Just In
Don't Miss!
- News
50 ಸಾವಿರ ಪಾಯಿಂಟ್ ದಾಟಿಕ್ದ ಸೂಚ್ಯಂಕ, ಹೂಡಿಕೆದಾರರು ಸಂತಸ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಂಗಾರದಂಥ ಕನ್ನಡ ನಿರ್ದೇಶಕರನ್ನು ಈ ರೀತಿ ಕಾಣೋದಾ?
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 1972 ಸುವರ್ಣ ವರ್ಷ. ಯಶಸ್ಸು, ಪಾತ್ರಗಳ ವೈವಿಧ್ಯತೆಯಲ್ಲಿ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದ ವರ್ಷವದು. ಇದಕ್ಕೆಲ್ಲಾ ಕಾರಣ ಎವರ್ ಗ್ರೀನ್ ಹಿಟ್ ಸಿನಿಮಾ 'ಬಂಗಾರದ ಮನುಷ್ಯ'.
ವರನಟ ಡಾ.ರಾಜ್ ಕುಮಾರ್ ಅತ್ಯಮೋಘ ಅಭಿನಯದಿಂದ ಸತತ 104 ವಾರ ಪ್ರದರ್ಶನ ಕಂಡ ಶ್ರೇಷ್ಠಾತಿ ಶ್ರೇಷ್ಠ ಕನ್ನಡ ಚಿತ್ರ 'ಬಂಗಾರದ ಮನುಷ್ಯ' ಚಿತ್ರದ ಸೂತ್ರಧಾರ ನಿರ್ದೇಶಕ ಸಿದ್ದಲಿಂಗಯ್ಯ.
ಇಂತಿಪ್ಪ ಕನ್ನಡದ ಹೆಮ್ಮಿಯ ನಿರ್ದೇಶಕ ಈಗ ಅನಾರೋಗ್ಯದ ಕಾರಣ ಕಳೆದ 20 ದಿನಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ['ಬಂಗಾರದ ಮನುಷ್ಯ' ನಿರ್ದೇಶಕ ಸಿದ್ದಲಿಂಗಯ್ಯ ಅಸ್ವಸ್ಥ]
'ಭೂತಯ್ಯನ ಮಗ ಅಯ್ಯು', 'ದೂರದ ಬೆಟ್ಟ', 'ಪ್ರೇಮ ಪರ್ವ' ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ನವರ ಆರೋಗ್ಯ ಹದಗೆಟ್ಟಿದ್ದರೂ ಕನ್ನಡ ಚಿತ್ರರಂಗದ ಯಾವೊಬ್ಬ ನಟ-ನಟಿ-ನಿರ್ದೇಶಕರುಗಳೂ ಸಿದ್ದಲಿಂಗಯ್ಯನವರ ಆರೋಗ್ಯ ವಿಚಾರಿಸಿಲ್ಲ.
ನಟ ಸಾರ್ವಭೌಮ ಡಾ.ರಾಜ್ ಮತ್ತು ಸಾಹಸ ಸಿಂಹ ಡಾ.ವಿಷ್ಟುವರ್ಧನ್ ರವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ 'ಬಂಗಾರ'ದಂತಹ ನಿರ್ದೇಶಕರಿಗೆ ಇಂತಹ ಮರ್ಯಾದೆ ಎಷ್ಟು ಸರಿ..? ಮುಂದೆ ಓದಿ.......

ಸಿದ್ದಲಿಂಗಯ್ಯ ಅನಾರೋಗ್ಯದ ಬಗ್ಗೆ ಕನ್ನಡ ಚಿತ್ರರಂಗ ನಿರ್ಲಕ್ಷ್ಯ
1969 ರಿಂದ 1999 ರವರೆಗೂ, ಅಂದ್ರೆ ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಹಿರಿಯ ಜೀವ, ಹೆಮ್ಮೆಯ ನಿರ್ದೇಶಕ ಸಿದ್ದಲಿಂಗಯ್ಯ. ಇಂದು ಸೂಪರ್ ಸ್ಟಾರ್ ರಜನಿಕಾಂತ್ ಕೂಡ 'ಬಂಗಾರದ ಮನುಷ್ಯ' ಚಿತ್ರದ ಬಗ್ಗೆ ಮಾತನಾಡುತ್ತಾರೆ ಅಂದ್ರೆ, ಅದಕ್ಕೆ ಕಾರಣ ಸಿದ್ದಲಿಂಗಯ್ಯ. ಸಮಾಜಮುಖಿ ಸಿನಿಮಾಗಳಿಂದ ಜನಪ್ರಿಯತೆ ಪಡೆದ ಸಿದ್ದಲಿಂಗಯ್ಯ ನವರಿಗೆ ಈಗ ವಯಸ್ಸು 79. ಸಿದ್ದಲಿಂಗಯ್ಯ ಅವರ ಸಾಧನೆ ಗುರುತಿಸಿ ಕನ್ನಡ ಚಿತ್ರರಂಗ ಅದೆಷ್ಟು ಬಾರಿ ಸನ್ಮಾನ ಮಾಡಿದೆಯೋ ಗೊತ್ತಿಲ್ಲ. ಆದ್ರೆ, ಅನಾರೋಗ್ಯಕ್ಕೆ ತುತ್ತಾಗಿರುವಾಗ ಅವರ ಆರೋಗ್ಯ ವಿಚಾರಿಸುವ ವಿಷಯದಲ್ಲೂ ಕನ್ನಡ ಚಿತ್ರರಂಗ ನಿರ್ಲಕ್ಷ್ಯ ವಹಿಸಿರುವುದು ಶೋಚನೀಯ. {Photo Courtesy : Chandra Shekar.B}

20 ದಿನಗಳಾದರೂ ಯಾರೂ ಕ್ಯಾರೆ ಅಂದಿಲ್ಲ!
ಸಿದ್ದಲಿಂಗಯ್ಯ ನೆಲೆಸಿರುವುದು ಬೆಂಗಳೂರಿನ ಹೃದಯ ಭಾಗ ರಾಜಾಜಿನಗರದಲ್ಲಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಅನೇಕ ಗಣ್ಯರು ಕೂಡ ನೆಲೆಸಿರುವುದು ಅದೇ ಏರಿಯಾದಲ್ಲಿ. ಇನ್ನೂ ಸಿದ್ದಲಿಂಗಯ್ಯ 20 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿರುವುದು ಅದೇ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ. ಹೀಗಿದ್ದರೂ, ಇಷ್ಟು ದಿನಗಳು ಕಳೆದರೂ, ಸಿದ್ದಲಿಂಗಯ್ಯ ಹೇಗಿದ್ದಾರೆ ಅಂತ ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗಿಲ್ಲ. {Photo Courtesy : Chandra Shekar.B}

ಮಾನವೀಯತೆ ಮೆರೆದ ವಾಣಿಜ್ಯ ಮಂಡಳಿ
ನಿರ್ದೇಶಕ ಸಿದ್ದಲಿಂಗಯ್ಯ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದ ತಕ್ಷಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸುಗುಣ ಆಸ್ಪತ್ರೆಗೆ ದೌಡಾಯಿಸಿ ಅವರ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಥಾಮಸ್ ಡಿಸೋಜ, ಪದಾಧಿಕಾರಿಗಳಾದ ಭಾ.ಮಾ.ಹರೀಶ್ ಸೇರಿದಂತೆ ಅನೇಕರು ಸಿದ್ದಲಿಂಗಯ್ಯನವರನ್ನ ಭೇಟಿ ಮಾಡಿ ಬಂದಿದ್ದಾರೆ. ಇದರಿಂದ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದರೂ, ಸಿದ್ದಲಿಂಗಯ್ಯನವರು ಇರುವ ವಾರ್ಡ್ ಮಾತ್ರ ಬಿಕೋ ಎನ್ನುತ್ತಿದೆ.

'ಬಂಗಾರ'ದ ಸಾಧನೆ ಗ್ಲಾಮರ್ ಮುಂದೆ ಮೌನ!
ರೆಬೆಲ್ ಸ್ಟಾರ್ ಅಂಬರೀಷ್ ಆಸ್ಪತ್ರೆಗೆ ದಾಖಲಾಗಿದ್ದಾಗ ಆದ ಘಟನೆಗಳನ್ನ ಸ್ವಲ್ಪ ನೆನಪಿಸಿಕೊಳ್ಳಿ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಚಿತ್ರರಂಗದ ಎಲ್ಲಾ ಗಣ್ಯರು ಅಂಬರೀಷ್ ದಾಖಲಾಗಿದ್ದ ವಿಕ್ರಂ ಆಸ್ಪತ್ರೆಗೆ ವಿಸಿಟ್ ಹಾಕಿದ್ದರು. ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು ಕೂಡ ಅಂಬಿ ಆರೋಗ್ಯದ ಬಗ್ಗೆ ಎಚ್ಚರ ವಹಿಸಿದ್ದರು. ಅಂಬಿ ಆರೋಗ್ಯದ ಖರ್ಚು ವೆಚ್ಚಗಳನ್ನ ಸರ್ಕಾರ ಭರಿಸಿತ್ತು. ಕ್ಷಣ ಕ್ಷಣದ ಅಪ್ ಡೇಟ್ಸ್ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗುತ್ತಿತ್ತು. ಆದ್ರೆ, ಪ್ರತಿಭಾವಂತ ನಿರ್ದೇಶಕ ಸಿದ್ದಲಿಂಗಯ್ಯನವರಿಗ್ಯಾಕೆ ಇಂತಹ ಅಸಡ್ಡೆ?

ಎಲ್ಲಾ ಟಿ.ಆರ್.ಪಿ ಕಾ ಮಾಮ್ಲಾ..!?
ಶೂಟಿಂಗ್ ನಲ್ಲಿ ದರ್ಶನ್ ಬಿದ್ದು ಕತ್ತಿಗೆ ಏಟಾಗಿದೆ. ಕಿಚ್ಚ ಸುದೀಪ್ ಬೆರಳಿಗೆ ಪೆಟ್ಟು ಬಿದ್ದಿದೆ. ಇಷ್ಟಕ್ಕೆ ಆಸ್ಪತ್ರೆಗಳ ಮುಂದೆ ಜನಸಾಗರ ಮತ್ತು ತಾರಾದಂಡು ಜಮಾಯಿಸಿರುತ್ತೆ. ಯಾಕೆ..? ದರ್ಶನ್, ಸುದೀಪ್ ಮತ್ತು ಇನ್ನಿತರ ತಾರೆಗಳು ತೆರೆ ಮೇಲೆ ರಾರಾಜಿಸುವವರು. ಅವರೆಲ್ಲಾ ಟಿ.ಆರ್.ಪಿ ಪೀಸ್. ಆದರೆ, ಹಿರಿಯ ಜೀವಿಗಳ ಪರಿಸ್ಥಿತಿ ಗಂಭೀರವಾಗಿದ್ದರೂ, ಪಾಪ, ಚಿತ್ರರಂಗದಲ್ಲಿರುವವರಿಗೆ ಪುರುಸೊತ್ತೇ ಇರಲ್ಲ. ಇದು ಪ್ರತಿಭಾವಂತ ತಂತ್ರಜ್ಞರಿಗೆ ಸಿಗುವ ಬೆಲೆ!

ಸಹಾಯ ಹಸ್ತ ಬೇಡ : ಕನಿಷ್ಟ ಕಾಳಜಿ ಬೇಡ್ವಾ?
ಆಸ್ಪತ್ರೆಗೆ ಬರುವ ಎಲ್ಲರೂ ಧನ ಸಹಾಯ ಮಾಡಲೇಬೇಕಂತಿಲ್ಲ. ಆದ್ರೆ, ಚಿತ್ರರಂಗಕ್ಕಾಗಿ ಸೇವೆ ಸಲ್ಲಿಸಿರುವ ಹಿರಿಯ ಜೀವಕ್ಕೆ ಒಂದು ಸಲಾಂ ಹೊಡೆದು ''ಬೇಗ ಗುಣಮುಖರಾಗಿರಿ'' ಅಂತ ಹೇಳಿದರೆ, ಕನಿಷ್ಟ ಅವರ ಆರೋಗ್ಯ ಹುರುಪುಗೊಳ್ಳುವುದು ಖಂಡಿತ.

ತಂತ್ರಜ್ಞರು ಪ್ರಾಣ ಬಿಟ್ಟರೂ ಕೇಳಲ್ಲ..!
ನಿರ್ದೇಶಕರುಗಳು ಮಾತ್ರವಲ್ಲ. ಮೊನ್ನೆ 'ಶಿರಾಡಿ ಘಾಟ್' ಚಿತ್ರತಂಡದ ಇಬ್ಬರು ಕ್ಯಾಮರಾ ಅಸಿಸ್ಟೆಂಟ್ ಗಳು ಶೂಟಿಂಗ್ ಮುಗಿಸಿ ಬರುತ್ತಿದ್ದಾಗ, ಅಪಘಾತಕ್ಕೀಡಾಗಿ ಪ್ರಾಣ ಬಿಟ್ಟಿದ್ದಾರೆ. ಈ ವಿಷಯ ಚಿತ್ರರಂಗದಲ್ಲಿರುವ ಎಷ್ಟು ಮಂದಿಗೆ ಗೊತ್ತಿದೆ? ಆ ಇಬ್ಬರ ಕುಟುಂಬದ ಗತಿ ಈಗೇನಾಗಿದೆ..? ಎಲ್ಲರ ಜೀವ ಒಂದೇ, ಅದು ಸ್ಟಾರ್ ಗಳದ್ದಾಗಲಿ, ತಂತ್ರಜ್ಞರದ್ದಾಗಲಿ ಅಲ್ಲವೇ..? {Photo:ಸಾಂದರ್ಭಿಕ ಚಿತ್ರ}

ಸಿದ್ದಲಿಂಗಯ್ಯ ನವರ ಹಿನ್ನೆಲೆ...
ನವಜ್ಯೋತಿ ಸ್ಟುಡಿಯೋದಲ್ಲಿ ಫ್ಲೋರ್ ಬಾಯ್ ಆಗಿ ಕೆಲಸಕ್ಕೆ ಸೇರಿದ ಸಿದ್ದಲಿಂಗಯ್ಯ, ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲಕ್ಕೆ ಬಂದವರು. ಶಂಕರ್ ಸಿಂಗ್ ಅವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನಕ್ಕೆ ಕಾಲಿಟ್ಟವರು. 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಬಂಗಾರದ ಮನುಷ್ಯ', 'ಭೂತಯ್ಯನ ಮಗ ಅಯ್ಯು', 'ನಾರದ ವಿಜಯ', 'ಪ್ರೇಮ ಪರ್ವ', 'ಅಜೇಯ', 'ಸಂಭಾವಾಮಿ ಯುಗೇ ಯುಗೇ'...ಹೀಗೆ 20 ಕ್ಕೂ ಹೆಚ್ಚು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಸಿದ್ದಲಿಂಗಯ್ಯ. [ಸಿದ್ದಲಿಂಗಯ್ಯನವರ ಬೆಳ್ಳಿಹೆಜ್ಜೆ ದರ್ಶನ]

ಕಾಲಿವುಡ್ ನಟ ಮುರುಳಿ ತಂದೆ, ಅಧರ್ವ ತಾತ
ಕಾಲಿವುಡ್ ನ ಖ್ಯಾತ ನಟ ಮುರುಳಿ ತಂದೆ ಸಿದ್ದಲಿಂಗಯ್ಯ. 'ಪ್ರೇಮ ಪರ್ವ' ಚಿತ್ರದ ಮೂಲಕ ಮುರುಳಿಯನ್ನ ಕನ್ನಡದಲ್ಲಿ ಪರಿಚಯಿಸಿದ ಸಿದ್ದಲಿಂಗಯ್ಯ, ಮಗನನ್ನ ಕಾಲಿವುಡ್ ಗೂ ಕರೆದುಕೊಂಡು ಹೋದರು. ತಮಿಳನಲ್ಲಿ ಬಹುಬೇಡಿಕೆಯ ನಟರಾದ ಮುರುಳಿ ಚಿಕ್ಕವಯಸ್ಸಲ್ಲೇ ಕೊನೆಯುಸಿರೆಳೆದರು. ಮುರುಳಿ ಪುತ್ರ ಅಧರ್ವ ಈಗ ತಮಿಳು ಚಿತ್ರರಂಗದ ಭರವಸೆಯ ನಟ. [ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಇನ್ನಿಲ್ಲ]

ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ಕನ್ನಡ ಚಿತ್ರರಂಗ?
ಇಷ್ಟು ದಿನ ನಿರಾಸಕ್ತಿ ತೋರಿದ್ದ ಕನ್ನಡ ಚಿತ್ರರಂಗ ಇನ್ನಾದರೂ ಎಚ್ಚೆತ್ತುಕೊಂಡು ಸಿದ್ದಲಿಂಗಯ್ಯನವರ ಕಡೆ ತಿರುಗಿ ನೋಡಿದರೆ, ಕನ್ನಡದ ಹೆಮ್ಮೆಯ ನಿರ್ದೇಶಕರಿಗೆ ಗೌರವ ಸಿಕ್ಕಿದ ಹಾಗೆ. ಇಂದು ಇನ್ನೊಬ್ಬರ ನೋವಿಗೆ ಸ್ಪಂದಿಸಿದರೆ, ನಾಳೆ ಅವರ ನೋವಿಗೂ ಮತ್ತೊಬ್ಬರು ಸ್ಪಂದಿಸುತ್ತಾರೆ ಅನ್ನೋದನ್ನ ಎಲ್ಲರೂ ನೆನಪಿನಲ್ಲಿಟ್ಟುಕೊಂಡರೆ ಒಳಿತು. {Photo:ಸಾಂದರ್ಭಿಕ ಚಿತ್ರ}