»   » ಸ್ವರ ನಿಲ್ಲಿಸಿದ ಗಾನ ಕೋಗಿಲೆ ಎಲ್.ಎನ್.ಶಾಸ್ತ್ರಿಗೆ ರೇಖಾ ರಾಣಿ ನುಡಿ ನಮನ

ಸ್ವರ ನಿಲ್ಲಿಸಿದ ಗಾನ ಕೋಗಿಲೆ ಎಲ್.ಎನ್.ಶಾಸ್ತ್ರಿಗೆ ರೇಖಾ ರಾಣಿ ನುಡಿ ನಮನ

Posted By:
Subscribe to Filmibeat Kannada

ಸಂಗೀತಕ್ಕೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಅಂತ ಬಲ್ಲವರು ಹೇಳ್ತಾರೆ. ಆದ್ರೆ, ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಗಾಯಕ ಎಲ್.ಎನ್.ಶಾಸ್ತ್ರಿ ಕರುಳು ಕ್ಯಾನ್ಸರ್ ನಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಹಿಟ್ ಹಾಡುಗಳಿಗೆ ದನಿಯಾಗಿದ್ದ ಎಲ್.ಎನ್.ಶಾಸ್ತ್ರಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಎಲ್.ಎನ್.ಶಾಸ್ತ್ರಿ ರವರ ಸಾವಿನ ಸುದ್ದಿ ಕೇಳಿ ದುಃಖತಪ್ತರಾದ ಅಶೋಕ್ ಕಶ್ಯಪ್ ಪತ್ನಿ ರೇಖಾ ರಾಣಿ ತಮ್ಮ ಫೇಸ್ ಬುಕ್ ಪುಟದ ಮೂಲಕ ಎಲ್.ಎನ್.ಶಾಸ್ತ್ರಿ ರವರಿಗೆ ನುಡಿ ನಮನ ಅರ್ಪಿಸಿದ್ದಾರೆ - ಸಂಪಾದಕ

L. N shastri passed away | Filmibeat Kannada

ಕನ್ನಡದ ಹೆಸರಾಂತ ಗಾಯಕ ಎಲ್ ಎನ್ ಶಾಸ್ತ್ರಿ ವಿಧಿವಶ

''ಏಪ್ರಿಲ್ ತಿಂಗಳಲ್ಲಿ ಶಾಸ್ತ್ರಿ ಕರೆ ಮಾಡಿದ್ದ. "ರೇಖಾಮ್ಮ...ನೀನು ಸಬ್ಸಿಡಿ ಕಮಿಟಿಯಲ್ಲಿದ್ದೆ ಅಂತ ಗೊತ್ತಾಯ್ತು...ನನ್ನ ಸಿನೆಮಾಗೆ ಸಬ್ಸಿಡಿ ಬಂತಾ?" ನಾನು "ಅದೆಲ್ಲಾ ವಾರ್ತಾ ಇಲಾಖೆಯವರು ಹೇಳುತ್ತಾರೆ..ನನ್ನ ಕೆಲಸವಲ್ಲ..ಮತ್ತು ನಾನು ಹೇಳುವುದೂ ಇಲ್ಲ" ಎಂದೆ...ಅತ್ತಲಿಂದ ದೊಡ್ಡ ನಿಟ್ಟುಸಿರು.."ನನಗೆ ಲಿವರ್ ಕ್ಯಾನ್ಸರ್ ಇದೆಯಮ್ಮ...ಔಷಧಿಗೆ ತುಂಬಾ ಖರ್ಚಾಗುತ್ತಿದೆ...ಕ್ಯಾನ್ಸರ್ ಬಂದವರ ಪಾಡು ಏನಂತ ನಿನಗೆ ನಾನು ಹೇಳಬೇಕಾ?" ಪಟ್ಟನೆ ನನ್ನ ದು:ಖದ ಕಟ್ಟೆಯೊಡೆದು, ವಾರ್ತಾ ಇಲಾಖೆಯವರು ಹಾಕಿದ್ದ ರೂಲ್ಸ್ ಗಳೆಲ್ಲಾ ಗಾಳಿಗೆ ಹಾರಿಹೋಯಿತು. "ಚಿಂತಿಸಬೇಡ ಶಾಸ್ತ್ರಿ..ಈಗಲೇ ವಿಶುಕುಮಾರ್ ಅವರ ಬಳಿ ಮಾತನಾಡುತ್ತೇನೆ..ಆ ವರ್ಷದ ಸಬ್ಸಿಡಿ ಇನ್ನೂ ಯಾರಿಗೂ ಬಂದಿಲ್ಲವಾದ್ದರಿಂದ ಎಲ್ಲರ ಜೊತೆ ನಿನ್ನ ಸಿನೆಮಾಗೂ ಬರುತ್ತದೆ..ನಿನ್ನ ಸಿನೆಮಾ ಸಬ್ಸಿಡಿಗೆ ಅರ್ಹ ಎಂದು ಆಯ್ಕೆಯಾಗಿದೆ" ಎಂದೆ...ಎಂಥಾ ಸಮಾಧಾನದ ನಿಟ್ಟುಸಿರು....ಆತ ಹೇಳಿದ ಧನ್ಯವಾದದಲ್ಲಿ ಪುನರ್ಜನ್ಮ ಸಿಕ್ಕ ಸಂತೋಷವಿತ್ತು.

Writer, Producer Rekha Rani pays tribute to Singer LN Shastri

ಇದಾದ ನಂತರ......ಶಾಸ್ತ್ರಿಗೆ ಸಬ್ಸಿಡಿ ಬಂದಿರಲಿಲ್ಲ...ಯಾಕೆಂದರೆ ಅದಕ್ಕೆ ಕೊಡಬೇಕಾದ ಕೆಲವು ದಾಖಲೆಗಳನ್ನು ಆತ ನೀಡಿರಲಿಲ್ಲ..ಓಡಾಡಲು ಜನರಿಲ್ಲ ಎಂದಿದ್ದ..ನಾನೂ ಓಡಾಡುವ ಜನರಿಗಾಗಿ ಹುಡುಕಾಡುತ್ತಿದ್ದೆ.

ನಂತರ ಇದ್ದಕ್ಕಿದ್ದಹಾಗೆ ಶಾಸ್ತ್ರಿ ಆರೋಗ್ಯ ಇನ್ನೂ ಹದಗೆಟ್ಟು ಆಸ್ಪತ್ರೆ ಸೇರಿದ... ಗಣೇಶ್ ಕಾಸರಗೋಡು ಅವರ ಲೇಖನ ಓದಿ ಇಡೀ ಕರ್ನಾಟಕ ಸ್ಪಂದಿಸಿತು... ಎಲ್ಲರಂತೆ ನಾನೂ ಸ್ಪಂದಿಸಿದೆ....ಈಗ ವಿಶುಕುಮಾರ್ ವಾರ್ತಾ ಇಲಾಖೆಯಿಂದ ಟಾನ್ಸ್ ಫರ್ ಆಗಿದ್ದರೂ, ಮತ್ತೊಬ್ಬರು ಅಧಿಕಾರಿ ಪ್ರಕಾಶ್ ಅವರಿಗೆ ಹೇಳಿ ಸಂಬಂಧಿಸಿದ ಜನರನ್ನು ಅವರೇ ಕರೆಮಾಡಿ ವಾರ್ತಾ ಇಲಾಖೆಗೆ ಕರೆಸಿ ತರಾತುರಿಯಿಂದ ಫೈಲ್ ಮೂವ್ ಮಾಡಿಸಲು ಪ್ರಾರಂಭಿಸಿದರು.

ಎಲ್ಲಾ ಕಡೆಯಿಂದಲೂ ಸಂಗತಿಗಳು ಸಮಾಧಾನಕರವಾಗಿ ನಡೆಯುತ್ತಿದೆಯಲ್ಲ ಎಂದು ಶಾಸ್ತ್ರಿ ಪತ್ನಿ ಸುಮಾಶಾಸ್ತ್ರಿಗೆ ಕರೆಮಾಡಿ "ಏನೂ ಯೋಚಿಸಬೇಡ..ಬೇಗ ಸಬ್ಸಿಡಿ ಹಣ ಬರುತ್ತದೆ" ಎಂದೆ. ಅದಕ್ಕವಳು ನಿರಾಸೆ ಹಾಗೂ ಆತಂಕದ ದ್ವನಿಯಲ್ಲಿ "ಅಕ್ಕಾ...ಶಾಸ್ತ್ರಿ ಒಂಥರಾ ಡಿಪ್ರೆಶನ್ ಗೆ ಹೋಗಿಬಿಟ್ಟಿದ್ದಾನೆ...ನಾಳೆ ಬದುಕಿರುತ್ತೀನಾ ಅಂತ ಭಯದಲ್ಲಿ ಕಣ್ಣು ಕಣ್ಣು ಬಿಟ್ಟು ನನ್ನ ಕಡೆ ದೈನ್ಯದಿಂದ ನೋಡುತ್ತಿದ್ದಾನೆ...ಅವನಿಗೆ ಹೇಗೆ ಸಮಾಧಾನ ಹೇಳುವುದು ಅಂತ ನನಗೆ ಅರ್ಥಾನೇ ಆಗ್ತಿಲ್ಲಾ...ಸಾವು ಪಕ್ಕ ಬಂದು ಕುಳಿತಿದೆ ಅಂತ ತುಂಬಾ ಹೆದರಿದ್ದಾನೆ" ಎಂದಳು...ಇದನ್ನು ಕೇಳಿ ನಾನು ಭೂಮಿಗಿಳಿದು ಹೋದೆ....

ಅಶೋಕ್ ಕಶ್ಯಪ್ ಗೆ ಕ್ಯಾನ್ಸರ್ ಅಂದಾಗ ಇದೇ ಅವಸ್ಥೆಯಲ್ಲಿಯೇ ಅಲ್ಲವೇ ನಾನೂ ಇದ್ದುದ್ದು? ಇಲ್ಲಿ ಯಾರ ಮಾತೂ, ಸಮಾಧಾನಗಳೂ ಲೆಕ್ಕಕ್ಕೆ ಬರೋಲ್ಲ...ನಮ್ಮೆಲ್ಲರಿಗಿಂತಾ ಕಾಯಿಲೆಗೊಳಗಾದವನು ಯಮ ಎಷ್ಟು ಅಂತರದಲ್ಲಿ ನಿಂತಿದ್ದಾನೆಂದು ಗ್ರಹಿಸಲು ತೊಡಗುತ್ತಾನೆ...ಅವನ ಮನಸ್ಸಿನಿಂದ ಯಮನನ್ನು ಬಿಡಿಸಿ ಹೊರಗೆ ಕರೆದುಕೊಂಡು ಬರುವುದು ಅಸಾದ್ಯ...

ಇಷ್ಟೆಲ್ಲಾ ಗೊತ್ತಿದ್ದರೂ ಸುಮಾಗೆ 'ನಾನು ಅಶೋಕ್ ಅವರಿಗೆ ಹೇಳುತ್ತಿದ್ದ ಯಮನ ಜೋಕ್ಸ್ ಮತ್ತು ಕಥೆಗಳು, ಆತಂಕವಿಲ್ಲದ ಮೇಲಿನ ಸುಂದರ ಲೋಕ....ಇವುಗಳೆಲ್ಲದರ ಬಗ್ಗೆ ಮಾತಾಡಿ ಸಾವನ್ನು ಕ್ಷುಲ್ಲಕ ಎಂಬಂತೆ ಆಡಿಕೊಂಡು ನಕ್ಕುಬಿಡು...ಸಾವಿನ, ಯಮನ ಬಗ್ಗೆ ಹೆದರಿಕೆಯನ್ನು ಮೊದಲು ಹೋಗಲಾಡಿಸು..ನಾನೂ ಅದನ್ನೇ ಮಾಡಿದ್ದು' ಎಂದೆ.

ಹೀಗೆಲ್ಲಾ ಹರಿಕಥೆ ಬರೆದಂತಲ್ಲ ಜೀವನ..ನಮ್ಮ ಯಾವ ಆಸೆ, ಪ್ರಯತ್ನಗಳನ್ನೂ ಲೆಕ್ಕ ಜಮಕ್ಕಿಡದೆ..ಆ ಜವರಾಯ ಹೊಂಚುಹಾಕಿ ನಮ್ಮ ಶಾಸ್ತ್ರಿಯನ್ನು ನಮ್ಮಿಂದ ಕಸಿದುಕೊಂಡು ಹೋಗಿದ್ದಾನೆ....

ನೀನು ಬಿಟ್ಟು ಹೋದ ಹಾಡುಗಳನ್ನು ನಾವು ಇರುವವರೆಗೂ ಕೇಳುತ್ತಲೇ ಇರುತ್ತೇವೆ. ಅಲ್ಲಿನ ಲೋಕದಲ್ಲಿಯೂ ಸುಮಧುರ ಸಂಗೀತ, ಗೀತೆಗಳನ್ನು ಹಾಡುತ್ತಿರು ಶಾಸ್ತ್ರಿ...ಈಗ ಗಾಯನ ಮೆಚ್ಚುವ ಸರದಿ ಪರಲೋಕದವರದ್ದು!!!'' - ರೇಖಾ ರಾಣಿ

English summary
Writer, Producer Rekha Rani has taken her facebook page to pay tribute to Singer LN Shastri

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada