Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!
ಯಾವುದರಲ್ಲಿ ಹ್ಯಾಟ್ರಿಕ್ ಹೊಡಿಮಗ? ಕ್ರಿಕೆಟ್‌ಗೂ ಸತ್ಯಂ, ಶಿವಂ ಕಾಂಬಿನೇಷನ್ನಿನ 'ಸುಂದರ' ಶೀರ್ಷಿಕೆ ಇರುವ ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಶಸ್ಸಿನ ಹ್ಯಾಟ್ರಿಕ್ ಹೊಡಿಮಗ ಅಂತ ಅಂದ್ಕೊಂಡ್ರೂ ಶಿವರಾಜ್ ಅಭಿನಯದ ಹಿಂದಿನ ಎರಡು ಚಿತ್ರಗಳೂ ಗೆದ್ದಿಲ್ಲ. ಹೆಸರೇ ಸೂಚಿಸುವಂತೆ ಹೊಡೆದಾಟ ಬಡಿದಾಟದ ಈ ಚಿತ್ರದಲ್ಲಿ ಉರುಳಾಡುವ ತಲೆಗಳ ಹ್ಯಾಟ್ರಿಕ್ ಅಂದ್ಕೊಂಡ್ರೂ, ಇದು ಬರೀ ಹ್ಯಾಟ್ರಿಕ್ ಅಲ್ಲ... ಡಬಲ್.. ಟ್ರಿಬಲ್ ಹ್ಯಾಟ್ರಿಕ್! ಅಲ್ಲೇ ಇರುವುದು ಟ್ರಬಲ್! ಶೀರ್ಷಿಕೆಯಲ್ಲಿಯೂ ಟ್ರಬಲ್, ನೋಡುವವರಿಗೂ ಟ್ರಿಬಲ್ ಟ್ರಬಲ್.
ವಿಎಸ್ ರಾಜಕುಮಾರ್ ನಿರ್ಮಾಣದ, ಪಿ ಸತ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ 'ಹ್ಯಾಟ್ರಿಕ್ ಹೊಡಿಮಗ' ಚಿತ್ರದ ಶೀರ್ಷಿಕೆ 'ಕೊಚ್ಚುಮಗ' ಅಂತ ಇಟ್ಟಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತೇನೋ. ತಾಯಿ ಮಗನ ಪ್ರೀತಿಯ ನಡುವೆ ಭೂಗತಲೋಕ ಅಡ್ಡಬಂದು ಅಮಾಯಕನೊಬ್ಬ ಕೈಯಲ್ಲಿ ಮಚ್ಚು ಹಿಡಿಯುವಂತೆ ಮಾಡುವ ಈ ಬಡಿದಾಟದ ಚಿತ್ರ ಹಿಂದೆ ಬಂದಿರುವ ಯಾವುದೇ ಭೂಗತಲೋಕದ ಚಿತ್ರಕ್ಕಿಂತ ಭಿನ್ನವಾಗಿಲ್ಲ. ಜೋಗಿ ಚಿತ್ರದ ಎಳೆ ಹೊಂದಿದ್ದರೂ ಜೋಗಿ ಚಿತ್ರದ ತಾಯಿ ಮಗನ ಸೆಂಟಿಮೆಂಟನ್ನು ಅಪಹಾಸ್ಯಕ್ಕೆ ಈಡುಮಾಡಿದ ಕ್ರೆಡಿಟ್ಟು ನಿರ್ದೇಶಕರಿಗೆ ಸಲ್ಲಬೇಕು.
ಕಾಲೇಜಿನಲ್ಲಿ ಆದರ್ಶ ವಿದ್ಯಾರ್ಥಿಯಾಗಿದ್ದ, ತಾಯಿ ಮತ್ತು ತಂಗಿಯ ಪ್ರೀತಿಯಲ್ಲಿ ತೇಲಾಡುತ್ತಿದ್ದ ಅಮಾಯಕನೊಬ್ಬ ಅಚಾನಕ್ಕಾಗಿ ಮಚ್ಚು ಹಿಡಿಯುತ್ತಾನೆ. ಎರಡು ಅಂಡರ್ ವರ್ಲ್ಡ್ ತಂಡಗಳ ನಡುವೆ ಸಿಗ್ಹಾಕ್ಕಿಕೊಂಡು ಇಬ್ಬರನ್ನೂ ಬೆಂಬಲಿಸಲಾಗದೆ ಧರ್ಮಸಂಕಟಕ್ಕೊಳಗಾಗುತ್ತಾನೆ. ಕೊನೆಗೆ 'ಹೊಡಿಮಗ' ಅಂತ ಅಬ್ಬರಿಸಿದ ತಾಯಿಯ ಮಾತಿಗೆ ಬೆಲೆಕೊಟ್ಟು ಏಕಾಂಗಿಯಾಗಿ ಅಂಡರ್ವಲ್ಡ್ ರಾಜ ಮತ್ತು ಅಂಡರ್ವಲ್ಡ್ ರಾಣಿಯನ್ನು ಕೊಚ್ಚಿಹಾಕುತ್ತಾನೆ.
ಇಷ್ಟು ಕಥೆಯನ್ನು ನಿರೂಪಿಸಲು ನೂರಾರು ಹೆಣಗಳನ್ನು ಸತ್ಯ ಬೀಳಿಸಿದ್ದಾರೆ. ಮಧ್ಯ ಹಾಸ್ಯಕ್ಕಾಗಿ ಸಾಧು ಕೋಕಿಲಾಗೆ ಜೋಗಿ ವಿಗ್ಗು ಹಾಕಿ, ಆ ಜೋಗಿಯ ತಾಯಿಗೆ ಪಾಕೀಟು ಸರಾಯಿಯನ್ನು ಕುಡಿಸಿ ಉಪ್ಪಿನಕಾಯಿ ನೆಕ್ಕಿಸುತ್ತಾರೆ. ಗಾಂಧೀಜಿ ಪ್ರತಿಮೆಯ ಮಗ್ಗುಲಲ್ಲಿಯೇ ಲಾಂಗ್ ಹಿಡಿದಿರುವ ರೌಡಿಯ ಪುತ್ಥಳಿಯನ್ನು ನಿಲ್ಲಿಸಿ ರಕ್ತದ ಅಭಿಷೇಕ ಮಾಡಿಸುತ್ತಾರೆ. ಡೈಲಾಗ್‌ಗಳಲ್ಲಿ ಪಂಚ್ ಇರಲೇಬೇಕೆಂದು ಭೂಗತಲೋಕಕ್ಕೆ ತಕ್ಕಂಥ ಸಂಭಾಷಣೆಯನ್ನು ಸತ್ಯ ಹೆಣೆದಿದ್ದಾರೆ. ಒಂದು ಸ್ಯಾಂಪಲ್ ಹೀಗಿದೆ ನೋಡಿ.
ಭೂಗತರಾಣಿ ದುರ್ಗಿಯ ಕಡೆಯವರನ್ನು ಸೂರ್ಯ(ಶಿವರಾಜ್) ಪೊಲೀಸರಿಗೆ ಹಿಡಿದುಕೊಟ್ಟಿರುತ್ತಾನೆ. ಆಗ ರೊಚ್ಚಿಗೊದ್ದ ದುರ್ಗಿ ಸೂರ್ಯನ ತಾಯಿಯ ಸೆರಗು ಎಳೆದು ಹೇಳುವ ಮಾತುಗಳು, "ಸೂರ್ಯ ನಿನ್ನ ಎದೆಹಾಲು ಕುಡಿದು ಬೆಳೆದಿದ್ದರೆ ಕೇಸು ವಾಪಸ್ ತೆಗೆದುಕೊಳ್ಳಲಿ. ಸೊಂಟದ ಕೆಳಗಿನ ಭಾಷೆ ಬಳಸುವಂತೆ ನನ್ನ ಬಲವಂತ ಮಾಡಬೇಡ. ಸೆರಗು ಎಳೆದಿರುವುದು ಸೈಡ್ ರೀಲಷ್ಟೆ. ಕೇಸ್ ವಾಪಸ್ ತೆಗೆದುಕೊಳ್ಳದಿದ್ದರೆ, ನಿನ್ನ ಮಗಳದು ಫುಲ್ ಸೀನ್!" ಇದರ ಅರ್ಥ ಕಲ್ಪಿಸಿಕೊಳ್ಳುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಈ ದೃಶ್ಯ ಸತ್ಯ ಅವರ ಸೃಜನಶೀಲತೆಗೆ, ಸದಭಿರುಚಿಗೆ ಹಿಡಿದ ಕನ್ನಡಿ.
ತಮ್ಮ ಇಮೇಜಿಗೆ ಒಪ್ಪುವ ಪಾತ್ರವನ್ನು ಶಿವರಾಜ್ ಲೀಲಾಜಾಲವಾಗಿ ಮಾಡಿಮುಗಿಸಿದ್ದಾರೆ. ಭಾವಾಭಿನಯಕ್ಕಿಂತ ಮಚ್ಚೇ ಹೆಚ್ಚು ಮಾತಾಡುತ್ತದೆ. ಅದಕ್ಕೂ ಶಿವರಾಜ್ ನ್ಯಾಯ ಸಲ್ಲಿಸಿದ್ದಾರೆ. ಸೂರ್ಯನ ತಾಯಿಯಾಗಿ ಬಹುದಿನಗಳ ನಂತರ ಮಂಜು ಭಾರ್ಗವಿಯನ್ನು ತೆರೆಯ ಮೇಲೆ ತಂದಿದ್ದಕ್ಕೆ ಸತ್ಯ ಅಭಿನಂದನಾರ್ಹರು. ಆದರೆ, ಅವರಿಂದ ಆ ಪಾತ್ರ ಮಾಡಿಸಿದ ರೀತಿಗೆ ಮಾತ್ರ ಅವರು ಖಂಡನಾರ್ಹರು. ಆ ತಾಯಿಯಿಂದ ರೌಡಿಗಳಿಗೆ ಮದಿರೆ, ಚಿಕನ್ ಸಮಾರಾಧನೆಯ ಸೇವೆ ಮಾಡಿಸುತ್ತಾರೆ. ಸಲ್ಲದ್ದಕ್ಕೆ ರೌಡಿಗಳಿಂದ ಕಿವಿ ಮುಚ್ಚುವಂಥ ಮಾತುಗಳು ಬೇರೆ. ಆ ತಾಯಿ ಪಡುವ ಹಿಂಸೆಯನ್ನು ನೋಡಿ ಪ್ರೇಕ್ಷಕರಿಗೆ ಕರಳು ಚುರುಕ್ ಅನ್ನದೇ ಇರದು. ದುರ್ಗಿಯಾಗಿ ಪವಿತ್ರಾ ಲೋಕೇಶ್ ಕಣ್ಣಲ್ಲಿನ ಖದರು, ಮಾತಿನಲ್ಲಿನ ದರ್ಪ ಯಾತಕ್ಕೂ ಸಾಲದು. ಮತ್ತೊಬ್ಬ ಭೂಗತದೊರೆಯಾಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇವೆಲ್ಲ ಹಿಂಸೆಗಳ ಮಧ್ಯ ಜಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯಲ್ಲಿ ಮೂರು ಹಾಡುಗಳು ತಂಗಾಳಿಯಂತೆ ಬಂದುಹೋಗುತ್ತವೆ, ಮಾಧುರ್ಯಭರಿತವಾಗಿವೆ. ತಾಯಿ, ತಂಗಿಯ ಮಮತೆ ಕುರಿತಾಗ ಹಾಡಂತೂ ಅದ್ಭುತ. ಜೊತೆಗೆ ನಿಕೊಲೆಟ್ ಎಂಬ ಬರ್ಡ್ ಬಂದು 'ಏನೋ ಹೇಳುತಿದೆ ಮನಸು ಮನಸು' ಎಂದು ಟುವ್ವಿ ಟುವ್ವಿ ಹಾಡುತ್ತ ನಾಯಕನೊಂದಿ 'ಬಿದ್ದೆ ಲವ್ವಲಿ' ಎಂದು ಹಾಡಿ ನಲಿದಾಡುವುದಷ್ಟೇ ಚೆಂದ, ನಟನೆಯಲ್ಲಿ ಭಾರೀ ಮಂದ.
ಭೂಗತಲೋಕದ ಕಥೆಯಿದ್ದು ನೂರಾರು ರುಂಡ ಚೆಂಡಾಡಿದರೆ ಚಿತ್ರ ಗೆಲ್ಲುವುದು ಸತ್ಯ ಎಂಬ ಫಾರ್ಮುಲಾಗೆ ಜೋತುಬಿದ್ದಿದ್ದಾರೆ ಪಿ ಸತ್ಯ. ಅದು ಸತ್ಯಮಗ ಅಥವಾ ಸುಳ್ಳುಮಗ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಲಿದ್ದಾರೆ.