»   » ಜನಪ್ರಿಯ ತೆಲುಗು ಹಾಸ್ಯ ನಟ ಎವಿಎಸ್ ನಿಧನ

ಜನಪ್ರಿಯ ತೆಲುಗು ಹಾಸ್ಯ ನಟ ಎವಿಎಸ್ ನಿಧನ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
actor AVS no more
ಎವಿಎಸ್ ಎಂದೇ ಜನಪ್ರಿಯರಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಆಮಂಚಿ ವೆಂಕಟ ಸುಬ್ರಹ್ಮಣ್ಯಂ ಶುಕ್ರವಾರ (ನ.8) ರಾತ್ರಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಪಿತ್ತಜನಕಾಂಗ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಇತ್ತೀಚೆಗೆ ಆಸ್ಪತ್ರೆಗೂ ದಾಖಲಾಗಿದ್ದರು.

ಗುಂಟೂರು ಜಿಲ್ಲೆ ತೆನಾಲಿ ಮೂಲದವರಾದ ಎವಿಎಸ್ ಅವರು ತೆಲುಗು ದೇಶಂ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಆಂಧ್ರಜ್ಯೋತಿ ತೆಲುಗು ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ ಎವಿಎಸ್ ಬಳಿಕ 'ಮಿಸ್ಟರ್ ಪೆಳ್ಳಾಂ' ಎಂಬ ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟಿದ್ದರು.

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಶೈಲಿಯ ಹಾಸ್ಯಕ್ಕೆ ಎವಿಎಸ್ ಜನಪ್ರಿಯರಾಗಿದ್ದರು. ಇದುವರೆಗೂ ಎವಿಎಸ್ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಸ್ಯ ನಟನಾಗಿ ತಮ್ಮದೇ ಛಾಪು ಮೂಡಿಸಿದ್ದ ಎವಿಎಸ್ ಪೋಷಕ ಹಾಗೂ ಕಾಮಿಡಿ ವಿಲನ್ ರೋಲ್ ಗಳನ್ನೂ ಅದ್ಭುತವಾಗಿ ಪೋಷಿಸುತ್ತಿದ್ದರು.

ತೆಲುಗಿನ ಜನಪ್ರಿಯ ನಟರಾದ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಹಾಗೂ ಇಂದಿನ ಜಮಾನಾ ನಟರೊಂದಿಗೂ ಹಾಸ್ಯ ಕಲಾವಿದರಾಗಿ ಅಭಿನಯಿಸಿದ್ದಾರೆ. ಈ ಹಿಂದೆಯೂ ಅವರಿಗೆ ಪಿತ್ತಜನಕಾಂಗ ವಿಫಲವಾಗಿ ಅವರ ಆರೋಗ್ಯ ಗಂಭೀರವಾಗಿತ್ತು. ಆಗ ಅವರ ಪುತ್ರಿ ಪಿತ್ತಜನಕಾಂಗದ ಸ್ವಲ್ಪ ಭಾಗವನ್ನು ದಾನ ಮಾಡಿ ತಂದೆಗೆ ಜೀವದಾನ ಮಾಡಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಕಳೆದ ಒಂದು ವಾರದ ಹಿಂದೆ ಮತ್ತೆ ಪಿತ್ತಜನಕಾಂಗ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ವಿಷಮಿಸಿ ಅವರು ಶುಕ್ರವಾರ ರಾತ್ರಿ ಕಣ್ಮುಚ್ಚಿದ್ದಾರೆ. ಎವಿಎಸ್ ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ.

English summary
Popular Telugu film comedian Amanchi Venkata Subrahmanyam died of liver ailment here Friday night at the age of 56. He was also a leader of Telugu Desam Party. AVS, as he was popularly known, hailed from Tenali in Guntur district.
Please Wait while comments are loading...