ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದ ವಿಜಯ ಪ್ರಕಾಶ್
'ಜೈ ಹೋ' ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಇದೀಗ ನಮ್ಮ ಕನ್ನಡದ ಸಂಗೀತದ ಕಂಪನ್ನು ವಿದೇಶದಲ್ಲೂ ಹರಡಿ ಎಲ್ಲರ ಮನಗೆದ್ದಿದ್ದಾರೆ.
ಅಮೇರಿಕದ ಬಾಸ್ಟನ್ ನ ಬರ್ಕ್ಲಿ ಸಂಗೀತ ಶಾಲೆಯಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ವಿಶ್ವ ಶ್ರೋತೃಗಳ ಹಾಗೂ ಅಲ್ಲಿನ ಸಂಗೀತ ರಸಿಕರ ಮನ ಮೆಚ್ಚಿಸಿದ್ದಾರೆ.
ಅಂದಹಾಗೆ ಈ ಕಛೇರಿ ಭಾರಿ ಯಶಸ್ಸು ಕಂಡಿತಂತೆ. ಮೊದಲೇ ಎಲ್ಲಾ ಟಿಕೇಟ್ ಗಳು ಖಾಲಿಯಾಗಿದ್ದು, ಬಹುತೇಕ ಅಮೆರಿಕನ್ನರೇ ನೆರೆದಿದ್ದರು. ಬೇರೆ ದೇಶದ ಸಂಗೀತ ರಸಿಕರು ಬಂದಿದ್ದರು. ಹಲವಾರು ಹಿರಿಯ ಸಂಗೀತ ವಿದ್ವಾಂಸರು ಕೂಡ ಸಮಯ ಮಾಡಿಕೊಂಡು ಕಛೇರಿ ಆಲಿಸಿದರು.

'ಪ್ರತೀ ವರ್ಷ ವಿಶ್ವದ ಹಲವು ಸಂಗೀತಗಾರರು ಇಲ್ಲಿ ಪ್ರದರ್ಶನ ನೀಡುತ್ತಾರೆ. ಕಳೆದ ವರ್ಷ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ಪ್ರದರ್ಶನ ನೀಡಿದ್ದಾರೆ. ಈ ವರ್ಷ ನನ್ನ ಹಾಡುಗಳನ್ನು ಹಾಡಲಾಯಿತು. 22 ದೇಶಗಳಿಂದ ಆಯ್ಕೆಯಾಗಿದ್ದ 40 ವಿದ್ಯಾರ್ಥಿಗಳ ಜೊತೆ ನಾನು ಪ್ರದರ್ಶನ ನೀಡಿದೆ' ಎಂದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ತಿಳಿಸುತ್ತಾರೆ.
ಹಲವಾರು ಕನ್ನಡದ ಹಾಡುಗಳನ್ನು ಹಾಡಿ ಅಲ್ಲಿನವರನ್ನು ರಂಜಿಸುವುದರ ಜೊತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಕೂಡ ನೀಡಿದ್ದಾರಂತೆ. ಕೆನಡಾದ ಟೊರಂಟೊದಲ್ಲಿ ಕೂಡ ಗಾಯಕ ವಿಜಯ ಪ್ರಕಾಶ್ ಅವರು ಗಾಯನ ಪ್ರದರ್ಶನ ನೀಡಲಿದ್ದಾರೆ.


Click it and Unblock the Notifications











