twitter
    For Quick Alerts
    ALLOW NOTIFICATIONS  
    For Daily Alerts

    ಗಣೇಶ್ ಕಾಸರಗೋಡು ಬಿಚ್ಚಿಟ್ರು ಪುನೀತ್ ಜೀವನದ ಮತ್ತಷ್ಟು ಸೀಕ್ರೇಟ್

    |

    ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗಿಲ್ಲ ಅನ್ನೋ ನೋವು ಎಲ್ಲರಲ್ಲೂ ಇದೆ. ಇಂತಾ ಒಬ್ಬ ಪ್ರತಿಭಾನ್ವಿತ ಮತ್ತು ಉತ್ತಮ ನಟನನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ಮಾತ್ರವಲ್ಲ ಕರ್ನಾಟಕಕ್ಕೆ ತುಂಬಲಾರದ ನಷ್ಟ. ಕಿರಿಯರಾದರೇನು, ಹಿರಿಯರಾದರೇನು ಎಲ್ಲಾರಿಗೂ ಸಮಾನ ಗೌರವವನ್ನು ಪುನೀತ್ ನೀಡುತ್ತಿದ್ದರು. ಇಂತಹ ಒಬ್ಬ ಕಲಾವಿದನ ಬಗ್ಗೆ ಈಗ ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಪುನೀತ್‌ರೊಂದಿಗಿನ ಒಡನಾಟದ ಬಗ್ಗೆ ಮಾತು ಹಂಚಿಕೊಂಡಿದ್ದಾರೆ. ನಾವು ಯಾವತ್ತು ಕೇಳಿರದ ಒಂದಷ್ಟು ಇಂಟ್ರಸ್ಟಿಂಗ್ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ

    ಘಟನೆ ೧

    ಚಿರಂಜೀವಿ ಅವರನ್ನು ಭೇಟಿ ಮಾಡಲು ಹೋದಾಗ ಒಂದು ತಾಸು ವಾಚ್‌ಮ್ಯಾನ್ ಜಾಗದಲ್ಲಿ ಕೂತು ಕಾದಿದ್ದ ಪುನೀತ್

    ಸಾಮಾನ್ಯವಾಗಿ ತಮ್ಮ ಮಕ್ಕಳು ಚೆನ್ನೈಗೋ, ಹೈದರಾಬಾದ್‌ಗೋ ಹೋಗುವಾಗ ಡಾ. ರಾಜಕುಮಾರ್ ಒಂದು ಕಿವಿಮಾತು ಹೇಳುತ್ತಿದ್ದರಂತೆ. ಅದೇನು ಎಂದರೆ ಒಮ್ಮೆ ಪುನೀತ್ ರಾಜಕುಮಾರ್ ಹೈದರಾಬಾದಿಗೆ ಹೋಗಿದ್ದರು. ಅಲ್ಲಿನ ತಮ್ಮ ಕೆಲಸ ಮುಗಿಸಿ ಹಿಂದಿರುಗುವಾಗ ಅಲ್ಲಿನ ಮೆಗಾಸ್ಟಾರ್ ಚಿರಂಜೀವಿ ನೆನಪಾದರಂತೆ. ತಕ್ಷಣವೇ ಚಿರಂಜೀವಿ ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೋಗೆ ಹೊರಟರು ಪುನೀತ್. ಆದರೆ, ಎಂಥಾ ದುರಂತ ನೋಡಿ, ಆ ಸ್ಟುಡಿಯೋದ ಸೆಕ್ಯೂರಿಟಿ ಗಾರ್ಡ್ ಪುನೀತನನ್ನು ಒಳಬಿಡಲಿಲ್ಲ. ಇದರಿಂದಾಗಿ ಒಂದು ಚೂರೂ ಟೆನ್ಷನ್ ಮಾಡಿಕೊಳ್ಳದ ಪುನೀತ್ ಸ್ಟುಡಿಯೋದ ಬೃಹತ್ ಗೇಟಿನಲ್ಲೇ ಹಾಕಿದ್ದ ಸೆಕ್ಯೂರಿಟಿ ಕುರ್ಚಿಯಲ್ಲಿ ಕೂತರಂತೆ. ಆ ಸೆಕ್ಯೂರಿಟಿಯವನಿಗೆ ಅಲ್ಲಿಗೆ ಬಂದಿದ್ದು ದಿ ಗ್ರೇಟ್ ರಾಜಕುಮಾರ್ ಪುತ್ರ ಪುನೀತ್ ಅಂತ ಗೊತ್ತಿರಲಿಲ್ಲವಂತೆ.

    Senior Cinema journalist Ganesh kasaragod shared interesting things about Puneeth Rajkumar

    ಸುಮಾರು ಒಂದು ತಾಸು ಕಾಲ ಪುನೀತ್ ಆ ಕುರ್ಚಿಯಲ್ಲಿ ಕೂತೇ ಇದ್ದರಂತೆ. ಕೊನೆಗೆ ಯಾರೋ ಬಂದು ಚಿರಂಜೀವಿ ಬಳಿ ಪುನೀತ್ ಸ್ಟುಡಿಯೋ ಹೊರಗಡೆ ಕಾಯುತ್ತಿರುವ ವಿಷಯ ತಿಳಿಸಿದರಂತೆ. ಓಡೋಡಿ ಬಂದ ಚಿರಂಜೀವಿ ಪುನೀತ್ ಅವರ ಕ್ಷಮೆ ಕೇಳಿ ಒಳಗೆ ಕರೆದುಕೊಂಡು ಹೋದರಂತೆ. ಹೈದರಾಬಾದಿನಿಂದ ಹಿಂದಿರುಗಿದ ಪುನೀತ್ ತನ್ನ ತಂದೆ ಬಳಿ ನಡೆದುದನ್ನು ಹೇಳಿಕೊಂಡರಂತೆ. ಕೊನೆಗೆ ಅಪ್ಪನ ಬಳಿ ಒಂದು ಪ್ರಶ್ನೆ ಕೇಳಿದರಂತೆ, ಅಪ್ಪಾಜಿ, ಆ ಸೆಕ್ಯೂರಿಟಿಯವನಿಂದಾಗಿ ನಾನು ಇಡೀ ಒಂದು ತಾಸು ಚಿರಂಜೀವಿಯವರಿಗಾಗಿ ಕಾದಿದ್ದೇನೆ. ಆದರೆ ಚಿರಂಜೀವಿ ಸರ್ ಆ ಸೆಕ್ಯೂರಿಟಿಯವನನ್ನು ಯಾವ ತರಾಟೆಗೂ ಅವಕಾಶ ಕೊಡದೇ ನನ್ನನ್ನು ಸ್ಟುಡಿಯೋ ಒಳಗೆ ಕರೆದುಕೊಂಡು ಹೋದರು. ನನಗೆ ಆಶ್ಚರ್ಯವಾಯಿತು. ಆತ ನನ್ನನ್ನು ಕಾಯಿಸಿದ್ದರೂ ಚಿರಂಜೀವಿ ಸರ್ ಆತನಿಗೆ ಒಂದೂ ಮಾತು ಹೇಳಲಿಲ್ಲ ಯಾಕೆ ಅಪ್ಪಾಜಿ ಎಂದು. ಮಗನ ಮಾತು ಕೇಳಿ ನಸು ನಕ್ಕು ಡಾ ರಾಜಕುಮಾರ್ ಸಮಾಧಾನದಿಂದಲೇ ಉತ್ತರಿಸಿದರಂತೆ 'ಅದು ಕಣಪ್ಪಾ ಸಂಸ್ಕಾರ ಅಂದ್ರೆ. ಚಿರಂಜೀವಿ ಎಷ್ಟು ದೊಡ್ಡ ಸಂಸ್ಕಾರವಂತ ಎಂದು ಅವರ ವರ್ತನೆಯಿಂದಲೇ ಗೊತ್ತಾಗುತ್ತದೆ. ಆ ಸೆಕ್ಯೂರಿಟಿ ತನ್ನ ಡ್ಯೂಟಿ ಮಾಡಿದ್ದಾನೆ. ನೀನು ಯಾರೆಂದು ಅವನಿಗೆ ಗೊತ್ತಿಲ್ಲ. ನನ್ನ ಮಗನೆಂದೂ ಅವನಿಗೆ ಗೊತ್ತಿಲ್ಲ. ಬಡ ಸೆಕ್ಯೂರಿಟಿಯವನಿಗೆ ಪುನೀತ್ ಆದರೇನು, ಅವನಪ್ಪ ರಾಜಕುಮಾರ್ ಆದರೇನು ಅವನಿಗೆ ಅವನ ಡ್ಯೂಟಿ ಮುಖ್ಯ ಅಷ್ಟೇ. ಆತ ಕರೆಕ್ಟಾಗಿದ್ದಾನೆ, ನೀನೂ ಕರೆಕ್ಟಾಗಿದ್ದಿ. ಆದರೆ ಆ ಚಿರಂಜೀವಿ ಇನ್ನೂ ಹೆಚ್ಚು ಕರೆಕ್ಟಾಗಿದ್ದಾರೆ. ಹೋಗ್ಲಿ ಬಿಡು, ಹಿಂದಿರುಗುವಾಗ ಚಿರಂಜೀವಿಯವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದೀಯಲ್ಲಾ? ಅಷ್ಟೇ ಸಾಕು ಅಂದಾಗ ಪುನೀತ್ ಏನು ಹೇಳಿದ್ರು ಗೊತ್ತಾ? 'ಅಪ್ಪಾಜಿ, ನಾನು ಚಿರಂಜೀವಿಯವರ ಕಾಲು ಮುಟ್ಟಿ ನಮಸ್ಕರಿಸಿ ಗೇಟು ದಾಟಿ ಹೊರಬರುವಾಗ ಆ ಸೆಕ್ಯೂರಿಟಿಯವನು ಓಡೋಡಿ ಬಂದು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅಪ್ಪು ಮಾತನ್ನು ಅರ್ಧಕ್ಕೇ ತುಂಡರಿಸಿ ರಾಜಕುಮಾರ್ ಹೇಳಿದರಂತೆ 'ಅದಕ್ಕೇ ನಾನು ಹೇಳಿದ್ದು, ಆ ಸೆಕ್ಯೂರಿಟಿ ಕೂಡಾ ದೊಡ್ಡ ಸಂಸ್ಕಾರವಂತ ಮನುಷ್ಯ' ಅಂತ.

    ಎಲ್ಲೂ ದಾಖಲೆಯಾಗದ ಈ ಘಟನೆಯನ್ನು ಗಾಂಧಿನಗರದ ಆಫೀಸಿನಲ್ಲಿ ಕೂತು ಲೋಕಾಭಿರಾಮವಾಗಿ ಮಾತನಾಡುತ್ತಾ ರಾಘವೇಂದ್ರ ರಾಜಕುಮಾರ್ ಅವರು ಗಣೇಶ್ ಕಾಸರಗೋಡು ಬಳಿ ಹಂಚಿಕೊಂಡಿದ್ದರು. ಈ ವಿಚಾರನ್ನು ಫಿಲ್ಮಿಬೀಟ್ ಬಳಿ ಗಣೇಶ್ ಕಾಸರಗೋಡ್ ಹಂಚಿಕೊಂಡಿದ್ದಾರೆ.

    ಘಟನೆ ೨

    ಪುನೀತ್‌ಗೆ ಸವಾಲಿನ ಪ್ರಶ್ನೆ ಮಾಡಿದ ಗಣೇಶ್ ಕಾಸರಗೋಡು!

    ತೀರಾ ಇತ್ತೀಚೆಗೆ ಸದಾಶಿವನಗರದ ಮನೆಗೆ ಭೇಟಿ ನೀಡಿದಾಗ ಪುನೀತ್ ರಾಜಕುಮಾರ್ ಅವರಲ್ಲಿ ಪ್ರಶ್ನಿಸಿದ್ದೆ 'ಮನುಷ್ಯನಿಗೆ ದುಃಖವನ್ನು ಸಹಿಸಿಕೊಳ್ಳೋ ಶಕ್ತಿ ಇರುತ್ತದೆ. ಹಾಗೆಯೇ ಸಂತೋಷವನ್ನು ಸಹಿಸಿಕೊಳ್ಳುವ ಶಕ್ತಿಯೂ ಇರುತ್ತದೆ. ಆದ್ರೆ ನೀವು ಇಷ್ಟೊಂದು ದೊಡ್ಡ ಖ್ಯಾತಿಯನ್ನು ಹೇಗೆ ಸಹಿಸಿಕೊಂಡಿದ್ದೀರಿ? ಈ ಪ್ರಶ್ನೆಯ ಅಂತರಾರ್ಥವನ್ನು ತಕ್ಷಣವೇ ಗ್ರಹಿಸಿಕೊಂಡ ಪುನೀತ್ ಉತ್ತರಿಸಿದ್ದು ಹೀಗೆ. 'ಛೇ, ಇದೆಂಥಾ ಪ್ರಶ್ನೆ ಅಣ್ಣಾ? ಇದು ನಮ್ಮ ಅಪ್ಪಾಜಿಯಲ್ಲಿ ಕೇಳಬೇಕಾದ ಪ್ರಶ್ನೆ. ನನ್ನದು ಅಂಥಾ ಖ್ಯಾತಿಯೇನಲ್ಲ. ಅವರು ಆ ಎತ್ತರಕ್ಕೆ ಏರಿದ್ದರೂ ಮಗುವಿನ ಮುಗ್ಧತೆಯನ್ನು ಬಿಟ್ಟಿರಲಿಲ್ಲ. ಸರಳತೆ ಮತ್ತು ಸೌಜನ್ಯತೆ ಅವರ ಸೊತ್ತು. ಅವರು ಏನೇನು ಕಿವಿಮಾತು ಹೇಳಿದ್ದಾರೋ ಅವಷ್ಟನ್ನೂ ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಶ್ರಮಿಸುತ್ತೇನೆ. ಅವರೆಲ್ಲಿ ನಾನೆಲ್ಲಿ. ದುಃಖವನ್ನು, ಸಂತೋಷವನ್ನು ಹೇಗೆ ಸಹಿಸಿಕೊಳ್ಳುತ್ತೇನೋ ಹಾಗೆಯೇ ಖ್ಯಾತಿಯನ್ನು ಕೂಡಾ ಸಹಿಸಿಕೊಳ್ಳುತ್ತೇನೆ. ಇದು ಅಭಿಮಾನಿ ದೇವರುಗಳು ಕೊಟ್ಟ ಭಿಕ್ಷೆ...' - ಪುನೀತ್ ಅವರ ಈ ಪ್ರೌಢ ವಿಶ್ಲೇಷಣೆಯನ್ನು ಕೇಳಿ ಪುನೀತನಾದ ಬಗ್ಗೆ ಗಣೇಶ್ ಕಾಸರಗೋಡು ಅವರು ಹೇಳಿಕೊಂಡಿದ್ದಾರೆ ಹಾಗೂ ಇದನ್ನು ಯಾವ ಸಂಕೋಚವೂ ಇಲ್ಲದೇ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ.

    ಘಟನೆ ೩

    ಪಾದ ಮುಟ್ಟಿ ನಮಸ್ಕರಿಸಿ ಕೈ ಹಿಡಿದು ಮುಹೂರ್ತದ ಸ್ಪಾಟ್‌ಗೆ ಕರೆದೊಯ್ದ ಅಪ್ಪು!

    ಅಂದು ಪುನೀತ್ ಅವರ 'ಮಾಯಾಬಜಾರ್' ಸಿನಿಮಾದ ಮುಹೂರ್ತ ಸಮಾರಂಭ. ನನ್ನ ಹಿರಿಯ ಮಗ ಅಭಿಷೇಕ್ ಅದಕ್ಕೆ ಕ್ಯಾಮರಾಮನ್. ಹೀಗಾಗಿ ನಾನು ಸಕುಟುಂಬ ಪರಿವಾರ ಸಮೇತ ಹೋಗಿದ್ದೆ. ನನ್ನ ಪತ್ನಿ ಗಾಯತ್ರಿ ದೂರದಲ್ಲೆಲ್ಲೋ ನಿಂತಿದ್ದಳು. ನಾನು ವಿಶ್ ಮಾಡಲೆಂದು ಪುನೀತ್ ಬಳಿ ಹೋದೆ. ಒಬ್ಬರೇ ಬಂದ್ರಾ? ಎಂದು ಪುನೀತ್ ಕೇಳಿದ್ದಕ್ಕೆ 'ಪತ್ನಿ ಜತೆ ಬಂದಿದ್ದೇನೆ' ಅಂದೆ. 'ಅವ್ರು ಎಲ್ಲಿದ್ದಾರೆ? ಯಾಕೆ ಬಿಟ್ಟು ಬಂದ್ರಿ? ಕರೀರಿ ಅವ್ರನ್ನು.. ಎಂದು ಹೇಳುತ್ತಾ ತಾವೇ ಖುದ್ದಾಗಿ ಗಾಯತ್ರಿ ಬಳಿ ಹೋಗಿ 'ಯಾಕೆ ಇಲ್ಲೇ ನಿಂತು ಬಿಟ್ರಿ? ಬನ್ನಿ, ನಿಮ್ಮ ಮಗನ ಸಿನಿಮಾ ಇದು ಎಂದು ಹೇಳಿದ್ದಲ್ಲದೇ ಪಾದ ಮುಟ್ಟಿ ನಮಸ್ಕರಿಸಿ ಕೈ ಹಿಡಿದು ಮುಹೂರ್ತದ ಸ್ಪಾಟ್'ಗೆ ಕರೆದೊಯ್ದ ದೃಶ್ಯ ಇನ್ನೂ ಕಣ್ಣಲ್ಲಿದೆ! ಈ ಹುಡುಗ ಇರುವುದೇ ಹಾಗೆ ಎನ್ನುತ್ತಾರೆ ಗಣೇಶ್ ಕಾಸರಗೋಡು.

    Senior Cinema journalist Ganesh kasaragod shared interesting things about Puneeth Rajkumar

    ಘಟನೆ ೪

    ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದು ನಿಜ

    2007ರ ಅದೊಂದು ದಿನ ಪ್ರೆಸ್‌ಮೀಟ್‌ವೊಂದರಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ನನಗೆ ಈ ಆಫರ್ ಕೊಟ್ಟಿದ್ದರು! ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದು ನಿಜ! ಅಂದು ಅವರು ಹೇಳಿದ್ದು : 'ನಮ್ಮ ಪುನೀತ್'ಗೆ ನೀವಂದ್ರೆ ತುಂಬಾ ಇಷ್ಟ. ನಿಮ್ಮನ್ನು ನೋಡಿದಾಗಲೆಲ್ಲಾ ಅವ್ರ ಕೈಲಿ ಒಂದು ಒಳ್ಳೆಯ ಪಾತ್ರ ಮಾಡಿಸಬೇಕಮ್ಮಾ ಅಂತಿದ್ದ. ನೀವು ಅವನ ಫಿಲಂನಲ್ಲಿ ಆಕ್ಟ್ ಮಾಡ್ತೀರಾ?' - ಇದೆಂಥಾ ಆಹ್ವಾನ? ಒಪ್ಪದಿರುವುದುಂಟೆ? ಆ ಕ್ಷಣವೇ ಒಪ್ಪಿಗೆ ಕೊಟ್ಟಿದ್ದೆ. ಇದಾಗಿ 14 ವರ್ಷಗಳೇ ಕಳೆದರೂ ಪುನೀತ್ ಜೊತೆ ನಟಿಸುವ ಯೋಗ ಕೂಡಿ ಬಂದಿರಲಿಲ್ಲ. ಈ ನಡುವೆ ಪ್ರೆಸ್ ಮೀಟ್‌ಗಳಲ್ಲಿ ಸಿಕ್ಕಾಗ ಪುನೀತ್ ಹೇಳುವುದಿತ್ತು 'ಅಣ್ಣಾ, ನಿಮಗೆ ಅಂತಿಂಥಾ ಪುಟ್ಟ ಪಾತ್ರ ಕೊಟ್ಟರೆ ಸರಿ ಹೋಗೋದಿಲ್ಲ. ಒಂದೊಳ್ಳೆಯ ಪಾತ್ರ ಸಿಕ್ಕಾಗ ಖಂಡಿತಾ ನಾವಿಬ್ಬರೂ ಜೊತೆ ಸೇರ್ತೀವಿ... ಎಂದು ಹೇಳಿ ಪಾದ ಮುಟ್ಟಿ ನಮಸ್ಕರಿಸಿದ್ದ ಎಂದು ನೆನಪಿಸಿಕೊಂಡಿದ್ದಾರೆ ಗಣೇಶ್ ಕಾಸರಗೋಡು.

    ಘಟನೆ ೫

    ಅನಿರೀಕ್ಷಿತವನ್ನು ಕಂಡು ಪುನೀತ್ ಕೊಂಚ ಗಲಿಬಿಲಿಗೊಂಡದ್ದನ್ನು ನಾನು ಗಮನಿಸಿದೆ

    ನಾನು ಸುದ್ದಿಟಿವಿಯಲ್ಲಿರುವಾಗ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದ ಘಟನೆ ನೆನಪಾಗುತ್ತದೆ. ಅದು ಶಾಂತಿನಗರದ BMTC ಒಂದು ಭಾಗ. ಅಚ್ಚುಕಟ್ಟಾದ ಸ್ಟುಡಿಯೋ. ಶಶಿಧರ ಭಟ್ ಸಪೋರ್ಟ್ ಇತ್ತು. ಅಲ್ಲಿಗೆ ನಾನು ಆಹ್ವಾನಿಸದ ಸ್ಟಾರ್, ಸೂಪರ್ ಸ್ಟಾರ್‌ಗಳಿಲ್ಲ! ಹಾಗೆಯೇ ಪುನೀತ್ ಕೂಡಾ. ನನ್ನ ಪ್ರೀತಿಯ ಅಪ್ಪು ಸ್ಟುಡಿಯೋ ಒಳ ಪ್ರವೇಶಿಸುತ್ತಿರುವಂತೆಯೇ ಮಹಿಳಾ ಸಿಬ್ಬಂದಿಗಳಿಂದ ಆರತಿ ಎತ್ತಿ ಸ್ವಾಗತ. ಈ ಅನಿರೀಕ್ಷಿತವನ್ನು ಕಂಡು ಪುನೀತ್ ಕೊಂಚ ಗಲಿಬಿಲಿಗೊಂಡದ್ದನ್ನು ನಾನು ಗಮನಿಸಿದೆ. ನಂತರ ಸುಧಾರಿಸಿಕೊಂಡ ಪುನೀತ್ ಶೂ ಕಳಚಿಟ್ಟು ಸ್ಟುಡಿಯೋ ಪ್ರವೇಶಿಸಿದರು. ಶಶಿಧರ ಭಟ್ ಸ್ವಾಗತ ಕೋರಿ ತಮ್ಮ ಚೇಂಬರಿಗೆ ಕರೆದುಕೊಂಡು ಹೋದರು. ನಂತರ ಸ್ಟುಡಿಯೋ ಪರಿಚಯ. ಸ್ಟಾಫ್ ಪರಿಚಯ. ಅಪ್ಪು ಅಚ್ಚರಿಯಿಂದ ಸ್ಟುಡಿಯೋ ವೀಕ್ಷಿಸಿದರು. ತಕ್ಷಣವೇ ಶಶಿಧರ ಭಟ್ ಅವರಿಂದ ಸಂದರ್ಶನಕ್ಕೆ ಬೇಡಿಕೆ. ಯಾವ ಪೂರ್ವ ತಯಾರಿ ಇಲ್ಲದಿದ್ದರೂ ಅಪ್ಪು ಒಪ್ಪಿಯೇ ಬಿಟ್ಟರು! ಭರ್ತಿ 2 ಗಂಟೆಗಳ ಲೈವ್ ಸಂದರ್ಶನ. ಸಂದರ್ಶನ ಮುಗಿಸಿ ಹೊರಟು ನಿಂತ ಪುನೀತ್ ನನ್ನನ್ನು ಬಿಗಿದಪ್ಪಿಕೊಂಡು ಬೀಳ್ಕೊಟ್ಟದ್ದು ಇನ್ನೂ ಕಣ್ಣಲ್ಲಿದೆ.

    Senior Cinema journalist Ganesh kasaragod shared interesting things about Puneeth Rajkumar

    ಘಟನೆ ೬

    ಮುಹೂರ್ತ ಸಮಾರಂಭಕ್ಕೆ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸುವ ಯೋಚನೆಯಿತ್ತು

    ನನ್ನ ನೇತೃತ್ವದ ಸಿನಿಮಾವೊಂದನ್ನು ಸೆನ್ಸಾರ್ ಬೋರ್ಡ್ ಸದಸ್ಯೆಯಾಗಿರುವ ಮೀರಾ ಅನುರಾಧಾ ಪಡಿಯಾರ್ ನಿರ್ಮಿಸುವುದಿತ್ತು. ಅದರ ಲೊಕೇಶನ್ ಚಾಮರಾಜನಗರ. ಹೀಗಾಗಿ ಅಲ್ಲಿ ನಡೆಯುವ ಮುಹೂರ್ತ ಸಮಾರಂಭಕ್ಕೆ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸುವ ಯೋಚನೆಯಿತ್ತು. ಏಕೆಂದರೆ ಪುನೀತ್ ಅಲ್ಲಿನ ಮಣ್ಣಿನಮಗ! ಆದರೇನಾಯಿತು ನೋಡಿ. ಮುಂದೊಮ್ಮೆ ಸಿನಿಮಾ ಮುಹೂರ್ತ ನಡೆಯಬಹುದು. ಆದರೆ ಅಪ್ಪು ಎಲ್ಲಿದ್ದಾನೆ?

