For Quick Alerts
  ALLOW NOTIFICATIONS  
  For Daily Alerts

  ಅರಳದೆ ಬಾಡುವ ವಾಸನಾರಹಿತ ಜಾಜಿ ಮಲ್ಲಿಗೆ

  By Super
  |

  Ajai Rao and Gowri Munjal
  ಅಜಯ್ ರಾವ್ ಮತ್ತು ೌರಿ ಮುಂಜಾಲ್ ಪ್ರಮುಖ ಭೂಮಿಕೆಯಲ್ಲಿರುವ ಆರ್ ಅನಂತರಾಜು ನಿರ್ದೇಶನದ 'ಜಾಜಿ ಮಲ್ಲಿಗೆ' ಎಂಬ ಎರಡೂಮುಕ್ಕಾಲು ಗಂಟೆಯ ಮ್ಯಾರಥಾನ್ ಪ್ರೇಮಕಾವ್ಯ ಕೊನೆಯ ಕಾಲು ಗಂಟೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಇದು ನೀರಸವಾಗಿ ನಿರೂಪಿಸಿರುವ ಅನಂತರಾಜು ಮತ್ತು ಅಷ್ಟೇ ನೀರಸವಾಗಿ ಅಭಿನಯಿಸಿರುವ ಅಜಯ್ ರಾವ್ ಅವರ ವಿಫಲತೆಗೆ ಹಿಡಿದ ಕನ್ನಡಿ.

  * ಪ್ರಸಾದ ನಾಯಿಕ

  ಘಮಘಮಿಸುತ್ತ ಅರಳಬೇಕಾದ ಜಾಜಿ ಮಲ್ಲಿಗೆಯೆಂಬ ಪ್ರೀತಿಯ ಹೂವನ್ನು ಅನಂತರಾಜು ಸುವಾಸನೆ ಬೀರದೆ ಬಾಡಿಹೊಗುವಂತೆ ಮಾಡಿದ್ದಾರೆ. ತಮಿಳಿನಲ್ಲಿ ಯಶಸ್ವಿಯಾಗಿದ್ದ 'ದೇವತೈ ಕಂಡೇನ್‌' ಚಿತ್ರವನ್ನು ಭಟ್ಟಿ ಇಳಿಸಿದ್ದರೂ ಜಾಳುಜಾಳು ನಿರೂಪಣೆಯಿಂದ ಚಿತ್ರ ಬೋರು ಹೊಡೆಸುತ್ತದೆ. ಆದರೆ, ಕೊನೆಯ ಹದಿನೈದು ನಿಮಿಷ ಮಾತ್ರ ಸೂಪರ್. ಕ್ಲೈಮ್ಯಾಕ್ಸ್ ಸೀನ್ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಕೊನೆಯ ಹದಿನೈದು ನಿಮಿಷಗಳಲ್ಲಿ ಇನ್ನೂ ಐದು ನಿಮಿಷ ತೆಗೆದುಹಾಕಿದ್ದರೆ ಕ್ಲೈಮ್ಯಾಕ್ಸ್ ಇನ್ನೂ ಬಿಗಿಯಾಗಿರುತ್ತಿತ್ತು.

  ಆ ಕೊನೆಯ ಹದಿನೈದು ನಿಮಿಷದಲ್ಲಿ ಮಾತ್ರ ಅಜಯ್ ಪಾತ್ರಕ್ಕೆ ಜೀವ ತುಂಬಿರುವುದು ವಿಪರ್ಯಾಸ. 'ತಾಜ್ ಮಹಲ್' ಚಿತ್ರದಲ್ಲಿ ಗಳಿಸಿಕೊಂಡಿದ್ದನ್ನೆಲ್ಲ 'ಜಾಜಿ ಮಲ್ಲಿಗೆ'ಯಲ್ಲಿ ಅಜಯ್ ಕಳೆದುಕೊಂಡಿದ್ದಾರೆ. ಅಜಯ್ ಡೈಲಾಗ್ ಒಪ್ಪಿಸುವ ರೀತಿ ಯಾವ ಪರಿ ಸತ್ವ ಕಳೆದುಕೊಂಡಿದೆಯೆಂದರೆ ಪಕ್ಕದಲ್ಲಿ ಕೋಮಲ್ ಪಾತ್ರವಿರದಿದ್ದರೆ ಇನ್ನೂ ಅಸಹನೀಯವಾಗಿರುತ್ತಿತ್ತು. ಹಾವವಿಲ್ಲ, ಭಾವವಿಲ್ಲ. ಕೊನೆಗೆ ಸರಿಯಾಗಿ ಕಣ್ಣೀರು ಸುರಿಸಲೂ ಅಜಯ್ ಗೆ ಬರುವುದಿಲ್ಲ. ಅಜಯ್ ಮಿಂಚಿದ್ದು ಕೊನೆಯ ದೃಶ್ಯ ಮತ್ತು ಹೊಡೆದಾಟದ ಸೀನುಗಳಲ್ಲಿ ಮಾತ್ರ.

  ಕಣ್ಣಿಗೆ ಹಬ್ಬದಂತಿರುವ ವಿದೇಶದಲ್ಲಿ ಚಿತ್ರಿಸಿರುವ ಸಾಧು ಕೋಕಿಲಾ ಸಂಗೀತ ನಿರ್ದೇಶನದ ಎರಡು ಹಾಡುಗಳು (ಅದರಲ್ಲೊಂದು ಟ್ಯೂನ್ ಹಿಂದಿಯಿಂದ ಕದ್ದಿದ್ದು), ಪಳನಿರಾಜ್ ಸಂಯೋಜಿಸಿರುವ ಹೊಡೆದಾಡತ ದೃಶ್ಯ, ಕಾಮಿಡಿ ಮತ್ತು ಪೋಷಕ ಪಾತ್ರದಲ್ಲಿ ಜೀವ ತುಂಬಿರುವ ಕೋಮಲ್ ಇವಿಷ್ಟೇ ಚಿತ್ರದಲ್ಲಿ ಸ್ವಲ್ಪವಾದರೂ ಸುವಾಸನೆ ಉಳಿಸಿವೆ. ಅನಂತರಾಜುವೇ ಬರೆದಿರುವ ಸಂಭಾಷಣೆ ಅಲ್ಲಲ್ಲಿ ಮಿಂಚುತ್ತದಾದರೂ ಚಿತ್ರವನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿದೆ.

  ಚಿತ್ರಕಥೆಯಲ್ಲಿಯೂ ಅಂಥಾ ವಿಶೇಷವೇನೂ ಇಲ್ಲ. ಜಾಜಿ ಮಲ್ಲಿಗೆಯಂಥ ಅರಳಿನಿಂತ ಸುಂದರ ಹುಡುಗಿ. ಅವಳ ಪ್ರೀತಿಗಾಗಿ ಹಂಬಲಿಸುವ ಮೂರು ಕಾಮಿಡಿಯನ್ ಗಳು ಮತ್ತು ಒಬ್ಬ ಚಾಯ್ ವಾಲಾ. ಕೊನೆಗೆ ಆಕೆ ಒಲಿಯುವುದು ಚಾಯ್ ವಾಲಾನಿಗೇ. ಮೊದಲು ಪ್ರೀತಿಯ ಹಂಗಿಗೆ ಬಿದ್ದು ನಂತರ ಸ್ಟೇಟಸ್ಸಿನ ಅರವಾಗಿ ನಾಯಕಿ ಬೇರೆಯವನನ್ನು ಒಪ್ಪಿಕೊಳ್ಳುವ ಹೊತ್ತಿಗೆ ನಾಯಕ ಪ್ರೀತಿಯ ಗೆಲುವಿಗಾಗಿ ಕೋರ್ಟ್ ಮೆಟ್ಟಿಲೇರುತ್ತಾನೆ. ಮುಂದೇನಾಗುತ್ತದೆಂದು ತಾಳ್ಮೆಯಿದ್ದರೆ ಚಿತ್ರದ ಕೊನೆಯವರೆಗೂ ಕುಳಿತು ನೋಡಬಹುದು.

  ಬುಲೆಟ್ ಪ್ರಕಾಶ್, ಕೋಮಲ್ ಮತ್ತು ನಾಗಶೇಖರ್ ಜೋಡಿಯ ಹಾಸ್ಯ ಅಪಹಾಸ್ಯವಾಗಿದೆ, ಕೆಲವೆಡೆ ಅಸಹ್ಯವಾಗಿದೆ. ಲಂಗೋಟಿ ಹಗ್ಗದ ಹಾಸ್ಯ ಪ್ರಸಂಗ ನಗು ಬರಿಸುವ ಬದಲು ವಾಕರಿಕೆ ಹುಟ್ಟಿಸುತ್ತದೆ. ಹಾಸ್ಯ ಸನ್ನಿವೇಶಗಳನ್ನು ರೂಪಿಸುವಲ್ಲಿ ನಮ್ಮ ನಿರ್ದೇಶಕರು ಇನ್ನೂ ಅಪ್ಡೇಟ್ ಆಗಿಲ್ಲವೆಂಬುದಕ್ಕೆ ಈ ಹಾಸ್ಯ ಸನ್ನಿವೇಶಗಳೇ ಸಾಕ್ಷಿ.

  ನಾಯಕಿ ಗೌರಿ ಮುಂಜಾಲ್ ತಾವೆಂಥ ನಟಿಯೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸುಂದರ ಮುಖ, ದಷ್ಟಪುಷ್ಟ ಅಂಗಸೌಷ್ಟವ ಮಾತ್ರ ಅವರ ಆಸ್ತಿ. ಅಭಿನಯ ನಾಸ್ತಿ. ತುಟಿಚಾಲನೆಯಷ್ಟೇ ಅಭಿನಯ, ಭಾವಾಭಿನಯ ಮಾಯ. ನಾಗಕಿರಣ್ ಮತ್ತು ವಿಶೇಷ ಪಾತ್ರದಲ್ಲಿ ಬರುವ ಜಯಮಾಲಾ ಹೇಳಿಕೊಟ್ಟಷ್ಟು ಡೈಲಾಗ್ ಹೇಳಿ ಮುಗಿಸಿದ್ದಾರೆ. ಯಶಸ್ವಿಯಾದ ಚಿತ್ರ ರಿಮೇಕ್ ಆದರೂ ಪ್ರೇಕ್ಷಕರ ಮನಸಿಗೆ ತಟ್ಟಲು ವಿಫಲವಾಗುತ್ತದೆಂದರೆ ಇದು ನಿಜಕ್ಕೂ ಚಿಂತಿಸಬೇಕಾದ ವಿಷಯ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X