Exclusive: ನಾನು ನಟನಿಗಾಗಿ ಕಥೆ ಮಾಡಲ್ಲ.. ಯುವ ಜೊತೆ 'ಕೆಂಪೇಗೌಡ' ಸಿನಿಮಾ ಮಾಡ್ತೀನಿ ಎನ್ನುವುದು ಸುಳ್ಳು: ನಾಗಾಭರಣ
ಕನ್ನಡದಲ್ಲಿ ಇತ್ತೀಚೆಗೆ ಐತಿಹಾಸಿಕ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿದೆ. ದರ್ಶನ್ ನಟಿಸಬೇಕಿದ್ದ 'ರಾಜಾ ವೀರಮದಕರಿ ನಾಯಕ' ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿದೆ. ಇದೀಗ ಬೆಂಗಳೂರು ನಿರ್ಮಾತೃ 'ಕೆಂಪೇಗೌಡ' ಕಥೆ ತೆರೆಗೆ ಬರುತ್ತದೆ ಎನ್ನುವ ಗುಸುಗುಸು ಕಳೆದೆರಡು ದಿನಗಳಿಂದ ಕೇಳಿಬರ್ತಿತ್ತು. ಟಿ. ಎಸ್ ನಾಗಾಭರಣ ನಿರ್ದೇಶನದ ಚಿತ್ರದಲ್ಲಿ ಕೆಂಪೇಗೌಡರ ಪಾತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸ್ತಾರೆ ಎನ್ನಲಾಗ್ತಿತ್ತು.
ಯುವ ರಾಜ್‌ಕುಮಾರ್ ಸಿನಿ ಆರಂಗೇಟ್ರಂಗೆ ವೇದಿಕೆ ಸಿದ್ಧವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. 'ಕಾಂತಾರ' ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ 'ಯುವ ರಣಧೀರ ಕಂಠೀರವ' ಅನ್ನುವ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಟೀಸರ್ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ನಂತರ ಹೊಂಬಾಳೆ ಸಂಸ್ಥೆ 'ಯುವ' ಚೊಚ್ಚಲ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿತ್ತು.

'ಯುವ' ನಂತರ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಚಿತ್ರದಲ್ಲೂ ರಾಘಣ್ಣನ ಕಿರಿಮಗ ನಟಿಸುವ ಸಾಧ್ಯತೆಯಿದೆ. ಅಣ್ಣಾವ್ರ ಮೊಮ್ಮಗನ ಜೊತೆ ಸಿನಿಮಾ ಮಾಡಲು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಸಾಲುಗಟ್ಟಿದ್ದಾರೆ. ಇದೆಲ್ಲದರ ನಡುವೆ ಯುವ 'ಕೆಂಪೇಗೌಡ'ರ ಪಾತ್ರ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಹಿರಿಯ ನಿರ್ದೇಶಕ ಟಿ. ಎಸ್ ನಾಗಾಭರಣ ಈ ಚಿತ್ರದ ಸಾರಥ್ಯ ವಹಿಸುತ್ತಾರೆ ಎನ್ನಲಾಗಿತ್ತು.
ಟಿ.ಎಸ್ ನಾಗಾಭರಣ ಪ್ರತಿಕ್ರಿಯೆ
ಯುವ ರಾಜ್‌ಕುಮಾರ್ ಹೀರೊ ಆಗಿ 'ಕೇಂಪೇಗೌಡ' ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ನಾಗಾಭರಣ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಆ ರೀತಿಯ ಯಾವುದೇ ಸಿನಿಮಾ ನಾನು ಕೈಗೆತ್ತಿಕೊಂಡಿಲ್ಲ. ನಾನು ಯಾವುದೇ ನಟನಿಗಾಗಿ ಸಿನಿಮಾ ಕಥೆ ಮಾಡುವುದು ಇಲ್ಲ. ಇಂತಾದೊಂದು ಸುದ್ದಿ ಹರಡಿದ್ದು ಹೇಗೆ ಎನ್ನುವುದು ನನಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ನನಗೂ ಗೊತ್ತಾಗುತ್ತಿದೆ. ಆದರೆ ಅಂತಹ ಯಾವುದೇ ಸಿನಿಮಾ ಆಲೋಚನೆ ಇಲ್ಲ" ಎಂದು ವಿವರಿಸಿದ್ದಾರೆ.

"ನಾಗರತ್ನಮ್ಮ ಸಿನಿಮಾ ಮಾಡ್ತಿದ್ದೇನೆ"
ಕರ್ನಾಟಕ ಸಂಗೀತಕ್ಕೆ ಭಾರೀ ಕೊಡುಗೆ ನೀಡಿದ ಬೆಂಗಳೂರು ನಾಗರತ್ನಮ್ಮ ಕುರಿತು ಸದ್ಯ ಟಿ.ಎಸ್ ನಾಗಾಭರಣ ಸಿನಿಮಾ ಮಾಡುತ್ತಿದ್ದಾರೆ. "ಸದ್ಯಕ್ಕೆ ನಾನು ಬೆಂಗಳೂರು ನಾಗರತ್ನಮ್ಮ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದೇನೆ. ಆ ಸಿನಿಮಾ ಬಗ್ಗೆ ಸಂಶೋಧನೆ, ಕಥೆ ಚಿತ್ರಕಥೆ ಸಿದ್ಧಪಡಿಸುವ ಕೆಲಸಗಳು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನಾಯಕಿ ಯಾರು? ಬೇರೆ ಯಾರೆಲ್ಲಾ ಕಲಾವಿದರು, ತಂತ್ರಜ್ಞರು ಇರುತ್ತಾರೆ ಎನ್ನುವ ಮಾಹಿತಿ ನೀಡುತ್ತೇನೆ. ಶೀಘ್ರದಲ್ಲೇ ಸಿನಿಮಾ ಮುಹೂರ್ತ" ಎಂದು ಹೇಳಿದ್ದಾರೆ.
ಕೆಂಪೇಗೌಡರ ಹಿನ್ನಲೆ
ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆ ಅಪಾರ. ಕೆಂಪೇಗೌಡರು ವಿಜಯನನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. 1510ರಲ್ಲಿ ಜನಿಸಿದ ಕೆಂಪೇಗೌಡರು 1528ರಲ್ಲಿ ಯುವರಾಜರಾಗಿ ಪಟ್ಟಾಭಿಷೇಕ ನಡೆದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವ ನೋಡಿದ್ದರಿಂದ ಅಂತದ್ದೇ ಒಂದು ನಗರವನ್ನು ಕಟ್ಟುವ ಮನಸ್ಸು ಮಾಡಿದ್ದರು. ಅದಕ್ಕಾಗಿ ಒಳ್ಳೆ ಸ್ಥಳ ಗುರುತಿಸಿ ಜನರಿಂದ ಹಣ ಸಂಗ್ರಹಿಸಿ ಬೆಂಗಳೂರು ಪಟ್ಟಣ ನಿರ್ಮಿಸಿದರು. ಬೆಂಗಳೂರು ಭಾಗದಲ್ಲಿ ಹಲವು ಕೆರೆಗಳನ್ನು ಕಟ್ಟಿಸಿದರು. ಆ ಕೆರೆಗಳನ್ನು ಇಂದಿಗೂ ನೋಡಬಹುದು.
ಅಣ್ಣಾವ್ರ ಮಾಡಬೇಕಿದ್ದ ಸಿನಿಮಾ
ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾ ಅಂದಾಕ್ಷಣ ನೆನಪಾಗುವುದು ಡಾ. ರಾಜ್‌ಕುಮಾರ್. ಕೆಂಪೇಗೌಡರ ಕುರಿತು ಅಣ್ಣಾವ್ರು ಸಿನಿಮಾ ಮಾಡುವ ಮನಸ್ಸು ಮಾಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಹೆಸರು ಕೇಳಿಬಂದಿತ್ತು. ಆದರೆ ಸ್ವತಃ ಟಿ. ಎಸ್ ನಾಗಾಭರಣ ಇದು ನಿಜ ಅಲ್ಲ ಎಂದು ಹೇಳಿದ್ದಾರೆ. ಸದ್ಯ 'ಯುವ' ಸಿನಿಮಾ ಚಿತ್ರೀಕರಣ ಮಂಗಳೂರಿನಲ್ಲಿ ನಡೀತಿದೆ.
More from Filmibeat