    ಘಟನೆ ೭

    ಏನು ಕೊಡಿಸ್ತೀರಿ ಅಣ್ಣಾ ಎಂದು ಅಪ್ಪು ಕೇಳಿದ್ದರು

    ಜರಗನಹಳ್ಳಿಯ ನಮ್ಮ 'ಅಮ್ಮನ ಮನೆ'ಗೆ ಪುನೀತ್ ಅವರನ್ನು ಆಹ್ವಾನಿಸಿದ್ದೆ. 'ಏನು ಕೊಡಿಸ್ತೀರಿ ಅಣ್ಣಾ ಎಂದು ಅಪ್ಪು ಕೇಳಿದ್ದರು. 'ಚಿಕನ್ ಸುಕ್ಕಾ, ನೀರುದೋಸೆ' ಅಂದಿದ್ದೆ. ಬಾಯಲ್ಲಿ ನೀರು ತಂದು ಚಪ್ಪರಿಸುತ್ತಾ ಅಪ್ಪು ಹೇಳಿದ್ದರು 'ಖಂಡಿತಾ ಬರ್ತೇನೆ ಅಣ್ಣಾ. ನಿಮ್ಮ ಊರಿನ ತಿಂಡಿ ನನಗಿಷ್ಟ' ಆದರೆ ಈಗ ಎಲ್ಲಿದ್ದಾನೆ ಅಪ್ಪು?

    ಘಟನೆ ೮

    ಅಪ್ಪು ಬರಲು ಸಾಧ್ಯವೇ

    ಅಲೋಕ್ ಮದ್ವೆ ಹತ್ತಿರ ಬರ್ತಿದೆ. 2022ರ ಜನವರಿ 27ಕ್ಕೆ ಮಂಗಳೂರಿನಲ್ಲಿ ಮದುವೆ. ಮದುವೆಯ ನಂತರ ಬೆಂಗಳೂರಿನಲ್ಲೊಂದು ಖಡಕ್ ರಿಸೆಪ್ಷನ್ ವ್ಯವಸ್ಥೆಗೊಳಿಸುತ್ತಿದ್ದೇನೆ. ನನ್ನನ್ನು 40 ವರ್ಷಗಳ ಕಾಲ ಸಾಕಿ ಸಲಹಿದ ಕನ್ನಡ ಚಿತ್ರರಂಗದ ಸಮಸ್ತರೂ ಅಂದು ಅಲ್ಲಿ ಹಾಜರಿರಬೇಕೆನ್ನುವುದು ನನ್ನ ಆಸೆ. ರಿಸೆಪ್ಷನ್ ನಡೆಯಲೂ ಬಹುದು. ಆದರೆ ಅಪ್ಪು ಬರಲು ಸಾಧ್ಯವೇ?

    ಹೀಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಮತ್ತು ಪುನೀತ್ ನಡುವಿನ ಒಡನಾಡದ ಬಗ್ಗೆ ಮಾತು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ರಾಜ್‌ಕುಮಾರ್ ಕುಟುಂಬದ ಜೊತೆ ಆತ್ಮೀಯವಾಗಿದ್ದ ಹಾಗೂ ರಾಜ್ ಕುಟುಂಬಕ್ಕೂ ಕೂಡ ನೆಚ್ಚಿನ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಗಣೇಶ್ ಕಾಸರಗೋಡು ಅವರು ಪುನೀತ್ ಇಲ್ಲದ ದಿನಗಳನ್ನು ದುಃಖದಿಂದಲೇ ಕಳೆಯುತ್ತಿದ್ದಾರೆ. ಇದೇ ದುಃಖದಲ್ಲೂ ಪುನೀತ್ ಅವರ ಒಂದಷ್ಟು ಗೊತ್ತಿಲ್ಲದ ಘಟನೆಗಳ ಬಗ್ಗೆ ಮಾಹಿತಿಯನ್ನು ಫಿಲ್ಮಿಬೀಟ್ ಬಳಿ ಹಂಚಿಕೊಂಡಿದ್ದಾರೆ.

    English summary
    Senior film journalist Ganesh kasaragod sharied some interesting things about Puneeth Rajkumar.
    Wednesday, November 10, 2021, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X