For Quick Alerts
  ALLOW NOTIFICATIONS  
  For Daily Alerts

  ಬೆಚ್ಚಿ ಬೀಳಿಸಿದ್ದ ಬಾಲಕನ ಕೊಲೆ: ನಿಜ ಘಟನೆ ಆಧರಿತ ಸಾಕ್ಷ್ಯಚಿತ್ರ ಪ್ರದರ್ಶಿಸದಂತೆ ತಡೆ

  |

  ಕೆಲ ವರ್ಷಗಳ ಹಿಂದೆ ಗುರುಗ್ರಾಮದ ರಯಾನ್ ಶಾಲೆಯಲ್ಲಿ ನಡೆದಿದ್ದ ಕೊಲೆಗೆ ಸಂಬಂಧಿಸಿದಂತೆ ನಿರ್ಮಿಸಲಾಗಿರುವ ಕಿರುಚಿತ್ರವನ್ನು ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್ ಹಾಗೂ ಚ್ಯಾನೆಲ್ ನ್ಯೂಸ್ ಏಷ್ಯಾ (ಸಿಎನ್‌ಎ)ಗೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.

  ಗುರುಗ್ರಾಮದ ಶಾಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಆಧರಿಸಿ 'ಎ ಬಿಗ್ ಲಿಟಲ್ ಮರ್ಡರ್' ಹೆಸರಿನ ಸಾಕ್ಷ್ಯಚಿತ್ರ ನಿರ್ಮಿಸಲಾಗಿತ್ತು. ಆ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಬಾರದೆಂದು ಸೇಂಟ್ ಕ್ಸೇವಿಯರ್ ಶಿಕ್ಷಣ ಸಂಸ್ಥೆಯು ಮನವಿ ಸಲ್ಲಿಸಿದ್ದ ಕಾರಣ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಚಿತ್ರದ ಪ್ರಸಾರಕ್ಕೆ ತಡೆ ನೀಡಿದೆ.

  ನ್ಯಾಯಮೂರ್ತಿ ಜಯಂತ್ ನಾಥ್ ನೇತೃತ್ವದ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸಾಕ್ಷ್ಯಚಿತ್ರವು ಯಾವುದೇ ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಸಾರ ಮಾಡದಂತೆ ತಡೆ ನೀಡಿದೆ. ಅಲ್ಲದೆ ಎಲ್ಲ ಪ್ರತಿವಾದಿಗಳಿಗೆ ನೊಟೀಸ್ ಜಾರಿ ಮಾಡಿದ್ದು ಅಕ್ಟೋಬರ್ 22ಕ್ಕೆ ಪ್ರಕರಣವನ್ನು ಮುಂದೂಡಿದೆ.

  ಅನುಮತಿ ಇಲ್ಲದೆ ಶಾಲೆಯ ಹೆಸರು, ಚಿತ್ರಗಳು, ವಿಡಿಯೋಗಳನ್ನು ಬಳಸಲಾಗಿದೆ ಎಂದು ಸೇಂಟ್ ಕ್ಸೇವಿಯರ್ ಶಿಕ್ಷಣ ಸಂಸ್ಥೆಯು ವಾದಿಸಿದೆ. ಈ ಹಿಂದೆ ಇದೇ ಕೊಲೆ ಪ್ರಕರಣದ ಬಗ್ಗೆ ಪುಸ್ತಕ ಹೊರತರಲು ಯತ್ನಿಸಿದಾಗಲೂ ಶಿಕ್ಷಣ ಸಂಸ್ಥೆಯು ದಾವೆ ಹೂಡಿ ಪುಸ್ತಕದ ಪ್ರಕಾಶನ, ಮಾರಾಟ, ಅಂತರ್ಜಾಲದಲ್ಲಿ ಪ್ರಕಟಿಸುವದಕ್ಕೆ ತಡೆ ತಂದಿತ್ತು.

  ಇದೀಗ ಬಿಡುಗಡೆಗೆ ತಯಾರಾಗಿರುವ 'ದಿ ಬಿಗ್ ಲಿಟಲ್ ಮರ್ಡರ್' ಸಾಕ್ಷ್ಯಚಿತ್ರವನ್ನು ಮಯೂರಿಕಾ ಬಿಸ್ವಾಸ್ ನಿರ್ಮಾಣ ಮಾಡಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿತ್ತು. ಈ ಸಾಕ್ಷ್ಯಚಿತ್ರವು ಬಹಳ ಕುತೂಹಲ ಕೆರಳಿಸಿದ್ದ ಪ್ರದ್ಯುಮ್ನ ಠಾಕೂರ್ ಹೆಸರಿನ ಏಳು ವರ್ಷದ ಬಾಲಕನ ಕೊಲೆಯ ಕುರಿತದ್ದಾಗಿತ್ತು.

  2018ರ ಸೆಪ್ಟೆಂಬರ್ 08ರಂದು ಗುರುಗ್ರಾಮದ ರಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರದ್ಯುಮ್ನ ಠಾಕೂರ್ ಎಂಬ ಏಳು ವರ್ಷದ ಹುಡುಗನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಆತನ ದೇಹ ಶಾಲೆಯ ಬಾತ್‌ರೂಮ್‌ನಲ್ಲಿ ದೊರಕಿತ್ತು. ಅದೇ ದಿನ ಮಧ್ಯಾಹ್ನ ಅದೇ ಶಾಲೆಯ ಸ್ಕೂಲ್‌ ಬಸ್‌ನ ಕಂಡಕ್ಟರ್ ಅಶೋಕ್ ಕುಮಾರ್ ಎಂಬಾತನನ್ನು ಹರಿಯಾಣ ಪೊಲೀಸರು ಬಂಧಿಸಿ ಅಶೋಕ್ ಕುಮಾರ್ ಬಾಲಕ ಪ್ರದ್ಯುಮ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರದ್ಯುಮ್ನ ಕಿರುಚಿಕೊಳ್ಳಲು ಯತ್ನಿಸಿದಾಗ ಚಾಕುವಿನಿಂದ ಪ್ರದ್ಯುಮ್ನನ ಕೊಲೆ ಮಾಡಿದ ಎಂದು ಹೇಳಿದ್ದರು. ಆ ವೇಳೆಗಾಗಲೆ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಗುರುಗ್ರಾಮದ ವಕೀಲರ ಸಂಘವು ಅಶೋಕ್ ಕುಮಾರ್ ಪರ ವಾದಿಸುವುದಿಲ್ಲ ಎಂದು ಘೋಷಿಸಿತು. ತಾನು ಕೊಲೆ ಮಾಡಿರುವುದಾಗಿ ಅಶೋಕ್ ಕುಮಾರ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು.

  ಆದರೆ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೊಲೆಯಾದ ಪ್ರದ್ಯುಮ್ನ ತಂದೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದರು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯ್ತು ಆಗ ನಿಜ ವಿಷಯ ಬಯಲಾಯ್ತು. ರಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರದ್ಯುಮ್ನನನ್ನು ಕೊಲೆ ಮಾಡಿದ್ದ. ತರಗತಿಯಲ್ಲಿ ಆಯೋಜಿಸಿದ್ದ ಟೆಸ್ಟ್ ಒಂದನ್ನು ಮುಂದೂಡಲೆಂದು ಆತ ಪ್ರದ್ಯುಮ್ನನನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ್ದ ಬಾಲಕ ಗುರುಗ್ರಾಮದ ಪ್ರತಿಷ್ಠಿತ ವಕೀಲನ ಮಗ. ಬಾಲಕನನ್ನು ರಿಮ್ಯಾಂಡ್ ಹೋಮ್‌ಗೆ ಕಳಿಸಲಾಯಿತು. ಅಶೋಕ್ ಕುಮಾರ್‌ಗೆ ಬಿಡುಗಡೆ ಆಯ್ತು. ಅಶೋಕ್ ಕುಮಾರ್‌ ಅನ್ನು ಬಲವಂತದಿಂದ ಮಾಡದ ಕೊಲೆ ಒಪ್ಪಿಕೊಳ್ಳುವಂತೆ ಮಾಡಿದ ಪೊಲೀಸರನ್ನು ಅಮಾನತ್ತು ಮಾಡಲಾಯಿತು. ಈ ಸತ್ಯ ಘಟನೆಯನ್ನೇ ಮಯೂರಿಕಾ ಬಿಸ್ವಾಸ್ 'ದಿ ಲಿಟಲ್ ಬಿಗ್ ಮರ್ಡರ್' ಹೆಸರಿನ ಸಾಕ್ಷ್ಯಚಿತ್ರ ಮಾಡಿದ್ದಾರೆ.

  English summary
  Delhi high court issue stay to stream documentary based on Gurugram Ryan international school murder case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X