»   » ಸಾಮಾಜಿಕ ಜಾಲತಾಣದಲ್ಲಿ ಗಾನ ಕೋಗಿಲೆಯನ್ನು ಕೊಂದ ಮೂರ್ಖರು

ಸಾಮಾಜಿಕ ಜಾಲತಾಣದಲ್ಲಿ ಗಾನ ಕೋಗಿಲೆಯನ್ನು ಕೊಂದ ಮೂರ್ಖರು

By: ಒನ್ ಇಂಡಿಯಾ ಸಿಬ್ಬಂದಿ
Subscribe to Filmibeat Kannada

ಈಗಿನ ಜಮಾನದಲ್ಲಿ ಜನರು ಅನ್ನ-ನೀರು ಬಿಟ್ಟಾದರೂ ಇರುತ್ತಾರೆ ಫೇಸ್ ಬುಕ್, ವಾಟ್ಸಾಪ್ ಇಲ್ಲದೆ ಬದುಕೋದಿಲ್ಲ ಅನ್ನೋ ಸ್ಥಿತಿಗೆ ತಲುಪಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಅಂತ ಏನಿವೆಯೋ, ಅವುಗಳಿಂದ ನಾನಾ ಅವಾಂತರ ಸೃಷ್ಟಿಯಾಗುತ್ತೆ ಅನ್ನೋದು ಪಕ್ಕಾ.

ಈ ಅವಾಂತರಗಳಿಂದ ಅದೆಷ್ಟೋ ಜನರ ಮನಸ್ಸಿಗೆ ನೋವುಂಟಾಗಿರುತ್ತೆ. ಇದರಲ್ಲಿ ಬದುಕಿರುವವರನ್ನು ಸಾಯಿಸುತ್ತಾರೆ, ಸತ್ತಿರೋರನ್ನು ಬದುಕಿಸುತ್ತಾರೆ, ಬರ್ತ್ ಡೇನ ಡೆತ್ ಡೇ ಮಾಡುತ್ತಾರೆ.

ಇದೀಗ ಬದುಕಿರೋ ವ್ಯಕ್ತಿ ಒಬ್ಬರನ್ನು ಫೇಸ್ ಬುಕ್, ವಾಟ್ಸಾಪ್ ನಲ್ಲಿ ಇಂಟರ್ ನೆಟ್ ಪ್ರಿಯರು ಕೊಂದಿದ್ದಾರೆ. ಖ್ಯಾತ ಗಾನ ಕೋಗಿಲೆ ಎಸ್ ಜಾನಕಿ ಅವರು ಬದುಕಿರುವಾಗಲೇ ತೀರಿಕೊಂಡಿದ್ದಾರೆ ಅಂತ ಇಡೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದಾರೆ.[ಎಸ್ ಜಾನಕಿ ಅವರ ಯಾವ ಕನ್ನಡ ಹಾಡು ನಿಮಗಿಷ್ಟ?]

ಇದನ್ನೆಲ್ಲಾ ನೋಡುತ್ತಿದ್ದರೆ, ಯುವಜನತೆ ಎತ್ತ ಹೋಗುತ್ತಿದೆ ಎಂದೆನಿಸುತ್ತಿದೆ. ಯಾರೋ ಸುಳ್ಳು ಪೋಸ್ಟ್ ಹಾಕಿದರೆ, ಅದರ ಬಗ್ಗೆ ಹಿಂದೆ-ಮುಂದೆ ನೋಡದೇ, ಪರಿಶೀಲನೆ ಮಾಡದೇ ಶೇರ್ ಮಾಡೋದು, ಲೈಕ್ ಒತ್ತೋದು ಮಾಡುತ್ತಾರೆ. ಅಷ್ಟಕ್ಕೂ ಜಾನಕಮ್ಮ ಅವರ ವಿಚಾರದಲ್ಲಿ ನಡೆದಿದ್ದೇನು ಮುಂದೆ ಓದಿ...

ಹಾಡುವುದನ್ನು ನಿಲ್ಲಿಸಿದ ಎಸ್ ಜಾನಕಿ

ದಕ್ಷಿಣ ಭಾರತದ ಗಾನ ಕೋಗಿಲೆ ಅಂತಾನೇ ಖ್ಯಾತಿ ಗಳಿಸಿರುವ ಗಾಯಕಿ ಎಸ್ ಜಾನಕಿ ಅವರು ಇನ್ಮುಂದೆ ಹಾಡೋದಿಲ್ಲ ಅಂತ ಘೋಷಣೆ ಮಾಡಿದ್ದಾರೆ. 78 ವರ್ಷದ ಹಿರಿಯ ಗಾಯಕಿ ಕಳೆದ 60 ವರ್ಷಗಳ ಸುದೀರ್ಘ ಗಾನ ಪಯಣವನ್ನು ನಿಲ್ಲಿಸುವ ಬಗ್ಗೆ ಹೇಳಿಕೊಂಡಿದ್ದರು.[ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಸ್ ಜಾನಕಿ]

ಆದರೆ ಸಾಯಿಸಿದ್ದು ಯಾಕೆ?

ಹಿರಿಯ ಗಾಯಕಿ ಹಾಡುವುದನ್ನು ನಿಲ್ಲಿಸಿದ್ದಾರೆ ಅನ್ನೋ ಸುದ್ದಿಯನ್ನು, ತಪ್ಪಾಗಿ ಅರ್ಥ ಮಾಡಿಕೊಂಡು ತೀರಿಕೊಂಡರು ಅಂತ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದ್ದಾರೆ. ಆದರೆ ಅವರನ್ನು ಕೊಂದು ಮೊದಲು, ಯಾರು ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದು ಅಂತ ಮಾತ್ರ ಗೊತ್ತಾಗಿಲ್ಲ.[ಕನ್ನಡದಲ್ಲಿ ಮತ್ತೆ ಹಾಡಿದ ಗಾನಕೋಗಿಲೆ ಎಸ್ ಜಾನಕಿ]

ಗಾಯನ ಜರ್ನಿಗೆ ಫುಲ್ ಸ್ಟಾಪ್ ಇಡಲು ಕಾರಣ?

'ನನಗೀಗ ವಯಸ್ಸಾಗಿದೆ, ಹಲವು ಭಾಷೆಗಳಲ್ಲಿ ನಾನು ಹಾಡಿದ್ದೇನೆ. ಇದೀಗ ನನ್ನ ವೃತ್ತಿಯನ್ನು ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ', ಎಂದು ಗಾಯನಕ್ಕೆ ಅಂತಿಮ ಚುಕ್ಕೆ ಇಟ್ಟ ಕಾರಣವನ್ನು ಕೂಡ ಗಾಯಕಿ ಎಸ್ ಜಾನಕಿ ಅವರು ವಿವರಿಸಿದ್ದಾರೆ.

ಗಾನ ಕೋಗಿಲೆಯ ಕೊನೆಯ ಹಾಡು

'ಕಲ್ಪನಾಕಲ್' ಎಂಬ ಮಲಯಾಳಂ ಚಿತ್ರದ 'ಅಮ್ಮಾಪೂವಿನು..' ಎಂಬ ಲಾಲಿಹಾಡನ್ನು ಕೊನೆಯದಾಗಿ ಹಾಡುವ ಮೂಲಕ, ತಮ್ಮ ಗಾಯನ ಪಯಣಕ್ಕೆ ವಿದಾಯ ಹೇಳಿದ್ದಾರೆ. ಕಳೆದ ತಿಂಗಳು ಹೈದರಾಬಾದ್ ನಲ್ಲಿ ಈ ಹಾಡಿನ ರೆಕಾರ್ಡಿಂಗ್ ಮುಗಿಸಿದ ನಂತರ, ಗಾಯನಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದರು.

ಸುದ್ದಿ ಮಾಡಿದವರಿಗೆ ತಿರುಗೇಟು ಕೊಟ್ಟ ಎಸ್ ಪಿ ಬಿ

'ಇಂದು ಬೆಳಗ್ಗೆಯಿಂದ ಗಾನ ಕೋಗಿಲೆ ಶ್ರೀಮತಿ ಎಸ್ ಜಾನಕಿ ಅವರ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ-ಸಲ್ಲದ ಸುದ್ದಿ ಹರಿದಾಡುತ್ತಿದೆ. ಇವೆಲ್ಲಾ ಅಪ್ಪಟ ಸುಳ್ಳು ಸುದ್ದಿ. ನಾನು ಈಗಷ್ಟೇ ಅವರ ಜೊತೆ ಮಾತಾಡಿದೆ. ಅವರು ಆರೋಗ್ಯವಾಗಿ ಗಟ್ಟಿ-ಮುಟ್ಟಾಗಿದ್ದಾರೆ. ಒಳ್ಳೆಯ ಸುದ್ದಿ ಹಬ್ಬಿಸಿ, ಹೇಗೆ ಕೆಲವು ಮೂರ್ಖರು ಇಂತಹ ಬೇಡದ ಸುದ್ದಿಗಳನ್ನು ಹಬ್ಬಿಸುತ್ತಾರೋ ನಾ ಕಾಣೆ' ಎಂದು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಫೇಸ್ ಬುಕ್ ನಲ್ಲಿ ಖಡಕ್ ಆಗಿ ನಿಜಾಯಿತಿ ತಿಳಿಸಿದ್ದಾರೆ.

ತಮಿಳು ಚಿತ್ರದ ಮೂಲಕ ಗಾಯನ ಆರಂಭ

1957ರಲ್ಲಿ ತಮಿಳಿನ 'ವಿದಿಯಿನ್ ವಿಲಯತ್ತು' ಚಿತ್ರದ ಮೂಲಕ ಎಸ್ ಜಾನಕಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಭರ್ತಿ 60 ವರ್ಷಗಳ ಕಾಲ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರಿಗೆ, ಜನರಿಗೆ ರಸದೌತಣ ಉಣಬಡಿಸಿದ ಹಿರಿಯ ಗಾಯಕಿ ಇನ್ನು ಮುಂದೆ ಯಾವುದೇ ಸಿನಿಮಾಗಳಿಗೆ ಮತ್ತು ಸಭೆ-ಸಮಾರಂಭಗಳಲ್ಲಿ ಕೂಡ ಹಾಡೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.[ಗಾನಕೋಗಿಲೆ ಜಾನಕಮ್ಮನಿಗೆ ಹುಟ್ಟುಹಬ್ಬ]

ಕನ್ನಡದಲ್ಲಿ ಹಾಡಿದ ಮೊದಲ ಹಾಡು

'ರಾಯರ ಸೊಸೆ' ಚಿತ್ರದ 'ತಾಳೆನೆಂತು' ಎಂಬ ಹಾಡನ್ನು ಮೊಟ್ಟ ಮೊದಲ ಬಾರಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಾಯನವನ್ನು ಆರಂಭಿಸಿದರು. 'ಯುಗ ಯುಗಾದಿ ಕಳೆದರೂ..ಯುಗಾದಿ ಮರಳಿ ಬರುತಿದೆ...', 'ಬಾನಲ್ಲೂ ನೀನೇ ಭುವಿಯಲ್ಲೂ ನೀನೇ...', 'ನನ್ನ ನೀನು ಗೆಲ್ಲಲಾರೆ...ತಿಳಿದು ತಿಳಿದು ಛಲವೇತಕೆ...' ಹೀಗೆ ಅವರು ಹಾಡಿದ ಹಲವು ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲೂ ಗುನು-ಗುನಿಸುತ್ತದೆ.

ಎವರ್ ಗ್ರೀನ್ ಗಾಯಕಿ

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ತುಳು, ಒರಿಯಾ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಎಸ್ ಜಾನಕಿ ಅವರು ಹಾಡಿದ್ದು, ಬೇರೆ-ಬೇರೆ ಭಾಷೆಯಲ್ಲಿ ಸುಮಾರು 48 ಸಾವಿರ ಹಾಡುಗಳನ್ನು ಹಾಡಿದ್ದಾರೆ. 4 ರಾಷ್ಟ್ರ ಪ್ರಶಸ್ತಿ, 32 ವಿವಿಧ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ ಗಾಯಕಿ

ದಕ್ಷಿಣ ಭಾರತದ ಗಾಯಕರನ್ನು ಕಡೆಗಣಿಸಲಾಗುತ್ತಿದೆ, ಈ ಪ್ರಶಸ್ತಿ ತುಂಬಾ ತಡವಾಗಿ ಬಂದಿದೆ ಎಂಬ ಕಾರಣಕ್ಕೆ, 2013ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಎಸ್ ಜಾನಕಿ ಅವರು ನಿರಾಕರಣೆ ಮಾಡಿದ್ದರು.['ಪದ್ಮಭೂಷಣ' ಪ್ರಶಸ್ತಿ ನಿರಾಕರಿಸಿದ ಎಸ್ ಜಾನಕಿ]

ಕಿಡಿಗೇಡಿಗಳ ಅವಾಂತರ ನೋಡಿ

ನೋಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಹಿಂದು-ಮುಂದು ನೋಡದೆ ಮಾಡಿದ ಅವಾಂತರ

English summary
Popular playback singer S Janaki has become the latest victim of death hoax on social media. On Thursday (September 22), the death rumours started doing the rounds on cyber space after the legendary musician announced her retirement from singing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada