»   » ಚಿತ್ರಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿರುವ 'ಎ ಡೇ ಇನ್ ದ ಸಿಟಿ'

ಚಿತ್ರಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿರುವ 'ಎ ಡೇ ಇನ್ ದ ಸಿಟಿ'

Posted By:
Subscribe to Filmibeat Kannada

ನಗರವೊಂದರ ಜ್ವಲಂತ ಸಮಸ್ಯೆಯ ಎಳೆಯನ್ನಿಟ್ಟುಕೊಂಡು ಭಿನ್ನ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ತಯಾರಾಗಿ ಇನ್ನೇನು ಬಿಡುಗಡೆಗೂ ಸಿದ್ಧವಾಗಿದೆ. ನಗರವೊಂದರಲ್ಲಿ ಬೆಳಗ್ಗೆ ಆರು ಗಂಟೆಯಿಂದ ಹನ್ನೆರಡು ಗಂಟೆಯೊಳಗೆ ನಡೆಯುವ ಕಥೆ ಇದು. [ಯೂಟ್ಯೂಬಲ್ಲಿ ಹೊಸ ಅಲೆ ಎಬ್ಬಿಸಿದ ಇನ್ಫಿ ಹುಡುಗ್ರು]

ನಗರವೊಂದರ ದಿನಚರಿ, ಪರಿಸರ ಮೇಲಿನ ಪರಿಣಾಮಗಳು, ಅದರಿಂದ ಉಂಟಾಗುವ ಸಮಸ್ಯೆಗಳು ಅವನ್ನು ಎದುರಿಸಲು ರಾಜಕಾರಣಿಗಳು, ನಾಗರೀಕರು ಒಟ್ಟಾಗಿ ಶ್ರಮಿಸುವ ಕಥಾಹಂದರವನ್ನು ತೆರೆಗೆ ತರುತ್ತಿರುವವರು ಹೆಸರಾಂತ ನಿರ್ಮಾಪಕ, ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ಪುತ್ರ ವೆಂಕಟ್ ಭಾರದ್ವಾಜ್.

ಇವರು ಕಲಿತಿದ್ದು ಎಂಜಿನಿಯರಿಂಗ್. ಕಳೆದ 20 ವರ್ಷಗಳಿಂದ ತಂತ್ರಜ್ಞಾನ ಹಾಗೂ ಮ್ಯಾನೇಜ್ ಮೆಂಟ್ ಕ್ಷೇತ್ರಗಳಲ್ಲಿ ಅವರು ದುಡಿದಿದ್ದಾರೆ. ಆದರೂ ಏನಾದರೂ ಕ್ರಿಯಾಶೀಲವಾಗಿ ಮಾಡಬೇಕೆಂಬ ತುಡಿದ ಅವರನ್ನು ಕಾಡುತ್ತಿತ್ತು. ಅದರ ಪ್ರತಿಫಲವೇ ಈ 'ಎ ಡೇ ಇನ್ ದ ಸಿಟಿ' (ನಗರದಲ್ಲಿ ಒಂದು ದಿನ).

ಚಿತ್ರಕ್ಕೆ ಸಿ.ವಿ.ಶಿವಶಂಕರ್ ಹಾಗೂ ಶಂಕರ್ ಅವರು ಬಂಡವಾಳ ಹೂಡಿದ್ದರೆ ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್ ಅವರು ಹೊತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಇಂಗ್ಲಿಷ್ ನಲ್ಲಿದ್ದರೂ ಇದೊಂದು ಅಪ್ಪಟ ಕನ್ನಡ ಸಿನಿಮಾ.

ಐಟಿ ಕ್ಷೇತ್ರದಲ್ಲಿರುವ ವೃತ್ತಿಪರರು ಸೇರಿಕೊಂಡು ತಯಾರಿಸಿರುವ ಚಿತ್ರವಿದು. ತಮ್ಮ ಬಿಡುವಿನ ವೇಳೆಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸ್ಕ್ರಿಪ್ಟ್ ವರ್ಕ್ ಗಾಗಿ ಆರು ತಿಂಗಳು, ಶೂಟಿಂಗ್ ಗಾಗಿ ಮೂರು ತಿಂಗಳು ಶ್ರಮವಹಿಸಿದ್ದಾರೆ.

