»   »  ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ

ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ

Posted By: Super
Subscribe to Filmibeat Kannada
Kaniha, Balaji and Nikhita
ಸ್ವತಃ ರವಿಚಂದ್ರನ್ ಅವರೇ ಬಾಲಾಜಿಯಲ್ಲಿ ಪರಕಾಯ ಪ್ರವೇಶ ಮಾಡಿ ಬಂದರೂ ಬಾಲಾಜಿಯಲ್ಲಿ ಅಭಿನಯದ ಗಂಧ ಹೊರಹೊಮ್ಮಿಸುವುದು ಅಸಾಧ್ಯವೇನೊ. 'ರಾಜಕುಮಾರಿ'ಯಲ್ಲಿ ರಾಜನಾಗಿ ಬಾಲಾಜಿಯದು ಅದೇ ನಿಸ್ತೇಜ ಅಭಿನಯ. 'ಏಕಾಂಗಿ'ಯಾಗಿ ಅವರಿಗೆ ಚಿತ್ರದ ಭಾರವನ್ನು ಅಣ್ಣ ರವಿಚಂದ್ರನ್ ಹೊರಲು ಬಿಟ್ಟಿಲ್ಲ. ದ್ವಿತೀಯಾರ್ಧದಲ್ಲಿ ರವಿಯೇ ಆವರಿಸಿಕೊಂಡಿದ್ದರೂ ಚಿತ್ರವನ್ನು ಪ್ರಪಾತದಿಂದೆತ್ತಲು ಅವರಿಂದ ಸಾಧ್ಯವಾಗಿಲ್ಲ.

* ಪ್ರಸಾದ ನಾಯಿಕ

ಇಳಕಿಯನ್ ಬರೆದ ಅಡಗೂಲಜ್ಜಿ ಕಥೆ, ದಿಕ್ಕುದೆಸೆಯಿಲ್ಲದ ಎಸ್. ಗೋವಿಂದರಾಜು ನಿರ್ದೇಶನ, ನಿರ್ದೇಶಕರೇ ಬರೆದ ಸತ್ವರಹಿತ ಸಂಭಾಷಣೆ, ಎಳ್ಳಷ್ಟೂ ಕಾಳಜಿಯಿಲ್ಲದ ಸಂಕಲನ, 'ಆಂಗಿಕ' ಅಂದರೇನೇ ತಿಳಿಯದ ಬಾಲಾಜಿ ಅಭಿನಯ 'ರಾಜಕುಮಾರಿ' ಚಿತ್ರ ಒಂದು ಮೆಟ್ಟಿಲು ಹತ್ತುವ ಮೊದಲೇ ಚಿತ್ರವನ್ನು ಪಾತಾಳಕ್ಕೆ ತಳ್ಳಿಬಿಡುತ್ತವೆ. ಮುಂದಿನದೆಲ್ಲಾ ಚಿತ್ರ ಯಾವಾಗ ಮುಗಿಯುವುದೋ ಎಂದು ಕಾಯುವ ಸರದಿ ಪ್ರೇಕ್ಷಕರದು.

ಕಥೆ ಹೀಗಿದೆ ನೋಡಿ. ಒಬ್ಬ ಇರ್ತಾನೆ ರಾಜ. ಅವನಿಗೋ ಲೋಕದೆದಿರು ವಿಧವೆಯಂತೆ ಜೀವನ ಸಾಗಿಸುತ್ತಿರುವ ಕುಮಾರಿಯ ಮೇಲೆ ಪ್ರೀತಿ. ಕುಮಾರಿಗೋ ಮದುವೆ ಅಂದರೇನೇ ವಾಂತಿ. ಇಂತಿಪ್ಪ ರಾಜನ ಮೇಲೆ ಬಬ್ಲಿಯ ಕಣ್ಣು. ಕಥೆ ಹೀಗೆ ಸಾಗುತ್ತ ಫ್ಲಾಷ್ ಬ್ಯಾಕ್ ಗೆ ಹೋಗುತ್ತದೆ. ಅಲ್ಲಿ ಕುಮಾರಿಗೆ ಸಂಗೀತ ಕಲಿಸುವ ಬೆಟ್ಟದಮೇಷ್ಟ್ರ ಮೇಲೆ ಬೆಟ್ಟದಷ್ಟು ಪ್ರೀತಿ, ಗೌರವ. ಬೆಟ್ಟದ ಮೇಷ್ಟ್ರು ಏನಾದರು, ಕುಮಾರಿ ವಿಧವೆಯೇಕಾದಳು, ಕೊನೆಗೆ ಕುಮಾರಿ ರಾಜನಿಗೆ ಸಿಗ್ತಾಳಾ... ಇದು ಮುಂದಿನ ಕಥೆ. ಇಂಥ ಕಥೆಯನ್ನು ಕುರ್ಚಿಯಿಂದ ಪ್ರೇಕ್ಷಕ ಮೇಲೇಳದಂತೆ ಸರಳವಾಗಿ ನಿರೂಪಿಸಲು ಗೋವಿಂದರಾಜುಗೆ ಸಾಧ್ಯವಾಗಿಲ್ಲ.

ಗೋವಿಂದರಾಜು ನಿರೂಪಣೆಯಲ್ಲಿ ಒಂದು ದೃಶ್ಯ ಹೀಗಿದೆ ನೋಡಿ : ರಾಜನನ್ನು ಪ್ರೇಮಿಸುವ ಬಬ್ಲಿ ಮೈತುಂಬ ಬಟ್ಟೆ ಹೊದ್ದು ಆತನ ಕಚೇರಿಗೆ ಬರುತ್ತಾಳೆ. ಎಲ್ಲರೂ ನೋಡನೋಡುತ್ತಿದ್ದಂತೆ ಮೈಮೇಲಿನ ಒಂದೊಂದೇ ಬಟ್ಟೆ ಕಳಚುತ್ತಾ.... ಇನ್ನೇನು... ರಾಜ ಅವಳ ಕಪಾಳಕ್ಕೆ ಛಟೀರ್ ಅಂತ ಕೊಡುತ್ತಾನೆ. ನಿನ್ನ ಪ್ರಥಮ ಟಚ್ ಸೂಪರ್ ಆಗಿದೆ ಅಂತ ಆನಂದತುಂದಿತಳಾಗುತ್ತಾಳೆ! ನಿರ್ದೇಶಕರ ಟೇಸ್ಟಿಗೆ, ನಿರ್ದೇಶನದ ವೈಖರಿಗೆ ಈ ದೃಶ್ಯ ಒಂದು ಉದಾಹರಣೆ ಅಷ್ಟೆ.

ಇಷ್ಟೆಲ್ಲ ಅಪಸವ್ಯಗಳಿದ್ದರೂ ಚಿತ್ರದಲ್ಲಿ ಅಲ್ಲಲ್ಲಿ ಮಿಂಚಿನ ಸೆಳೆತವಿದೆ. ಕೆ.ಕಲ್ಯಾಣ್ ಮತ್ತು ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ಹರಿಕೃಷ್ಣ ನೀಡಿರುವ ಸಂಗೀತ ನಿರ್ದೇಶನ ಪ್ರೇಕ್ಷಕರನ್ನು ಸೀಟಿನ ಮೇಲೆ ಕೂಡುವಂತೆ ಮಾಡುತ್ತವೆ. 'ಚೆಲ್ಲಿದರೋ ಮಲ್ಲಿಗೆಯಾ' ಬೆಟ್ಟದ ಮೇಲಿರುವ ಸ್ವಚ್ಛ ತಂಗಾಳಿಯಷ್ಟೇ ಹಿತಕರವಾಗಿದ್ದರೆ, ಇಸ್ಮಾಯಿಲ್ ಕಲಾನಿರ್ದೇಶನದಲ್ಲಿ ನಿರ್ಮಿಸಿರುವ ಅದ್ಭುತ ಸೆಟ್ಟಿಂಗಿನಲ್ಲಿ ಮೂಡಿಬಂದ 'ಏ ಮಾವನ ಮಗನೆ' ಹಾಡು ಪಡ್ಡೆಗಳಿಗೆ ಮೈಚಳಕಿಸುತ್ತದೆ. ಈ ಹಾಡಿನಲ್ಲಿ ರವಿಚಂದ್ರನ್ ಇದ್ದಿದ್ದರೇ.... ಅನ್ನುವಷ್ಟರ ಮಟ್ಟಿಗೆ ಬಾಲಾಜಿ ವಿಫಲರಾಗಿದ್ದಾರೆ! ಬಾಲಾಜಿಯದು ನಗುವಾಗ ಅಳುವಾಗ ಒಂದೇ ಮುಖಭಾವ. ಪ್ರೇಕ್ಷಕರದೂ ನಗಬೇಕೋ ಅಳಬೇಕೋ ತಿಳಿಯದ ಸ್ಥಿತಿ.

'ಕುಮಾರಿ'ಯಾಗಿ ಕನ್ನಿಹಾ ನೀಡಿರುವ ಹದದಿಂದ ಕೂಡಿದ ನಟನೆ 'ಬಬ್ಲಿ' ನಿಖಿತಾಳ ಕೋತಿಚೇಷ್ಟೆಗಳನ್ನು ಮರೆಯುವಂತೆ ಮಾಡುತ್ತದೆ. ಬುಲೆಟ್ ಪ್ರಕಾಶ ಮತ್ತು ರಂಗಾಯಣ ರಘು ಹಾಸ್ಯಾಯಣ ಚಿತ್ರದ ಹೈಲೈಟ್ ಗಳಲ್ಲಿ ಒಂದು. ಇವೆಲ್ಲ ಪಾತ್ರಗಳನ್ನು ಬಿಟ್ಟು ಉಳಿದೆಲ್ಲರನ್ನು ದುಡಿಸಿಕೊಳ್ಳಲು ಸಾಧ್ಯವಾಗದಿರುವುದು ನಿರ್ದೇಶಕ ಬಹುದೊಡ್ಡ ಕೊರತೆ. ಶ್ರೀನಿವಾಸಮೂರ್ತಿ, ಅವಿನಾಶ್, ತುಳಸಿ, ಸುನೇತ್ರಾ ಪಂಡಿತ್ ಚಿತ್ರದಲ್ಲಿ ಇದ್ದಾರಷ್ಟೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada