For Quick Alerts
  ALLOW NOTIFICATIONS  
  For Daily Alerts

  ಚಿಂಗಾರಿ ವಿಮರ್ಶೆ; ಕತೆ, ಸಂಭಾಷಣೆಯೇ ಹೀರೋ

  By * ಉದಯರವಿ
  |

  ಇಡೀ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿರುವ Human trafficking, ಅರ್ಥಾತ್ ಮಾನವರ ಕಳ್ಳ ಮಾರಾಟವೇ ಚಿತ್ರದ ಕಥಾವಸ್ತು. ಜಗತ್ತಿನಾದ್ಯಂತ ಈ ದಂಧೆ ಹೇಗೆ ನಡೆಯುತ್ತಿದೆ. ಅಮಾಯಕ ಹೆಣ್ಣು ಮಕ್ಕಳು ಇವರ ಕೈಗೆ ಸಿಕ್ಕು ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಎ ಹರ್ಷ ಕತೆ ಹೆಣೆದು ಅದಕ್ಕೊಂದು ರೂಪ ಕೊಟ್ಟಿದ್ದಾರೆ. ಕತೆ ಹೇಳುವ ಶೈಲಿಯಲ್ಲಿ ಲವಲವಿಕೆ, ಕುತೂಹಲ ಇರುವ ಕಾರಣ ಚಿತ್ರ ಆಪ್ತವಾಗುತ್ತದೆ.

  ತನ್ನ ಪ್ರೇಯಸಿ ಗೀತಾಳಿಗಾಗಿ (ದೀಪಿಕಾ ಕಾಮಯ್ಯ) ಸಿಸಿಬಿ ಪೊಲೀಸ್ ಅಧಿಕಾರಿ (ದರ್ಶನ್) ಮಾಡುವ ಸಾಹಸವೇ ಚಿಂಗಾರಿ. ಇದೇ ರೀತಿಯ ಕಥಾವಸ್ತುವನ್ನಿಟ್ಟುಕೊಂಡು ಈ ಹಿಂದೆ ತಮಿಳು, ತೆಲುಗಿನಲ್ಲಿ ಚಿತ್ರಗಳು ಬಂದಿವೆ. ಆದರೆ ಹರ್ಷ ಅವರ ಕತೆಯಲ್ಲಿ ವೇಗ, ಪಾತ್ರಗಳ ಆಯ್ಕೆ, ತಿರುವುಗಳು, ಭಿನ್ನ ಶೈಲಿ ಇದೆ. ಹಾಗಾಗಿ ಚಿಂಗಾರಿ ಚಿತ್ರ ಕೊನೆಯ ತನಕ ಪ್ರೇಕ್ಷಕನಲ್ಲಿ ಮುಂದೇನಾಗುತ್ತದೆ ಎಂಬ ಕುತೂಹಲ ಉಳಿಸುತ್ತಾ ಸಾಗುತ್ತದೆ. ಚಿತ್ರದ ಕತೆ ಹಾಗೂ ಸಂಭಾಷಣೆಯೇ ಇಲ್ಲಿ ಹೀರೋ.

  ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಒಟ್ಟಿಗೆ ಬರೆದಿರುವ ಸಂಭಾಷಣೆಯಲ್ಲಿ ಪಂಚ್ ಇದೆ. "ದುಡ್ಡು ಕೊಟ್ಟು ಕರ್ನಾಟಕದ ಮ್ಯಾಪ್ ತಗೋಬಹುದು. ಆದರೆ ಐದು ಕೋಟಿ ಕನ್ನಡಿಗರ ಸ್ವಾಭಿಮಾನ, ಪ್ರೀತಿ, ಅಭಿಮಾನಾನ ತಗೊಳ್ಳಕ್ಕಾಗಲ್ಲ..." ಎಂಬಂತಹ ಡೈಲಾಗ್ಸ್ ದರ್ಶನ್ ಅಭಿಮಾನಿಗಳಿಗಷ್ಟೇ ಅಲ್ಲ ಎಲ್ಲರಿಗೂ ಕಿಕ್ ಕೊಡುತ್ತವೆ. ಈ ರೀತಿಯ ಡೈಲಾಗ್ಸ್ ಚಿತ್ರದಲ್ಲಿ ಅತಿಯಾಗದಂತೆ ಮಿತಿಯಾಗಿ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ ನಿರ್ದೇಶಕರು.

  ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಫೈಟ್ಸ್. ರವಿವರ್ಮ ಅವರ ಸಾಹಸ ಸನ್ನಿವೇಶಗಳು ಸಂದರ್ಭಕ್ಕೆ ತಕ್ಕಂತಿವೆ. ಆದರೆ ಕ್ಲೈಮ್ಯಾಕ್ಸ್ ಸನ್ನಿವೇಶದ ಫೈಟ್ ‌ ಅತಿಯಾಯಿತೇನೋ ಅನ್ನಿಸುತ್ತದೆ. ಉಳಿದಂತೆ ಚಿತ್ರದಲ್ಲಿರುವ ಆರು ಫೈಟ್‌ಗಳು ನಿಜಕ್ಕೂ ಭರ್ಜರಿ ಧಮಾಕಾ. ಕೆಲವು ಫೈಟಿಂಗ್ ಸನ್ನಿವೇಶಗಳಲ್ಲಿ ವಿ ಹರಿಕೃಷ್ಣ ಅವರ ಹಿನ್ನೆಲೆ ಸಂಗೀತವೇ ಮಿಂಚುತ್ತದೆ.

  ನೃತ್ಯ ಸಂಯೋಜಕರಾಗಿರುವ ಹರ್ಷ ಅವರು ಯಾಕೋ ಏನೋ ಹಾಡುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇಡೀ ತಮ್ಮ ಗಮನವನ್ನು ನಿರ್ದೇಶನದ ಕಡೆಗೆ ನೆಟ್ಟಿರುವುದು ಎದ್ದು ಕಾಣುತ್ತದೆ. ವಿಚಿತ್ರ ಪದಗಳಲ್ಲಿ ಹೆಣೆದಿರುವ ಅರ್ಥವೇ ಇಲ್ಲದ ಒಂದು ಹಾಡು ಭಿನ್ನ ಪ್ರಯತ್ನ ಎನ್ನಬಹುದು. ವಿ ಹರಿಕೃಷ್ಣ ಅವರ ಸಂಗೀತ ದಲ್ಲಿ ಅಬ್ಬರವಿಲ್ಲ. ಮೀಡಿಯಮ್ ಪಿಚ್‌ನಲ್ಲಿ ಸಾಗುವ ಹಾಡುಗಳು ಕತೆಯ ಓಟಕ್ಕೆ ಅತ್ತಲ್ಲಿ ಬ್ರೇಕ್ ಹಾಕುತ್ತವೆ.

  ದರ್ಶನ್ ತಮ್ಮ ಸಿಸಿಬಿ ಪೊಲೀಸ್ ಪಾತ್ರವನ್ನು ಆಸ್ವಾದಿಸಿದ್ದಾರೆ. ಮಾಸ್ ಪ್ರೇಕ್ಷಕರನ್ನು ಸೆಳೆಯಲು ತಮ್ಮ ಎಂದಿನ ಮಾಸ್ ಇಮೇಜನ್ನೂ ಉಳಿಸಿಕೊಂಡಿರುವುದು ವಿಶೇಷ. ಸಕಲೇಶಪುರದಲ್ಲಿ ಹಾಡೊಂದರ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆಯಲ್ಲಿದ್ದಾಗಲೇ ದರ್ಶನ್ ಬಂಧನಕ್ಕೊಳಗಿದ್ದನ್ನು ಇಲ್ಲಿ ಸ್ಮರಿಸಬಹುದು. ದರ್ಶನ್ ಜೈಲುವಾಸದ ಬಳಿಕ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರೂ ಅದರ ನೆರಳು ಎಲ್ಲೂ ಬೀಳದಂತೆ ಲವಲವಿಕೆಯಿಂದ ಕಾಣಿಸಿದ್ದಾರೆ.

  ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯಗೆ ಇದು ಚೊಚ್ಚಲ ಚಿತ್ರ. ಮಾತಿಗಿಂತಲೂ ಮೂಕಾಭಿನಯಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಸಲೀಸಾಗಿ ನಿಭಾಯಿಸಿದ್ದಾರೆ. ಇನ್ನು ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ಭಾವನಾ ಗ್ಲಾಮರ್ ಪಾತ್ರಕ್ಕೆ ಸಂಪೂರ್ಣ ನ್ಯಾಯಸಲ್ಲಿಸಿದ್ದಾರೆ. ಚಿತ್ರದಲ್ಲಿ ಅವರ ಮಾಗಿದ ಮೈಮಾಟ ಪಡ್ಡೆಗಳಿಗೆ ಪುಳಕ. ದೀಪಿಕಾ ಕಾಮಯ್ಯ ಅಪ್ಪನಾಗಿ ರಮೇಶ್ ಭಟ್ ಪಾತ್ರದಲ್ಲಿ ವಿಶೇಷವಿಲ್ಲ. ದರ್ಶನ್‌ರ ಸಾಕು ತಾಯಿಯಾಗಿ ಸುಮಿತ್ರಾ, ಪೊಲೀಸ್ ಪಾತ್ರದಲ್ಲಿ ಸೃಜಯ್ ಲೋಕೇಶ್, ಖಳನಟನಾಗಿ ಅರುಣ್ ಸಾಗರ್ ಗಮನಸೆಳೆಯುತ್ತಾರೆ.ನಟ ಯಶಸ್ ಸೂರ್ಯ ಈ ಚಿತ್ರದಲ್ಲಿ ಗಮನಾರ್ಹವಾಗಿ ಪಾತ್ರವನ್ನು ಪೋಷಿಸಿದ್ದಾರೆ.

  ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಚ್.ಸಿ.ವೇಣು ಅವರ ಛಾಯಾಗ್ರಹಣ. ಬಹುತೇಕ ಚಿತ್ರೀಕರಣ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದಿದ್ದು ಅದನ್ನು ಸೆರೆಹಿಡಿಯುವಲ್ಲಿ ವೇಣು ಕ್ಯಾಮೆರಾ ಕೈಚಳಕ ಕಣ್ಮನ ಸೆಳೆಯುತ್ತದೆ. ಒಳಾಂಗಣ, ಹೊರಾಂಗಣ ಛಾಯಾಗ್ರಹಣ ಎರಡರಲ್ಲೂ ಮಿಂಚಿದ್ದಾರೆ ವೇಣು. ಬಿ.ಮಹದೇವು ಮತ್ತು ಮನುಗೌಡ ಅವರ ಅದ್ದೂರಿ ನಿರ್ಮಾಣ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುವ ಅಂಶ.

  English summary
  Read Challenging Star lead Kannada movie Chingari review. A Harsha the famous choreographer has penned the story, screenplay and director of the film. V Harikrishna music and HC Venu camera, Deepu S Kumar Edition, Ravi Verama stunts, Mohan B Kere is the art director of the film. Yoganand has penned the dialogues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X