»   » ಟಾಲಿವುಡ್ ಗೆ ಹಾರಿದ ಸಿಂಪಲ್ ಹುಡುಗಿ ಶ್ವೇತಾ

ಟಾಲಿವುಡ್ ಗೆ ಹಾರಿದ ಸಿಂಪಲ್ ಹುಡುಗಿ ಶ್ವೇತಾ

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಹಿಟ್ ಆಯ್ತು. 'ಫೇರ್ ಅಂಡ್ ಲವ್ಲಿ' ಥಿಯೇಟರ್ ಗಳಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡ್ತಿದೆ. ಹೀಗಿರುವಾಗ ಶ್ವೇತಾ ಶ್ರೀವಾತ್ಸವ್ ಮುಂದಿನ ಸಿನಿಮಾ ಯಾವ್ದು? ಶ್ವೇತಾ ಈಗ ಏನ್ ಮಾಡ್ತಿದ್ದಾರೆ ಅಂದ್ರೆ...'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಂಪಲ್ ಕ್ವೀನ್ ಕೊಟ್ಟ ಉತ್ತರ, ''ಕೆಲವೇ ದಿನಗಳಲ್ಲಿ ಹೈದರಾಬಾದ್ ಗೆ ಹಾರೋಕೆ ಸಜ್ಜಾಗುತ್ತಿದ್ದೇನೆ'' ಅಂತ!

ಹೌದು, ಕನ್ನಡಿಗರ ಮನೆಮನಗಳಲ್ಲಿ ಜನಪ್ರಿಯವಾಗಿರುವ ನಟಿ ಶ್ವೇತಾ ಶ್ರೀವಾತ್ಸವ್, ಟಾಲಿವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಹಾಗೆ ಶ್ವೇತಾ ಅಭಿನಯಿಸುತ್ತಿರುವ ತೆಲುಗು ಸಿನಿಮಾ 'ಬೊಮ್ಮಲ ರಾಮರಮ್'.[ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ವಿಮರ್ಶೆ]

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾ ಆದ್ಮೇಲೆ ಕೊಂಚ ಬ್ರೇಕ್ ತಗೊಂಡು 'ಫೇರ್ ಅಂಡ್ ಲವ್ಲಿ' ಚಿತ್ರವನ್ನ ಒಪ್ಪಿಕೊಂಡಿದ್ದ ಶ್ವೇತಾ, ಈಗಲೂ ಪಾತ್ರ ಮತ್ತು ಚಿತ್ರಕಥೆಗಳ ಬಗ್ಗೆ ಅಳೆದು ತೂಗಿ ಕೊನೆಗೂ ಟಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ]

ಹೊಸಬರ ತಂಡದ ಚಿತ್ರ ಬೊಮ್ಮಲ ರಾಮರಮ್

ಹೊಸಬರ ತಂಡ ರೆಡಿ ಮಾಡಲಿರೋ 'ಬೊಮ್ಮಲ ರಾಮರಮ್' ಚಿತ್ರಕ್ಕೆ ಶ್ವೇತಾ ನಾಯಕಿಯಾಗೋಕೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ, ''ಇದು ಕೂಡ ಮಹಿಳಾ ಪ್ರಧಾನ ಚಿತ್ರವಾಗಿದ್ದು, 'ಅರುಂಧತಿ'ಯ ಅನುಷ್ಕಾರಂತೆ ಮಿಂಚುವ ಅವಕಾಶ ಸಿಕ್ಕಿದೆ'' ಅಂದ್ರು.

ನೈಜ ಕಥೆಯನ್ನಾಧರಿಸಿರುವ ಚಿತ್ರ

ಅಸಲಿಗೆ 'ಬೊಮ್ಮಲ ರಾಮರಮ್' ನೈಜ ಕಥೆಯನ್ನಾಧರಿಸಿರುವ ಚಿತ್ರ. ಗೋದಾವರಿ ನದಿಯ ಪ್ರವಾಹದಲ್ಲಿ ಮುಳುಗಿದ ಹಳ್ಳಿಯೊಂದರ ಕಥೆಯಿದಾಗಿದ್ದು, ಚಿತ್ರಕಥೆಯನ್ನ ರಚಿಸಿ, ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಹೊತ್ತಿರುವುದು ನವಪ್ರತಿಭೆ ನಿಶಾಂತ್.

'ಮಾಲ್ಗುಡಿ ಡೇಸ್' ಶೇಡ್ ನಲ್ಲಿ ಚಿತ್ರ

ಮೂಲತಃ ಹೈದರಾಬಾದ್ ನವರೇ ಆದ ನಿಶಾಂತ್ ಫಿಲ್ಮ್ ಕೋರ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಮುಂಬೈನ ಖ್ಯಾತ ನಿರ್ದೇಶಕ ಸತೀಶ್ ಕೌಶಿಕ್ ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಿಶಾಂತ್, 'ಬೊಮ್ಮಲ ರಾಮರಮ್' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. 'ಮಾಲ್ಗುಡಿ ಡೇಸ್' ಶೇಡ್ ನಲ್ಲಿ ಈ ಚಿತ್ರವನ್ನ ರೆಡಿಮಾಡುವುದಕ್ಕೆ ನಿಶಾಂತ್ ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಿನಿಮಾ ಎಲ್ಲರಿಗೂ ಥ್ರಿಲ್ ಕೊಡುತ್ತೆ

''ಕಥೆ ಕೇಳಿ ತುಂಬಾ ಇಷ್ಟವಾಯ್ತು. ಹೀಗಾಗಿ ಒಪ್ಪಿಕೊಂಡೆ. ಸಿನಿಮಾಗೆ ಎಲ್ಲರು ಹೊಸಬರೇ ಆದರೂ, ರಂಗಭೂಮಿಯಲ್ಲಿ ಪಳಗಿದ್ದಾರೆ. ನನ್ನ ಪಾತ್ರಕ್ಕೆ ತುಂಬಾ ಸ್ಕೋಪ್ ಇದೆ. ನನಗೆ ಹೀರೋ ಅಂತಿಲ್ಲ. ಲೀಡ್ ರೋಲ್ ನಲ್ಲಿ ನನ್ನ ಜೊತೆ ಮೂವರು ಹುಡುಗರಿರುತ್ತಾರೆ. ಸಿನಿಮಾ ಎಲ್ಲರಿಗೂ ಥ್ರಿಲ್ ಕೊಡುತ್ತೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಶ್ವೇತಾ ಶ್ರೀವಾತ್ಸವ್ ವಿವರಗಳನ್ನು ಹಂಚಿಕೊಂಡರು.

ಹಾಗಾದ್ರೆ ಕನ್ನಡದಲ್ಲಿ ಶ್ವೇತಾಗೆ ಆಫರ್ ಗಳಿಲ್ಲವಾ?

ಈ ಪ್ರಶ್ನೆಗೆ ಮಾತಿನ ಮಲ್ಲಿ ಶ್ವೇತಾ ಕೊಟ್ಟ ಉತ್ತರ ''ಕನ್ನಡದಲ್ಲೂ ಅವಕಾಶಗಳು ಇವೆ. ಆದರೆ ಮನಸ್ಸಿಗೆ ಹಿಡಿಸುವಂತಹ ಸ್ಕ್ರಿಪ್ಟ್ ಗಳನ್ನ ಹುಡುಕುತ್ತಿದ್ದೀನಿ'' ಎಂದರು.

'ಗಾಯಕಿ'ಯಾಗುವತ್ತ ಶ್ವೇತಾ ಚಿತ್ತ

ಎಂಟರಿಂದ ಹತ್ತು ಆಫರ್ ಗಳ ಮಧ್ಯೆ ಶ್ವೇತಾಗೆ ತುಂಬಾ ಇಂಟ್ರೆಸ್ಟಿಂಗ್ ಅನಿಸಿರೋದು ಸಂಗೀತಗಾರ್ತಿಯ ಪಾತ್ರ. 'ವೈಲಿನ್ ಚೆಲ್ಲೋ' ಅನ್ನುವ ವಾದ್ಯವನ್ನ ನುಡಿಸುವ ಗಾಯಕಿಯ ಪಾತ್ರಕ್ಕಾಗಿ ಶ್ವೇತಾಗೆ ಕರೆ ಬಂದಿದೆ. ಹೊಸಬರ ತಂಡ ಈ ಚಿತ್ರವನ್ನ ರೆಡಿ ಮಾಡುತ್ತಿದ್ದು, ಇದಕ್ಕೆ ಅವರು ಓಕೆ ಅನ್ನಬೇಕು ಅಷ್ಟೆ.

ಶ್ವೇತಾ ಆಕ್ಷನ್ ಕ್ವೀನ್ ಆದ್ರೆ ಹೇಗೆ?

ಸಿಕ್ಕಾಪಟ್ಟೆ ಮಾತಿನ ಜೊತೆಗೆ ಶ್ವೇತಾ ಆಕ್ಷನ್ ಮಾಡಿದ್ರೆ ಹೇಗೆ ಅಂತ ಗಾಂಧಿನಗರದ ದೊಡ್ಡ ನಿರ್ದೇಶಕರೊಬ್ಬರು ಶ್ವೇತಾ ಕಾಲ್ ಶೀಟ್ ಕೇಳಿದ್ದಾರೆ. ಅದೀಗ ಮಾತುಕತೆ ಹಂತದಲ್ಲಿದ್ದು, ಒಂದು ವೇಳೆ ಎಲ್ಲವೂ ಅಂದುಕೊಂಡಂತಾದ್ರೆ, ಶ್ವೇತಾ ಸ್ಯಾಂಡಲ್ ವುಡ್ ನ ಹೊಸ ಆಕ್ಷನ್ ಕ್ವೀನ್ ಆಗುವುದರಲ್ಲಿ ಅನುಮಾನವಿಲ್ಲ.

ಶ್ವೇತಾ ಹೊಸ ಕನಸು ಹೊಸ ಹೆಜ್ಜೆ

ಈ ಎಲ್ಲದಕ್ಕಿಂತ ಮುನ್ನ 'ಬೊಮ್ಮಲ ರಾಮರಮ್' ಚಿತ್ರವನ್ನ ಕೈಗೆತ್ತಿಕೊಂಡಿದ್ದು ಮುಂದಿನ ವಾರ ಶ್ವೇತಾ ಹೈದರಾಬಾದ್ ಗೆ ಹಾರಲಿದ್ದಾರೆ. ಡಿಸೆಂಬರ್ ಕೊನೆಯ ವಾರದವರೆಗೂ ಶೂಟಿಂಗ್ ನಲ್ಲಿ ಬಿಜಿಯಿರ್ತಾರೆ. ಕನಸನ್ನ ಹೊತ್ತು ಹೊಸ ಹೆಜ್ಜೆ ಇಟ್ಟಿರುವ ಶ್ವೇತಾಗೆ ಶುಭಹಾರೈಸೋಣ.

English summary
Simple queen Shwetha Srivatsav is making her grand entry to Tollywood through Bommaala Ramaram. The movie will be directed by debutant Nishanth and will go on floors by first week of December, 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada