»   » ಚಿರಂಜೀವಿ 150ನೇ ಚಿತ್ರಕ್ಕೆ ತಮಿಳಿನ ಶಂಕರ್ ಆಕ್ಷನ್ ಕಟ್

ಚಿರಂಜೀವಿ 150ನೇ ಚಿತ್ರಕ್ಕೆ ತಮಿಳಿನ ಶಂಕರ್ ಆಕ್ಷನ್ ಕಟ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಯೋಗಾಯೋಗ ಅಂದ್ರೆ ಇದೇ ನೋಡಿ. ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು ಅಂತಾರಲ್ಲಾ ಹಾಗಾಯ್ತು. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ 150 ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಕೌನ್ ಬನೇಗಾ ಕರೋಡ್ ಪತಿ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.

ಈ ಚಿತ್ರಕ್ಕೆ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ನಿರ್ಮಾಪಕರು ಎಂಬುದು ಇನ್ನೊಂದು ಗಮ್ಮಾತ್ತಾದ ಸಂಗತಿ. ಸಾಮಾನ್ಯವಾಗಿ ಮಗನ ಚಿತ್ರಕ್ಕೆ ಅಪ್ಪ ಬಂಡವಾಳ ಹೂಡಿದ್ದನ್ನೂ ನೋಡಿದ್ದೀವಿ. ಆದರೆ ಇಲ್ಲಿ ಉಲ್ಟಾಪಲ್ಟಾ. ಅಪ್ಪನ ಚಿತ್ರಕ್ಕೆ ಮಗ ಪ್ರೊಡ್ಯೂಸರ್.

2015ರಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳುತ್ತಾರೆ, ಇವರು ಕ್ಯಾಮೆರಾ ಹಿಡೀತಾರೆ, ಮತ್ತೊಬ್ಬರು ಮಗದೊಬ್ಬರು ಇನ್ನೇನೋ ಮಾಡ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ತಾಜಾ ಸುದ್ದಿ ಹೊಗೆಯಾಡುತ್ತಿದೆ.

Shankar to direct Chiranjeevi's 150th movie

ಇವರಿಬ್ಬರ ಕಾಂಬಿನೇಷನ್ ಚಿತ್ರ ಎಂದರೆ ಕೇಳಬೇಕೆ? ಇಡೀ ಭಾರತೀಯ ಚಿತ್ರರಂಗ ಇನ್ನೊಮ್ಮೆ ಟಾಲಿವುಡ್ ಕಡೆಗೆ ತಿರುಗಿ ನೋಡುವುದಂತೂ ಖಚಿತ. ಮೂರು ವರ್ಷಗಳ ಹಿಂದೆ ಚಿರಂಜೀವಿ ಅವರ 150ನೇ ಚಿತ್ರ ಪ್ರಕಟವಾಗಿತ್ತು. ಅಂದಿನಿಂದಲೂ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

2014ರಲ್ಲೇ ಚಿರಂಜೀವಿ 150ನೇ ಚಿತ್ರ ಸೆಟ್ಟೇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ನಾನಾ ಕಾರಣಗಳಿಂದ ಆ ಸುದ್ದಿ ಠುಸ್ ಆಯಿತು. ಆದರೆ 2015ರಲ್ಲಿ ಖಂಡಿತ ಚಿತ್ರ ಸೆಟ್ಟೇರುತ್ತದೆ ಎಂಬ ಸೂಚನೆಯನ್ನು ಸ್ವತಃ ಚಿರಂಜೀವಿ ನೀಡಿರುವ ಕಾರಣ ಅಭಿಮಾನಿಗಳ ಸಂಭ್ರಮದ ಸ್ವರ್ಗಕ್ಕೆ ಈಗ ಮೂರೇ ಗೇಣು.

ಇತ್ತೀಚೆಗೆ ಕ್ಯಾನ್ಸರ್ ಪೀಡಿತ ಬಾಲಕನೊಬ್ಬನ ಚಿಕಿತ್ಸೆಗೆ ನೆರವಾದ ಚಿರಂಜೀವಿ, ಆಸ್ಪತ್ರೆಯಲ್ಲಿ ಆ ಬಾಲಕನ ಜೊತೆ ಮಾತನಾಡುತ್ತಾ, ತಾನು 150 ಚಿತ್ರ ಮಾಡುತ್ತಿದ್ದೇನೆ. ಅದರಲ್ಲಿ ನಿನಗೂ ಚಾನ್ಸ್ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆ ಬಾಲಕನಿಗೆ ಕ್ಯಾನ್ಸರ್ ಮಾರಿಯನ್ನು ಹೊಸಕಿ ಹಾಕುವಷ್ಟು ಶಕ್ತಿ ಬಂದಿದೆ.

ಚಿರಂಜೀವಿ ಚಿತ್ರ ಎಂದರೆ ಡಾನ್ಸು, ಪೈಟ್ಸು, ಮಸ್ತ್ ಡೈಲಾಗ್ಸನ್ನು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ಆದರೆ ನಾಡಬಾಂಬ್ ಸಿಡಿದಂತಿದ್ದ ಅವರ ಡಾನ್ಸಿಂಗ್ ಸ್ಟೈಲ್ ರಾಜಕೀಯಕ್ಕೆ ಅಡಿಯಿಟ್ಟ ಮೇಲೆ ಠುಸ್ ಪಟಾಕಿಯಂತಾಗಿದೆ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ ಅಂತೆ. ಸಂದೇಶಾತ್ಮಕ ಚಿತ್ರವಂತೂ ಅಲ್ಲ ಎನ್ನುತ್ತಿದ್ದಾರೆ.

English summary
Kollywood director Shankar is one director who definitely has the stature required to handle a hugely anticipated project like Chiranjeevi’s 150th movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada