»   » ಪಿ ಎನ್ ಸತ್ಯ-ಪೂಜಾ ಗಾಂಧಿ 'ಪಾಗಲ್' ಚಿತ್ರವಿಮರ್ಶೆ

ಪಿ ಎನ್ ಸತ್ಯ-ಪೂಜಾ ಗಾಂಧಿ 'ಪಾಗಲ್' ಚಿತ್ರವಿಮರ್ಶೆ

Posted By:
Subscribe to Filmibeat Kannada
PN Satya Pooja gandhi
ಮೆಜೆಸ್ಟಿಕ್ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಪಿ ಎನ್ ಸತ್ಯಾ, ಮಾಸ್ ಕಥೆಯನ್ನು ಲಾಂಗು ಮಚ್ಚುಗಳಿಂದ ವೈಭವೀಕರಿಸಿದ ಸಿನಿಮಾ ನೀಡುವ 'ಮಾಸ್ ಡೈರೆಕ್ಟರ್' ಎಂದೇ ಫೇಮಸ್ ಆದವರು. ಇದೀಗ ಕನ್ನಡದಲ್ಲಿ ನಂಬರ್ ಒನ್ ಪಟ್ಟಕ್ಕೆ ಪುನೀತ್ ಗೆ ಸ್ಪರ್ಧೆ ನೀಡುತ್ತಿರುವ ಏಕೈಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು 'ಮೆಜೆಸ್ಟಿಕ್ ಮೂಲಕ ನಾಯಕನಟ ಮಾಡಿದ್ದೇ 'ಸತ್ಯ'ವಾಗಿಯೂ ಇದೇ ಸತ್ಯ.

ಇಂಥಹ ಸತ್ಯರ ಮನಸ್ಸಿನಲ್ಲಿ ತಾನೂ ನಾಯಕ ನಟ ಆಗಬೇಕೆಂಬ ಕನಸಿತ್ತು ಎಂಬುದು ಪಾಗಲ್ ಚಿತ್ರದ ಮುಹೂರ್ತದಂದು ಜಗತ್ತಿಗೇ ಗೊತ್ತಾಯ್ತು. ನಾಯಕ ನಟರಾಗಿ ಇದು ಸತ್ಯಾರಿಗೆ ಮೊದಲ ಸಿನಿಮಾ ಆದ್ದರಿಂದ ತೀರಾ ಚೆನ್ನಾಗಿ ಮಾಡಬಹುದು ಎಂಬ ಜನರ ಲೆಕ್ಕಾಚಾರ ತಲೆಕೆಳಗಾಗಿದೆ. ನೋಡುವಂತೆ ಮಾಡಿದ್ದಾರೆ ಅಷ್ಟೇ. ಪಾಗಲ್ ಚಿತ್ರ ನೋಡಿದವರು ಪಾಗಲ್ ಆಗುವಂತಿಲ್ಲ ಎಂಬುದು ಖಂಡಿತ ಸಮಾಧಾನದ ಸಂಗತಿಯೇ. ಈ ಮೊದಲು ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೆಶಕರು ಸತ್ಯಾ ಎಂಬುದನ್ನು ಮರೆಯುವಂತಿಲ್ಲ.

ಈ ಚಿತ್ರ ಸತ್ಯಾರ ಎಂದಿನ ವರಸೆಯ ಕಥೆ, ಚಿತ್ರಕಥೆ, ಸಂಭಾಷಣೆ ಹೊಂದಿದೆ. ಅನಾಥ ಹುಡುಗನನ್ನು ಸರಿ ಮಾಡಲು ಹೋದ ಹುಡುಗಿಗೆ ಅವಳ ಫ್ಯಾಮಿಲಿ ಕಡೆಯಿಂದ ಒತ್ತಡ ಬರುತ್ತದೆ. ಕೊನೆಗೆ ಅದು ಪ್ರೀತಿಯ ಹಂತ ತಲುಪುವ ಹೊತ್ತಿಗೆ ಎಂದಿನಂತೇ ಕೌಟುಂಬಿಕ ವಿರೋಧ ವ್ಯಕ್ತವಾಗುತ್ತದೆ. ನಿರ್ದೇಶಕ ಹಾಗೂ ನಾಯಕ ಸತ್ಯ ಕಮ್ ಪಾಗಲ್ ನಾಯಕಿಯನ್ನು ಕೊಲೆ ಮಾಡುತ್ತಾನೆ. ಅದಕ್ಕೆ ಆತ ತನ್ನ ಕೈಯಲ್ಲಿ ಸದಾ ಇಟ್ಟುಕೊಳ್ಳುತ್ತಿದ್ದ ಬ್ಲೇಡನ್ನೇ ಉಪಯೋಗಿಸುತ್ತಾನೆ ಎನ್ನುವುದು ವಿಚಿತ್ರವಾದರೂ 'ಸತ್ಯ'ನಾಣೆಗೂ ಸತ್ಯ.

ಸತ್ಯಾರ ಸ್ನೇಹಿತ ಮುರಳಿಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ ಚೆನ್ನಾಗಿದ್ದು ಹತ್ತರಲ್ಲಿ ಹನ್ನೊಂದಲ್ಲ ಎಂಬಂತಿದೆ. ಆದರೆ ನಿರೂಪಣೆಯಲ್ಲಿ ಅಲ್ಲಲ್ಲಿ ಸೋತಿದ್ದಾರೆ ಸತ್ಯ. ಚಿತ್ರಕಥೆಯನ್ನು ತಕ್ಕ ಮಟ್ಟಿಗೆ ವೇಗವಾಗಿ ಮಾಡಿರುವ ಸತ್ಯ, ಮಧ್ಯೆ ಲವಲವಿಕೆ ಕೂಡ ಇರುವಂತೆ ನೋಡಿಕೊಂಡಿದ್ದಾರೆ. ಒಟ್ಟಾರೆ ಕಥೆ ಹಳಿ ತಪ್ಪಿಲ್ಲ, ಆದರೆ ತುಂಬಾ ಚೆನ್ನಾಗಿದೆ ಅನ್ನುವಂತೆಯೂ ಇಲ್ಲ. ನಾಯಕ ನಟರಾಗಿ ಸತ್ಯರ ಅಭಿನಯ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಪೂಜಾ ಗಾಂಧಿಯ ಗ್ಲಾಮರ್ ಈ ಚಿತ್ರದಲ್ಲಿ ಕಡಿಮೆಯಾಗಿದೆ. ಇದಕ್ಕೂ ಆಕೆ, ಮುಂಗಾರು ಮಳೆಯಂತೆ ಮೇಕಪ್ ದೂರಿದರೆ ಯಾರೂ ಜವಾಬ್ದಾರರಲ್ಲ. ಇನ್ನು ನಟನೆಯೂ ಅಷ್ಟಕಷ್ಟೇ. ಇಷ್ಟು ಚಿತ್ರಗಳಾದರೂ ನಟನೆಯನ್ನು ಕಲಿತಿಲ್ಲ ಎಂದರೆ ಪೂಜಾ ಪ್ರಕಾರ ನಟನೆ ಎಂದರೆ ಅವರು ಮಾಡುತ್ತಿರುವುದೇ ಇರಬೇಕು.

ನಿರ್ದೇಶಕರು ನಾಯಕರಾಗುವುದು, ನಾಯಕರು ನಿರ್ದೇಶಕರಾಗುವುದು ಹೊಸ ಟ್ರೆಂಡೇನಲ್ಲ. ಶಿವಮಣಿ, ಓಂ ಪ್ರಕಾಶ್ ರಾವ್, ಉಪೇಂದ್ರ, ಸುದೀಪ್ ಹೀಗೆ ಪಟ್ಟಿ ದೊಡ್ಡದಿದೆ. ಆದರೆ ಎರಡರಲ್ಲೂ ಸಕ್ಸಸ್ ಪಡೆದವರು ಉಪೇಂದ್ರ ಬಿಟ್ಟರೆ ಯಾರ ಹೆಸರೂ ಥಟ್ಟನೆ ನೆನಪಿಗೆ ಬರುವುದಿಲ್ಲ.

ಸ್ಪೀಡ್ ಬಾಬು ಛಾಯಾಗ್ರಹಣ ಓಕೆ. ಸಂಕಲನವೂ ಚೆನ್ನಾಗಿದೆ. ಕೆ ಎಲ್ ಸ್ವಾಮಿ ಅವರ ಹಳೆ ಹಾಡೊಂದನ್ನು ರೀಮಿಕ್ಸ್ ಮಾಡಿರುವ ವಿ ಮನೋಹರ ಸಂಗೀತ ಕೇಳುವಂತಿದೆ. ಹಾಡುಗಳೂ ಪರ್ವಾಗಿಲ್ಲ. ಒಟ್ಟಿನಲ್ಲಿ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕ ಪಾಗಲ್ ಆಗುವಂತಿಲ್ಲ. ಆದರೆ ಅದನ್ನೇ ಯಶಸ್ಸು ಎಂದು ಹೇಳಲೂ ಆಗುವುದಿಲ್ಲ. (ಒನ್ ಇಂಡಿಯಾ ಕನ್ನಡ)

English summary
Director P N Satya acted and directed movie Pagal Review. Pooja Gandhi is the Heroine. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada