»   » ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್

ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್

Posted By:
Subscribe to Filmibeat Kannada

ಕೆಲವೇ ಕೆಲವು ವರ್ಷಗಳ ಹಿಂದೆ ಹೀಗಿರ್ಲಿಲ್ಲ. ಸ್ಟಾರ್ ಗಳೊಂದಿಗೆ ಅಭಿಮಾನಿಗಳ ನೇರ ಮಾತುಕತೆ, ಒಡನಾಟ ಕಷ್ಟಸಾಧ್ಯ. ಆದ್ರೀಗ, ಸಾಮಾಜಿಕ ಜಾಲತಾಣಗಳು ಎಲ್ಲವನ್ನೂ ಸುಲಭ ಮಾಡಿಕೊಟ್ಟಿದೆ.

ಕೈಗೆ ಸಿಗದ ಹೆಸರಾಂತ ನಟರನ್ನ ಸಾಮಾಜಿಕ ಜಾಲತಾಣಗಳಲ್ಲಿ ಕಟ್ಟಿಹಾಕಬಹುದು. ಅವರ ಎಲ್ಲಾ ಅಪ್ ಡೇಟ್ಸ್ ಗಳ ಜೊತೆ ಚಾಟ್ ಕೂಡ ಮಾಡಬಹುದು. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಬಹುತೇಕ ಎಲ್ಲಾ ಟಾಪ್ ಸ್ಟಾರ್ಸ್ ಇರುವ ಕಾರಣ ಅಭಿಮಾನಿಗಳ ಕೈಗೆ ಸುಲಭವಾಗಿ ಎಟುಕುತ್ತಿದ್ದಾರೆ.

ಇದು ಖುಷಿಯ ವಿಚಾರವೇ. ಆದ್ರೀಗ, ಇದೇ ಸಾಮಾಜಿಕ ಜಾಲತಾಣಗಳಿಂದ ಹೀರೋಗಳಿಗೆ ಕಿರಿಕಿರಿಯಾಗುತ್ತಿದೆ. ಫೇಸ್ ಬುಕ್ ನಲ್ಲಿ ಅಭಿಮಾನಿಗಳು ನಡೆಸುತ್ತಿರುವ ಸಮರಕ್ಕೆ ನಾಯಕರು ಮುಸುಕಿನ ಗುದ್ದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.

ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಅಂದ್ರೆ, ರಾಕಿಂಗ್ ಸ್ಟಾರ್ ಯಶ್. ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಯಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನೂ ಯಶ್ ಕಟ್ಟಾ ಭಕ್ತರು ಕಿಚ್ಚು-ದಚ್ಚು ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಬೇಸೆತ್ತಿರುವ ಯಶ್, ಅಭಿಮಾನಿಗಳ ಮುಂದೆ ನಿಂತು ಕೈಮುಗಿದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಅದೇನಂತ ಮುಂದೆ ಓದಿ.....

ಕಿತ್ತಾಟ ಶುರುವಾಗಿದ್ದು ಎಲ್ಲಿಂದ..?

ಸ್ಯಾಂಡಲ್ ವುಡ್ ನ ನಂಬರ್ 1 ಹೀರೋ ಯಾರು? ಈ ಪ್ರಶ್ನೆ ಅಗಾಗ ಅಭಿಮಾನಿಗಳ ಮನಸ್ಸಲ್ಲಿ ಮೂಡುತ್ತಲೇ ಇರುತ್ತದೆ. ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ನಂಬರ್ 1 ಸ್ಥಾನಕ್ಕೆ ಪೈಪೋಟಿ ಬೀಳುತ್ತಲೇ ಇರುತ್ತೆ. ಈ ಲಿಸ್ಟ್ ಗೆ ಈಗ ಲೇಟೆಸ್ಟ್ ಎಂಟ್ರಿಕೊಟ್ಟಿರುವುದು ರಾಕಿಂಗ್ ಸ್ಟಾರ್ ಯಶ್.

'ಸ್ಯಾಂಡಲ್ ವುಡ್ ಸುಲ್ತಾನ್' ಯಶ್

'ಸ್ಯಾಂಡಲ್ ವುಡ್ ಸುಲ್ತಾನ್' ಅಂತ ಈ ಹಿಂದೆ ಸಿನಿ ಪ್ರಿಯರಿಂದ ಕರೆಯಿಸಿಕೊಳ್ತಾಯಿದ್ದದ್ದು ದರ್ಶನ್. ಆದ್ರೀಗ, ದರ್ಶನ್ ನ ಸೈಡಿಗೆ ತಳ್ಳಿರುವ ಯಶ್ 'ಸ್ಯಾಂಡಲ್ ವುಡ್ ಸುಲ್ತಾನ್' ಬಿರುದಿಗೆ ನಾಮಾಂಕಿತರಾಗಿದ್ದಾರೆ. 'ಗೂಗ್ಲಿ', 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಟ್ಟಿರುವ ಕಾರಣ ''ಯಶ್ ರನ್ನ ಮೀರಿಸುವ ಹೀರೋ ಇಲ್ಲ'' ಅಂತ ಹೇಳುವವರ ಸಂಖ್ಯೆ ಜಾಸ್ತಿಯಾಗಿದೆ.

ಯಶ್ ವಿರುದ್ಧ 'ಚಾಲೆಂಜಿಂಗ್' ಅಭಿಮಾನಿಗಳ 'ಕಿಚ್ಚು'

ಯಶ್ ಗೆ ಹೊಸ ಪಟ್ಟ ದೊರಕುತ್ತಿದ್ದಂತೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಸಮರ ನಡೆಸಿದ್ದಾರೆ. ''ದರ್ಶನ್ ಮತ್ತು ಸುದೀಪ್ ಮುಂದೆ ಯಶ್ ಆಟ ನಡೆಯೋಲ್ಲ'' ಅಂತ ಬೇಕಾಬಿಟ್ಟಿ ಕಾಮೆಂಟ್ಸ್ ಗಳು ಹೆಚ್ಚಾಗಿವೆ. ಸ್ಟಾರ್ ಗಳ ಹೆಸರಲ್ಲಿ ಕ್ರಿಯೇಟ್ ಆಗಿರುವ ಫ್ಯಾನ್ ಪೇಜ್ ಗಳಲ್ಲಂತೂ ಪ್ರತಿದಿನ ಇದೇ ಗದ್ದಲ. ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ತಲುಪಿರುವ ಪ್ರಸಂಗಗಳು ಸಾಕಷ್ಟಿವೆ.

'ಬಾಲ' ಹಿಡಿಯುತ್ತಿದ್ದಾರಂತೆ ಯಶ್..!

'ರಾಜಾಹುಲಿ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿಮಾನಿಯಾಗಿ, 'ಗಜಕೇಸರಿ'ಯಲ್ಲಿ ಅಣ್ಣಾವ್ರ ಅಭಿಮಾನಿಯಾಗಿ ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಭಕ್ತನಾಗಿ ಯಶ್ ಕಾಣಿಸಿಕೊಂಡಿರುವುದರಿಂದ 'ಬೇರೆ' ಹೀರೋಗಳ ಅಭಿಮಾನಿಗಳು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ''ತಮ್ಮಲ್ಲಿ ಅಭಿಮಾನಿ ಬಳಗವಿಲ್ಲದೇ, ಸ್ಟಾರ್ ಹೀರೋಗಳ ಅಭಿಮಾನಿಯಾಗಿ ನಟಿಸುವ ಮೂಲಕ, ಎಲ್ಲರ ಅಭಿಮಾನಿ ವೃಂದವನ್ನ ಯಶ್ ತಮ್ಮತ್ತ ಸೆಳೆಯುತ್ತಿದ್ದಾರೆ'' ಅನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

ಯಶ್ ಸಿನಿಮಾದಲ್ಲಿನ 'ಪಂಚ್' ಡೈಲಾಗ್ಸ್..!

'ನಮಗೆ ನಾವೇ ಹೀರೋ ಆಗ್ಬೇಕು', 'ತುಳಿಯೋರು ಯಾವತ್ತಿದ್ರೂ ಕಾಲು ಕೆಳಗಿರ್ತಾರೆ', 'ನಾನ್ ಬರೋವರೆಗೂ ಬೇರೆಯವರ ಹವಾ, ನಾನ್ ಬಂದಮೇಲೆ ನಂದೇ ಹವಾ' ಅಂತ ಯಶ್ ಬಾಯಿಂದ ಬಂದಿರುವ ಡೈಲಾಗ್ಸ್ ಕಿಚ್ಚು-ದಚ್ಚು ಅಭಿಮಾನಿಗಳನ್ನ ಕೆರಳಿಸಿದೆ.

ಯಶ್ ಮೇಲೆ ಹೊಸ ಆರೋಪ..!

''ಸತತ ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಯಶ್ ಅಣ್ಣಾವ್ರ ಕುಟುಂಬಕ್ಕೆ ಹತ್ತಿರವಾಗುತ್ತಿದ್ದಾರೆ. ಅಲ್ಲದೇ, ಸುದೀಪ್ ಮತ್ತು ದರ್ಶನ್ ಅಭಿಮಾನಿಗಳನ್ನ ತಮ್ಮತ್ತ ಸೆಳೆಯುತ್ತಿದ್ದಾರೆ'' ಅನ್ನುವ ಮಾತುಗಳೂ ಕೇಳಿ ಬರುತ್ತಿದೆ. ಆದ್ರೆ, ಇದಕ್ಕೆ ಯಾವುದೇ ರೀತಿಯಲ್ಲೂ ಯಶ್ ಸೊಪ್ಪು ಹಾಕುತ್ತಿಲ್ಲ. ಸಾಮಾಜಿಕ ಜಾಲತಾಣಗಳಿಗೆ ಇತ್ತೀಚೆಗಷ್ಟೇ ಎಂಟ್ರಿಕೊಟ್ಟಿರುವ ಯಶ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ಯಶ್ ಪರ ಬ್ಯಾಟಿಂಗ್ ಮಾಡುತ್ತಿರುವ ಅಭಿಮಾನಿಗಳ 'ಅಭಿಮಾನದ ಪರಾಕಾಷ್ಠೆ' ಕಂಡು ಯಶ್ ತಲ್ಲಣಗೊಂಡಿದ್ದಾರೆ.

ಅಭಿಮಾನಿಗಳಲ್ಲಿ ಮನವಿ ಮಾಡಿರುವ ಯಶ್

ಕಾಲೇಜ್ ಒಂದರ ಫೆಸ್ಟ್ ಗೆ ತೆರಳಿದ ಯಶ್, ಅಭಿಮಾನಿಗಳು ನಡೆಸುತ್ತಿರುವ ಈ ವಾದ-ವಿವಾದದ ಬಗ್ಗೆ ಮಾತಗಿಳಿದರು. ''ಒಬ್ಬ ಹೀರೋ ಫ್ಯಾನ್ಸ್ ಇನ್ನೊಬ್ಬರಿಗೆ ಬೈಯೋದು. ಇನ್ನೊಬ್ಬ ಹೀರೋ ಫ್ಯಾನ್ಸ್ ಮತ್ತೊಬ್ಬರಿಗೆ ಬೈಯೋದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದನ್ನೆಲ್ಲಾ ಬಿಟ್ಟುಬಿಡಿ. ಎಲ್ಲರೂ ಒಂದೇ. ತೆರೆ ಮೇಲೆ ಡೈಲಾಗ್ ಹೊಡೀತೀವಿ ಅಷ್ಟೆ. ಅದನ್ನ ಪಾಸಿಟೀವ್ ಆಗಿ ತಗೋಬೇಕು. ನಿಮ್ಮ ನಿಮ್ಮಲ್ಲಿ ಜಗಳ ಆಡ್ಕೋಬೇಡಿ. ಇಂಡಸ್ಟ್ರಿಯಲ್ಲಿ ಎಲ್ಲಾ ಒಂದೇ'' ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ....

'ನಮ್ಮ ನಡುವೆ ಕಿತ್ತಾಟವಿಲ್ಲ'

ಹಿಂದೊಮ್ಮೆ ಇದೇ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದ ಯಶ್, ''ನಮ್ಮ ನಮ್ಮಲ್ಲಿ ಕಿತ್ತಾಟವಿಲ್ಲ. ನಾವೆಲ್ಲರೂ ಒಂದೇ. ನಾನು ಎಲ್ಲರ ಫ್ಯಾನ್. ದಯವಿಟ್ಟು ನಮ್ಮ ನಡುವೆ ತಂದಿಡಬೇಡಿ'' ಅಂತ ಯಶ್ ಕೇಳಿಕೊಂಡಿದ್ದರು. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]

ಇತರೆ ಹೀರೋಗಳ ಚಿತ್ರಗಳಿಗೂ ಪ್ರಮೋಷನ್

ತಮ್ಮ ಸಿನಿಮಾಗಳಿಗೆ ಮಾತ್ರ ಅಲ್ಲ. ಅಜೇಯ್ ರಾವ್ ನಟನೆಯ 'ಕೃಷ್ಣಲೀಲಾ' ಮತ್ತು 'ರಾಟೆ' ಚಿತ್ರದ ಪ್ರೊಮೋಷನ್ ನಲ್ಲೂ ಯಶ್ ಭಾಗವಹಿಸಿದ್ದಾರೆ. ಎಲ್ಲರೂ ಬೆಳೆದರೆ ಕನ್ನಡ ಚಿತ್ರರಂಗ ಬೆಳೆಯೋಕೆ ಸಾಧ್ಯ ಅಂತ ಹೇಳುವ ಯಶ್ ಗೆ, ಅಭಿಮಾನಿಗಳು ತಮ್ಮ ತಮ್ಮಲ್ಲಿ ಕಿತ್ತಾಡಿಕೊಳ್ಳುವುದನ್ನ ನಿಲ್ಲಿಸಿದರೆ, ಅದೇ ಖುಷಿ ವಿಚಾರ.

English summary
Kannada Actor Yash has made an open statement about Fan Fights. Rocking Star has requested the fans to not to abuse any Actors and their fans. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada