»   » ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?

ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಗೆ ಕೆಲವೇ ದಿನಗಳು ಬಾಕಿಯಿದ್ದು, ಸ್ಯಾಂಡಲ್ ವುಡ್ ಗಣ್ಯರಿಗೆ ತಮ್ಮ ಮದುವೆಯ 'ಆಮಂತ್ರಣ' ನೀಡುತ್ತಿದ್ದಾರೆ ನಟ ಯಶ್.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಅಂದ್ರೆ, ಕೋಟಿ ವೆಚ್ಚದಲ್ಲಿ ಮದುವೆ 'ಆಹ್ವಾನ ಪತ್ರಿಕೆ'ಯನ್ನ ತಯಾರಿಸುವುದು ಇಂದಿನ ಟ್ರೆಂಡ್. ಇತ್ತೀಚೆಗಷ್ಟೇ ಗಣಿ ಧಣಿ ಜನಾರ್ದನ ರೆಡ್ಡಿ ಅವರು, ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಗಾಗಿ ಸುಮಾರು 6 ಕೋಟಿ ಖರ್ಚು ಮಾಡಿದ್ದರು ಎಂದು ಸುದ್ದಿಯಾಗಿತ್ತು. ಇನ್ನೂ ಹಲವರು ಮದುವೆಯ ಕರೆಯೋಲೆಯನ್ನ ಸಿನಿಮಾ ಶೈಲಿಯಲ್ಲಿ ವಿಡಿಯೋಗಳ ಮೂಲಕ ಮಾಡಿರುವುದು ಉಂಟು.

ಇದನ್ನೆಲ್ಲಾ ನೋಡಿದ್ದ ಅಭಿಮಾನಿಗಳಿಗೆ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯ 'ಆಹ್ವಾನ ಪತ್ರಿಕೆ' ಹೇಗಿರುತ್ತೆ ಎಂಬ ಕುತೂಹಲ ಇತ್ತು. ನಿಶ್ಚಿತಾರ್ಥವನ್ನೇ ತಮ್ಮ ಆಸೆಯಂತೆ ಮಾಡಿಕೊಂಡ ರಾಧಿಕಾ ಪಂಡಿತ್, ಮದುವೆಯನ್ನ ಹೇಗೆಲ್ಲ ಪ್ಲಾನ್ ಮಾಡಿರುತ್ತಾರೆ ಎಂಬ ಚರ್ಚೆ ಅವರ ಅಭಿಮಾನಿ ಬಳಗದಲ್ಲಿ ನಡೆಯುತ್ತಿತ್ತು.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]

ನಿಮ್ಮ ಈ ಎಲ್ಲ ಕುತೂಹಲಗಳಿಗೆ ನಾವು ಉತ್ತರ ಕೊಡ್ತೀವಿ. ಇಲ್ಲಿದೆ ನೋಡಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮದುವೆಯ ವಿಶೇಷವಾದ 'ಕರೆಯೋಲೆ'. ಮುಂದೆ ನೋಡಿ.....

ಸರಳವಾದ ಆಹ್ವಾನ ಪತ್ರಿಕೆ

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಯ ಆಹ್ವಾನ ಪತ್ರಿಕೆ ಅತ್ಯಂತ ಸರಳವಾಗಿದೆ. ಜನಸಾಮಾನ್ಯರ ಮದುವೆಯಂತೆ ಇನ್ವಿಟೇಷನ್ ಮಾಡಿಸಿದ್ದಾರೆ. ಕೆಂಪು ಮತ್ತು ಬಿಳಿ ಬಣ್ಣದ ವಿನ್ಯಾಸವನ್ನ ಹೊಂದಿದೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

ಸ್ವಾಗತ ಬಯಸುತ್ತಿದೆ 'ನುಡಿಮುತ್ತು'ಗಳು

ಸಾಮಾನ್ಯವಾಗಿ ಮದುವೆಯ ಆಹ್ವಾನ ಪತ್ರಿಕೆಗಳಲ್ಲಿ, ಆರತಕ್ಷತೆ, ಮುಹೂರ್ತ, ಶುಭಲಗ್ನ, ಸಮಯ, ತಂದೆ-ತಾಯಿ ಹೆಸರು, ವಿಳಾಸ ಕೊನೆಯಲ್ಲಿ ತಮ್ಮ ಸುಖಾಗಮನವನ್ನ ಬಯಸುವವರು ಎಂದು ಬರೆಸಲಾಗುತ್ತೆ. ಆದ್ರೆ, ಯಶ್-ರಾಧಿಕಾ ಅವರ ಮದುವೆಯ ಆಹ್ವಾನ ಪತ್ರಿಕೆಯ ಜೊತೆಯಲ್ಲಿ, ನುಡಿಮುತ್ತಗಳನ್ನ ಬರೆದು ವಿಶೇಷವಾಗಿ ಮದುವೆಗೆ ಕರೆಯಲಾಗಿದೆ.

ಯಶ್-ರಾಧಿಕಾ ನುಡಿಮುತ್ತುಗಳೇನು?

ನಮಸ್ತೆ, ''ಇಲ್ಲಿ ಎಲ್ಲರೂ ಸಂಬಂಧಿಕರೇ...ಇಲ್ಲಿ ಎಲ್ಲವೂ ಅನುಬಂಧವೇ....ಸಹನೆ ಮರವನು ತಬ್ಬಿದ ಜೀವಲತೆಯಲಿ. ನಲುಮೆ ಹೂ ಅರಳಿದೆ....! ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ...! ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೇ....ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!.

ಸಕಲರೂ ಬನ್ನಿ ನಮ್ಮನ್ನ ಹರಿಸಿ ಅಷ್ಟೇ..!

''ಸಂಬಂಧಕ್ಕಿಂತ ಕುಟುಂಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರಾವ ಹೆಮ್ಮೆ ಬೇಕಿಲ್ಲ. ನಿಮ್ಮ ಪ್ರೀತ್ಯಾದರಗಳಿಗಿಂತ ಮಿಗಿಲಾದದ್ದು ಬೇರಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಜಾಸ್ತಿ..! ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ....! ದಯಮಾಡಿ ಸಕಲರೂ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ.''-ಯಶ್ ರಾಧಿಕಾ ಪಂಡಿತ್

ಯಶ್-ರಾಧಿಕಾ ಬೆರಳಚ್ಚು

ತಮ್ಮ ಕಲ್ಯಾಣ ಸಮಾರಂಭಕ್ಕೆ ಸರ್ವರಿಗೂ ಪ್ರೀತಿಯಿಂದ ಆಹ್ವಾನ ಮಾಡಿರುವ ಯಶ್ ಹಾಗೂ ರಾಧಿಕಾ, 'ಆಹ್ವಾನ ಪತ್ರಿಕೆ' ಕೊನೆಯಲ್ಲಿ, ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದಾರೆ.

ಮದುವೆ ಎಲ್ಲಿ?

ಯಶ್ ಹಾಗೂ ರಾಧಿಕಾ ವಿವಾಹ ಮಹೋತ್ಸವ, ಬೆಂಗಳೂರಿನ ಅರಮನೆ ಮೈದಾನದ 'ತ್ರಿಪುರ ವಾಸಿನಿ' ಕಲ್ಯಾಣ ಮಂಟಪದಲ್ಲಿ ನೆರವೇರಲಿದೆ.

ಆರತಕ್ಷತೆ ಯಾವಾಗ?

ಸ್ಯಾಂಡಲ್ ವುಡ್ ನ ಈ ತಾರಾಜೋಡಿಯ ಆರತಕ್ಷತೆ ಡಿಸೆಂಬರ್ 10, ಶನಿವಾರ ಸಂಜೆ 7 ಗಂಟೆಯಿಂದ ಆರಂಭವಾಗಲಿದೆ.

ಮುಹೂರ್ತ ಯಾವಾಗ?

ಸದ್ಯ, ಯಶ್ ನೀಡುತ್ತಿರುವ ಆಮಂತ್ರಣ ಪತ್ರಿಕೆಯಲ್ಲಿ ಆರತಕ್ಷತೆಯ ದಿನಾಂಕ ಹಾಗೂ ಸಮಯ ಹಾಕಲಾಗಿದೆಯೇ ಹೊರತು, ಮುಹೂರ್ತದ ಸಮಯ ಹಾಗೂ ದಿನಾಂಕವನ್ನ ಪ್ರಕಟಿಸಿಲ್ಲ. ಆದರೆ, ಮೂಲಗಳ ಪ್ರಕಾರ ಡಿಸೆಂಬರ್ 11 ರಂದು ಮಾಂಗಲ್ಯಧಾರಣೆ ನಡೆಯಲಿದೆ.

English summary
Kannada Actor Yash has started distributing the invitation cards for his wedding with Radhika Pandit. The wedding is fixed for December 10th and 11th at the Bangalore Palace Ground. Here is the Specialities of Yash and Radhika pandith marriage invitation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada