For Quick Alerts
  ALLOW NOTIFICATIONS  
  For Daily Alerts

  ಪುನೀತ್-ಸೂರಿ ಸಂಗಮದ ಅಣ್ಣಾಬಾಂಡ್ ಚಿತ್ರವಿಮರ್ಶೆ

  By * ಶ್ರೀರಾಮ್ ಭಟ್
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಸಂಗಮದ ಬಹುನಿರೀಕ್ಷಿತ ಚಿತ್ರ 'ಅಣ್ಣಾಬಾಂಡ್' ಪುನೀತ್ ಅಭಿಮಾನಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದಂತಿದೆ. ಪುನೀತ್ ಅಭಿಮಾನಿಗಳಿಗೆ ನಿರೀಕ್ಷೆಯಂತೆ ಹಬ್ಬದೂಟವನ್ನೇ ನೀಡಿರುವ ಅಣ್ಣಾಬಾಂಡ್ ಟೀಮ್, ಎಲ್ಲ ವರ್ಗದ ಜನರನ್ನೂ ರಂಜಿಸುವ ಪ್ರಯತ್ನದಲ್ಲೂ ಸಾಕಷ್ಟು ಸಫಲವಾಗಿದೆ ಎನ್ನಬಹುದು. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ನಿರ್ವಹಿಸಿರುವ ಸೂರಿ, ಅದನ್ನು ಚೆನ್ನಾಗಿಯೂ ನಿರೂಪಿಸಿ ಪ್ರೇಕ್ಷಕರು ಮೆಚ್ಚುವಂತೆ ಮಾಡಿದ್ದಾರೆ.

  ಚಿತ್ರದ ಸಂಭಾಷಣೆ ಎಲ್ಲರನ್ನೂ ಸೆಳೆಯುವಂತಿದೆ. ಅದರಲ್ಲೂ ಮುಖ್ಯವಾಗಿ ಪುನೀತ್ ಹಾಗೂ ರಂಗಾಯಣ ರಘು ಜೋಡಿಯ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಹಾಸ್ಯಕ್ಕಾಗಿ ಪ್ರತ್ಯೇಕ ಟ್ರಾಕ್ ಮಾಡದೇ, ಪ್ರಮುಖ ಪಾತ್ರಧಾರಿಗಳ ಮೂಲಕವೇ ಸಂಭಾಷಣೆ ಕಚಗುಳಿಯನ್ನು ಪ್ರೇಕ್ಷಕರಿಗೆ ತಲುಪಿಸಿರುವುದು ಮೆಚ್ಚಬೇಕಾಗಿರುವ ಅಂಶ. ಸೂರಿ ಮಾಡಿರುವ ಕಥೆ ಯಾವುದೇ ಒಂದು ನಿರ್ಧಿಷ್ಟ ವರ್ಗವನ್ನು ಕೇಂದ್ರೀಕರಿಸದೇ, ಯಾವುದೇ ಒಂದು ವಿಭಾಗಕ್ಕೆ ಸೀಮಿತವೂ ಆಗದೇ ಸೆಂಟಿಮೆಂಟ್, ಥ್ರಿಲ್ಲರ್, ಲವ್, ಆಕ್ಷನ್ ಎಲ್ಲವನ್ನೂ ಒಳಗೊಂಡಿದೆ.

  ಡ್ರಗ್ಸ್ ಮಾಫಿಯಾ ಪಾತಕಗಳಿಗೆ ಸಮಾಜದ ಕೆಲವರು ಬಲಿಯಾಗುವ ಕಥೆಯ ಎಳೆಯೊಂದಿಗೆ ಸಮಾಜ ಸುಧಾರಣೆ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕೆಂಬ ಸಿದ್ಧಾಂತವೂ ಸೇರಿ ಚಿತ್ರದ ಕಥೆಗೊಂದು ಚೌಕಟ್ಟು, ಮೌಲ್ಯ ದೊರೆತಿದೆ. ಜೊತೆಗೆ ಲವ್ ಕೂಡ ಹದವಾಗಿ ಬೆರೆತಿದೆ. ಆದರೆ ಅಣ್ಣಾಬಾಂಡ್ ಹೆಸರಿಗೆ ಎಲ್ಲೂ ನ್ಯಾಯ ದೊರಕುವುದಿಲ್ಲ. ನಾಯಕನ ಪಾತ್ರದ ಮೂಲಕ ಸಾಗುವ ಚಿತ್ರಕಥೆ, ಮೊದಲಾರ್ಧದಲ್ಲಿ ಪಾತ್ರಗಳನ್ನು ಪ್ರೇಕ್ಷಕರಿಗೆ ರಿಜಿಸ್ಟರ್ ಮಾಡುವ ನಿಟ್ಟಿನಲ್ಲಿ ಸಾಗುತ್ತದೆ.

  ಬೋರಾಗದಂತೆ ಮಾಡಿರುವ ಚಿತ್ರಕಥೆ, ಹದವಾಗಿ ಬೆರೆಸಿರುವ ಸಂಭಾಷಣೆ, ದೃಶ್ಯವೈಭವ, ಡಾನ್ಸ್ ಗಳಿಂದ ಬೋರು ಹೊಡೆಸದಂತಿದೆ. ಮುಂದಿನ ಕಥೆ ಬಗ್ಗೆ ಕುತೂಹಲ ತಾಳುವಂತೆ ಮೊದಲಾರ್ಧಕ್ಕೆ ವಿರಾಮ ನೀಡಿ ಅರ್ಧಚಿತ್ರಕ್ಕೇ ಎದ್ದು ಪ್ರೇಕ್ಷಕ ಹೊರಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕ್ಯಾಪ್ಟನ್ ಸೂರಿ. ಆದರೆ ದ್ವಿತೀಯಾರ್ಧದಲ್ಲಿ ಲವ್ ಪಾತ್ರಗಳಿಗೆ ಸ್ವಲ್ಪ ಬ್ರೇಕ್ ನೀಡಬೇಕಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಎಳೆದು ಕೆಲವು ಕಡೆ ಬೋರು ಎನಿಸುವಂತೆ ಮಾಡಿದ್ದಾರೆ.

  ಅಭಿನಯದ ವಿಷಯಕ್ಕೆ ಬಂದರೆ ಪವರ್ ಸ್ಟಾರ್ ಪುನೀತ್ ಎಲ್ಲಾ ವಿಭಾಗಗಳಲ್ಲೂ ಮಿಂಚಿದ್ದಾರೆ. ಫೈಟ್ಸ್, ಡಾನ್ಸ್, ಸಾಹಸ ಹಾಗೂ ಸೆಂಟಿಮೆಂಟ್ ಅಲ್ಲದೇ ರೊಮಾನ್ಸ್ ದೃಶ್ಯಗಳಲ್ಲೂ ಅಲ್ಟಿಮೇಟ್ ಪವರ್ ತೋರಿಸಿದ್ದಾರೆ. ನಾಯಕಿಯರಲ್ಲಿ ಪ್ರಿಯಾಮಣಿ ಪಾತ್ರ ಹಾಗೂ ಅಭಿನಯ ಎರಡೂ 'ಸೂಪರ್'. ಆದರೆ ನಿಧಿ ಸುಬ್ಬಯ್ಯ ಪಾತ್ರಕ್ಕೆ ಅಷ್ಟೇನೂ ಮಹತ್ವ ದೊರೆತಿಲ್ಲ. ಸಿಕ್ಕ ಅವಕಾಶದಲ್ಲಿ 'ಪರವಾಗಿಲ್ಲ' ಎನ್ನುವಂತೆ ಅಭಿನಯಿಸಿದ್ದಾರೆ ಈಗ ಬಾಲಿವುಡ್ ನತ್ತ ಮುಖ ಮಾಡಿರುವ ನಿಧಿ.

  ಪುನೀತ್ ಪಾತ್ರದ ಜೊತೆಜೊತೆಯಲ್ಲೇ ಸಾಗುವ ರಂಗಾಯಣ ರಘು ಪ್ರೇಕ್ಷಕರ ಪ್ರಶಂಸೆ ಗಿಟ್ಟಿಸುತ್ತಾರೆ. ತಮ್ಮ ಎಂದಿನ ಅಬ್ಬರಕ್ಕೆ ಬ್ರೇಕ್ ಹಾಕಿ ಕಥೆಗೆ ಪೂರಕವಾದ ಅಭಿನಯ ನೀಡಿರುವ ಅವರನ್ನು ಈ ಚಿತ್ರದ ಪಾತ್ರದಲ್ಲಿ ಮೆಚ್ಚಲೇಬೇಕು. ನೀನಾಸಂ ಸತೀಶ್ ಅಭಿನಯ ಮತ್ತು ಸಂಭಾಷಣೆ ಹೇಳುವ ಶೈಲಿ ಚೆನ್ನಾಗಿದೆ. ಅವಿನಾಶ್, ಜಾನ್, ಪೆಟ್ರೋಲ್ ಪ್ರಸನ್ನ, ಅಚ್ಯುತ ಕುಮಾರ್, ಎಲ್ಲರೂ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

  ಬಾಲಿವುಡ್ ಅಂಗಳದಿಂದ ಬಂದ ಜಾಕಿಶ್ರಾಫ್ ಪಾತ್ರ ಹಾಗೂ ನಟನೆ ಬಗ್ಗೆ ಎರಡು ಮಾತಿಲ್ಲ. ಅವರಿಗೆ ಸಿಕ್ಕ ಪಾತ್ರ ಡ್ರಗ್ಸ್ ಮಾಫಿಯಾ ದೊರೆ. ಅಭಿನಯದಲ್ಲಿ ಅವರು ಅಕ್ಷರಶಃ ಮಿಂಚಿದ್ದಾರೆ. ಆದರೆ, ಅವರೇ ಕನ್ನಡ ಕಲಿತು ನೀಡಿರುವ ಸಂಭಾಷಣೆಯ ಶೈಲಿ ಮಾತೃಭಾಷೆಯಲ್ಲದವರು ಮಾತನಾಡಿದಂತೆ ಸಹಜವಾಗಿ ಇದ್ದರೂ ಪ್ರೇಕ್ಷಕರಿಗೆ ಸರಿಯಾಗಿ ಅರ್ಥವಾಗುವಂತಿಲ್ಲ. ಅದು ಬಿಟ್ಟರೆ ಎಲ್ಲವೂ ಅಚ್ಚುಕಟ್ಟು. ಕ್ಲೈಮಾಕ್ಸ್ ನಲ್ಲಿ ಬರುವ ಫೈಟಿಂಗ್ ದೃಶ್ಯ ಪುನೀತ್ ಅಭಿಮಾನಿಗಳಿಗೆ ಬೋನಸ್.

  ಸತ್ಯ ಹೆಗಡೆ ಕೆಮರಾ ಕೆಲಸ ಸೂಪರ್. 'ಕನ್ನಡಕ್ಕೊಬ್ಬರೇ ಸತ್ಯ ಹೆಗಡೆ' ಅನ್ನುವಂತೆ ದೃಶ್ಯವೈಭವ ಕಟ್ಟಿಕೊಟ್ಟ ಅವರ ಹೆಸರನ್ನು ಅಣ್ಣಾಬಾಂಡ್ ಜೊತೆಜೊತೆಯಲ್ಲೇ ಪ್ರೇಕ್ಷಕರಿಗೆ ನೆನಪಿಗೆ ಬರುವಂತಿದೆ. ಇಮ್ರಾನ್ ಸರ್ದಾರಿಯ ಕೋರಿಯಾಗ್ರಫಿ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ತುಂಬಾ ಚೆನ್ನಾಗಿದೆ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಯೋಗರಾಜ್ ಭಟ್ ಬರೆದಿರುವ 'ತುಂಬಾ ನೋಡ್ಬೇಡಿ.. ಲವ್ವು ಆಯ್ತದೆ...' ಹಾಡು ಎಲ್ಲರ ಮೆಚ್ಚುಗೆ ಗಳಿಸಿ ಟಾಪ್ ಎನಿಸಿದರೆ, ಕಾಣದಂತೆ ಮಾಯವಾದನೋ ಎಂಬ ಹಳೆಯ ಹಾಡು ಅದೇ ಪುನೀತ್ ಧ್ವನಿಯಲ್ಲಿ ಮತ್ತೆ ಬಂದು ಇಷ್ಟವಾಗುವಂತಿದೆ.

  ಒಟ್ಟಿನಲ್ಲಿ ಅಣ್ಣಾಬಾಂಡ್ ಚಿತ್ರ, ಅಭಿಮಾನಿಗಳಿಗೆ ಮಾತ್ರವಲ್ಲದೇ ಕನ್ನಡದ ಸಿನಿಪ್ರೇಕ್ಷಕರಿಗೆಲ್ಲರಿಗೂ ಇಷ್ಟವಾಗುವಂತಿದೆ ಎನ್ನಬಹುದು. ಗೊಂದಲಗಳಿಲ್ಲದ ಕಥೆ-ಚಿತ್ರಕಥೆ, ಕಚಗುಳಿಯಿಡುವ ಸಂಭಾಷಣೆ, ಅಗತ್ಯಕ್ಕೆ ತಕ್ಕ ಹಾಡು, ಸಂಗೀತ, ಸೂಪರ್ ಛಾಯಾಗ್ರಹಣ, ಹಾಗೂ ಅಪರೂಪವೆನಿಸುವ ಸಾಹಸ ದೃಶ್ಯಗಳ ಸಮ್ಮಿಲನ ಎನ್ನಿಸಿ ಹೊರಬರುವಾಗ 'ಚೆನ್ನಾಗಿದೆ' ಎಂಬ ಶಬ್ಧ ಬಾಯಿಂದ ಹೊರಡುವುದು ಖಂಡಿತ ಎಂಬಂತಿದೆ.

  English summary
  Power Star Puneeth Rajkumar and Duniya Suri Combination Annabond movie is worth to watch for all category of Audience. Priyamani and Nidhi Subbaiah are heroines. Raghayana Raghu played an important role in this movie and gets appreciation. 
 
  Wednesday, May 2, 2012, 11:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X