For Quick Alerts
  ALLOW NOTIFICATIONS  
  For Daily Alerts

  ಹಾಸ್ಯಚಕ್ರವರ್ತಿ ನರಸಿಂಹರಾಜು ಪ್ರಬಂಧ ಸ್ಪರ್ಧೆ

  By Rajendra
  |

  "ನಗಿಸುವುದು ನನ್ನ ಕರ್ಮ, ನಗುವುದು ನಿಮ್ಮ ಧರ್ಮ" ಎಂದು ಹೇಳಿ ಕೋಟ್ಯಂತರ ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿದ ಮಹಾನ್ ಹಾಸ್ಯ ನಟ ಟಿ.ಆರ್. ನರಸಿಂಹರಾಜು (1926-1979). ಇಂತಹ ಅಪ್ಪಟ ಹಾಸ್ಯ ಕಲಾವಿದನಿಗೆ ಸರಕಾರಗಳು ಮಾಡಿದ ಉಪಕಾರ ಅಷ್ಟಷ್ಟು ಮಾತ್ರವೇ ಬಿಡಿ. ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ 89ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.

  ಅವರ ಜನುಮ ದಿನದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು 'ಗೋಲ್ಸ್ ಅಂಡ್ ಡ್ರೀಮ್ಸ್ ಸಂಸ್ಥೆಯು ಏರ್ಪಡಿಸಿದೆ. ಇದಕ್ಕಾಗಿ ಎರಡು ವಿಭಿನ್ನ ವಿಷಯಗಳನ್ನು ನೀಡಲಾಗಿದೆ. "ಹಾಸ್ಯಾಭಿನಯಕ್ಕೆ ನರಸಿಂಹರಾಜು ಅವರ ಕೊಡುಗೆ" ಹಾಗೂ "ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಬೆಳೆದುಬಂದ ಪರಿ".

  ಮೇಲಿನ ಎರಡು ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಪ್ರಬಂಧ ರಚಿಸಬಹುದು. ಆಸಕ್ತ ವಿದ್ಯಾರ್ಥಿಗಳು ಜುಲೈ 15ರೊಳಗೆ ಪ್ರಬಂಧ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 94820 71501. ಇ-ಮೇಲ್ ವಿಳಾಸ: narasimharaju.essay@gmail.com

  ಮೊದಲ ಅತ್ಯುತ್ತಮ ಪ್ರಬಂಧಕ್ಕೆ ಬಹುಮಾನ ರು.5,000, ಎರಡನೇ ಬಹುಮಾನ ರು.3,000 ಹಾಗೂ ಮೂರನೇ ಬಹುಮಾನ ರು.2,000 ಜೊತೆಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ನೀಡಿ ಗೌರವಿಸಲಾಗುತ್ತದೆ.

  ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜುಲೈ 24ರಂದು ಬೆಂಗಳೂರು, ಜೆ.ಸಿ ರಸ್ತೆಯಲ್ಲಿರುವ ಪುರಭವನದಲ್ಲಿ ನಡೆಯಲಿರುವ ನರಸಿಂಹರಾಜು ಅವರ 89ನೇ ಜನ್ಮದಿನದ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಅಪರೂಪದ ಸ್ಪರ್ಧೆಯಲ್ಲಿ ಭಾಗವಹಿಸಲು ಕೋರಲಾಗಿದೆ.

  ಇಂದಿನ ಬಹಳಷ್ಟು ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಚಿತ್ರಗಳನ್ನು ನೋಡುವ ಸೌಭಾಗ್ಯ ಇಲ್ಲದಿರುವುದು ದುರಂತ. ಕನ್ನಡದ ಚಾರ್ಲಿ ಚಾಪ್ಲಿನ್ ರನ್ನು ನೆನಪಿಸುತ್ತಿದ್ದ ನರಸಿಂಹರಾಜು ಅವರ ಹಾಸ್ಯಾಭಿನಯ ಅರುವತ್ತು ಎಪ್ಪತ್ತರ ದಶಕದಲ್ಲಿ ಕನ್ನಡಿಗರನ್ನು ಮನೆಮಾತಾಗಿತ್ತು.

  ಅವರು ಹುಟ್ಟಿದ್ದು ಮತ್ತು ನಿಧನರಾಗಿದ್ದು ಜುಲೈ ಮಾಸದಲ್ಲೇ ಎಂಬುದು ವಿಶೇಷ. ಪೌರಾಣಿಕ, ಸಾಮಾಜಿಕ, ಸಾಂಸಾರಿಕ ಹೀಗೆ ಪಾತ್ರ ಯಾವುದೇ ಇರಲಿ ತಮ್ಮದೇ ಆದಂತಹ ಶೈಲಿಯಲ್ಲಿ ಪ್ರೇಕ್ಷಕರನ್ನು ನಕ್ಕುನಲಿಸುವ ಪ್ರತಿಭೆ ನರಸಿಂಹರಾಜು ಅವರಿಗೆ ಸಿದ್ಧಿಸಿತ್ತು.

  ಚಿತ್ರಕ್ಕೆ ನಾಯಕ, ನಾಯಕಿಯಂತೆ ಹಾಸ್ಯನಟನ ಪಾತ್ರವೂ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟವರು ನರಸಿಂಹರಾಜು. 1926 ರಿಂದ 1979ರ ವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಬಾಲಕಲಾವಿದನಾಗಿ ಬಣ್ಣ ಹಚ್ಚಿಕೊಂಡರು.

  ರಂಗ ಮಂಚದ ಮೇಲೆ ಬಂದರೆ ಸಾಕು ಪ್ರೇಕ್ಷಕರಿಗೆ ಪುಷ್ಕಳ ಹಾಸ್ಯ ರಸಾಯನ ಉಣಬಡಿಸುತ್ತಿದ್ದರು. ಡಾ. ರಾಜ್ ಜೊತೆಗೆ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನರಸಿಂಹರಾಜು ನಂತರವೂ ರಂಗ ಭೂಮಿಯನ್ನು ಕಡೆಗಣಿಸಲಿಲ್ಲ.

  ಜುಲೈ24, 1926 ರಲ್ಲಿ ಜನಿಸಿದ ಇವರು ನಿಧನಹೊಂದಿದ್ದು ಜುಲೈ 20ರ 1979 ರಂದು. ತಮ್ಮ 53ನೇ ವಯಸ್ಸಿನಲ್ಲಿ ನಸುಕಿನ 4.30 ರ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದರು.

  ಇಂತಹ ಮಹಾನ್ ಹಾಸ್ಯ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರಕಾರ ಪ್ರಶಸ್ತಿ ನೀಡಲಿಲ್ಲ ಅಥವಾ ಅವರ ನೆನಪಿಸುವಂತಹ ಯಾವುದೇ ಕೆಲಸ ಮಾಡಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ಅಳಿಲುಸೇವೆ ಸಲ್ಲಿಸುತ್ತಿರುದು ಶ್ಲಾಘನೀಯ.

  ನರಸಿಂಹರಾಜು ಅಭಿನಯದ ಮಕ್ಕಳರಾಜ್ಯ (1960), ರಣಧೀರ ಕಂಠೀರವ (1960), ಕಿತ್ತೂರು ರಾಣಿ ಚೆನ್ನಮ್ಮ (1961), ವಿಜಯನಗರದ ವೀರಪುತ್ರ (1961), ಸತ್ಯಹರಿಶ್ಚಂದ್ರ (1965), ಲಗ್ನಪತ್ರಿಕೆ (1967), ಪ್ರೊಫೆಸರ್ ಹುಚ್ಚೂರಾಯ (1974) ಸೇರಿದಂತೆ ಇನ್ನೂ ಮುಂತಾದ ಚಿತ್ರಗಳಲ್ಲಿ ಹಾಸ್ಯದಲ್ಲಿ ನರಸಿಂಹನಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಅಲಂಕರಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  A state level essay competition on Kannada films comedy actor T.R. Narasimharaju ( 1923–1979) is open for college students, conducting by 'Gold and Dreams' organisation. The last date for submission of an essay is on before 15th July, 2012. For more details contact: 94820 71501. E-mail: narasimharaju.essaygmail.com

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X