For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಭಿನಯದ 'ಅಭಯ್' ಚಿತ್ರ ವಿಮರ್ಶೆ

  |

  ಕೇಳ್ರಪ್ಪೋ ಕೇಳಿ, ಇದು ಕನ್ನಡ ಚಿತ್ರರಂಗದ ಪಾಲಿನ ಆಗಂತುಕ ಜನಾರ್ದನ್ ಮಹರ್ಷಿ ಬರೆದ ಕತೆ, ಎ.ಸಿ.ರೂಮಿನಲ್ಲಿ ಕುಳಿತು ರಚಿಸಿದ ಚಿತ್ರಾನ್ನ ಚಿತ್ರಕತೆ! ಇಲ್ಲಿ ನಾಯಕ 'ಬಿಂದಾಸ್"ಆಗಿ ಫೈಟ್ ಮಾಡುತ್ತಾನೆ. ನಾಯಕಿಯ ಜತೆ 'ಬೊಂಬಾಟ್" ಆಗಿ ಕುಣಿಯುತ್ತಾನೆ. ರೌಡಿಗಳಿಂದ ಬಜಾವ್ ಮಾಡುತ್ತಾನೆ. ಹೋರಾಡಿ, ಹಾರಾಡಿ, ರಾಡಿ ಮಾಡುವ ರೌಡಿಗಳನ್ನು ರೋಡಿಗೆ ತಂದು ನಿಲ್ಲಿಸುತ್ತಾನೆ. ಆಕೆ ಕಷ್ಟದಲ್ಲಿರುತ್ತಾಳೆ, ಈತ ಕಾಪಾಡುತ್ತಾನೆ. ಆಕೆ ನಗುತ್ತಾಳೆ, ಈತ ಗುನುಗುತ್ತಾನೆ. ಇಬ್ಬರೂ ಸೇರಿ ಫಾರಿನ್ ಮಧ್ಯೆ ಮಿನುಗುತ್ತಾರೆ...ಕೊನೆಗೆ ಮತ್ತೆ ರಗಳೆ, ರಾಮಾಯಣ, ಮಹಾಭಾರತ, ಮಹರ್ಷಿ ಮಿಸಲ್‌ಬಾಜಿ ಮಹಾತ್ಮೆ...

  ಈತ ಹಿಂದೆ ಮಾಡಿದ್ದೂ ಇದನ್ನೇ. ತೆಲುಗಿನ ಹಲವು ಹಿಟ್ ಚಿತ್ರಗಳನ್ನು ಹಿಂದೆ ಮುಂದೆ ಮಾಡಿ, ಅದಕ್ಕೆ ಒಂದಷ್ಟು ಉಪ್ಪು, ಹುಳಿ, ಖಾರ ಸೇರಿಸಿ, ಮತ್ತಷ್ಟು ಕರಾಮತ್ತು ಬೆರೆಸಿ ನಿರ್ದೇಶಕರ ಕೈಗಿಡುತ್ತಾನೆ. ಅವರು ಅದನ್ನೇ ಪರಮಾನ್ನ ಎಂದುಕೊಂಡು ಸಿನಿಮಾ ಮಾಡುತ್ತಾರೆ. ಕೊನೆಗೆ ಪ್ರೇಕ್ಷಕರ ಮುಂದೆ ಬಂದಾಗ ಅದು ತಿಂಗಳು ತುಂಬಿದ ತಂಗಳಾಗಿರುತ್ತದೆ. ಅಲ್ಲಿಗೆ ಉದಯಾವಾಯಿತು ನಮ್ಮ...

  ಅಭಯ್ ಚಿತ್ರದ್ದೂ ಇದೇ ಕತೆ. ಜನಾರ್ದನ್ ಮಹರ್ಷಿ ಎಂಬ ರೀಮಿಕ್ಸ್ ರಾಜಾ ಇಲ್ಲಿ ಮಾಡಿದ್ದೇ ಮಾಟ, ಊದಿದ್ದೇ ಶಂಖ, ಆಡಿದ್ದೇ ಆಟ, ಕಿವಿ ಮೇಲೆ ಇಟ್ಟಿದ್ದೇ ಲಾಲ್‌ಬಾಗ್ ಸಸ್ಯತೋಟ...

  ನಿರ್ದೇಶಕ ಮಹೇಶ್ ಬಾಬು ಶಾಟ್ ಇಡುವಲ್ಲಿ, ಪಾತ್ರದಿಂದ ಕೆಲಸ ತೆಗೆಸುವಲ್ಲಿ, ಲೊಕೇಶನ್ ಹುಡುಕುವಲ್ಲಿ ಎತ್ತಿದ ಕೈ. ಆಕಾಶ್ ಚಿತ್ರದಲ್ಲೇ ಅದನ್ನು ನಿರೂಪಿಸಿದ್ದಾರೆ. ಆದರೆ ಇಲ್ಲಿ ಇಡೀ ಸಿನಿಮಾವನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸುವಲ್ಲಿ ಸೋತಿದ್ದಾರೆ.

  ಮೊದಲಾರ್ಧ ನೀರಸ, ದ್ವಿತಿಯಾರ್ಧ ದ್ರಾಕ್ಷೀರಸ, ಈ ನಡುವೆ ಒಂದಷ್ಟು ಸರಸ, ವಿರಸ, ಕಸ, ಪಸ...ದರ್ಶನ್ ಎಂದಿನಂತೇ ಚಾಲೆಂಜಿಂಗ್ ಆಗಿ ನಟಿಸಿದ್ದಾರೆ. ನಗಿಸುತ್ತಾರೆ. ಜಿಗಿಯುತ್ತಾರೆ, ಝಗಮಗಿಸುತ್ತಾರೆ. ಆದರೆ ಬಟಾಬಯಲಲ್ಲಿ ಜಿಗಿದರೆ ಪರವಾಗಿಲ್ಲ, ಮನೆ ಒಳಗೆ ನಿಂತು ಜಿಗಿದರೆ ಒಂದಲ್ಲಾ ಒಂದು ಬಾರಿ ತಲೆಗೆ ಚಾವಣಿ ತಗುಲುವ ಸಾಧ್ಯತೆ ಇರುತ್ತದೆ. ಇದು ದರ್ಶನ್‌ಗೆ ಗೊತ್ತಾದರೆ ಒಳ್ಳೆಯದು...

  ಆಮದು ತಾರೆ ನಾಯಕಿ ಆರತಿ ಠಾಕೂರ್‌ಗೆ ನಟನೆ ಎಂಬ ಮೂರಕ್ಷರ ಬಿಟ್ಟು ಉಳಿದದ್ದೆಲ್ಲಾ ಗೊತ್ತು. ಒಣಗಿದ ಜಾಲಿ ಮರಕ್ಕೆ ರೇಷ್ಮೆ ಸೀರೆ ಉಡಿಸಿ, ಸಿಂಗಾರ ಮಾಡಿ, 'ಆರತಿ" ಎತ್ತಿದರೆ ಹೇಗಿರುತ್ತೆ ಹೇಳಿ? ಆ ರತಿಯೇ ಧರೆಗಿಳಿದಂತೆ...

  ಹರಿಕೃಷ್ಣ ಸಂಗೀತದಲ್ಲಿ ಹೊಸತನ ಕಾಣಿಸುವುದಿಲ್ಲ. ಹೆಚ್ಚಿನ ಹಾಡುಗಳು ಫಾರಿನ್‌ನಲ್ಲೇ ಚಿತ್ರೀಕರಣಗೊಂಡಿದೆ. ಅದು ಕಣ್ಣಿಗಷ್ಟೇ ತಂಪು ನೀಡುತ್ತದೆ. ಛಾಯಾಗ್ರಹಣದಲ್ಲಿ ವಿಶೇಷತೆ ಇಲ್ಲ. ಸಂಕಲನ ಟಿವಿ ಸೀರಿಯಲ್‌ಗಳಿಗೆ ಸವಾಲು ಹಾಕುತ್ತದೆ. ಓಂ ಪ್ರಕಾಶ್ ಕಾಮಿಡಿ ವಿಚಿತ್ರ, ವಿತಂಡ ಹಾಗೂ ವಿಷಣ್ಣ. ಓಂ ಹೇಳುವ ಡೈಲಾಗ್ ಮಾತ್ರ ಇಷ್ಟವಾಗುತ್ತಣ್ಣ. ಕೆನ್ನೆಗೆ ಹೊಡೆತ ತಿನ್ನುವುದು ಹಳೇ ಜಮಾನದ ಹಾಸ್ಯಕಲ್ಪನೆ.

  ವಿಲನ್ ಪ್ರದೀಪ್ ರನಾವತ್ ಭಯ ಹುಟ್ಟಿಸುವ ಬದಲು ಮರುಕ ಹುಟ್ಟಿಸುತ್ತಾರೆ. ವಿಲನ್ ಎಂದರೆ ವಿಲವಿಲ ಎನ್ನುವ ಮ್ಯಾನ್ ಎಂದುಕೊಂಡಿದ್ದರೆ ಅದು ಶುದ್ಧ ಸುಳ್ಳು. ಉಳಿದಂತೆ ಯಾವ ಪಾತ್ರವೂ ಸಿನಿಮಾ ನೋಡಿ ಹೊರಬಂದ ನಂತರ ತಲೆಯಲ್ಲಿ ಉಳಿಯುವುದಿಲ್ಲ. ಅಕಸ್ಮಾತ್ ಅಭಯ್ ನೋಡಿ ಭಯವಾದರೆ ಅದಕ್ಕೆ ನೀವೇ ಜವಾಬ್ದಾರರು!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X