ಪಾತ್ರವರ್ಗದಲ್ಲಿ 45ಕ್ಕೂ ಹೆಚ್ಚು ಐಟಿ ಹುಡುಗರು

ಬೆಳಗ್ಗೆ ಏಳಕ್ಕೆ ಚಿತ್ರೀಕರಣ ಶುರುವಾದರೆ ಮುಗಿಯುತ್ತಿದ್ದದ್ದು ರಾತ್ರಿ ಏಳಕ್ಕೆ. ಜನವರಿ 28ಕ್ಕೆ ಆರಂಭವಾಗಿ ಮುಗಿದದ್ದು ಏಪ್ರಿಲ್ 30ಕ್ಕೆ ಎನ್ನುತ್ತಾರೆ ವೆಂಕಟ್. ಇನ್ನು ಚಿತ್ರದ ಪಾತ್ರವರ್ಗದಲ್ಲಿ 45ಕ್ಕೂ ಹೆಚ್ಚು ಐಟಿ ಹುಡುಗರಿರುವುದು ವಿಶೇಷ. ಶೇ.90ರಷ್ಟು ಐಟಿ ಹುಡುಗರೇ ಸೇರಿ ತಯಾರಿಸಿದ ಚಿತ್ರವಿದು.

ಪ್ರಮುಖ ಪಾತ್ರಗಳಲ್ಲಿ ಟೆಕ್ಕಿಗಳು

ಈ ಚಿತ್ರದ ಪ್ರಮುಖ ಪಾತ್ರಧಾರಿ ಲಕ್ಷ್ಮಣ್ ಶಿವಶಂಕರ್. ಇವರು ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದು ಚಿತ್ರದಲ್ಲಿ ಐಎಎಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಓರೇಕಲ್ ನಲ್ಲಿ ಕೆಲಸ ಮಾಡುತ್ತಿರುವ ಮನೋಹರ್ ರಾಮ್ ಕುಮಾರ್ ಅವರದು ಸಿಇಓ ಪಾತ್ರ. ಇದಿಷ್ಟೇ ಅಲ್ಲದೆ ಅಕ್ಸೆಂಚರ್ ನ ಚೇತನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಐಎಎಸ್ ಅಧಿಕಾರಿಯ ಕನಸು ನನಸಾಗುತ್ತಾ?

ನಾಗರೀಕ ಸಮಸ್ಯೆಯೊಂದನ್ನು ಪರಿಹರಿಸಲು ಐಎಎಸ್ ಅಧಿಕಾರಿ ಕೈಗೆತ್ತಿಕೊಳ್ಳುವ ಒಂದು ಯೋಜನೆ, ಅದಕ್ಕೆ ಎದುರಾಗುವ ನಾನಾ ಅಡ್ಡಿ ಆತಂಕಗಳು, ಮುಖ್ಯಮಂತ್ರಿಗಳ ರಂಗಪ್ರವೇಶ, ವಿಪಕ್ಷ ನಾಯಕನ ವಿರೋಧಗಳ ನಡುವೆ ಕಥೆ ಸಾಗುತ್ತದೆ.

ಶಿವಸತ್ಯ ಸಂಗೀತದ ನಾಲ್ಕು ಹಾಡುಗಳು

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳೂ ಇವೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮಹದೇವಪುರ, ಶ್ರೀರಂಗಪಟ್ಟಣ, ಮಂಡ್ಯ ಮತ್ತು ಮದ್ದೂರಿನಲ್ಲಿ ಹಾಡುಗಳನ್ನು ಚಿತ್ರೀಕರಿಸಿರಿವುದು ವಿಶೇಷ. ಶಿವಸತ್ಯ ಅವರ ಸಂಗೀತ, ವಿಶ್ವಾಸ್ ಅವತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರತಂಡಕ್ಕೆ ಬೆನ್ನುತಟ್ಟಿದ ಚಾಲೆಂಜಿಂಗ್ ಸ್ಟಾರ್

ಈ ಚಿತ್ರದ ಆಡಿಯೋ ಈಗಾಗಲೆ ಬಿಡುಗಡೆಯಾಗಿದ್ದು ಐಟಿ ಹುಡುಗರ ಕನ್ನಡ ಚಿತ್ರ ಪ್ರೇಮಕ್ಕೆ ಬೆನ್ನುತಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೊಸತನ್ನು ನಿರೀಕ್ಷಿಸುತ್ತಿರುವ ಕನ್ನಡ ಚಿತ್ರಪ್ರೇಮಿಗಳಿಗೆ ಹೊಸ ಭರವಸೆ ನೀಡಿದೆ.

English summary
“A Day In The City” is a Kannada commercial feature film that is set to hit the screens in the month of Feb 2015. The movie is based on a thrilling concept which will deliver a message to citizens. The film explores how government officers function and talks about topics such as effective governance and national integration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada