿಂದ ಇಂದು ಫೇಸ್‌ಬುಕ್‌ನಲ್ಲಿ ಇಂದು ಅಸಹಾಯಕತೆ ಹಂಚಿಕೊಂಡಿದ್ದಾರೆ ಜೊತೆಗೆ ತಮ್ಮ ಗುಣವುಳ್ಳ ಗೆಳೆಯರು ಮುಂದೆ ಬಂದು ಸಹಾಯ ಮಾಡಬೇಕು ಎಂದು ಕೈಚಾಚಿದ್ದಾರೆ.

ಆಡುತ್ತಿರಬೇಕಾದ ವಯಸ್ಸಲ್ಲಿ ಆಸ್ಪತ್ರೆಯಲ್ಲಿ
ಮಗುವಿನ ಬಗ್ಗೆ ಬರೆದಿರುವ ಸಂಚಾರಿ ವಿಜಯ್, ಆಟ ಆಡುತ್ತಾ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯ ಕಷ್ಟ ಪಟ್ಟು ಉಸಿರಾಡುತ್ತಾ ಮೊಬೈಲ್ ಹಿಡಿದುಕೊಂಡು ಕಾಲ ಕಳೆಯುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತೆ ಎಂದಿದ್ದಾರೆ ಸಂಚಾರಿ ವಿಜಯ್.

ಅಂದಾಜು 40-45 ಲಕ್ಷ ಖರ್ಚಾಗುತ್ತದೆ
ಪೋಷಕರ ಬಗ್ಗೆಯೂ ಬರೆದಿರುವ ಸಂಚಾರಿ ವಿಜಯ್, ಚಿಕಿತ್ಸೆಗೆ ಬೇಕಾಗಿರುವ ಖರ್ಚು ಅಂದಾಜು 40 ರಿಂದ 45 ಲಕ್ಷ. ಅಷ್ಟೇನೂ ಸ್ಥಿತಿವಂತರಲ್ಲದ ಮಗುವಿನ ತಂದೆ ತಾಯಿ ಇಷ್ಟೊಂದು ಹಣವನ್ನು ಹೊಂದಿಸಲಾಗದೆ ಒಬ್ಬನೇ ಮಗನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದಿದ್ದಾರೆ ಸಂಚಾರಿ ವಿಜಯ್.

ಸಾಧ್ಯವಾದಷ್ಟು ಮಂದಿ ಸಹಾಯ ಮಾಡಿ: ಮನವಿ
ಭಾರತಿ ಬಿ ವಿ ಯವರ 'ಸಾಸಿವೆ ತಂದವಳು' ಪುಸ್ತಕ ಓದಿದಾಗ ಕ್ಯಾನ್ಸರ್ ಅನ್ನೋ ಖಾಯಿಲೆ ಎಷ್ಟು ಗಂಭೀರವಾದದ್ದು ಅನ್ನೋದು ತಿಳಿದಿತ್ತು, ಆದರೆ ಈ ಪುಟ್ಟ ಮಗುವಿಗೆ ಇಂಥಾ ಕಾಯಿಲೆ ಬಂದಿರುವುದು ನಿಜಕ್ಕೂ ವಿಧಿಯ ಆಟವೇ ಸರಿ.
ಮಗುವಿನ ತಂದೆ ತಾಯಿಯ ಅನುಮತಿ ಪಡೆದೇ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ ಎಂದಿದ್ದಾರೆ ವಿಜಯ್. ಜೊತೆಗೆ ಸಾಧ್ಯವಾದಷ್ಟು ಮಂದಿ ಸಹಾಯ ಮಾಡುವಂತೆ ಕೋರಿದ್ದಾರೆ.

Click it and Unblock the Notifications











