For Quick Alerts
  ALLOW NOTIFICATIONS  
  For Daily Alerts

  ಮಾಮಾ ಎಂದು ಪ್ರೀತಿಯಿಂದ ಕರೆಯುತ್ತಿದ್ದ: ಸಿದ್ದರಾಮಯ್ಯ ಭಾವುಕ

  |

  ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ನಟನ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ, ಪುನೀತ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

  ''ಪುನೀತ್ ರಾಜ್‌ಕುಮಾರ್ ಸಾವು ಅಕಾಲಿಕವಾದದ್ದು. ಚಿಕ್ಕ ವಯಸ್ಸಿಗೆ ಅಗಲಿರುವುದು ಕನ್ನಡ ಜನರಿಗೆ ಆಘಾತ ಉಂಟು ಮಾಡಿದೆ. ನನಗೆ ಡಾ ರಾಜ್‌ಕುಮಾರ್‌ ಅವರಿಗೆ ಹತ್ತಿರದ ಸಂಬಂಧ ಇತ್ತು. ಅವರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆ. ಅವರು ನಮ್ಮ ಜಿಲ್ಲೆಯವರು. ರಾಜ್‌ಕುಮಾರ್ ಸರಳ, ಸಜ್ಜನಿಕೆ, ವಿನಯವಂತಿಕೆ ಉಳ್ಳಂಥಹಾ ವ್ಯಕ್ತಿ. ತಂದೆಯ ಗುಣಗಳು ಪುನೀತ್ ಬಳಿ ಇದ್ದವು'' ಎಂದರು.

  ''ದೊಡ್ಡವರನ್ನು ಕಂಡರೆ ಗೌರವದಿಂದ ಪುನೀತ್ ಮಾತನಾಡಿಸುತ್ತಿದ್ದರು. ಅವರಿಗೆ ನಟನಾ ಕಲೆ ರಕ್ತಗತವಾಗಿತ್ತು. ಅವರು ಬಾಲ ನಟರಾಗಿ, ಪೂರ್ಣ ಪ್ರಮಾಣದ ನಾಯಕ ನಟರಾಗಿ ಕನ್ನಡಿಗರ ಮನ ಗೆದ್ದಿದ್ದರು. ಪುನೀತ್ ನನ್ನನ್ನು ಮಾಮ ಎನ್ನುತ್ತಿದ್ದರು'' ಎಂದು ನೆನಪಿಸಿಕೊಂಡಿದ್ದಾರೆ ಸಿದ್ದರಾಮಯ್ಯ.

  ''ಅವರ ನಟನೆಯ 'ರಾಜ್‌ಕುಮಾರ' ಸಿನಿಮಾ ಬಿಡುಗಡೆ ಆದಾಗ ನನಗೆ ಕರೆ ಮಾಡಿ ಸಿನಿಮಾ ನೋಡಲು ಹೇಳಿದ್ದರು. ಅಂತೆಯೇ ನಾನು ಸಿನಿಮಾ ನೋಡಿ, ಸಿನಿಮಾ ಬಗ್ಗೆ ಅವರಿಗೆ ಹೇಳಿದ್ದೆ. ಬಹಳ ಪ್ರತಿಭಾನ್ವಿತ ನಟರಾಗಿದ್ದರು. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ದೇಶದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಆ ನಷ್ಟ ತುಂಬುವುದು ಬಹಳ ಕಷ್ಟ'' ಎಂದರು ಸಿದ್ದರಾಮಯ್ಯ.

  ''ನಿನ್ನೆ, ಇವತ್ತು ಕರ್ನಾಟಕದ ಜನ ಕಣ್ಣೀರು ಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ಯುವಕರು, ಪುನೀತ್ ಸಾವಿನಿಂದ ದಿಗ್ಬ್ರಾಂತರಾಗಿದ್ದಾರೆ. ಅವರ ಅಭಿಮಾನಿಗಳಿಗೆ, ಕುಟುಂಬ ವರ್ಗಕ್ಕೆ ನೋವು ಸಹಿಸುವ ಶಕ್ತಿ ನೀಡಲಿ'' ಎಂದರು.

  ''20 ದಿನದ ಹಿಂದೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಪುನೀತ್, ಶಿವರಾಜ್ ಕುಮಾರ್ ಎಲ್ಲರೂ ಸಿಕ್ಕಿದ್ದರು. ಆಗ ಅವರೊಟ್ಟಿಗೆ ಮಾತನಾಡಿದ್ದೆ. ಈ ಥರಹ ಆಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಫಿಟ್ ಆಗಿದ್ದರು, ವಾಕ್, ಸೈಕ್ಲಿಂಗ್ ಮಾಡುತ್ತಿದ್ದರು. ಅದ್ಭುತವಾದ ಡ್ಯಾನ್ಸರ್, ಬಹಳ ಚೆನ್ನಾಗಿ ನರ್ತಿಸುತ್ತಿದ್ದರು. ಆ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ. ಆದರೆ ಇಷ್ಟು ಸಣ್ಣ ವಯಸ್ಸಿಗೆ ಸಾವು ಬರಬಾರದಿತ್ತು'' ಎಂದಿದ್ದಾರೆ ಸಿದ್ದರಾಮಯ್ಯ.

  ಸಾಮಾಜಿಕ ಜಾಲತಾಣದಲ್ಲಿಯೂ ಶೋಕ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ''ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು. ಪ್ರತಿ ಭೇಟಿಯಲ್ಲಿಯೂ ಅದೇ ವಿನಯ, ಸಮ್ಮೋಹನಗೊಳಿಸುವ ನಗು, ಪುಟಿಯುವ ಜೀವನೋತ್ಸಾಹ, ಹಿರಿಯರಿಗೆ ಕೊಡುತ್ತಿದ್ದ ಗೌರವ, ನಮ್ಮವನೆಂದು ಭಾವಿಸುವ ಹಾಗೆ ಮಾಡುವ ಆತ್ಮೀಯ ನಡವಳಿಕೆ ಈಗ ಎಲ್ಲವೂ ಬರೀ ನೆನಪುಗಳು'' ಎಂದು ಭಾವುಕ ಸಾಲುಗಳನ್ನು ಪ್ರಕಟಿಸಿ, ಪುನೀತ್ ಅವರೊಟ್ಟಿಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ''ಸದಾ ಕ್ರೀಯಾಶೀಲವಾಗಿ ಉತ್ಸಾಹದ ಬುಗ್ಗೆಯಂತಿದ್ದ ನಟ ಪುನೀತ್ ರಾಜ್‌ಕುಮಾರ್, ಪಾರ್ಥೀವ ಶರೀರವಾಗಿ ಶಾಂತ ಮುಖಮುದ್ರೆಯೊಂದಿಗೆ ಮಲಗಿರುವುದನ್ನು ಕಂಡು ವೇದನೆಯಾಯಿತು. ಪುನೀತ್ ಅವರ ಪತ್ನಿ, ಮಕ್ಕಳು, ಅಣ್ಣಂದಿರಾದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ಕುಟುಂಬಸ್ಥರನ್ನು ಭೇಟಿಮಾಡಿ ಸಾಂತ್ವನ ಹೇಳಿದೆ. ಸರಳತೆ ಮತ್ತು ವಿನಯವಂತಿಕೆಯನ್ನು ರೂಢಿಸಿಕೊಂಡಿದ್ದ ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ಚಿತ್ರರಂಗಕ್ಕೆ ಮತ್ತು ವೈಯಕ್ತಿಕವಾಗಿ ತುಂಬಿಬಾರದ ನಷ್ಟ'' ಎಂದು ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ ಸಿದ್ದರಾಮಯ್ಯ.

  ''ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮ‌ನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಮೃತರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ'' ಎಂದು ನಿನ್ನೆ ಪುನೀತ್ ಸಾವಿನ ಸುದ್ದಿ ಹೊರಬಿದ್ದಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು ಸಿದ್ದರಾಮಯ್ಯ.

  English summary
  Siddaramaiah remembers Puneeth Rajkumar. He said Puneeth's death is personal loss to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X