»   » ವಿಶ್ವರೂಪಂ : ಕರ್ನಾಟಕದಲ್ಲಿ ಸ್ಥಿತಿ ಇನ್ನೂ ಅಯೋಮಯ

ವಿಶ್ವರೂಪಂ : ಕರ್ನಾಟಕದಲ್ಲಿ ಸ್ಥಿತಿ ಇನ್ನೂ ಅಯೋಮಯ

Posted By:
Subscribe to Filmibeat Kannada
ಅಪ್ಡೇಟ್ : ವಿವಾದಗ್ರಸ್ತ ವಿಶ್ವರೂಪಂ ಚಿತ್ರ ಕರ್ನಾಟಕದಲ್ಲಿ ಸೋಮವಾರ ಕೂಡ ಬಿಡುಗಡೆಯಾಗಿಲ್ಲ. ನೀವು ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮದ್ರಾಸ್ ಹೈಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ಇನ್ನೂ ಹಾಗೆಯೇ ಮುಂದುವರಿದಿದೆ. ಪರಿಸ್ಥಿತಿ ನೋಡಿಕೊಂಡು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಾಗಿ ರಾಜ್ಯದಲ್ಲಿ ವಿತರಣೆಯ ಹಕ್ಕು ಪಡೆದಿರುವ ಗಂಗರಾಜು ಅವರು ಒನ್ಇಂಡಿಯಾ ಕನ್ನಡಕ್ಕೆ ಸೋಮವಾರ ತಿಳಿಸಿದ್ದಾರೆ.

ವಿಶ್ವರೂಪಂ ಬಿಡುಗಡೆಗೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಎರಡು ಗುಂಪುಗಳ ನಡುವೆ ಭಾರೀ ಜಟಾಪಟಿ ನಡೆದಿದ್ದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನವನ್ನು ರದ್ದುಪಡಿಸಲಾಗಿತ್ತು. ಅಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಚಿತ್ರ ಪ್ರದರ್ಶನ ಕಾಣಬೇಕಿದ್ದ ಚಿತ್ರಮಂದಿರದ ಸುತ್ತ ಇಂದು ಕೂಡ ನಿಷೇಧಾಜ್ಞೆ ಹೇರಲಾಗಿದೆ.

ಇಲ್ಲಿವರೆಗಿನ ಕಥೆ : ತಮಿಳುನಾಡಿನಲ್ಲಿ ಮತ್ತು ಶ್ರೀಲಂಕಾದಲ್ಲಿ ನಿಷೇಧವಾಗಿರುವ ಕಮಲ್ ಹಾಸನ್ ಅವರ ವಿವಾದಾತ್ಮಕ ಬಹುನಿರೀಕ್ಷೆಯ ಚಿತ್ರ 'ವಿಶ್ವರೂಪಂ' ಕರ್ನಾಟಕದಲ್ಲಿ ಶುಕ್ರವಾರ ತೆರೆಕಂಡಿಲ್ಲ. ಶುಕ್ರವಾರ ಮುಸ್ಲಿಂರ ಹಬ್ಬ ಈದ್ ಮಿಲಾದ್ ದಿನ ಬಿಡುಗಡೆಯಾದರೆ ಕೋಮು ಗಲಭೆಗಳಾಗಬಹುದು ಎಂಬ ಕಾರಣದಿಂದ ಚಿತ್ರದ ಪ್ರದರ್ಶನವನ್ನು ತಡೆಹಿಡಿಯಲಾಗಿದೆ.

ತಮಿಳುನಾಡಿನಲ್ಲಿ 15 ದಿನಗಳ ಕಾಲ ನಿಷೇಧಿತವಾಗಿರುವ ಬಹುಭಾಷೀಯ (ತಮಿಳು, ತೆಲುಗು ಮತ್ತು ಹಿಂದಿ) ಚಿತ್ರವನ್ನು ಕರ್ನಾಟಕದಲ್ಲಿ ಕೂಡ ನಿಷೇಧಿತವಾಗುವ ಬದಲು, ವಿತರಕರಾಗಿರುವ ಎಚ್.ಡಿ. ಗಂಗರಾಜು ಚಿತ್ರಬಿಡುಗಡೆಗೆ ಮುಂದಾಗಿದ್ದರು. ಕರ್ನಾಟಕದಾದ್ಯಂತ 32 ಚಿತ್ರಮಂದಿರಗಳಲ್ಲಿ ವಿಶ್ವರೂಪಂ ಬಿಡುಗಡೆಯಾಗಬೇಕಾಗಿತ್ತು. [ವಿಶ್ವರೂಪಂ ಚಿತ್ರವಿಮರ್ಶೆ]

ಆದರೆ, ಜ.25ರಂದು ಈದ್ ಮಿಲಾದ್ ಮತ್ತು ಜ.26ರಂದು ಗಣರಾಜ್ಯೋತ್ಸವವಿರುವುದರಿಂದ ಇತರ ವಿತರಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಗಂಗರಾಜು ಮಾಧ್ಯಮಗಳಿಗೆ ತಿಳಿಸಿದ್ದರು. ಚಿತ್ರ ಬಿಡುಗಡೆ ಮಾಡಿ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು. ಜ.28ರಂದು ಸೋಮವಾರ ಚಿತ್ರ ಬಿಡುಗಡೆ ಮಾಡುತ್ತಾರಾ? ಗೊತ್ತಿಲ್ಲ.

ರಾಜ್ಯದಲ್ಲಿ ಬಿಡುಗಡೆ ಮಾಡಲು ಗಂಗರಾಜು ಅವರು ಹಿಂದೇಟು ಹಾಕಿದ್ದಾರಾದರೂ, ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿರುವ ಸುದ್ದಿಗಳು ಬರುತ್ತಿವೆ. ಬಳ್ಳಾರಿಯಲ್ಲಿ ಸ್ನೇಹಿತರೊಬ್ಬರು ತಾವು ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮಂಗಳೂರಿನಲ್ಲಿಯೂ ಚಿತ್ರ ಪ್ರದರ್ಶನ ಕಾಣುತ್ತಿದೆ ಎಂಬ ಸುದ್ದಿಗಳು ಬಂದಿವೆ. ಬೆಂಗಳೂರಿನ ವಿಷನ್ ಸಿನೆಮಾದಲ್ಲಿ ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಮಲ ಹಾಸನ್, ಆಂಡ್ರಿಯಾ ಜೆರ್ಮಿಯಾ, ರಾಹುಲ್ ಬೋಸ್ ಮುಂತಾದವರು ನಟಿಸಿರುವ ಚಿತ್ರವನ್ನು ಹೈದರಾಬಾದ್‌ನಲ್ಲಿಯೂ ಬಿಡುಗಡೆ ಮಾಡಬಾರದೆಂದು ಪೊಲೀಸರು ಸೂಚಿಸಿದ್ದಾರೆ. ಕೆಲ ಮುಸ್ಲಿಂ ಮುಖಂಡರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಚಿತ್ರದ ಪ್ರದರ್ಶನಗಳನ್ನು ತಡೆಹಿಡಿಯಲಾಗಿದೆ. ಅಲ್ಲದೆ, ಓವೈಸಿ ಬಂಧನದ ಹಿನ್ನೆಲೆಯಲ್ಲಿ ಹೈದರಾಬಾದಿನಲ್ಲಿ ಪ್ರಕ್ಷುಬ್ಧ ವಾತಾವರಣವಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಮದ್ರಾಸ್ ಹೈಕೋರ್ಟಿನಲ್ಲಿ ವಿಚಾರಣೆ ಜ.28ರಂದು ನಡೆಯಲಿದ್ದು, ನಂತರವೇ ಚಿತ್ರ ಬಿಡುಗಡೆ ಆಗುತ್ತದಾ ಇಲ್ಲವಾ ಎಂಬುದು ತಿಳಿದುಬರಲಿದೆ. ಈ ನಡುವೆ, ಚಿತ್ರದಲ್ಲಿ ಅಂತಹ ವಿವಾದಾತ್ಮಕ ದೃಶ್ಯಗಳಿಲ್ಲ. ವಿವಾದ ಸೃಷ್ಟಿಸುತ್ತಿರುವವರು ಎಲ್ಲಾ ಮುಸ್ಲಿಂ ಬಾಂಧವರನ್ನು ಪ್ರತಿನಿಧಿಸುವವರಲ್ಲ. ಆದ್ದರಿಂದ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಚಿತ್ರದ ಕತೆಗಾರ, ನಟ, ನಿರ್ಮಾಪಕ, ನಿರ್ದೇಶಕ ಕಮಲ್ ಹಾಸನ್ ಅವರು ಅಂಗಲಾಚುತ್ತಿದ್ದಾರೆ.

English summary
Kamal Haasan's most awaited multilingual movie Vishwaroopam is released in few places in Karnataka, except Bangalore in view of muslim festival on Jan 25. But, the movie is running in Hubballi, Dharwad, Bellary, Mangalore.
Please Wait while comments are loading...