»   » ಸೆಂಚುರಿ ಸ್ಟಾರ್ 'ಶಿವ' ಶಿವರಾಜ್ ಕುಮಾರ್ ವಿಶೇಷ ಸಂದರ್ಶನ

ಸೆಂಚುರಿ ಸ್ಟಾರ್ 'ಶಿವ' ಶಿವರಾಜ್ ಕುಮಾರ್ ವಿಶೇಷ ಸಂದರ್ಶನ

By: ಪ್ರಕಾಶ್ ಉಪಾಧ್ಯಾಯ
Subscribe to Filmibeat Kannada
ಶಿವರಾಜ್ ಕುಮಾರ್
ಸ್ಯಾಂಡಲ್ ವುಡ್ ಆಗಸದಲ್ಲಿ ಮಿಂಚಲು 50 ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಎಂಬ ಅಪ್ಪಟ ಕನ್ನಡದ ನಕ್ಷತ್ರವೊಂದು ಮೇರು ನಟ, ಅಣ್ಣಾವ್ರು ಡಾ ರಾಜ್ ಕುಮಾರ್-ಪಾರ್ವತಮ್ಮ ದಂಪತಿಗಳಿಗೆ ಜನಿಸಿತು. ಅವರು ಇಂದು, ಭಾರತ ಚಿತ್ರರಂಗ ಕಂಡಂಥ ಒಬ್ಬ ಅಪರೂಪದ ನಟರಾಗಿ ಬೆಳೆದು ನಿಂತಿದ್ದಾರೆ. ಹ್ಯಾಟ್ರಿಕ್ ಹೀರೋ ಬಿರುದಾಂಕಿತ ಶಿವರಾಜ್ ಕುಮಾರ್. ಬರೋಬ್ಬರಿ '100' ಚಿತ್ರಗಳನ್ನು ಮುಗಿಸಿ '101'ನೆ ಚಿತ್ರ 'ಶಿವ' ಮೂಲಕ ಪ್ರೇಕ್ಷಕರೆದುರು ನಾಳೆ (24 ಆಗಸ್ಟ್ 2012) ಬರಲಿರುವ ಶಿವರಾಜ್ ಕುಮಾರ್, ಒನ್ ಇಂಡಿಯಾ ಕನ್ನಡದ 'ಪ್ರಕಾಶ್ ಉಪಾಧ್ಯಾಯ' ಅವರೊಂದಿಗೆ ಸಂದರ್ಶನದಲ್ಲಿ ಆಡಿದ ಮಾತುಗಳು ಇಲ್ಲಿವೆ, ಓದಿ...

* ನಿಮ್ಮ ನೂರು ಚಿತ್ರಗಳ ಜರ್ನಿ ಹೇಗಿತ್ತು? ನಮ್ಮೊಂದಿಗೆ ಹಂಚಿಕೊಳ್ಳಿ...

ನೂರು ಚಿತ್ರಗಳ ಸರದಾರನಾಗಿಸಿದ ಕೀರ್ತಿ ನನ್ನನ್ನು ನಂಬಿ ಚಿತ್ರವನ್ನು ನಿರ್ಮಿಸಿದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಲ್ಲಬೇಕು. ಅವರೆಲ್ಲರ ಸಹಾಯವಿಲ್ಲದೇ ನಾನಿಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಿರಲಿಲ್ಲ. ನಾನು ನನ್ನ ಜನುಮವಿರುವವರೆಗೆ ಅವರನ್ನು ಮರೆಯಲಾರೆ. ಜೊತೆಗೆ ನನ್ನ ಅಭಿಮಾನಿಗಳು ಕೂಡ ನಾನಿಂದು ತಲುಪಿರುವ ಮಟ್ಟಕ್ಕೆ ಕಾರಣಕರ್ತರು. ಅಷ್ಟೇ ಅಲ್ಲ, ದೈಹಿಕ ಹಾಗೂ ಮಾನಸಿಕವಾಗಿ ನನಗೆ ಶಕ್ತಿ ಕೊಟ್ಟು ಕಾಪಾಡುತ್ತಿರುವ ದೇವರಿಗೆ ಕೂಡ ಕೂಡ ನಾನು ಯಾವತ್ತೂ ಆಭಾರಿಯಾಗಿದ್ದೇನೆ. ಈ ಎಲ್ಲಾ ಅಂಶಗಳೂ ನನ್ನ ಈ ಯಶಸ್ವಿ 100 ಸಿನಿಮಾ ಪ್ರಯಾಣಕ್ಕೆ ಕಾರಣವಾದ ಪ್ರಮುಖ ಅಂಶಗಳು.

*ಬರಲಿರುವ ಶಿವ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ?

ಶಿವ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಇದರಲ್ಲಿ ಮತ್ತೊಮ್ಮೆ ನಾನು ಸಾಕಷ್ಟು ಯಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಸೇಡಿನ ಕಥೆಯೊಂದನ್ನು ಗಟ್ಟಿಯಾದ ನಿರೂಪಣೆ ಹಾಗೂ ಅಷ್ಟೇ ನವಿರಾದ ಭಾವಗಳ ಮಿಶ್ರಣದೊಂದಿಗೆ ಈ ಚಿತ್ರದಲ್ಲಿ ಹೇಳಲಾಗಿದೆ. ಸೇಡಿನ ಕಥೆ ಹೊಂದಿದ್ದರೂ ಚಿತ್ರ ಯಾವುದೇ ಕಾರಣಕ್ಕೂ ಮಾನವೀಯ ಚೌಕಟ್ಟನ್ನು ಮೀರದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಮೂಡಿಬಂದಿದೆ. ಗೆಲುವಿಗೆ ಬೇಕಾದ ಎಲ್ಲಾ ಮಂತ್ರಗಳೂ ಈ ಚಿತ್ರದಲ್ಲಿದೆ. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ಕೆಲವೊಂದು ಸಂದೇಶಗಳನ್ನೂ ನೀಡಲಾಗಿದೆ.

*ಜೋಗಿ ನಂತರ ಇತ್ತೀಚಿನ ವರ್ಷಗಳಲ್ಲಿ ಬಂದ ಯಾವುದೇ ಚಿತ್ರ ಅಭಿಮಾನಿಗಳ ನಿರೀಕ್ಷೆ ತಲುಪಿಲ್ಲ. ಈ ಕೊರತೆಯನ್ನು ಶಿವ ನೀಗಿಸಬಲ್ಲದೇ?

ನಾನು ಆ ಬಗ್ಗೆ ಹೇಳಲಾರೆ. ಯಾಕೆಂದರೆ ಅದು ಜನರೆಲ್ಲಾ ಸೇರಿ ನಿರ್ಧರಿಸಬಹುದಾದ ಅಂಶ. ದೇವರ ಆಶೀರ್ವಾದದ ಜೊತೆಗೆ ಅಭಿಮಾನಿ ಪ್ರೇಕ್ಷಕರು, ಚಿತ್ರರಂಗದ ಹಿರಿಯರು ಹಾಗೂ ಉದ್ಯಮದ ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಸಿಕ್ಕರೆ, ಶಿವ ಚಿತ್ರ ಯಶಸ್ವಿಯಾಗಿ ಎಲ್ಲರ ನಿರೀಕ್ಷೆ ನಿಜವಾಗಬಹುದು.

*ಓಂ ಪ್ರಕಾಶ್ ರಾವ್ ಜೊತೆ ನೀವು ಈಗಾಗಲೇ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದೀರಿ. ಶಿವ ಚಿತ್ರದಲ್ಲಿ ಅವರೊಂದಿಗೆ ನಿಮ್ಮ ಅನುಭವ?

ಓಂ ಪ್ರಕಾಶ್ ರಾವ್ ಈಗಿನ ಸಿನಿಮಾಗಳ ಟ್ರೆಂಡ್ ಹಾಗೂ ಪ್ರೇಕ್ಷಕರ ನಾಡಿ ಮಿಡಿತ ಅರಿತಿರುವ ಒಬ್ಬ ಒಳ್ಳೆಯ ನಿರ್ದೇಶಕರು. ಯುವಜನತೆಯನ್ನು ದೃಷ್ಟಿಯಲ್ಲಿಟ್ಟು ಅವರು ಯುವ ತಂತ್ರಜ್ಞರಾದ ಸತ್ಯ ಹೆಗಡೆ, ದೀಪು ಹಾಗೂ ನೃತ್ಯ ನಿರ್ದೇಶಕರು, ಹಾಗೂ ಸಾಹಸ ನಿರ್ದೇಶಕರನ್ನು ಸೇರಿಕೊಂಡು 'ಶಿವ' ಚಿತ್ರ ಮಾಡಿದ್ದಾರೆ. ಈ 'ಶಿವ' ಚಿತ್ರವು ಈ ಮೊದಲಿನ 'ಎಕೆ 47' ಹಾಗೂ 'ಸಿಂಹದ ಮರಿ' ಚಿತ್ರಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಒಟ್ಟಿನಲ್ಲಿ, ಯುವ ಮನಸ್ಸುಗಳನ್ನು ತಟ್ಟಬಲ್ಲ ಹೃದಯಸ್ಪರ್ಶಿ ಚಿತ್ರವೊಂದನ್ನು 'ಶಿವ' ಹೆಸರಿನಲ್ಲಿ ಓಂ ಮಾಡಿದ್ದಾರೆ ಎಂಬುದು ನನ್ನ ಅಭಿಪ್ರಾಯ.

*ಶಿವ ಚಿತ್ರದ ನಾಯಕಿ ರಾಗಿಣಿ ದ್ವಿವೇದಿ ಬಗ್ಗೆ ನಿಮ್ಮ ಅಭಿಪ್ರಾಯ...

ರಾಗಿಣಿ ದ್ವಿವೇದಿ ಒಳ್ಳೆ ಮನಸ್ಸಿನ, ಗ್ಲಾಮರಸ್ ಆಗಿರುವ ಒಬ್ಬ ಒಳ್ಳೆಯ ನಟಿ ಹಾಗೂ ಅವರು ಈ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ ಕೂಡ. ಅಂದಹಾಗೆ, ಇದು ಕೇವಲ ಶಿವರಾಜ್ ಕುಮಾರ್ ಚಿತ್ರವಲ್ಲ, ಬದಲಿಗೆ ಎಲ್ಲರ ಚಿತ್ರವೂ ಹೌದು. ಇದರಲ್ಲಿ ನಾನು ಶಿವ ಆಗಲು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ನನ್ನಷ್ಟಕ್ಕೇ ನಾನು ಶಿವನಾಗಿಲ್ಲ, ಎಲ್ಲಾ ಕಲಾವಿದರು, ತಂತ್ರಜ್ಞರ ಪಾತ್ರವೂ ಇದರಲ್ಲಿ ಮುಖ್ಯವಾಗಿದ್ದು ಎಲ್ಲರೂ ಶಕ್ತಿಮೀರಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

* ಶಿವ ಚಿತ್ರದಲ್ಲಿ ನಿಮ್ಮ ಅಭಿಮಾನಿಗಳಿಗೆ ಇಷ್ಟವಾಗುವ ಯಾವ ಯಾವ ಅಂಶಗಳಿವೆ?

ಅವರ ಶಿವಣ್ಣರಿಂದ ಅವರು ಏನೇನನ್ನು ನಿರೀಕ್ಷಿಸುತ್ತಾರೋ ಅದೆಲ್ಲವೂ 'ಶಿವ' ಚಿತ್ರದಲ್ಲಿದೆ. ಅದು, ಡಾನ್ಸ್ ಆಗಿರಬಹುದು, ಫೈಟ್ಸ್ ಆಗಿರಬಹುದು ಅಥವಾ ಡೈಲಾಗ್ ಹೇಳುವ ಶೈಲಿಯೇ ಇರಬಹುದು. ಇದರಲ್ಲಿರುವ ಪ್ರತಿಯೊಂದೂ ಕೂಡ ನನ್ನ ಅಭಿಮಾನಿಗಳಿಗೆ ಇಷ್ಟವಾಗುವುದು ಖಂಡಿತ...

* ನಿಮ್ಮ ಮುಂಬರುವ ಚಿತ್ರಗಳು ಯಾವವು?
ಲಕ್ಷ್ಮೀ, ಅಂದರ್ ಬಾಹರ್, ಕಡ್ಡಿಪುಡಿ ಮತ್ತು ಅಣ್ಣ ತಮ್ಮಂದಿರು.

English summary
Shivanna told that "Shiva is not a Shivaraj Kumar film but everybody's film. Everybody made me Shiva and I would not have become Shiva by myself without the support of all the characters. All the technicians and cast have given their best for the movie." Read on for the interview.
 
Please Wait while comments are loading...