ಶಿವಣ್ಣ-ದ್ವಾರಕೀಶ್ ಜೋಡಿಯ ಹೊಸ ಚಿತ್ರ ಆರಂಭ
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಸದ್ಯ ಕವಚ, ರುಸ್ತುಂ ಚಿತ್ರದ ಶೂಟಿಂಗ್ ಮಾಡ್ತಿರುವ ಶಿವಣ್ಣ ಈ ಮಧ್ಯೆ ದೊಡ್ಡ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗಿ ದ್ವಾರಕೀಶ್ ಬಂಗಳೆ ಅವರು ನಿರ್ಮಿಸುತ್ತಿರುವ 'ಪ್ರೊಡಕ್ಷನ್ ನಂ 52' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ನಾಯಕರಾಗಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ನವಂಬರ್ 9ರ ಶುಕ್ರವಾರ ಹೆಚ್.ಎಸ್.ಆರ್ ಬಡಾವಣೆಯ ಶ್ರೀಬಸವೇಶ್ವರ ಗಾಯತ್ರಿ ದೇವಿ ದೇವಾಲಯದಲ್ಲಿ ನೆರವೇರಿತು. ನಿರ್ಮಾಪಕ(ಮುಂಬೈ) ಹಾಗೂ ಉದ್ಯಮಿ ಕೊಲಂಬಸ್ ಜೇವಿಯರ್ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಕೋರಿದರು.

ಉದ್ಯಮಿ ಸತ್ಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು. ಇನ್ನು ಈ ಚಿತ್ರವನ್ನ ಖ್ಯಾತ ನಿರ್ದೇಶಕ ಪಿ ವಾಸು ನಿರ್ದೇಶನ ಮಾಡ್ತಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಜೊತೆಯಲ್ಲಿ ಶಿವಲಿಂಗ ಸಿನಿಮಾ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ, ಶಿವಣ್ಣನ ಜೊತೆಯಲ್ಲಿ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಪಿ.ವಾಸು ಮತ್ತು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಜೋಡಿಯ ಚಿತ್ರದಲ್ಲಿ ಅನಂತನಾಗ್, ರಚಿತಾರಾಮ್, ಸಾಧುಕೋಕಿಲ, ರಂಗಾಯಣ ರಘು ಮುಂತಾದ ಪ್ರಮುಖರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಡಿಸಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.


Click it and Unblock the Notifications











