For Quick Alerts
  ALLOW NOTIFICATIONS  
  For Daily Alerts

  ಬಣ್ಣ ಕಳಚಿ ನಿಂತ ಕನ್ನಡದ 6 ಬೆಡಗಿಯರು

  By Prasad
  |

  ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ತಾವಿರುವ ವೃತ್ತಿಯಿಂದ ಜಾರಿಕೊಳ್ಳಲು ಅನೇಕರು ಇಚ್ಛಿಸುತ್ತಾರೆ. ಅದು ಅವರ ಜಾಣತನದ ಲಕ್ಷಣ ಕೂಡ. ಕ್ರೀಡಾಪಟುಗಳಲ್ಲಿ ಇದು ಸರ್ವೇಸಾಮಾನ್ಯ. ಇದಕ್ಕೆ ತದ್ವಿರುದ್ಧ ಅಂದ್ರೆ ರಾಜಕೀಯ. ಅಲ್ಲಿ ನಿವೃತ್ತಿ ಅನ್ನುವುದೇ ಇಲ್ಲ. ಹಾಗೆಯೆ, ಚಿತ್ರರಂಗ ಕೂಡ. ಇಲ್ಲಿ ಕಡೆ ಉಸಿರಿರುವವರೆಗೆ ಬಣ್ಣಹಚ್ಚಿಕೊಂಡೇ ಇರಬೇಕು, ಬಣ್ಣ ಹಚ್ಚಿಕೊಂಡೇ ಸಾಯಬೇಕು ಎಂದು ಕನವರಿಸುವವರೇ ಹೆಚ್ಚು.

  ಆದರೆ, ಇದೇ ಮಾತು ಮದುವೆಯಾಗಿ ಗಂಡನ ಮನೆ ಹೊಸ್ತಿಲು ತುಳಿಯುವ ನಟಿಮಣಿಯರಿಗೆ ಅನ್ವಯವಾಗುವುದಿಲ್ಲ. ಗಂಡನ ಮನೆಯವರು ಇಚ್ಛೆಪಟ್ಟರೆ ಪಾತ್ರಕ್ಕೆ ತಕ್ಕಂತೆ ಮೇಕಪ್ ಮಾಡಿಕೊಳ್ಳುವುದು. ಇಲ್ಲದಿದ್ದರೆ, ನಟನೆಗೆ ಗುಡ್ ಬೈ ಹೇಳಿ ಗಂಡ, ಮನೆ, ಮಕ್ಕಳು ಅಂತ ಹಾಯಾಗಿ ಇದ್ದುಬಿಡುವುದು. ಆದರೆ, ಚಿತ್ರರಂಗದ ಆಕರ್ಷಣೆಯಿಂದ ದೂರ ಉಳಿಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ 'ಸ್ವೀಟಿ' ಚಿತ್ರದ ಮೂಲಕ ಮತ್ತೆ ನಟಿಸುತ್ತಿರುವ ರಾಧಿಕಾನೇ ಸಾಕ್ಷಿ. ಬಾಲಿವುಡ್‌ನಲ್ಲಿ ಶ್ರೀದೇವಿ, ಮಾಧುರಿ ದೀಕ್ಷಿತ್ ಅಂಥವರು ಮರಳಿ ನಟನೆಗೆ ಜೈ ಎಂದಿದ್ದಾರೆ.

  ಇನ್ನು ಮತ್ತೆ ಕನ್ನಡ ಚಿತ್ರರಂಗದತ್ತ ಹೊರಳಿದರೆ, ಮದುವೆಯಾಗಿ ನಟನೆಗೆ ಗುಡ್ ಬೈ ಹೇಳಿ ನಟನೆಗೆ ಮರಳಲಾರದಷ್ಟು ಕೆಲವರು ದುಂಡಗಾಗಿದ್ದಾರೆ. ಇದಕ್ಕೆ ರಕ್ಷಿತಾನೇ ಜ್ವಲಂತ ಉದಾಹರಣೆ. ಸಾಕಷ್ಟು ದುಂಡಗಾಗಿದ್ದರೂ ನಾನಿನ್ನೂ ನಟನೆ ಮರೆತಿಲ್ಲ ಅಂದವರು ಮಾಲಾಶ್ರೀ. ತುಟಿಗೆ ದಟ್ಟ ಕೆಂಬಣ್ಣ ಬಳಿದು, ನನಗೆ ಯಾರು ಸಾಟಿ ಎಂದು ಲಾಂಗ್ ಮಚ್ಚು ಎತ್ತುತ್ತಿದ್ದಾರೆ. ಇನ್ನು ಮದುವೆ ಊಟ ಹಾಕಿಸಿ ಕೈತೊಳೆದುಕೊಂಡು ಹೋದವರನೇಕರು ಇತ್ತಕಡೆ ತಲೆಯನ್ನೂ ಹಾಕಿಲ್ಲ. ಹಾಗೆಯೆ, ಕೆಲವರು ಅಭಿನಯವನ್ನು ಸಂಪೂರ್ಣವಾಗಿ ಬಿಡದಿದ್ದರೂ ಆಗಾಗ ಬಣ್ಣಹಚ್ಚುತ್ತ, ಇತರ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ್ಯಾರ್ಯಾರೆಂದು ನೋಡೋಣ.

  ರಕ್ಷಿತಾ ನಿರ್ಮಾಪಕಿಯಾಗಿ ಸುರಕ್ಷಿತ

  ರಕ್ಷಿತಾ ನಿರ್ಮಾಪಕಿಯಾಗಿ ಸುರಕ್ಷಿತ

  ಸ್ಟಾರ್ ನಿರ್ದೇಶಕ ಕಂ ಪಾರ್ಟ್ ಟೈಂ ನಟ ಪ್ರೇಮ್ ಅವರ ಜೊತೆ ಪ್ರೇಮ ವಿವಾಹವಾದ ಮೇಲೆ ರಕ್ಷಿತಾ ಮೇಡಂ ಯಾವ ಪರಿ ದುಂಡಗಾದರೆಂದರೆ, ಸುವರ್ಣ ಚಾನಲ್‌ನಲ್ಲಿ 'ಸ್ವಯಂವರ' ರಿಯಾಲಿಟಿ ಶೋಗೆ ಬಂದಾಗ ಇವರೇ ರಕ್ಷಿತಾನಾ ಎಂದು ಮೂಗಿನ ಮೇಲೆ ಬೆರಳಿಡುವಷ್ಟು ಬಲೂನಿನಂತೆ ಊದಿಕೊಂಡಿದ್ದರು. 'ಜೋಗಯ್ಯ' ಚಿತ್ರದ ನಿರ್ಮಾಪಕಿಯಾದ ಮೇಲೆ ತೆರೆಯ ಹಿಂದೆ ಕಾಣಿಸಿಕೊಂಡಿದ್ದಾರೆಯೇ ಹೊರತು, ಅವರು ತೆರೆಯ ಮೇಲೆ ಹೀರೋಯಿನ್ ಆಗಿಯೇ ಮಿಂಚಬೇಕೆಂದರೆ ಅವರು ಏನು ಮಾಡಬೇಕೆಂದು ದಯವಿಟ್ಟು ಯಾರಿಗಾದರೂ ಗೊತ್ತಿದ್ದರೆ ಹೇಳಿ, ಪ್ಲೀಸ್.

  ಮಾಳವಿಕಾ ಬದುಕಿನ ಜಟಕಾ ಬಂಡಿ

  ಮಾಳವಿಕಾ ಬದುಕಿನ ಜಟಕಾ ಬಂಡಿ

  ನರ್ತನ, ಬರವಣಿಗೆ, ನಟನೆ, ಟಿವಿ ಆಂಕರಿಂಗ್, ವಕೀಲಿ ವೃತ್ತಿ, ರಾಜಕಾರಣಿ... ಬಹುಶಃ ಇಷ್ಟೊಂದು ರಂಗಗಳಲ್ಲಿ ಕೈಯಾಡಿಸಿರುವ ಮಾಳವಿಕಾ ಅವಿನಾಶ್‌ರಂತಹ ಮತ್ತೊಬ್ಬ ನಟಿ ಕನ್ನಡಚಿತ್ರರಂಗದಲ್ಲಿ ಇರಲಿಕ್ಕಿಲ್ಲ. ವಿಪರೀತ ಪ್ರತಿಭಾವಂತೆಯಾಗಿದ್ದರಿಂದಲೋ ಏನೋ ನಟನೆಗೆ ಮಾಳವಿಕಾ ಅಭಿನಯಕ್ಕೆ ಅಂಟಿಕೊಳ್ಳಲೇ ಇಲ್ಲವೇನೋ? 'ನಕ್ಕಳಾ ರಾಜಕುಮಾರಿ' ಚಿತ್ರದ ಮೂಲಕ ಬಾಲನಟಿಯಾಗಿ ಕನ್ನಡದಲ್ಲಿ ಅಡಿಯಿಟ್ಟಿದ್ದ ಮಾಳವಿಕಾ, ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿಯೂ ಬಿಜಿಯಾಗಿದ್ದರು. ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲಿ ಹುಲ್ಲು ಹೊತ್ತು ಚುನಾವಣೆಗೆ ಅಣಿಯಾಗಿ ನಿಂತಿದ್ದಾರೆ.

  ಕೊಡಗಿನ ಬೆಡಗಿ ಪ್ರೇಮಾ 'ಯಜಮಾನ'ರೊಡನೆ ಹಾಯಾಗಿ

  ಕೊಡಗಿನ ಬೆಡಗಿ ಪ್ರೇಮಾ 'ಯಜಮಾನ'ರೊಡನೆ ಹಾಯಾಗಿ

  ರಾಜ್ ಬ್ಯಾನರ್‌ನಲ್ಲಿ ನಿರ್ಮಾಣವಾದ 'ಸವ್ಯಸಾಚಿ' ಚಿತ್ರದ ಮುಖಾಂತರ ಅದ್ಧೂರಿಯಾಗಿ ಎಂಟ್ರಿ ಪಡೆದ ಪ್ರೇಮಾ ಎಂಬ 'ನಮ್ಮೂರ ಮಂದಾರ ಹೂವು' ಕೊಡಗಿನ ಉದ್ಯಮಿ ಜೀವನ್ ಅಪ್ಪಚ್ಚು ಎಂಬುವರೊಡನೆ 2006ರಲ್ಲಿ ಮದುವೆಯಾದ ಮೇಲೆ ನಟನೆಗೆ ಹೆಚ್ಚೂಕಡಿಮೆ ಗುಡ್ ಬೈ ಹೇಳಿದಂತಾಗಿದೆ. ಕೊಡಗಿನಲ್ಲಿ 'ಯಜಮಾನ'ರೊಡನೆ 'ಚಂದ್ರಮುಖಿ' ಹಾಯಾಗಿ ಕಾಲಕಳೆಯುತ್ತಿದ್ದಾರೆ. ಮುಂದೆಂದಾದರೂ ಮುಖಕ್ಕೆ ಬಣ್ಣ ಹಚ್ಚುತ್ತಾರಾ? ಗೊತ್ತಿಲ್ಲ.

  ಅನು ಪ್ರಭಾಕರ್ ನಾಯಕಿಯಾಗಿ ಯಾಕೆ ಮಿಂಚ್ತಿಲ್ಲ?

  ಅನು ಪ್ರಭಾಕರ್ ನಾಯಕಿಯಾಗಿ ಯಾಕೆ ಮಿಂಚ್ತಿಲ್ಲ?

  ಪ್ರತಿಭೆ ಮತ್ತು ಸೌಂದರ್ಯ ಎರಡೂ ಇದ್ದಂತಹ ಅಚ್ಚ ಕನ್ನಡದ ನಟಿಯರ ಸಾಲಿನಲ್ಲಿ ಅನು ಪ್ರಭಾಕರ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಕಾಶೀನಾಥ್ ಅವರ 'ಚಪಲ ಚೆನ್ನಿಗರಾಯ' ಚಿತ್ರದ ಮುಖಾಂತರ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅನು ಪ್ರಭಾಕರ್ 'ಹೃದಯ ಹೃದಯ' ಚಿತ್ರದ ಮುಖಾಂತರ ನಾಯಕ ನಟಿಯಾಗಿ ಕನ್ನಡಿಗರ ಹೃದಯ ಗೆದ್ದವರು. ಆರಂಭದ ಕೆಲ ವರ್ಷಗಳಲ್ಲಿ ನಾಯಕಿಯಾಗಿ ಮಿಂಚಿದ್ದು ಬಿಟ್ಟರೆ, ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರನ್ನು ಮದುವೆಯಾದ ನಂತರ ಪೋಷಕ ಪಾತ್ರಗಳಲ್ಲಿಯೇ ಹೆಚ್ಚು ತೊಡಗಿಕೊಂಡಿದ್ದಾರೆ. ಏಡ್ಸ್ ಶಿಕ್ಷಣಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿಗೆ ತಮ್ಮ ದನಿಯನ್ನೂ ಅವರು ನೀಡಿದ್ದಾರೆ.

  ಗಿಣಿ ಮೂಗಿನ 'ಅಮೆರಿಕ ಅಮೆರಿಕ' ಹೇಮಾ

  ಗಿಣಿ ಮೂಗಿನ 'ಅಮೆರಿಕ ಅಮೆರಿಕ' ಹೇಮಾ

  ಸ್ವಲ್ಪ ದಢೂತಿ ಅನಿಸಿದರೂ ಅಮೆರಿಕ ಅಮೆರಿಕ ಚಿತ್ರದಲ್ಲಿ ಹೇಮಾ ಪಂಚಮುಖಿ ಕನ್ನಡಿಗರನ್ನು ಅಪಾರವಾಗಿ ಸೆಳೆದಿದ್ದರು. ಇನ್ನೊಂದಿಷ್ಟು ವರ್ಷ ಅಭಿನಯದ ಧಾರೆ ಹರಿಸುತ್ತಾರೆ ಎಂದು ಅಂದುಕೊಂಡಿದ್ದರೆ, ಒನ್ಸ್ ಫಾರ್ ಆಲ್ ನಟನೆಗೆ ಗುಡ್ ಬೈ ಹೇಳಿ ಹೊರಟೇಬಿಡೋದಾ? ಕಳೆದ ವರ್ಷ ಮತ್ತೆ ನಟಿಸಲು ಬರುವುದಾಗಿ ಹೇಳಿದ್ದ 'ಪ್ರಭಾತ್ ಕಲಾವಿದೆ', ಸೂಕ್ತ ಪಾತ್ರ ದೊರೆತರೆ ಮಾತ್ರ ಬರುವುದಾಗಿ ವಾಗ್ದಾನ ನೀಡಿದ್ದರು. ಸದ್ಯಕ್ಕೆ ಆ ಕಾಲ ಇನ್ನೂ ಕೂಡಿ ಬಂದಿಲ್ಲ. ಆದರೆ, ಹೇಮಾ ಸುಮ್ಮನೆ ಮನೆಯಲ್ಲಿ ಕೂತಿಲ್ಲ. ನುರಿತ ನೃತ್ಯಗಾರ್ತಿಯಾಗಿರುವ ಅವರು ನಟನಾ ಶಾಲೆಯನ್ನೂ ನಡೆಸುತ್ತ, ಮಕ್ಕಳಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ.

  ಪೂಜಾ ಗಾಂಧಿ ಗೌಡತಿಯಾದ ಮೇಲೆ...

  ಪೂಜಾ ಗಾಂಧಿ ಗೌಡತಿಯಾದ ಮೇಲೆ...

  ಉದ್ಯಮಿ ಆನಂದ್ ಗೌಡರ ಜೊತೆ ಸಪ್ತಪದಿ ತುಳಿಯಲಿರುವ 'ಮುಂಗಾರು ಮಳೆ' ಖ್ಯಾತಿಯ ಪೂಜಾ ಗಾಂಧಿ ಸದ್ಯದಲ್ಲಿಯೇ ಪೂಜಾ ಗೌಡಳಾಗಿ ಗೌಡತಿಯ ಗತ್ತಿನಿಂದ ಮೆರೆಯಲಿದ್ದಾರೆ. ದಂಡು ಪಾಳ್ಯ ಚಿತ್ರದ ಮುಖಾಂತರ ತಾನಿನ್ನೂ ನಾಯಕಿಯಾಗಿ ಚಾಲ್ತಿಯಲ್ಲಿದ್ದೇನೆ ಎಂದು ತೋರಿಸಿದ್ದ ಪೂಜಾ ಮದುವೆಯ ನಂತರ ಮತ್ತೆ ನಟನೆಗೆ ಇಳಿಯುತ್ತಾರಾ? ಈ ಬಗ್ಗೆ ಏನೂ ಪ್ರಶ್ನೆ ಕೇಳಬೇಡಿ ಎಂದು ಖಡಾಖಂಡಿತವಾಗಿ ಪೂಜಾ ಹೇಳಿದ್ದಾರೆ. ಪೂಜಾ ಜೆಡಿಎಸ್ ಸೇರುವ ಅಗತ್ಯವಿಲ್ಲ ಎಂದು ಹೇಳಿದ ಮೇಲೆ ರಾಜಕೀಯ ಭವಿಷ್ಯವೂ ಮಸುಕಾಗಿದೆ. ಹಾಗಿದ್ರೆ ಪೂಜಾ ಮುಂದೇನು ಮಾಡಲಿದ್ದಾರೆ?

  English summary
  Should marriage be the end of acting career for actresses? Not quite so. Let's look at the number of actresses of Kannada movie industry who have stayed away from acting after marriage, but managed to get engaged in other fields. Who are they?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X