twitter
    For Quick Alerts
    ALLOW NOTIFICATIONS  
    For Daily Alerts

    'ಸಲಗ' ಹಾಡಿಗೆ ದನಿಯಾದ ಸಿದ್ದಿ ಸಮುದಾಯದ ಚಿನ್ನದ ಹುಡುಗಿಯ ಭಾವಕ ಮಾತು

    |

    'ಸಲಗ' ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಯ್ತು, 'ಟಿಣಿಂಗ ಮಿಣಿಂಗ ಟಿಶ್ಯು' ಎಂಬ ಈ ಹಾಡು ಸಖತ್ ವೈರಲ್ ಆಗಿದೆ. ಹಾಡಿನಲ್ಲಿ ದುನಿಯಾ ವಿಜಯ್ ಸ್ಟೈಲ್‌ಗಳ ಕುರಿತ ಮಾತುಗಳಿಗಿಂತಲೂ ಹಾಡಿನಲ್ಲಿ ನರ್ತಿಸಿರುವ ಹೆಣ್ಣು ಮಕ್ಕಳು ಹೆಚ್ಚು ಸುದ್ದಿಯಾಗಿದ್ದಾರೆ.

    Recommended Video

    ನಾವು ಕೂಡ ಕನ್ನಡದವರೆ, ಬೇರೆಯವರ ತರ ನೋಡ್ಬೇಡಿ

    ಹಾಡಿನಲ್ಲಿ ನರ್ತಿಸಿರುವ ಹೆಣ್ಣು ಮಕ್ಕಳು ಆಫ್ರಿಕನ್‌ರಂತೆ ಕಾಣುತ್ತಾರಾದರೂ ಅವರೆಲ್ಲರೂ ಕರ್ನಾಟಕದವರೇ ಅಪ್ಪಡ ಕನ್ನಡಿಗರೇ. ರಾಜ್ಯದ ಹೆಮ್ಮೆಯ ಸಿದ್ದಿ ಜನಾಂಗ್ ಹೆಣ್ಣು ಮಕ್ಕಳವರು. ಟಿಣಿಂಗ್ ಮಿಣಿಂಗ ಟಿಶ್ಯು ಹಾಡು ಹಾಡಿರುವುದು ಸಹ ಗಿರಿಜಾ ಸಿದ್ದಿ ಮತ್ತು ಗೀತಾ ಸಿದ್ದಿ.

    ಗೀತಾ ಸಿದ್ದಿ ಸಮುದಾಯದ ಸಾಧಕಿಯರಲ್ಲಿ ಒಬ್ಬರು. ಪಿಎಚ್‌ಡಿ ಮುಗಿಸಿರುವ ಗೀತಾ ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡು ರಂಗ ತರಬೇತಿದಾರಳಾಗಿ ಕೆಲಸ ಮಾಡುತ್ತಿದ್ದಾರೆ. 'ಸಲಗ' ಸಿನಿಮಾಕ್ಕಾಗಿ ಹಾಡು ಹಾಡಿದ ಅನುಭವದ ಜೊತೆಗೆ ತಮ್ಮ ಜೀವನದ ಅನುಭವವನ್ನು ಗೀತಾ 'ಫಿಲ್ಮಿಬೀಟ್' ಜೊತೆಗೆ ಹಂಚಿಕೊಂಡು ಭಾವುಕರಾಗಿದ್ದಾರೆ.

    ''ಸ್ಟಾರ್ ಆಗಿದ್ದೀರ, ಜನಪ್ರಿಯರಾಗಿದ್ದೀರ ಎಂದು ಜನ ಹೇಳಿದಾಗ ಗಾಬರಿಯಾಗುತ್ತದೆ. ನನಗೆ ಹಾಗೆ ಅನ್ನಿಸುತ್ತಿಲ್ಲ ನಾನು ನನ್ನಂತೆಯೇ ಇದ್ದೇನೆ. ಸಾಮಾನ್ಯಳಂತೆಯೇ ಇದ್ದೀನಿ. ಹೀಗೆ ಇರ್ತೀನಿ ಸಹ. ಬುಡಕಟ್ಟು ಹಾಡೊಂದನ್ನು ಸಿನಿಮಾದಲ್ಲಿ ಹಾಗೆಯೇ ಬಳಸಿಕೊಂಡಿದ್ದಾರೆ. ಅದಕ್ಕೆ ಖುಷಿ ಇದೆ. ಆ ಹಾಡು ನಮ್ಮ ತಲೆಮಾರಿನಿಂದ ಬಂದ ಹಾಡು ಅದನ್ನು ಕೆಡಿಸಿ ಬಿಡುತ್ತಾರೇನೊ ಎಂಬ ಭಯ ಇತ್ತು, ನಮ್ಮ ಹಿರಿಯರು ನಮ್ಮನ್ನು ಬೈಯ್ಯುತ್ತಾರೆ ಎಂಬ ಭಯ ಇತ್ತು ಆದರೆ ಅವರು ಹಾಗೆ ಮಾಡಲಿಲ್ಲ ಹಾಡನ್ನು ಹಾಗೆಯೇ ಬಳಸಿಕೊಂಡಿದ್ದಾರೆ'' ಎಂದಿದ್ದಾರೆ ಗೀತಾ ಸಿದ್ದಿ.

    ಸಿನಿಮಾ ಎಂದರೆ ಬಹಳ ಭಯ ಇತ್ತು: ಗೀತಾ ಸಿದ್ದಿ

    ಸಿನಿಮಾ ಎಂದರೆ ಬಹಳ ಭಯ ಇತ್ತು: ಗೀತಾ ಸಿದ್ದಿ

    ''ನನ್ನ ಸೋದರ ಸಂಬಂಧಿ ಪ್ರಶಾಂತ್ ಸಿದ್ದಿ ಈಗಾಗಲೇ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯನಾಗಿದ್ದಾನೆ. ಅವನು ಹೇಳುವ ಕತೆಗಳನ್ನು ಕೇಳಿದ್ದ ನಮಗೆ ಸಿನಿಮಾ ರಂಗದ ಬಗ್ಗೆ ಭಯವಿತ್ತು, ಮೀಡಿಯಾ ಎಂದರೇನೆ ಒಂದು ರೀತಿ ಹಿಂಜರಿಕೆ ಇತ್ತು. ನಾನು ನನ್ನ ಪಾಡಿಗೆ ಖುಷಿಯಾಗಿರಲು ಇಷ್ಟಪಡುತ್ತೀನಿ. ನಾನು ನಾಟಕ ಶಿಕ್ಷಕಿ, ನಾನು ಹಾಗೆಯೇ ಇರಬೇಕೆಂಬ ಆಸೆ ನನಗೆ. ಸ್ಟಾರ್ ಆಗುವ ಆಸೆ ನನಗಿಲ್ಲ. ಅದು ನನಗೆ ವೈಯಕ್ತಿಕವಾಗಿ ಇಷ್ಟವೂ ಆಗುವುದಿಲ್ಲ'' ಎಂದು ನಗುತ್ತಲೇ ಸ್ಟಾರ್‌ಗಿರಿಯ ಮುಳ್ಳಿನ ಕಿರೀಟದಿಂದ ದೂರ ಇರುತ್ತೇನೆಂದರು ಗೀತಾ.

    ''ನಾವು ಕನ್ನಡಿಗಲೇ ನಮ್ಮನ್ನು ಬೇರೆಯವರೆಂದು ಕಾಣಬೇಡಿ''

    ''ನಾವು ಕನ್ನಡಿಗಲೇ ನಮ್ಮನ್ನು ಬೇರೆಯವರೆಂದು ಕಾಣಬೇಡಿ''

    ''ಸಿದ್ದಿಯ ಸಂಸ್ಕೃತಿಯನ್ನು ಸಿನಿಮಾ ಮೂಲಕ ಪರಿಚಯಿಸಿದ್ದಾರೆ. ನಮಗೆ ಒಂದು ಸಂಸ್ಕೃತಿ ಇದೆ. ನಾವು ಕನ್ನಡದವರು, ನಿಮ್ಮ ಮನೆ ಮಕ್ಕಳು, ನಮ್ಮನ್ನು ಬೇರೆಯವರೆಂದು ಕಾಣಬೇಡಿ. ನಮ್ಮನ್ನು ಗುರುತಿಸುವುದು ಕಷ್ಟ. ನಾವು ಆಫ್ರಿಕನ್ನರೇನೊ ಎಂಬ ಗೊಂದಲ ಇತ್ತು, ಆದರೆ ಗೊಂದಲ ಮಾಡ್ಕೋಬೇಡಿ ನಾವು ನಿಮ್ಮ ಥರಹವೇ. ನಾವು ಮೂಗು ಚುಚ್ಚಿದ್ದೀವಿ, ನಿಮ್ಮದೇ ಆದ ಎಲ್ಲ ಸಂಸ್ಕೃತಿ, ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದೀವಿ. ಆಫ್ರಿಕನ್ ಎಂಬುದು ಬೇರೆ ಲೋಕ, ಅದು ಅವರದ್ದೇ ಆದ ಲೋಕ. ನಾವು ಕನ್ನಡದ ಮಕ್ಕಳು, ನಮ್ಮನ್ನು ಕನ್ನಡದವರನ್ನಾಗಿ ನೋಡಿ ಅಷ್ಟೆ'' ಎಂದು ನಗುತ್ತ ಮನವಿ ಮಾಡಿದ್ದಾರೆ ಗೀತಾ ಸಿದ್ದಿ.

    ಭಾವ, ರಂಗಕರ್ಮಿ ಚೆನ್ನಕೇಶವರ ನೆನೆದ ಗೀತಾ

    ಭಾವ, ರಂಗಕರ್ಮಿ ಚೆನ್ನಕೇಶವರ ನೆನೆದ ಗೀತಾ

    ತಮ್ಮ ಜೀವನ ಬದಲಾಗಲು ಕಾರಣರಾದ ಅಕ್ಕನ ಪತಿ, ರಂಗಕರ್ಮಿ ಚೆನ್ನಕೇಶವ ಬಗ್ಗೆ ಮಾತನಾಡಿದ ಗೀತಾ, ''ನೀನಾಸಂ ನಲ್ಲಿ ನನ್ನ ಅಕ್ಕ ವಿದ್ಯಾರ್ಥಿಯಾಗಿದ್ದಾಗ ಚೆನ್ನಕೇಶವ ನನ್ನ ಅಕ್ಕನನ್ನು ಮದುವೆಯಾದರು. ಆ ನಂತರ ನಮ್ಮ ಕುಟುಂಬವನ್ನು ಬದಲಾಯಿಸಿದರು. ನಮ್ಮನ್ನು ಅವರು ರಂಗಭೂಮಿಗೆ ಪರಿಚಯಿಸಿದರು. ಒಂದು ಹೊಸ ಲೋಕದ ಪರಿಚಯವನ್ನು ಅವರು ನಮಗೆ ಮಾಡಿಸಿದರು. ಚೆನ್ನಕೇಶವ ಅವರು 'ಸಲಗ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು, ಅವರು ವಿಜಯ್‌ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆಗ ನಾವು ಹಾಡುಗಳನ್ನು ಹಾಡಿ ಅವರನ್ನು ರಂಜಿಸಿದೆವು'' ಎಂದಿದ್ದಾರೆ ಗೀತಾ.

    ಸ್ಟುಡಿಯೋಕ್ಕೆ ಕರೆದಾಗ ಆತಂಕವಾಯ್ತು: ಗೀತಾ

    ಸ್ಟುಡಿಯೋಕ್ಕೆ ಕರೆದಾಗ ಆತಂಕವಾಯ್ತು: ಗೀತಾ

    ''ದುನಿಯಾ ವಿಜಯ್ ನಮ್ಮ ಮನೆಯಲ್ಲೇ ಮೂರು ದಿನ ಇದ್ದು ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಹೋದರು. ನಮಗೆ ಅದೆಲ್ಲಾ ಹೊಸದೇನೂ ಅಲ್ಲ. ಆಗಾಗ ನಮ್ಮ ಮನೆಗಳಿಗೆ ಅತಿಥಿಗಳು ಬರುತ್ತಲೇ ಇರುತ್ತಾರೆ. ಹಾಡುಗಳನ್ನು, ನಮ್ಮ ಜೀವನ ಶೈಲಿಯಲ್ಲಿ ರೆಕಾರ್ಡ್ ಮಾಡಿಕೊಂಡು ಹೋಗುವುದು, ನಮ್ಮ ಕೂದಲು ಮುಟ್ಟುವುದು ಹೀಗೆ ಎಳವೆಯಿಂದಲೇ ಅದನ್ನೆಲ್ಲ ನೊಡಿದ್ದ ನಮಗೆ ಇದೂ ಹಾಗೆಯೇ ಎಂದುಕೊಂಡೆವು, ಆದರೆ ಯಾವಾಗ ನಮ್ಮನ್ನು ಸ್ಟುಡಿಯೋಕ್ಕೆ ಕರೆದರೊ ಆಗ ನಮಗೆ ಶಾಕ್ ಆಯಿತು. ಹೋಗಬೇಕೊ ಬೇಡವೋ ಎಂಬ ಗೊಂದಲ ಶುರುವಾಯಿತು'' ಎಂದಿದ್ದಾರೆ ಗೀತಾ.

    ನೀನಾಸಂನಿಂದ ಹೊಸ ಲೋಕದ ಪರಿಚಯವಾಯ್ತು: ಗೀತಾ

    ನೀನಾಸಂನಿಂದ ಹೊಸ ಲೋಕದ ಪರಿಚಯವಾಯ್ತು: ಗೀತಾ

    ''ನಮಗೆ ನೀನಾಸಂಗೆ ಹೋಗುವ ಮುನ್ನ ಬೇರೆಯದ್ದೇ ಲೋಕದಲ್ಲೇ ಇದ್ದೆವು. ಆದರೆ ನೀನಾಸಂ ನಮ್ಮನ್ನು ಬದಲಾಯಿಸಿತು. ಪ್ರತಿದಿನ ಅದ್ಭುತವಾದ ಸಂಪನ್ಮೂಲ ವ್ಯಕ್ತಿಗಳು ಅಲ್ಲಿಗೆ ಬರುತ್ತಿದ್ದರು. ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು, ಯಾವುದಕ್ಕೆ ಎಷ್ಟು ಮಾನ್ಯತೆ ನೀಡಬೇಕು ಎಂಬುದನ್ನು ನಾವು ಅಲ್ಲಿ ಕಲಿತುಕೊಂಡೆವು. ಹಾಗಾಗಿ ನಾವು ವಿಜಯ್ ಅವರನ್ನು ಸಾಮಾನ್ಯವಾಗಿಯೇ ಸ್ವೀಕರಿಸಿದೆವು. ವಿಜಯ್ ನಮ್ಮ ಮನೆಗೆ ಬಂದಾಗ ಸಹ ನಮ್ಮಂತೆಯೇ ಇದ್ದರು, ನಮ್ಮ ಸಣ್ಣ ಮನೆಯಲ್ಲಿ ನಮ್ಮ ಆತಿಥ್ಯ ಸ್ವೀಕರಿಸಿದರು. ಸ್ಟಾರ್ ಗಿರಿ ಬಿಟ್ಟು ಆರಾಮವಾಗಿ ಇದ್ದರು. ಅವರ 'ದುನಿಯಾ' ಸಿನಿಮಾ ನೋಡಿದ್ದೆ, ಕಾಲೇಜಿನಲ್ಲಿದ್ದಾಗ ಆ ಸಿನಿಮಾದ ಹಾಡುಗಳನ್ನು ಹಾಡುತ್ತಿದ್ದೆ. ಕೆಲವು ಸಿನಿಮಾಗಳಲ್ಲಿ ಸಿದ್ದಿಯರನ್ನು ಬಳಸಿಕೊಂಡಿದ್ದರು ಆದರೆ ಅವು ನನಗೆ ಇಷ್ಟವಾಗಿರಲಿಲ್ಲ. ಸಿದ್ದಿಯರನ್ನು ಅದರಲ್ಲಿ ಅಭಿವ್ಯಕ್ತಿಗೊಳಿಸಿರಲಿಲ್ಲ. ಆದರೆ ಇಲ್ಲಿ ನಮಗೆ ಅವಕಾಶ ಸಿಕ್ತು'' ಎಂದಿದ್ದಾರೆ ಗೀತಾ.

    ಇನ್ನು ಮುಂದೆ ಅಚ್ಯುತಣ್ಣನ ಸಲಹೆ ಕೇಳ್ತೇವೆ: ಗೀತಾ

    ಇನ್ನು ಮುಂದೆ ಅಚ್ಯುತಣ್ಣನ ಸಲಹೆ ಕೇಳ್ತೇವೆ: ಗೀತಾ

    ''ಹಾಡಿನ ಚಿತ್ರೀಕರಣಕ್ಕೆ ಬಂದಾಗ ನಮ್ಮೊಂದಿಗೆ ಚೆನ್ನಾಗಿ ಮಾತನಾಡಿ ನಾವು ಕಂಫರ್ಟ್‌ ಆಗಿರುವಂತೆ ನೋಡಿಕೊಂಡರು. ಪ್ರತಿ ದೃಶ್ಯದ ಮುಂಚೆ ನಮ್ಮ ಅಭಿಪ್ರಾಯ ಪಡೆಯುತ್ತಿದ್ದರು, ನಿಮಗೆ ಒಪ್ಪಿಗೆ ಆದರಷ್ಟೆ ಮಾಡಿ ಎನ್ನುತ್ತಿದ್ದರು. ಸಂಗೀತ ನಿರ್ದೇಶಕ ಚರಣ್ ಸಹ ಹಾಗೆ ಹಾಡಬೇಕು, ಹೀಗೆ ಹಾಡಬೇಕು ಎಂದು ಹೇಳಲಿಲ್ಲ. ನೀವು ನಿಮ್ಮ ಮನೆಗಳಲ್ಲಿ, ಕಾಡಿನಲ್ಲಿ ಹಾಡಿಕೊಳ್ಳುವಂತೆಯೇ ಹಾಡಿ ಸಾಕು ಎಂದರು. ಹಾಗಾಗಿ ನಾವು ಹೆಚ್ಚು ಕಂಪರ್ಟೆಬಲ್ ಆಗಿ ಹಾಡಿದೆವು, ನರ್ತಿಸಿದೆವು. ಮುಂದೆ ಅವಕಾಶ ಸಿಕ್ಕರೆ ನಾವು ಅಚ್ಯುತಣ್ಣನನ್ನು (ಅಚ್ಯುತ್ ಕುಮಾರ್) ಸಲಹೆ ಕೇಳುತ್ತೇವೆ. ಆಯ್ಕೆಯನ್ನು ಮಾತ್ರ ಎಚ್ಚರವಹಿಸಿಯೇ ಮಾಡುತ್ತೇವೆ'' ಎಂದಿದ್ದಾರೆ ಗೀತಾ.

    ಒಂದು ತಿಂಗಳ ಭಾವನನ್ನು ಕಳೆದುಕೊಂಡೆವು: ಗೀತಾ

    ಒಂದು ತಿಂಗಳ ಭಾವನನ್ನು ಕಳೆದುಕೊಂಡೆವು: ಗೀತಾ

    ''ನಾವು ನಮ್ಮ ಭಾವ ಚೆನ್ನಕೇಶವ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಒಂದು ತಿಂಗಳ ಹಿಂದಷ್ಟೆ ನಾವು ಅವರನ್ನು ಕಳೆದುಕೊಂಡೆವು. ಅವರು ಬಂದು ನಮ್ಮ ಜೀವನವನ್ನು ಬದಲಾಯಿಸಿದರು. ನನಗೆ ತಂದೆಯ ರೀತಿ ಮಾರ್ಗದರ್ಶನ ಮಾಡಿದರು. ಅವರು ಇರಬೇಕಿತ್ತು, ನಾವು ಅವರನ್ನು ಮರೆಯುವ ಪ್ರಯತ್ನದಲ್ಲಿ ಇದ್ದೇವೆ. ಆದರೆ ಅವರು ಉಳಿಸಿ ಹೋದ ಹಲವು ಕೆಲಸಗಳು ಮಾಡುವುದು ಬಾಕಿ ಇದೆ. ನಾವು ನಾವು ನಮ್ಮ ರಂಗಭೂಮಿ ಗೆಳೆಯರು ಸೇರಿ ಅವರು ಬಿಟ್ಟು ಹೋದ ಕೆಲಸಗಳನ್ನು ಮಾಡುತ್ತೇವೆ. ನಾನು ಪಿಎಚ್‌ಡಿ ಮಾಡಿದ್ದು ಸಹ ಅವರ ಆಸೆಯಂತೆಯೇ'' ಎಂದು ಕಣ್ಣೀರು ಹಾಕಿದರು ಗೀತಾ ಸಿದ್ದಿ.

    English summary
    Singer, Theater artist Geetha Siddi talked about her life, Salaga song, Neenasam and other things. She said we Siddis also Kannadigas please accept us.
    Friday, August 13, 2021, 22:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X