ರಾಗಿಮುದ್ದೆ ತಿನ್ನುವುದನ್ನು ಕಲಿಸಿಕೊಟ್ಟಿದ್ದು ರಾಜ್ ಕುಮಾರ್: ಅನುಭವ ಹಂಚಿಕೊಂಡ ನಟಿ ಅಂಬಿಕಾ
80-90ರ ದಶಕದಲ್ಲಿ ಪರಭಾಷೆಯಿಂದ ಬಂದು ಕನ್ನಡದಲ್ಲಿ ಮಿಂಚಿದ ನಟಿಯರಲ್ಲಿ ಅಂಬಿಕಾ ಒಬ್ಬರು. ಅದರಲ್ಲಿಯೂ 80ರ ದಶಕದಲ್ಲಿ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶ್ರೀನಾಥ್, ಶಂಕರ್ ನಾಗ್, ಅನಂತ್ ನಾಗ್ ಹೀಗೆ ಆ ಸಮಯದ ಎಲ್ಲ ಪ್ರಮುಖ ನಾಯಕರೊಂದಿಗೂ ತೆರೆಹಂಚಿಕೊಂಡಿದ್ದಾರೆ.
Recommended Video
ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಅವರು ಕನ್ನಡ ಕಿರುತೆರೆಯಲ್ಲಿಯೂ ಬಣ್ಣಹಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಕ್ರಿಯರಾಗಿರುವ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿನ ಹಳೆಯ ಫೋಟೊಗಳನ್ನು ಮತ್ತು ಅದರ ಸಣ್ಣ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಜನಿಸಿದವರಾದರೂ ಅಂಬಿಕಾ, ದಕ್ಷಿಣ ಭಾರತದ ಎಲ್ಲ ಸಿನಿಮಾರಂಗದವರ ಪ್ರೀತಿ ಗಳಿಸಿದ್ದರು.
ಕೆಲವು ದಿನಗಳ ಹಿಂದೆ ಕನ್ನಡದ ಚಿತ್ರಗಳ ಎರಡು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆ ಎರಡೂ ನೆನಪುಗಳು ಊಟಕ್ಕೆ ಸಂಬಂಧಿಸಿದ್ದು ಎನ್ನುವುದು ವಿಶೇಷ! ಮುಂದೆ ಓದಿ...

ಸಂಗೀತ ರಾತ್ರಿಗಳಲ್ಲಿ ಹಾಡುತ್ತಿದ್ದೆ
ಡಾ. ರಾಜ್ ಕುಮಾರ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿ ನಟಿಸಿದ್ದ ಚಿತ್ರಗಳನ್ನು ಅಂಬಿಕಾ ಶೇರ್ ಮಾಡಿದ್ದರು. ಡಾ. ರಾಜ್ ಕುಮಾರ್ ಅವರು ನಡೆಸಿ ಕೊಡುತ್ತಿದ್ದ ಸಂಗೀತ ರಾತ್ರಿಗಳಲ್ಲಿ ಅವರೊಂದಿಗೆ ನಾನೂ ಹಾಡುತ್ತಿದ್ದೆ ಎಂಬುದನ್ನು ಅಂಬಿಕಾ ಸ್ಮರಿಸಿಕೊಂಡಿದ್ದಾರೆ.

ರಾಗಿ ಮುದ್ದೆ ತಿನ್ನುವುದು ಕಲಿಸಿಕೊಟ್ಟರು
'ನಾನು ರಾಗಿಮುದ್ದೆಯನ್ನು ಮೊದಲ ಬಾರಿಗೆ ತಿಂದಿದ್ದು ಅವರ ಕಾರಣದಿಂದ. 'ಚಲಿಸುವ ಮೋಡಗಳು' ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಮೊದಲ ಬಾರಿಗೆ ರಾಗಿ ಮುದ್ದೆ ತಿಂದಿದ್ದೆ' ಎಂದು ಅಂಬಿಕಾ ತಿಳಿಸಿದ್ದಾರೆ. ಈ ಚಿತ್ರವನ್ನು ಮುಂದೆ ತೆಲುಗಿನಲ್ಲಿ ಸೋಬನ್ ಬಾಬು ಅವರೊಂದಿಗೆ 'ರಾಜ್ ಕುಮಾರ್' ಹೆಸರಲ್ಲಿ ಮಾಡಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಬಿಸಿಬೇಳೆ ಬಾತ್, ಕೋಸಂಬರಿ
1984ರಲ್ಲಿ ಭಾರ್ಗವ ನಿರ್ದೇಶನದ 'ಮೂರು ಜನ್ಮ' ಚಿತ್ರದಲ್ಲಿ ಅಂಬಿಕಾ ನಟಿಸಿದ್ದರು. ಅಂಬರೀಶ್ ನಾಯಕರಾಗಿದ್ದ ಚಿತ್ರವಿದು. ಈ ಸಿನಿಮಾ ಚಿತ್ರೀಕರಣದ ನೆನಪನ್ನು ಶೇರ್ ಮಾಡಿರುವ ಅಂಬಿಕಾ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡುವಾಗ ನಾನು ಮೊದಲ ಬಾರಿಗೆ ಕನ್ನಡಿಗರ ಜನಪ್ರಿಯ ಆಹಾರ ಬಿಸಿಬೇಳೆ ಬಾತ್ ಮತ್ತು ಕೋಸಂಬರಿಯನ್ನು ತಿಂದಿದ್ದೆ ಎಂದು ತಿಳಿಸಿದ್ದಾರೆ.

40ಕ್ಕೂ ಹೆಚ್ಚು ಸಿನಿಮಾ
ಅಂಬಿಕಾ ಇತ್ತೀಚೆಗೆ ಕನ್ನಡದಲ್ಲಿ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಶಾಲೆಯ ಪ್ರಿನ್ಸಿಪಾಲ್ ಪಾತ್ರದಲ್ಲಿ ನಟಿಸಿದ್ದರು. ರಾಜ್ ಕುಮಾರ್ ಅವರೊಂದಿಗೆ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಅಪೂರ್ವ ಸಂಗಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಮತ್ತು ಪೋಷಕ ಪಾತ್ರಗಳು ಸೇರಿ ಕನ್ನಡದಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











