»   » ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ

ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ

Posted By:
Subscribe to Filmibeat Kannada

ಎಪ್ಪತ್ತು, ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಶ್ರೇಷ್ಠ ಚಿತ್ರಗಳನ್ನು ನೀಡಿದ ಗರಿಮೆ ದೊರೈ ಮತ್ತು ಭಗವಾನ್ ಜೋಡಿಗೆ ಸಲ್ಲುತ್ತದೆ. ಬಿ.ದೊರೈರಾಜು ಹಾಗೂ ಎಸ್.ಕೆ.ಭಗವಾನ್ (81) ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಮರೆಯಲಾಗದ ಚಿತ್ರಗಳನ್ನು ನೀಡಿದ್ದಾರೆ.

ದೊರೈ ಭಗವಾನ್ ಜೋಡಿ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು ಅವುಗಳಲ್ಲಿ ಬಹುತೇಕ ವರನಟ ಡಾ.ರಾಜ್ ಕುಮಾರ್ ಅವರೇ ನಾಯಕ ನಟ. ಇನ್ನೊಂದು ವಿಶೇಷ ಎಂದರೆ 55 ಚಿತ್ರಗಳಲ್ಲಿ 23 ಚಿತ್ರಗಳು ಕಾದಂಬರಿ ಆಧಾರಿತ ಎಂಬುದು.

S K Bhagawan

ಈಗ ಏನಿದ್ದರೂ ರೀಮೇಕ್ ಚಿತ್ರಗಳದ್ದೇ ಹವಾ. ಇನ್ನು ಕಾದಂಬರಿ ಆಧಾರಿತ ಚಿತ್ರಗಳದ್ದು ದೂರದ ಮಾತಾಯಿತು. ದೊರೈರಾಜು ಅವರು ನಿಧನರಾದ ಬಳಿಕ ಎಸ್.ಕೆ.ಭಗವಾನ್ ಅವರು ಬೆಳ್ಳಿತೆರೆಯಿಂದ ದೂರ ಸರಿದರು. ಇವರಿಬ್ಬರ ಜೋಡಿಯಲ್ಲಿ ಬಂದ ಕೊನೆಯ ಚಿತ್ರ 'ಮಾಂಗಲ್ಯ ಬಂಧನ' (1993).

ಈ ಜೋಡಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ಬಹಳ ಹತ್ತಿರವಿದ್ದ ಕಾರಣ 30 ಚಿತ್ರಗಳನ್ನು ನಿರ್ದೇಶಿಸುವಂತಾಯಿತು. ಎಸ್.ಕೆ.ಭಗವಾನ್ ಅವರ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್.

ಎಸ್.ಕೆ.ಭಗವಾನ್ ಅವರು ಕನ್ನಡದಲ್ಲಿ ಅತ್ಯಧಿಕ ಕಾದಂಬರಿ ಆಧಾರಿತ ಚಿತ್ರಗಳನ್ನು ನೀಡಿದ ನೆನಪಿಗೆ ಅವರನ್ನು ಜುಲೈ 12ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಇಂದು ಬೆಳಗ್ಗೆ 11.30ಕ್ಕೆ ನಡೆದ ಕಾರ್ಯಕ್ರಮದಲ್ಲಿ "ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಪಿತಾಮಹ" ಬಿರುದನ್ನು ನೀಡಿ ಗೌರವಿಸಲಾಯಿತು.

ಬ್ರಾಹ್ಮಣ ಅಯ್ಯಂಗಾರಿ ಸಮುದಾಯದಲ್ಲಿ ಜನಿಸಿದ ಭಗವಾನ್ ಯುವ ವಯಸ್ಸಿನಲ್ಲಿ ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ರಂಗ ಕಲಾವಿದರಾಗಿ, ಬಳಿಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಹಾಯಕರಾಗಿ 'ಭಾಗ್ಯೋದಯ' (1956) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟವರು.

ಕನ್ನಡದ ಮೊಟ್ಟ ಮೊದಲ ಜೇಮ್ಸ್ ಬಾಂಡ್ ಶೈಲಿ ಚಿತ್ರ 'ಜೇಡರ ಬಲೆ' ನೀಡಿದ ಖ್ಯಾತಿ ದೊರೈ ಭಗವಾನ್ ಜೋಡಿಗೆ ಸಲ್ಲುತ್ತದೆ. ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಾಳಿಮಾತು, ಹೊಸಬೆಳಕು, ಬೆಂಕಿಯ ಬಲೆ, ಜೀವನ ಚೈತ್ರ ಚಿತ್ರಗಳನ್ನು ಹೆಸರಿಸಬಹುದು.

ದೊರೈ ಭಗವಾನ್ ಜೋಡಿಯ ಕಾದಂಬರಿ ಆಧಾರಿತ ಚಿತ್ರಗಳು ಹೀಗಿವೆ...ಎರಡು ಕನಸು (ವಾಣಿ ಅವರ ಕಾದಂಬರಿ), ಬಯಲು ದಾರಿ (ಭಾರತಿಸುತ), ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಚಂದನದಗೊಂಬೆ (ತ.ರಾ.ಸು), ಹೊಸಬೆಳಕು (ವಾಣಿ), ಸಮಯದ ಗೊಂಬೆ (ಚಿತ್ರಲೇಖ), ಜೀವನಚೈತ್ರ (ವಿಶಾಲಾಕ್ಷಿ ದಕ್ಷಿಣಮೂರ್ತಿ) ಮುಂತಾದ ಚಿತ್ರಗಳನ್ನು ಹೆಸರಿಸಬಹುದು. ಸದ್ಯಕ್ಕೆ ವಿಶ್ರಾಂತ ಜೀವನ ನಡೆಸುತ್ತಿದ್ದರೂ ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನ ಪ್ರಾಂಶುಪಾಲರಾಗಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಭಗವಾನ್. (ಒನ್ಇಂಡಿಯಾ ಕನ್ನಡ)

English summary
Srinivasa Krishna Iyengar Bhagwan (81) ( ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವನ್), known popularly as S. K. Bhagavan was an Indian veteran film director, producer and actor Kannada cinema, has been honoured with "Kannada kadhambari Aadharitha chalanachitra pithamaha" at Sheshadripuram college on 12th July. He, with Dorairaj known as the duo Dorai-Bhagavan directed 55 films in Kannada., most of which stars Rajkumar in the lead role. Of the 55 films they directed, 23 were based on novels.
Please Wait while comments are loading...