twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್ ಉಗಮಕ್ಕೆ ಕಾರಣವಾಯ್ತು ಸಣ್ಣ ಜಗಳ! ಆದರೆ ಎದುರಿಸಿದ ಸವಾಲುಗಳು ದೊಡ್ಡವು

    |

    ಒಟಿಟಿ ಉದ್ಯಮದಲ್ಲಿ ಮೊದಲು ಕೇಳಿಬರುವ ಹೆಸರು ನೆಟ್‌ಫ್ಲಿಕ್ಸ್‌ನದ್ದು. ವಿಶ್ವದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಹಾಗೂ ಚಂದಾದಾರರ ಮೂಲಕ ಅತಿ ಹೆಚ್ಚು ಲಾಭ ಸಂಪಾದಿಸುವ ಸಂಸ್ಥೆ ನೆಟ್‌ಫ್ಲಿಕ್ಸ್.

    ಕಳೆದ ಕೆಲವು ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿ ನೆಟ್‌ಫ್ಲಿಕ್ಸ್ ಬೆಳೆದಿದೆ. ಕಳೆದ ಒಂದು ವರ್ಷದಲ್ಲಿ ತನ್ನ ಚಂದಾದಾದರ ಸಂಖ್ಯೆಯಲ್ಲಿ 400% ಏರಿಕೆ ದಾಖಲಿಸಿದೆ ನೆಟ್‌ಫ್ಲಿಕ್ಸ್. ಪ್ರಸ್ತುತ 190ಕ್ಕೂ ಹೆಚ್ಚು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಲಭ್ಯವಿದೆ. ಕೋಟ್ಯಂತರ ಕೋಟಿಗಳಷ್ಟು ವ್ಯವಹಾರವನ್ನು ಈ ಸಂಸ್ಥೆ ಹೊಂದಿದೆ.

    ವಿಶ್ವದ ಅತ್ಯುನ್ನತ ಸಂಸ್ಥೆಗಳಾದ ನೆಟ್‌ಫ್ಲಿಕ್ಸ್ ಆರಂಭವಾಗಿದ್ದು ಒಂದು ಸಣ್ಣ ಜಗಳದಿಂದ ಎಂದರೆ ನಂಬಲೇ ಬೇಕು. ಹೌದು, ಸಂಸ್ಥೆಯ ಮಾಲೀಕ ಬೇರೆ ಸಂಸ್ಥೆಯೊಂದಿಗೆ ಆಡಿದ ಸಣ್ಣ ಜಗಳ ನೆಟ್‌ಫ್ಲಿಕ್ಸ್‌ ಎಂಬ ವಿಶ್ವ ವಿಖ್ಯಾತ ಸಂಸ್ಥೆಯ ಜನನಕ್ಕೆ ಕಾರಣವಾಯಿತು.

    ಅದು 1990ರ ಸಮಯ. ಆಗ ಬ್ಲಾಕ್‌ಬಸ್ಟರ್‌ ಎಂಬ ಸಂಸ್ಥೆ ಬಹಳ ಖ್ಯಾತಿಯಾಗಿತ್ತು. ಆ ಸಂಸ್ಥೆಯು ಡಿವಿಡಿಗಳನ್ನು ಬಾಡಿಗೆ ನೀಡಿ ಲಾಭ ಪಡೆಯುತ್ತಿತ್ತು. ಶುಕ್ರವಾರ ಡಿವಿಡಿ ಬಾಡಿಗೆಗೆ ಪಡೆದು ಸೋಮವಾರ ಹಿಂತಿರುಗಿಸುವುದು ಆಗಿನ ಕಾಲಕ್ಕೆ ಅಮೆರಿಕದಲ್ಲಿ ಬಹಳ ಪ್ರಚಲಿತದಲ್ಲಿದ್ದ ಅಭ್ಯಾಸ. ಆದರೆ ಸೂಕ್ತ ಸಮಯಕ್ಕೆ ಡಿವಿಡಿ ಹಿಂದುರಿಗಿಸಲು ಮರೆತರೆ ದೊಡ್ಡ ಮೊತ್ತದ ದಂಡವನ್ನು ಗ್ರಾಹಕರು ತೆರಬೇಕಾಗಿತ್ತು. ಬ್ಲಾಕ್‌ಬಸ್ಟರ್‌ ಸಂಸ್ಥೆ ತನ್ನ ಹೆಚ್ಚಿನ ಆದಾಯವನ್ನು ದಂಡ ವಸೂಲಾತಿಯಿಂದಲೇ ಗಳಿಸುತ್ತಿತ್ತು. ಅಮೆರಿಕದ ಪ್ರತಿ ನಗರ, ಬೀದಿಗಳಲ್ಲಿ ಬ್ಲಾಕ್‌ಬಸ್ಟರ್‌ನ ಮಳಿಗೆಗಳಿದ್ದವು. ಅಮೆರಿಕ ಒಂದರಲ್ಲೇ 6000 ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದವು. ಕೆಲವೇ ವರ್ಷಗಳಲ್ಲಿ ಬಿಲಿಯನ್‌ ವ್ಯವಹಾರದ ಕಂಪೆನಿಯಾಗಿ ಬ್ಲಾಕ್‌ಬಸ್ಟರ್ ಬೆಳೆದಿತ್ತು.

    ಅಂಗಡಿಯವರೊಂದಿಗೆ ಜಗಳವಾಡಿದ್ದ ರೀಡ್

    ಅಂಗಡಿಯವರೊಂದಿಗೆ ಜಗಳವಾಡಿದ್ದ ರೀಡ್

    ಒಮ್ಮೆ ರೀಡ್‌ ಹೇಸ್ಟಿಂಗ್ಸ್ ಎಂಬುವರು ಬ್ಲಾಕ್‌ಬಸ್ಟರ್ ಅಂಗಡಿಯೊಂದರಿಂದ ಡಿವಿಡಿ ಪಡೆದು ತಡವಾಗಿ ಹಿಂದಿರುಗಿಸಿದರು. ಅವರಿಗೆ ಡಿವಿಡಿಯ ಖರೀದಿ ಬೆಲೆಯ ಮೂರು ಪಟ್ಟು ಹಣವನ್ನು (40 ಡಾಲರ್) ದಂಡವಾಗಿ ನೀಡಬೇಕಾಯಿತು. ಇದರಿಂದಾಗಿ ಅಂಗಡಿಯವರ ಜೊತೆ ಹಾಗೂ ಸಂಸ್ಥೆಯೊಂದಿಗೂ ಜಗಳ ಮಾಡಿದರು ಮಾರ್ಕ್. ಕೊನೆಗೆ ತನ್ನಂತೆ ಲಕ್ಷಾಂತರ ಮಂದಿ ಗ್ರಾಹಕರು ದಂಡದಿಂದಾಗಿ ದೊಡ್ಡ ಮತ್ತದ ಹಣ ಕಳೆದುಕೊಳ್ಳುತ್ತಿರುವುದು ಗಮನಿಸಿ 1997ರ ಆಗಸ್ಟ್ 27ರಂದು ತಾವೇ ಒಂದು ಡಿವಿಡಿ ಬಾಡಿಗೆ ಸಂಸ್ಥೆ ಪ್ರಾರಂಭಿಸಿದರು ರೀಡ್. ಅದುವೇ 'ನೆಟ್‌ಫ್ಲಿಕ್ಸ್'.

    ಆರಂಭದಲ್ಲಿ ದೊಡ್ಡ ನಷ್ಟವೇ ಆಯಿತು

    ಆರಂಭದಲ್ಲಿ ದೊಡ್ಡ ನಷ್ಟವೇ ಆಯಿತು

    ರೀಡ್ ಹೇಸ್ಟಿಂಗ್ಸ್‌ ಅದಾಗಲೇ ಪ್ಯೂರ್ ಸಾಫ್ಟ್‌ವೇರ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಅದರ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್ ರ್ಯಾಂಡಲ್ಫ್‌ ಅನ್ನು ಜೊತೆಗೆ ಕರೆದುಕೊಂಡು ಆನ್‌ಲೈನ್‌ನಲ್ಲಿ ಡಿವಿಡಿಗಳನ್ನು ಆರ್ಡರ್ ಮಾಡಿದರೆ ಮನೆಗೆ ಡೆಲಿವರಿ ನೀಡುವ ವ್ಯವಸ್ಥೆಯನ್ನು ಹುಟ್ಟುಹಾಕಿದರು. ನೆಟ್‌ಫ್ಲಿಕ್ಸ್‌ನ ಮೊದಲ ಟ್ಯಾಗ್‌ಲೈನ್ ಏನಾಗಿತ್ತು ಗೊತ್ತೆ? 'ನೋ ಲೇಟ್ ಫೀಸ್‌' (ಹಿಂದಿರುಗಿಸಲು ತಡವಾದರೆ ದಂಡವಿಲ್ಲ). ಆದರೆ ಆರಂಭದಲ್ಲಿ ಡಿವಿಡಿ ಬಾಡಿಗೆ ಪಡೆದವರು ಡಿವಿಡಿಗಳನ್ನು ಹಿಂದಿರುಗಿಸುತ್ತಲೇ ಇರಲಿಲ್ಲ. ಇದರಿಂದ ನಷ್ಟವಾಗಲು ಆರಂಭವಾಯ್ತು. ನಂತರ ಕೆಲವೇ ತಿಂಗಳಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಂಡ ರೀಡ್ ಹೇಸ್ಟಿಂಗ್ಸ್‌ ಮತ್ತು ಮಾರ್ಕ್ ರ್ಯಾಂಡಲ್ಫ್‌ ತಿಂಗಳ ಪ್ಯಾಕ್ ಆಫರ್ ಘೋಷಿಸಿದರು. ತಿಂಗಳಿಗಾಗುವಷ್ಟು ಡಿವಿಡಿ ಆರ್ಡರ್ ಮಾಡುವುದು ಮೊದಲ ಡಿವಿಡಿ ನೋಡಿ ವಾಪಸ್ ನೀಡಿದ ಬಳಿಕವಷ್ಟೆ ಎರಡನೇ ಡಿವಿಡಿ ಕೊಡಲಾಗುತ್ತಿತ್ತು. ಈ ಆಫರ್ ಅವರಿಗೆ ತುಸು ಲಾಭ ಗಳಿಸಿಕೊಟ್ಟಿತು.

    ಮಾರಾಟ ಮಾಡಲು ನಿರ್ಧರಿಸಿದ್ದ ನೆಟ್‌ಫ್ಲಿಕ್ಸ್ ಮಾಲೀಕ

    ಮಾರಾಟ ಮಾಡಲು ನಿರ್ಧರಿಸಿದ್ದ ನೆಟ್‌ಫ್ಲಿಕ್ಸ್ ಮಾಲೀಕ

    ಆದರೆ ಆ ವೇಳೆಗಾಗಲೇ ದೈತ್ಯ ಸಂಸ್ಥೆಯಾಗಿ ಬೆಳೆದಿದ್ದ ಬ್ಲಾಕ್‌ಬಸ್ಟರ್‌ ಎದುರು ನೆಟ್‌ಫ್ಲಿಕ್ಸ್‌ ಕುಂಟುತ್ತಲೇ ಸಾಗುತ್ತಿತ್ತು. ಬ್ಲಾಕ್‌ಬಸ್ಟರ್‌ ಸ್ಟೋರ್‌ಗಳು ಎಲ್ಲೆಡೆ ಇದ್ದವು. ಆದರೆ ನೆಟ್‌ಫ್ಲಿಕ್ಸ್‌ನಲ್ಲಿ ಡಿವಿಡಿ ಆರ್ಡರ್ ಮಾಡಿದರೆ ಒಂದು ವಾರದ ಬಳಿಕ ಅದು ಗ್ರಾಹಕರಿಗೆ ಡೆಲಿವರಿ ಆಗುತ್ತಿತ್ತು. ಹಾಗಾಗಿ ನೆಟ್‌ಫ್ಲಿಕ್ಸ್‌ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿತ್ತು. ಯಾವ ಮಟ್ಟಿಗೆಂದರೆ 2000ರಲ್ಲಿ ಸ್ವತಃ ನೆಟ್‌ಫ್ಲಿಕ್ಸ್‌ ತನ್ನನ್ನು ತಾನು ಬ್ಲಾಕ್‌ಬಸ್ಟರ್‌ಗೆ ಮಾರಿಕೊಳ್ಳಲು ತಯಾರಾಗಿತ್ತು. ಅದೂ ಕೇವಲ 50 ಮಿಲಿಯನ್ ಡಾಲರ್‌ಗೆ ಆದರೆ ಬ್ಲಾಕ್‌ಬಸ್ಟರ್ ಸಂಸ್ಥೆಯು ನೆಟ್‌ಫ್ಲಿಕ್ಸ್ ಅನ್ನು ಖರೀದಿಸಲಿಲ್ಲ. ಅದುವೇ ಬ್ಲಾಕ್‌ಬಸ್ಟರ್‌ ಮಾಡಿದ ಬಹು ದೊಡ್ಡ ತಪ್ಪು. ಈ ತಪ್ಪಿನಿಂದಾಗಿ ಬ್ಲಾಕ್‌ಬಾಸ್ಟರ್ ಕೆಲವೇ ವರ್ಷಗಳಲ್ಲಿ ಮುಳಗಿಯೇ ಹೋಯಿತು!

    2002ರಲ್ಲಿ ಷೇರನ್ನು ಸಾರ್ವಜನಿಕಗೊಳಿಸಿತು (ಐಪಿಒ)

    2002ರಲ್ಲಿ ಷೇರನ್ನು ಸಾರ್ವಜನಿಕಗೊಳಿಸಿತು (ಐಪಿಒ)

    2000ರ ನಂತರ ನೆಟ್‌ಫ್ಲಿಕ್ಸ್‌ ಆನ್‌ಲೈನ್‌ ಸರ್ವಿಸ್‌ ಮೂಲಕ ಹೆಚ್ಚು-ಹೆಚ್ಚು ಗ್ರಾಹಕರನ್ನು ತಲುಪುತ್ತಾ ಸಾಗಿತು. ಯೂಸರ್ ಇಂಟರ್ಫೇಸ್ ಉತ್ತಮ ಪಡಿಸಿಕೊಂಡಿತು, ರೆಕಮಂಡೇಶನ್ಸ್ ಇನ್ನಿತರೆ ಬದಲಾವಣೆಗಳನ್ನು ತಂದಿತು. 2002ರ ವೇಳೆಗೆ ಕಂಪೆನಿಯನ್ನು ಹಿಗ್ಗಿಸಲು ಷೇರು ಮಾರುಕಟ್ಟೆ ಪ್ರವೇಶಿಸಿ ಷೇರು ಸಾರ್ವಜನಿಕಗೊಳಿಸಿ (ಐಪಿಒ) 82 ಮಿಲಿಯನ್ ಡಾಲರ್ ಸಂಗ್ರಹಿಸಿತು. ಅದೇ ವೇಳೆಗೆ ವಾಲ್‌ಮಾರ್ಟ್‌ನಿಂದ ದೊಡ್ಡ ಹೊಡೆತವೊಂದು ನೆಟ್‌ಫ್ಲಿಕ್ಸ್ ಹಾಗೂ ಬ್ಲಾಕ್‌ಬಸ್ಟರ್ ಎರಡಕ್ಕೂ ಬಿದ್ದಿತು.

    ವಾಲ್‌ಮಾರ್ಟ್‌ನಿಂದ ಸಮಸ್ಯೆ ಎದುರಿಸಬೇಕಾಯ್ತು

    ವಾಲ್‌ಮಾರ್ಟ್‌ನಿಂದ ಸಮಸ್ಯೆ ಎದುರಿಸಬೇಕಾಯ್ತು

    ದಿನಸಿ ಇನ್ನಿತರೆ ಬಳಕೆ ವಸ್ತುಗಳನ್ನು ಮಾರುವ ವಾಲ್‌ಮಾರ್ಟ್ ಡಿವಿಡಿ ಮಾರಲು ಆರಂಭಿಸಿಬಿಟ್ಟಿತು. ಅದೂ ಅತ್ಯಂತ ಕಡಿಮೆ ಬೆಲೆಗೆ. ಡಿವಿಡಿಗಳ ಜಾಹೀರಾತು ತೋರಿಸಿ ಅಂಗಡಿಗೆ ಗ್ರಾಹಕರು ಬರುವಂತೆ ಮಾಡಿ ಇತರೆ ವಸ್ತುಗಳನ್ನು ಮಾರುವುದು ವಾಲ್‌ಮಾರ್ಟ್ ಉದ್ದೇಶವಾಗಿತ್ತು. ಇದರಿಂದ ನೆಟ್‌ಫ್ಲಿಕ್ಸ್ ಹಾಗೂ ಬ್ಲಾಕ್‌ಬಸ್ಟರ್ ಎರಡಕ್ಕೂ ದೊಡ್ಡ ಪೆಟ್ಟು ಬಿದ್ದಿತು. ಅದೇ ಸಮಯಕ್ಕೆ ಸರಿಯಾಗಿ 2004 ರಲ್ಲಿ ಬ್ಲಾಕ್‌ಬಸ್ಟರ್ ಸಹ ವೆಬ್‌ಸೈಟ್ ಆರಂಭಿಸಿ ಆನ್‌ಲೈನ್‌ನಲ್ಲಿ ಡಿವಿಡಿ ಬಾಡಿಗೆಗೆ ಆರ್ಡರ್ ಮಾಡುವ ಯೋಜನೆ ತಂದಿತು. ಆದರೆ ಅವರ ಯೂಸರ್‌ ಇಂಟರ್ಫೇಸ್ ಚೆನ್ನಾಗಿರಲಿಲ್ಲ. ಆಗ ನೆಟ್‌ಫ್ಲಿಕ್ಸ್‌ ಜಾಹೀರಾತೊಂದನ್ನು ಹೊರಡಿಸಿ, ಯಾರು ನಮ್ಮ ಈಗಿನ ಯೂಸರ್ ಇಂಟರ್ಫೇಸ್‌ಗಿಂತಲೂ ಚೆನ್ನಾಗಿರುವ ಇಂಟರ್ಫೇಸ್ ಮಾಡಿಕೊಡುತ್ತಾರೊ ಅವರಿಗೆ 10 ಲಕ್ಷ ಡಾಲರ್ ಬಹುಮಾನ ಘೋಷಿಸಿದರು. ಅದರಿಂದಾಗಿ ನೆಟ್‌ಫ್ಲಿಕ್ಸ್‌ನ ವೆಬ್‌ಸೈಟ್ ಬಹಳ ಉತ್ತಮ ಹಾಗೂ ಸರಳಗೊಂಡಿತು. ಬ್ಲಾಕ್‌ಬಸ್ಟರ್ ಮತ್ತೆ ಹಿಂದುಳಿಯಿತು.

    2007ರಲ್ಲಿ ಇಟ್ಟಿತು ಕ್ರಾಂತಿಕಾರಿ ಹೆಜ್ಜೆ

    2007ರಲ್ಲಿ ಇಟ್ಟಿತು ಕ್ರಾಂತಿಕಾರಿ ಹೆಜ್ಜೆ

    ಆದರೆ ನೆಟ್‌ಫ್ಲಿಕ್ಸ್‌ ನಿಜವಾಗಿಯೂ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು 2007ರಲ್ಲಿ. ಅದೇ ವರ್ಷವೇ ನೆಟ್‌ಫ್ಲಿಕ್ಸ್ ಮೊದಲ ಬಾರಿಗೆ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಸೇವೆ ಆರಂಭಿಸಿತು. ಎಂದರೆ ಆನ್‌ಲೈನ್‌ನಲ್ಲಿಯೇ ನೇರವಾಗಿ ವಿಡಿಯೋ ನೋಡುವ ಅವಕಾಶ. ಆನ್‌ಲೈನ್ ಡಿವಿಡಿ ಮಾರಾಟದಿಂದ ಅದಾಗಲೇ ನೆಟ್‌ಫ್ಲಿಕ್ಸ್‌ ಬಳಿ 10 ಮಿಲಿಯನ್‌ ಚಂದಾದಾರಿದ್ದರು ಅವರೆಲ್ಲರೂ ಈ ಹೊಸ ಸ್ಟ್ರೀಮಿಂಗ್ ವ್ಯವಸ್ಥೆ ಇಷ್ಟಪಟ್ಟು ಪ್ರವೇಶ ಪಡೆದುಕೊಂಡರು. ಬಹುಬೇಗನೇ ವಿಡಿಯೋ ಸ್ಟೀಮಿಂಗ್ ಜನಪ್ರಿಯತೆ ಪಡೆದುಕೊಂಡಿತು. ಆದರೆ ಟಿವಿಗಳಿಂದ ವಿರೋಧವನ್ನೂ ಕಾಣಬೇಕಾಯಿತು. ಆದರೆ ನೆಟ್‌ಫ್ಲಿಕ್ಸ್‌, ಟಿವಿ ಕೇಬಲ್‌ ನೆಟ್‌ವರ್ಕ್ಸ್‌ನವರ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದುಕೊಂಡರು.

    2011 ನೆಟ್‌ಫ್ಲಿಕ್ಸ್‌ ಪಾಲಿಗೆ ಬಹಳ ಮುಖ್ಯವಾದ ವರ್ಷ

    2011 ನೆಟ್‌ಫ್ಲಿಕ್ಸ್‌ ಪಾಲಿಗೆ ಬಹಳ ಮುಖ್ಯವಾದ ವರ್ಷ

    2007ರಿಂದ ಅಮೆರಿಕದಲ್ಲಿಯೇ ಚಂದಾದಾರರನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದ ನೆಟ್‌ಫ್ಲಿಕ್ಸ್‌ 2010ರಲ್ಲಿ ಕೆನಡಾಕ್ಕೆ ತನ್ನ ಸೇವೆ ವಿಸ್ತರಿಸಿತು. 2011 ಅಂತೂ ನೆಟ್‌ಫ್ಲಿಕ್ಸ್‌ ಪಾಲಿಗೆ ಬಹಳ ಮಹತ್ವದ ವರ್ಷ ಏಕೆಂದರೆ ಅದೇ ವರ್ಷ ಬ್ರೆಜಿಲ್, ಅರ್ಜೆಂಟೀನಾ, ಉರುಗ್ವೆ, ಪೆರುಗ್ವೆ, ಚಿಲಿ, ಬೊಲುವಿಯಾ, ಪೆರು, ಈಕ್ವೆಡಾರ್, ಮೆಕ್ಸಿಕೊ, ಸೆಂಟ್ರಲ್ ಅಮೆರಿಕ, ಕೆರೆಬೀನಾ, ಆಂಡಿಯಾನ್ ರೀಜನ್‌ಗಳಿಗೆ ಸೇವೆ ವಿಸ್ತರಿಸಿತು ನೆಟ್‌ಫ್ಲಿಕ್ಸ್‌. ಆದರೆ ಅದೇ ವರ್ಷದ ಅಂತ್ಯದಲ್ಲಿ ಮಾಲೀಕ ರೀಡ್ ಹಾಸ್ಟಿಂಗ್, ತಾವು ನೆಟ್‌ಫ್ಲಿಕ್ಸ್ ಡಿವಿಡಿ ಬಾಡಿಗೆ ಸೇವೆಯನ್ನು ವಿಡಿಯೋ ಸ್ಟ್ರೀಮಿಂಗ್ ಸೇವೆಯಿಂದ ಪ್ರತ್ಯೇಕಿಸಿ ಅದಕ್ಕೆ 'ಕ್ವಿಕ್‌ಸ್ಟೇರ್' ಎಂಬ ಪ್ರತ್ಯೇಕ ಹೆಸರಿಟ್ಟಿರುವುದಾಗಿ ಘೋಷಿಸಿದರು. ಇದರಿಂದಾಗಿ ಸುಮಾರು 8 ಲಕ್ಷ ಚಂದಾದಾರರನ್ನು ನೆಟ್‌ಫ್ಲಿಕ್ಸ್ ಕಳೆದುಕೊಂಡಿತು. ಜೊತೆಗೆ 42 ಡಾಲರ್ ಇದ್ದ ನೆಟ್‌ಫ್ಲಿಕ್ಸ್‌ ಷೇರಿನ ಬೆಲೆ ಮೂಲ ಬೆಲೆಗಿಂತಲೂ ಕಡಿಮೆ ಅಂದರೆ 9 ಡಾಲರ್‌ಗೆ ಕುಸಿದು ಬಿಟ್ಟಿತು. ಆದರೆ ತಮಗೆ ಅಮೆರಿಕದಲ್ಲಿ ಆದ ನಷ್ಟವನ್ನು ವಿದೇಶದಲ್ಲಿ ತುಂಬಿಸಿಕೊಂಡಿತು ನೆಟ್‌ಫ್ಲಿಕ್ಸ್‌. ವಿದೇಶದಲ್ಲಿ ದೊಡ್ಡ ಸಂಖ್ಯೆಯ ಚಂದಾದಾರರನ್ನು ನೆಟ್‌ಫ್ಲಿಕ್ಸ್ ಗಳಿಸಿಕೊಂಡಿತು.

    ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಕ್ರಾಂತಿಯೇ ಆಯಿತು

    ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಕ್ರಾಂತಿಯೇ ಆಯಿತು

    2012-13ರ ವೇಳೆಗಾಗಲೆ ಅಂತರ್ಜಾಲ ಎಂಬುದು ಕಡಿಮೆ ದರಕ್ಕೆ ಎಲ್ಲರಿಗೂ ಆಕ್ಸೆಸೆಬಲ್ ಆಗಲು ಆರಂಭವಾಗಿತ್ತು. ಸ್ಮಾರ್ಟ್‌ ಫೋನ್‌ ಉದ್ಯಮದಲ್ಲಿ ಸಹ ದೊಡ್ಡ ಕ್ರಾಂತಿಯೇ ನಡೆದು ಎಲ್ಲರ ಕೈಗೂ ಸ್ಮಾರ್ಟ್‌ಫೋನ್‌ಗಳು ಬರಲಾರಂಭಿಸಿದ್ದವು. ಸ್ಮಾರ್ಟ್‌ ಫೋನ್ ಹಾಗೂ ಇಂಟರ್ನೆಟ್ ಕ್ರಾಂತಿಯ ಸದುಪಯೋಗ ಪಡೆದುಕೊಂಡ ನೆಟ್‌ಫ್ಲಿಕ್ಸ್‌, ಯೂರೋಪ್ ದೇಶಗಳು, ಏಷ್ಯಾ ದೇಶಗಳಿಗೆ ತನ್ನ ಸೇವೆ ವಿಸ್ತರಿಸಿತು. 2013ರಲ್ಲಿ 'ಹೌಸ್ ಆಫ್ ಕಾರ್ಡ್ಸ್' ಹೆಸರಿನ ಸ್ವಂತ ಪ್ರೊಡಕ್ಷನ್‌ನ ವೆಬ್ ಸರಣಿ ಬಿಡುಗಡೆ ಮಾಡಿತು ನೆಟ್‌ಫ್ಲಿಕ್ಸ್. ಅದೇ ವೇಳೆಗೆ ಮಾರ್ವೆಲ್, ಡಿಸ್ನಿ ಇನ್ನಿತರೆ ದೊಡ್ಡ ಪ್ರೊಡಕ್ಷನ್ ಹೌಸ್‌ಗಳ ಜನಪ್ರಿಯ ಸಿನಿಮಾಗಳನ್ನು ಖರೀದಿಸಿ ಸ್ಟ್ರೀಮ್ ಮಾಡಲು ಸಹ ಆರಂಭಿಸಿತು. ಜೊತೆಗೆ ಆಯಾ ದೇಶಗಳಲ್ಲಿನ ಜನರಿಗೆ ಸ್ಥಳೀಯ ಸಿನಿಮಾಗಳು, ಶೋಗಳನ್ನು ಸಹ ಒದಗಿಸಲು ಆರಂಭಿಸಿತು.

    2020 ದೊಡ್ಡ ಬೂಮ್ ಕಂಡ ನೆಟ್‌ಫ್ಲಿಕ್ಸ್

    2020 ದೊಡ್ಡ ಬೂಮ್ ಕಂಡ ನೆಟ್‌ಫ್ಲಿಕ್ಸ್

    2020ರಲ್ಲಿ ದೊಡ್ಡ ಬೂಮ್‌ ಕಂಡ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರರ ಸಂಖ್ಯೆಯಲ್ಲಿ 500% ಪಟ್ಟು ಹೆಚ್ಚಿಸಿಕೊಂಡಿತು. ಇದಕ್ಕೆ ಕಾರಣ ಕೊರೊನಾ ಲಾಕ್‌ಡೌನ್. ಈ ಅವಧಿಯಲ್ಲಿ ಯಾವುದೇ ಒರಿಜಿನಲ್ ಕಂಟೆಂಟ್‌ ಸಹ ನಿರ್ಮಾಣ ಮಾಡಲಿಲ್ಲ ಆದರೂ ಬಹುದೊಡ್ಡ ಲಾಭವನ್ನು ನೆಟ್‌ಫ್ಲಿಕ್ಸ್‌ ಗಳಿಸಿಕೊಂಡಿತು. ನೆಟ್‌ಫ್ಲಿಕ್ಸ್‌ನ ಷೇರು ಮೌಲ್ಯ 60% ಹೆಚ್ಚಾಯಿತು. ಆದರೆ ಈಗ ಕೊರೊನಾ ಅಂತ್ಯವಾಗುವ ಸಮಯದಲ್ಲಿ ನೆಟ್‌ಫ್ಲಿಕ್ಸ್‌ ಮತ್ತೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಚಂದಾದಾರನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ ಆನ್‌ಲೈನ್ ಗೇಮಿಂಗ್ ಸೇವೆಯನ್ನು ನೀಡುವುದಾಗಿ ಘೋಷಿಸಿದೆ. ಅಲ್ಲಿ ಯಾವ ರೀತಿಯ ಮೋಡಿಯನ್ನು ನೆಟ್‌ಫ್ಲಿಕ್ಸ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ.

    English summary
    How Netflix started and how its become one of the number one company in America and the successful company of world.
    Wednesday, July 21, 2021, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X