»   » 2014ರಲ್ಲಿ ಪ್ರೇಕ್ಷಕರನ್ನು ಪರಿಪರಿಯಾಗಿ ಕಾಡಿದ ಚಿತ್ರಗಳು

2014ರಲ್ಲಿ ಪ್ರೇಕ್ಷಕರನ್ನು ಪರಿಪರಿಯಾಗಿ ಕಾಡಿದ ಚಿತ್ರಗಳು

By: ಹರಾ
Subscribe to Filmibeat Kannada

2014 ಕ್ಕೆ ಗುಡ್ ಬೈ ಹೇಳುವ ಕಾಲ ಹತ್ತಿರಕ್ಕೆ ಬಂದೇಬಿಟ್ಟಿದೆ. ಹಾಗೆ, ಗಾಂಧಿನಗರದ ಪರ್ಫಾಮೆನ್ಸ್ ಬಗ್ಗೆ ಲೆಕ್ಕಾಚಾರ ಕೂಡ ಶುರುವಾಗಿದೆ. ವರ್ಷದ ಉತ್ತಮ ನಟ, ಉತ್ತಮ ನಟಿ, ಉತ್ತಮ ಸಿನಿಮಾ ಸೇರಿದಂತೆ ಎಲ್ಲಾ ಅತ್ಯುತ್ತಮಗಳ ಬಗ್ಗೆ ಕೊಂಡಾಡುವುದರ ಜೊತೆಗೆ ಈ ವರ್ಷ ಪರಿಪರಿಯಾಗಿ ಕಾಡಿದ ಸಿನಿಮಾಗಳ ಬಗ್ಗೆ ಹೇಳ್ಲಿಲ್ಲ ಅಂದ್ರೆ ಹೇಗೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ರಿಲೀಸ್ ಆಗುವುದಕ್ಕೂ ಮುನ್ನ ಭರ್ಜರಿ ಪ್ರಚಾರ ಪಡೆದು ಬಹುನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳು, ಈ ವರ್ಷ ಮಕಾಡೆ ಮಲಗಿದ ಉದಾಹರಣೆಗಳಿವೆ. ದುರಂತ ಅಂದ್ರೆ, ಅದ್ರಲ್ಲಿ ಸ್ಟಾರ್ ಸಿನಿಮಾಗಳೇ ಹೆಚ್ಚು. [2014ರ ಟಾಪ್ ಹೀರೋಯಿನ್ ಗಳ ಕಂಪ್ಲೀಟ್ ಲಿಸ್ಟ್]

ಸಿನಿಮಾ ಹಂಗಿದೆಯಂತೆ, ಹಿಂಗಿದೆಯಂತೆ ಅಂತ ಪುಂಗಿ ಕತೆಗಳನ್ನ ಕೇಳಿದ್ದ ಪ್ರೇಕ್ಷಕ ಮಹಾಪ್ರಭು, ಮುಖ ಗಂಟು ಮಾಡಿಕೊಂಡು ಥಿಯೇಟರ್ ನಿಂದ ಹೊರಬಂದ ಚಿತ್ರಗಳ ಲಿಸ್ಟ್ ದೊಡ್ಡದಿದೆ. ಅದರಲ್ಲಿರುವ ಟಾಪ್ ಸಿನಿಮಾಗಳ ಪಟ್ಟಿ ಹೀಗಿದೆ...ಸ್ಲೈಡ್ ಗಳನ್ನು ನೋಡಿ ನಿಮಗೇ ಮನದಟ್ಟಾಗುತ್ತದೆ. [2014ರ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಗಳು ಯಾರು?]

ನಿನ್ನಿಂದಲೇ 'ಸೋತೆ' ಒಪ್ಪಿಕೋ

ಒಂದು ವರ್ಷದ ಗ್ಯಾಪ್ ನಂತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ವರ್ಷ ಮೊದಲು ತೆರೆಗೆ ಬಂದಿದ್ದು 'ನಿನ್ನಿಂದಲೇ' ಚಿತ್ರದ ಮೂಲಕ. ಟಾಲಿವುಡ್ ನಲ್ಲಿ ಹಿಟ್ ಡೈರೆಕ್ಟರ್ ಆಗಿರುವ ಜಯಂತ್.ಸಿ.ಪಾರಂಜಿ, ಸ್ಯಾಂಡಲ್ ವುಡ್ ನಲ್ಲಿ 'ಇಲ್ಲದ' ಕಥೆಯನ್ನಿಟ್ಟುಕೊಂಡು ಪುನೀತ್ ಕೈಯಲ್ಲಿ 'ನಿನ್ನಿಂದಲೇ' ಹಾಡಿಸಿದರು. ಸಾಲದಕ್ಕೆ ನ್ಯೂಯಾರ್ಕ್ ನಲ್ಲಿ ಚಿತ್ರೀಕರಣ ಮಾಡಿದ್ದರು. ಎಲ್ಲಾ ಅಬ್ಬರವಿದ್ದರೂ, ಚಿತ್ರದಲ್ಲಿ ಕಥೆಯಾಗಲಿ, ಮನಮುಟ್ಟುವ 'ನಿರೂಪಣೆ'ಯಾಗಲಿ ಇಲ್ಲ. ಕಾಮಿಡಿ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಎಲ್ಲಾ 'ಇಲ್ಲ'ಗಳಿಂದ 'ನಿನ್ನಿಂದಲೇ' ಸೋಲನ್ನ ಒಪ್ಪಿಕೊಳ್ಳಬೇಕಾಯ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ರಂಗು ರಂಗಾಗಿಲ್ಲ 'ದಿಲ್ ರಂಗೀಲಾ'

ಪ್ರೀತಂ ಗುಬ್ಬಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಇನ್ನೂ 'ಮುಂಗಾರು ಮಳೆ' ಗುಂಗಿನಿಂದ ಹೊರಗೆ ಬಂದಿಲ್ಲ ಅನ್ನುವುದಕ್ಕೆ 'ದಿಲ್ ರಂಗೀಲಾ' ಚಿತ್ರ ಬೆಸ್ಟ್ ಎಕ್ಸಾಂಪಲ್. ಅದೇ ಕಿಲೋಮಿಟರ್ ಗಟ್ಟಲೆ ಡೈಲಾಗ್ ಗಳು, ಅದೇ ಬೇಜವಾಬ್ದಾರಿ ಲವ್ವರ್ ಬಾಯ್ ಇಮೇಜ್, ಮಧ್ಯೆ ಒಂದಷ್ಟು ಹಾಡುಗಳನ್ನ ಸೇರಿಸಿ ರೆಡಿಮಾಡಿದ್ದ 'ದಿಲ್ ರಂಗೀಲಾ' ಚಿತ್ರವನ್ನು ನೋಡಿ ಪ್ರೇಕ್ಷಕರ ದಿಲ್ ಮಾತ್ರ 'ರಂಗೀಲಾ' ಆಗ್ಲಿಲ್ಲ.

ಆ 'ಬ್ರಹ್ಮಂ'ಗೆ ಅರ್ಥವಾಗಬೇಕು!

ಕ್ರಿಸ್ತ ಪೂರ್ವ ಹಾಗು ಕ್ರಿಸ್ತ ಶತಕದ ಎರಡೆರಡು ಕಥೆಯಲ್ಲಿ ಪಾಪ ಪುಣ್ಯದ ಲೆಕ್ಕ ಹಾಕುವ 'ಬ್ರಹ್ಮ' ಸಿನಿಮಾ 'ಬುದ್ದಿವಂತ'ರಿಗೆ ಮಾತ್ರ ಮೀಸಲು. ಜನಸಾಮಾನ್ಯರ ಪಾಲಿಗೆ 'ಬ್ರಹ್ಮ ವಿದ್ಯೆ'ಯಾದ ಈ ಚಿತ್ರಕಥೆಯಲ್ಲಿ ರಂಗಾಯಣ ರಘು ಕಾಮಿಡಿ, ಉಪ್ಪಿ ಡೈಲಾಗ್ಸ್ ಬಿಟ್ರೆ ಬೇರೇನೂ ಇಲ್ಲ.

'ಪರಮಶಿವ' ಶಿವಾ..ಶಿವಾ...

2001 ರಲ್ಲಿ ತೆರೆಕಂಡ 'ಸಮುಧಿರಂ' ಚಿತ್ರದ ರೀಮೇಕ್ ಆಗಿರುವ 'ಪರಮಶಿವ' ಅದೇ ಹಳೇ ಅಣ್ಣ-ತಂಗಿ ಸೆಂಟಿಮೆಂಟ್ ಫಾರ್ಮುಲಾದಿಂದ ರೆಡಿಯಾಗಿರುವ ಸಿನಿಮಾ. ಇಂತಹ ಕಥೆಯನ್ನ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನೋಡಿಬಿಟ್ಟಿರುವ ಪ್ರೇಕ್ಷಕರಿಗೆ 'ಪರಮಶಿವ' ಔಟ್ ಡೇಟೆಡ್ ಸಿನಿಮಾ. ಅದರಲ್ಲೂ ಚಿತ್ರದಲ್ಲಿ ಎರಡೆರಡು ಬಾರಿ ಬರುವ ಫ್ಲ್ಯಾಶ್ ಬ್ಯಾಕ್ ಸನ್ನಿವೇಶ ಪ್ರೇಕ್ಷಕರ ಸಹನೆ ಕೆಣಕಿತ್ತು.

ಉಳಿದವರು 'ಕಂಡಂತೆ'

ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತ ರಕ್ಷಿತ್ ಶೆಟ್ಟಿ, ತಮ್ಮ ಮೊದಲ ಪ್ರಯತ್ನದಲ್ಲೇ ಪ್ರಯೋಗಕ್ಕೆ ಇಳಿದಿದ್ದು 'ಉಳಿದವರು ಕಂಡಂತೆ' ಚಿತ್ರದ ಮೂಲಕ. ಒಂದೇ ಕಥೆಯನ್ನು ಹಲವಾರು ದೃಷ್ಟಿಕೋನದಲ್ಲಿ ತೋರಿಸಿ, ಪ್ರೇಕ್ಷಕರ ತಲೆಕಡಿಸಿದ್ದ ರಕ್ಷಿತ್ ಶೆಟ್ಟಿ ಎಡವಿದ್ದಂತೂ ಸತ್ಯ. ಅದಕ್ಕೆ ತಲೆ ಕೆರ್ಕೊಂಡು ಥಿಯೇಟರ್ ನಿಂದ ಹೊರಬಂದ ಸಾಲು ಸಾಲು ಪ್ರೇಕ್ಷಕರೇ ಜೀವಂತ ಉದಾಹರಣೆ.

ಓಡದ 'ಆರ್ಯನ್'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ರಮ್ಯಾ ಒಟ್ಟಾಗಿ ನಟಿಸಿದ್ದ 'ಆರ್ಯನ್' ಚಿತ್ರ ಈ ವರ್ಷ ಪ್ರೇಕ್ಷಕರ ಮುಖಕ್ಕೆ ಬಕೆಟ್ ಗಟ್ಟಲೆ ತಣ್ಣೀರೆರಚಿತ್ತು. ಸಿನಿಮಾ ಅಥ್ಲೀಟ್ ಕುರಿತಾದ ಕಥೆಯಾದರೂ, ಆಕೆಯ ಓಟದ ವೇಗ ಚಿತ್ರದಲ್ಲಿ ಇಲ್ಲದೇ ಇರುವುದು ಬಹುದೊಡ್ಡ ಮೈನಸ್ ಪಾಯಿಂಟ್.

'ಬಹುಪರಾಕ್' ಅನ್ನುವ ಹಾಗಿಲ್ಲ

ಒಬ್ಬ ವ್ಯಕ್ತಿಯ ಕಥೆಯನ್ನೇ ಮೂರು ವಿಭಿನ್ನ ರೀತಿಯಲ್ಲಿ ತೋರಿಸಿ, ಕೊನೆಗೆ ಆ ಮೂವರು ಒಬ್ಬನೇ ಅನ್ನುವ ನಿರೂಪಣೆ ನಿರ್ದೇಶಕರಿಗೆ ಸವಾಲಿನ ಕೆಲಸ. ಆದ್ರೆ ಇಂತಹ ಬ್ರಹ್ಮಾಸ್ತ್ರವನ್ನು ಜನಸಾಮಾನ್ಯರ ಮೇಲೆ ಪ್ರಯೋಗ ಮಾಡಿದ 'ಬಹುಪರಾಕ್' ಯಶಸ್ವಿಯಾಗಲಿಲ್ಲ. ಮನಸ್, ಮಣಿ ಮತ್ತು ಮೌನಿ ಅನ್ನುವ ಪಾತ್ರಗಳನ್ನ ನೋಡಿ, ಪ್ರೇಕ್ಷಕರು ಕೊನೆಯಲ್ಲಿ 'ಮೌನಿ'ಯಾಗಿ ಹೊರಬರುವುದು ಚಿತ್ರಕ್ಕೆ ಲಭಿಸಿದ ಪ್ರತಿಕ್ರಿಯೆ.

ಮೇಡಂಗೆ 'ಒಮ್ಮೆ' ನಮಸ್ತೆ

ಹತ್ತು ವರ್ಷಗಳ ಹಿಂದಿನ ಕಥೆಗೆ ಇಂದು ಮಸಾಲೆ ಹಾಕಿದರೂ, 'ನಮಸ್ತೆ ಮೇಡಂ' ಘಮ ಘಮಿಸಲಿಲ್ಲ. ''ಕೌಟುಂಬಿಕ ಧಾರಾವಾಹಿಯಂತೆ ಕಾಣುವ 'ನಮಸ್ತೆ ಮೇಡಂ' ನೋಡುವುದಕ್ಕಿಂತ, ಮನೆಯಲ್ಲಿ ಬರುವ ಟಿವಿ ಸೀರಿಯಲ್ ವಾಸಿ'' ಅಂತ ಸಿನಿಮಾ ನೋಡಿದ ಅದೆಷ್ಟೋ ಮಂದಿ ಮಾತನಾಡಿಕೊಂಡಿದ್ದಾರೆ.

ಜೈ ಭಜರಂಗ 'ಬಲಿ'

ಇನ್ನು ಇತ್ತೀಚೆಗಷ್ಟೆ ತೆರೆಕಂಡ ಅಜೇಯ್ ರಾವ್ ನಟನೆಯ 'ಜೈ ಭಜರಂಗಿ' ಸಿನಿಮಾ ಕೂಡ ಕೂತುಹಲ ಇಲ್ಲದ ಕಥೆಯನ್ನೇ ಹೊಂದಿದೆ. ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಸುದ್ದಿ ಮಾಡಿದ್ದರೂ, ಥಿಯೇಟರ್ ನಲ್ಲಿ 'ಜೈ ಭಜರಂಗಬಲಿ' ಪ್ರೇಕ್ಷಕರಿಗೆ ಆಕಳಿಕೆ ತರಿಸುತ್ತೆ.

ಬಾಕಿ 'ಪಿಕ್ಚರ್' ಹೀಗಿದೆ

ಈ ಎಲ್ಲಾ ಸಿನಿಮಾಗಳ ನಡುವೆ ಇದೇ ವರ್ಷ ರಿಲೀಸ್ ಆದ 'ವೀರ ಪುಲಿಕೇಶಿ', 'ಕಲ್ಯಾಣ ಮಸ್ತು', 'ಹುಚ್ಚ ವೆಂಕಟ', 'ಮನದ ಮರೆಯಲ್ಲಿ', 'ಲವ್ ಈಸ್ ಪಾಯ್ಸನ್', 'ಮಿಸ್.ಮಲ್ಲಿಗೆ', 'ಬಾಸು ಅದೇ ಹಳೇ ಕಥೆ', 'ನೆನಪಿದೆಯಾ', 'ಪಂದ್ಯ', 'ಉಸಿರಿಗಿಂತ', 'ಗಂಟೆ ಒಂದು'...ಚಿತ್ರಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

English summary
2014 saw a huge string of flop and hit series of Kannada Movies. Here is the list of Worst Cinemas of Sandalwood, which didn't manage to entertain the audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada