»   »  ಚಿರಂಜೀವಿ ಸಾಹಸ, ಐಂದಿತ್ರಾಜಾಲ ಅದ್ಭುತ

ಚಿರಂಜೀವಿ ಸಾಹಸ, ಐಂದಿತ್ರಾಜಾಲ ಅದ್ಭುತ

Posted By:
Subscribe to Filmibeat Kannada

ಕನ್ನಡದಲ್ಲಿ ಈಗಿರುವ ಆಕ್ಷನ್ ಸ್ಟಾರ್‌ಗಳು ಯಾರ್‍ಯಾರು? ಮಾತು ಮಾತಿಗೆ ಚಾಲೆಂಜ್ ಮಾಡುವ ಅದೇ ದರ್ಶನ್, ಸ್ವಯಂ ಘೋಷಿತ ಆಕ್ಷನ್ ಸ್ಟಾರ್ ಶ್ರೀಮುರುಳಿ, ಭಾಗಶಃ ಎನಿಸಿಕೊಂಡಿರುವ ಪುನೀತ್, ಉದ್ದುದ್ದ ಬೆಳೆಯುತ್ತಿರುವ ಸುದೀಪ್...ಹೀಗೆ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ.ಅದೇ ಪಾತ್ರೆ, ಅದೇ ಕಬ್ಣ ನೋಡಿ ನೋಡಿ ಕನ್ನಡ ಪ್ರೇಕ್ಷಕರು ರೋಸಿ ಹೋಗಿರುವ ಈ ಸಮಯದಲ್ಲಿ ಮತ್ತೊಬ್ಬ ಪೂರ್ಣ ಪ್ರಮಾಣದ ಆಕ್ಷನ್ ಸ್ಟಾರ್ ಹುಟ್ಟಿಕೊಂಡಿದ್ದಾನೆ. ಅವನೇ ಅರ್ಜುನ್ ಸರ್ಜಾ ತಂಗಿಯ ಮಗ ಚಿರಂಜೀವಿ ಸರ್ಜಾ!

*ದೇವಶೆಟ್ಟಿ ಮಹೇಶ್

ವಾಯುಪುತ್ರ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಹೀಗೊಂದು ಶರಾ ಬರೆದರೆ ಆಶ್ಚರ್ಯವಿಲ್ಲ. ನಿಜ, ಅರ್ಜುನ್ ಸರ್ಜಾ ಕನ್ನಡಕ್ಕೆ ಇನ್ನೊಂದು ಆಕ್ಷನ್ ಹುಡುಗನನ್ನು ಕೊಟ್ಟಿದ್ದಾರೆ. ಇಲ್ಲಿ ಚಿರು ಚೀರಾಟ ಮಾಡುವುದಿಲ್ಲ. ಹೆಚ್ಚು ಹಾರಾಡುವುದಿಲ್ಲ. ಮೊದಲಾರ್ಧದ ಒಂದಷ್ಟು ಹೊತ್ತು ಸುಮ್ಮನಿದ್ದು, ಇದ್ದಕ್ಕಿದ್ದಂತೆ ಎದುರಾಳಿಯ ಮೇಲೆ ಕೈ ಬೀಸಿದಾಗ ಇಡೀ ಚಿತ್ರಮಂದಿರ ಒಮ್ಮೆ ವಾರೆವ್ಹಾ ಎನ್ನುತ್ತದೆ. ಆ ಮಟ್ಟಿಗೆ ಮತ್ತು ಅಷ್ಟಕ್ಕೆ ಮಾತ್ರ ಕತೆಯನ್ನು
ಮೆಚ್ಚಬೇಕು. ಒಂದು ಆಕ್ಷನ್ ಚಿತ್ರ ಎಂದ ಮಾತ್ರಕ್ಕೆ ಮೊದಲ ದೃಶ್ಯದಿಂದಲೇ ಹೊಡೆದಾಟ ಇರುವುದು ಗಾಂಧಿನಗರದ ಹಳೇ ಸಿದ್ಧಾಂತ. ಆದರೆ ಇಲ್ಲಿ ಫೈಟ್ ನೋಡಲು ಒಂದು ಗಂಟೆ ಕಾಯಬೇಕು. ಈಗ ಹೊಡೆಯುತ್ತಾನೆ. ಇನ್ನೇನು ಕೈ ಎತ್ತಿದ ಎನ್ನುವ ಹೊತ್ತಿಗೆ ಆ ದೃಶ್ಯ ಕಟ್ ಆಗಿರುತ್ತದೆ...

ವಿಚಿತ್ರ ಅಂದರೆ ಇದರಲ್ಲಿ ಆಕ್ಷನ್ ಬಿಟ್ಟು ಮತ್ತೇನೂ ಇಲ್ಲ. ತಮಿಳು ಸಿನಿಮಾದ ರಿಮೇಕ್ ಆದ ಕಾರಣಕ್ಕೊ ಏನೊ ಗೊತ್ತಿಲ್ಲ. ಜೊತೆಗೆ ಹೇಳುವಂಥ ವಿಶೇಷವೂ ಇಲ್ಲ. ನಾಯಕ ಗೌಡರ ಮಗನಂತೆ. ರಜೆ ಕಳೆಯಲು ಸ್ನೇಹಿತನ ಮನೆಗೆ ಬರುತ್ತಾನಂತೆ. ಅಲ್ಲೊಬ್ಬ ರೌಡಿ ಇರುತ್ತಾನಂತೆ. ಅವನಿಗೆ ಒಂದಷ್ಟು ತಪರಾಕಿ ಕೊಡುತ್ತಾನಂತೆ. ಕೊನೆಗೆ ಆತ ಈತನ ಹಿಂದೆ ಬೀಳುತ್ತಾನಂತೆ. ಮುಂದೇನಂತೆ ಎಂಬ ಪ್ರಶ್ನೆಗೆ ಉತ್ತರ ನಿಮಗೆ ಈಗಾಗಲೇ ಸಿಕ್ಕಿರಬಹುದು! ಇಡೀ ಚಿತ್ರದ ಹೈಲೈಟ್ ನಾಯಕಿ ಆಂದ್ರಿತಾ ರೇ. ತೆಳ್ಳಗೆ ಬೆಳ್ಳಗೆ ಇರುವವರಿಗೆ ಕ್ಯಾಮೆರಾ ಕಂಡರೆ ಭಯ ಇರುತ್ತದೆ. ಅವರಿಗೂ ನಟನೆಗೂ ಅಜಗಜಾಂತರ ದೂರ. ಗ್ಲ್ಯಾಮರ್ರೇ ಬೇರೆ ಗ್ರಾಮರ್ರೇ ಬೇರೆ ಇತ್ಯಾದಿ ಗಾಳಿಮಾತನ್ನು ಆಂದ್ರಿತಾ ಸುಳ್ಳಾಗಿಸಿದ್ದಾರೆ. ನಟನೆಗೂ ಜೈ, ಕುಣಿತಕ್ಕೂ ಸೈ ಎನಿಸಿಕೊಂಡಿದ್ದಾರೆ. ಮೈ ಮೇಲೆ ದೇವಿ ಬಂದಿದ್ದಾಳೆ ಎಂಬಂತೆ ನಟಿಸುವ ದೃಶ್ಯವಂತೂ ಸೂಪರ್.

ಮಂಡ್ಯ ಗೌಡರಾಗಿ ಅಂಬರೀಷ್ ಮತ್ತೊಮ್ಮೆ ಹಳೇ ಖದರ್ ತೋರಿದ್ದಾರೆ. ತಂದೆ ಮಗನ ಜತೆ ನಡೆಯುವ ಭಾವಸದೃಶ ಮಾತುಕತೆ ಇಷ್ಟವಾಗುತ್ತದೆ. ಅಂಬಿ ಎಂದಿನಂತೆ ತಾನು ಮಂಡ್ಯದ ಗಂಡು ಎಂಬುದನ್ನು ಮತ್ತೆ ಸಾರಿ ಹೇಳಿದ್ದಾರೆ. ಅಕಸ್ಮಾತ್ ಚಿತ್ರ ಎಲೆಕ್ಷನ್ ಹೊತ್ತಿಗೆ ಬಿಡುಗಡೆಯಾಗಿದ್ದರೆ ಗ್ಯಾರಂಟಿ ಒಂದಷ್ಟು ಓಟು ಪ್ಲಸ್ ಆಗುತ್ತಿತ್ತೇನೊ! ಕಾಮಿಡಿಗೆ ಹೆಚ್ಚು ಅವಕಾಶ ಕೊಟ್ಟಿಲ್ಲ. ಸಾಧುಕೋಕಿಲ ಮೈಯಿ, ಕೈಯಿ, ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ. ಉಳಿದಂತೆ ಮೈಕೊ ನಾಗರಾಜ್, ರಮೇಶ್ ಭಟ್ ಮೊದಲಾದವರು ಚೆನ್ನಾಗಿ ನಟಿಸಿದ್ದಾರೆ. ಗೌಡರ ರೈಟ್ ಹ್ಯಾಂಡ್ ಪಾತ್ರಕ್ಕೆ ಕೃಷ್ಣೇಗೌಡ್ರು ಹೇಳಿ ಮಾಡಿಸಿದಂತೆ ಕಾಣುತ್ತಾರೆ.

ವಿ.ಹರಿಕೃಷ್ಣ ಕೈಯಿಂದ ಕೆಲಸ ತೆಗೆಸುವ ಕೆಲಸ ಅರ್ಜುನ್ ಸರ್ಜಾ ಬಳಗದಿಂದ ಆಗಿಲ್ಲ. ಒಟ್ಟಿನಲ್ಲಿ ಹಾಡುಗಳಲ್ಲಿ ಸತ್ವವಿಲ್ಲ, ಜೀವವಂತೂ ಮೊದಲೇ ಇಲ್ಲ. ಸುಂದರನಾಥ್ ಸುವರ್ಣ ಕ್ಯಾಮೆರಾ ಆಕ್ಷನ್ ಚಿತ್ರಕ್ಕೆ ಹೊಂದಿಕೊಳ್ಳುವಲ್ಲಿ ತುಸು ಒದ್ದಾಡುತ್ತದೆ. ಆದರೂ ಕಗ್ಗತ್ತಲಲ್ಲಿ ನಡೆಯುವ ಫೈಟ್ ಕಂಪೋಸಿಂಗ್ ನೋಡಿ ಅನುಭವಿಸಬೇಕು. ಕ್ಲೈಮ್ಯಾಕ್ಸ್‌ನ ಹೊಡೆದಾಟ ತಾಳ್ಮೆ ಪರೀಕ್ಷೆ ಮಾಡುತ್ತದೆ. ಎದ್ದು ಹೋದರೆ ಅದರಿಂದ ಯಾರಿಗೂ ನಷ್ಟವಿಲ್ಲ ಎಂಬ ಬಗ್ಗೆ ಮೊದಲೇ
ಸೂಚನೆ ಸಿಕ್ಕಿಬಿಟ್ಟಿರುತ್ತದೆ. ಒಟ್ಟಾರೆ ಪಕ್ಕಾ ಆಕ್ಷನ್ ವಾಂಟೆಂಡ್ ಪ್ರೇಕ್ಷಕರಿಗೆ ಇದೊಂದು ಅದ್ಭುತ ಚಿತ್ರ. ಇಲ್ಲಿ ಎಲ್ಲಾ ಇದೆ. ಆದರೆ ಕೆಲವೊಂದು ದೃಶ್ಯಗಳು, ಹೊಡೆದಾಟ, ಹಾಡು ಕಟ್ ಆಗಬೇಕಿತ್ತು.

ಹಾಗಾದರೆ ಸಿನಿಮಾ ಗೆಲ್ಲುವ ಸಾಧ್ಯತೆ ಇದೆ. ಗೆದ್ದರೆ ವಾಯುಪುತ್ರ ಚಿತ್ರದ ನಿರ್ದೇಶನ ಮಾಡಿದ ದಿ.ಕಿಶೋರ್ ಸರ್ಜಾ ಆತ್ಮಕ್ಕೆ ಶಾಂತಿ ದೊರೆಯುತ್ತದೆ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada