»   »  ಸೆಲ್ಯೂಟ್: ಮತ್ತೊಂದು ಪೊಲೀಸ್ ಸ್ಟೋರಿ

ಸೆಲ್ಯೂಟ್: ಮತ್ತೊಂದು ಪೊಲೀಸ್ ಸ್ಟೋರಿ

By: *ನಕ್ಷತ್ರಿಕ
Subscribe to Filmibeat Kannada

ಮತ್ತೊಂದು ಪೊಲೀಸ್ ಸ್ಟೋರಿ...ಕನ್ನಡದಲ್ಲಿ ಕಳ್ಳ ಪೊಲೀಸ್ ಆಟದ ಕತೆ ಅದೆಷ್ಟೋ ಬಂದಿವೆ. ಪೊರ್ಕಿ ವರ್ಸಸ್ ಖಾಕಿ ಸಂಬಂಧೀ ಚಿತ್ರಕತೆಗಳು ಲೆಕ್ಕವಿಲ್ಲದಷ್ಟು, ಬೇಸರ ಮೂಡಿಸುವಷ್ಟು ಬಂದುಹೋಗಿವೆ. ಸಾಯಿಕುಮಾರು, ಥ್ರಿಲ್ಲರ್ ಮಂಜು, ಅಷ್ಟೇ ಏಕೆ ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್ರು ದೇವಣ್ಣ, ಶಶಿಕುಮಾರು, ವಿನೋದ್ ಆಳ್ವಾ, ಚರಣ್ ರಾಜುಮೊದಲಾದವರು ಸೂಟು, ಬೂಟು, ಬೆಲ್ಟು, ಹ್ಯಾಟಿನಿಂದಲೇ ಫೇಮಸ್ ಆಗಿದ್ದಾರೆ.ಕೊನೆ ಕೊನೆಗೆ ಕನಸಿನ ರಾಣಿ ಮಾಲಾಶ್ರೀ ಕೂಡ ಚಾಮುಂಡಿ, ದುರ್ಗಿ ಎನ್ನುತ್ತಾಕಳ್ಳರಿಗೆ 'ಬೇಡಿ" ತೊಡಿಸಿದ್ದಾರೆ...

ಇತ್ತೀಚೆಗೆ ಆ ಥರದ ಆರಕ್ಷಕರ ಕುರಿತ ಚಿತ್ರ ಬಂದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಂಥದ್ದೊಂದು ದುಸ್ಸಾಹಸಕ್ಕೆ ಯಾರೊಬ್ಬರೂ ಕೈ ಹಾಕಿರಲಿಲ್ಲ. ಆದರೆ ಬಿ.ಸಿ.ಪಾಟೀಲ್ ಅದೇ ಮಾದರಿಯ ಸಿನಿಮಾ ಮಾಡಿದ್ದಾರೆ. ಇಲ್ಲಿನ ಪುಟ್ಟ ಬದಲಾವಣೆ ಎಂದರೆ ಇದು ಅವರ ಸ್ವಂತಕತೆ, ಬೇಕಾದರೆ ಆತ್ಮಕತೆ ಎನ್ನಬಹುದು... ಪೊಲೀಸ್ ಅಧಿಕಾರಿಯಾಗಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಬ್ಬ ನಿಷ್ಠಾವಂತ ಎಸಿಪಿ, ಮುಂದೊಂದು ದಿನ ರಾಜಕೀಯಕ್ಕೆ ಧುಮುಕಿ, ಜ್ವಾಲಾಮುಖಿಯಾಗುತ್ತಾನೆ.

ಈ ನಡುವೆ ಬರುವ ಕಷ್ಟ,ನಷ್ಟ, ಇಷ್ಟ, ಭ್ರಷ್ಟ ಕತೆಯ ಒಟ್ಟು ಮೊತ್ತವೇ ಸೆಲ್ಯೂಟ್. ಪಾಟೀಲರು ಚಿತ್ರಕತೆ ಹಾಗೂ ಸಂಭಾಷಣೆಯ ಬಗ್ಗೆ ತೆಲಿ ಕೆಡಿಸಿಕೊಂಡಿಲ್ರೀ... ಏನಿದ್ದರೂ ಕತಿ ಹೇಳಾಕ್ ಹೊಂಟ್ಯಾರ್ರೀ... ನಾಯಕಿ ಬರ್ತಾಳ; ಪೊಲೀಸ್ ಆಗಿರ್ತಾಳ, ಒಳಗೊಳಗೇ ಪಾಟೀಲ್ರನ್ನಲವ್ವ್ ಮಾಡ್ತಾಳ... ಈ ಮಧ್ಯೆ ಒಂದಷ್ಟು ಅಣ್ಣ ತಂಗಿ ಸೆಂಟಿಮೆಂಟೂರೀ... ಒಟ್ಟಾರೆ ಪಾಟೀಲ್ ಇಲ್ಲಿ ಬದುಕಿನ ಕತೆಗೆ ಸುಣ್ಣ ಬಣ್ಣ ಬಳೆದಿದ್ದಾರೆ.

ಪಾಟೀಲ್ ಅಭಿನಯದ ಮಟ್ಟಿಗೆ ಮಾತಿಲ್ಲ, ಕತೆಯಿಲ್ಲ. ದೂರ ನಿಂತರೆ ಕೌರವ, ಹತ್ತಿರ ಬಂದರೆ ಸುಗ್ರೀವ ಫೈಟ್‌ನಲ್ಲಿ ಪೈಲ್ವಾನ, ಡ್ಯಾನ್ಸ್‌ನಲ್ಲಿ ತಿಲ್ಲಾನ, ಒಟ್ಟಾರೆ ಪಾಟೀಲ್ರು ತಾನಿ ತಂದಾನ... ನಾಯಕಿ ಅಶ್ವಿನಿ ಪೊಲೀಸ್ ಪಾತ್ರಕ್ಕೆ ಸ್ಯೂಟ್ ಆಗ್ತಾಳೆ, ನಿಜ. ಆದರೆ, ಒಂದೇ ಸಮನೆ ಮೈಮೇಲೆ ಮಾಲಾಶ್ರೀ, ಉಮಾಶ್ರೀ, ಊರ್ವಶಿ ಬಂದಂತೆ ಆಡುತ್ತಾಳೆ.

ಛಾಯಾಗ್ರಹಣದಲ್ಲಿ ಹೊಸತನ ಇಲ್ಲದಿದ್ದರೂ ಅದು ತನ್ನ ಕೆಲಸವನ್ನು ನಿಯತ್ತಾಗಿ ಮಾಡಿದೆ. ಸಾಯಿ ಕಾರ್ತಿಕ್ ಸಂಗೀತದಲ್ಲಿ ಮೂರು ಹಾಡು ಮುದ್ದಾಗಿವೆ. ಕೆಂಡಕಾರುವಕಣ್ಣು, ದ್ವೇಷಜ್ವಾಲೆಯಿಂದ ಕಂಗೆಟ್ಟ ಕಾರ್ಮೋಡದಂಥ ಮುಖ, ಅದಕ್ಕೆ ತಕ್ಕ ಆರಡಿ ದೇಹ, ದೇಹಕ್ಕೆ ತಕ್ಕ ತೂಕ, ತೂಕಕ್ಕೆ ತಕ್ಕ ಮಾತುಗಾರಿಕೆ, ಎದೆಗಾರಿಕೆಯಿಂದ ಗಮನ ಸೆಳೆಯುತ್ತಾರೆ ಖಳನಟ ವಿಜಯ್ ಕೌಂಡಿನ್ಯ. ಹೌದು, ಕನ್ನಡದಲ್ಲಿ ಖಳನಟರಿಗೆ ಕೊರತೆಯಿದೆ ಎಂಬ ಮಾತನ್ನು ವಿಜಯ್ ನಿಜವಾಗಿಯೂ ಸುಳ್ಳಾಗಿಸಿದ್ದಾರೆ.

ಎಮ್.ಎಲ್.ಎ. ಪಾತ್ರದಲ್ಲಿ ನಿರ್ಮಾಪಕ, ನಿರ್ಮಾಪಕರ ಆಪದ್ಬಾಂಧವ ಕೆ.ವಿ.ನಾಗೇಶ್‌ಕುಮಾರ್ ಮುಲು ಮುಲು ಎನ್ನುತ್ತಾರೆ. ಸಿಎಂ ಪಾತ್ರದಲ್ಲಿ ಅಶೋಕ್ ಖೇಣಿ ಮೌನಸಂಗ್ರಾಮ ಮಾಡುತ್ತಾರೆ. ಸತ್ಯಜಿತ್, ಲಯೇಂದ್ರ, ಬಿ.ವಿ.ರಾಧಾ ತಮ್ಮ ಕೆಲಸವನ್ನು ಬಿಟ್ಟು ಬೇರೇನೂ ಮಾಡಿಲ್ಲ. ಡಿಂಗ್ರಿ ನಾಗರಾಜ್ ಹಾಸ್ಯ ಹಾಸ್ಯಾಸ್ಪದವಾಗಿ ಎದೆಯ ಕದ ತಟ್ಟುತ್ತದೆ. ಕಣ್ಣಲ್ಲಿ ನೀರು ಉಕ್ಕಿ ಬರುತ್ತದೆ. ರಚನಾ ಮೌರ್ಯಾ ಐಟಮ್ ಸಾಂಗಿನಲ್ಲಿ ಘಮ್ ಘಮ್... ಒಟ್ಟಾರೆ ಮತ್ತೊಂದು ಪೊಲೀಸ್ ಪರ್ವ ನೋಡಬೇಕು, ನೋಡಿ ನಲಿಯಬೇಕು, ನಲಿದು ಉಲಿಯಬೇಕು ಅಂತಿದ್ದರೆ ಸೆಲ್ಯೂಟ್ ನೋಡ್ರೀ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada