For Quick Alerts
  ALLOW NOTIFICATIONS  
  For Daily Alerts

  ಬಂಗಾರ ಲೋಕ ಸೃಷ್ಟಿಸುವಲ್ಲಿ ಸೋತ ಚೆಲುವಿನ ಚಿಲಿಪಿಲಿ

  By Staff
  |

  'ಕಲಾ ಸಾಮ್ರಾಟ್' ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚಿಲಿಪಿಲಿ' ಚಿತ್ರ ತೆಲುಗಿನ ಹಿಟ್ ಚಿತ್ರ 'ಕೊತ್ತ ಬಂಗಾರು ಲೋಕಂ' ಚಿತ್ರದ ಪಡಿಯಚ್ಚು ಅರ್ಥಾತ್ ರಿಮೇಕ್. ಅಷ್ಟು ಮಾತ್ರವಲ್ಲ, ತೆಲುಗಿನಿಂದ ಎರವಲು ಪಡೆದು ತಂದ, ನಾರಾಯಣ್ ಮುದ್ದಿನ ಕಂದ ಪಂಕಜ್ ಅಭಿನಯದ ಚಿತ್ರದಲ್ಲಿ ಕನ್ನಡದ್ದೇ ಆದ ಎರಡು ಚಿತ್ರಗಳ ಛಾಯೆಯಿದೆ.

  * ಪ್ರಸಾದ ನಾಯಿಕ

  ಹೀಗಾಗಿ ಚೆಲುವಿನ ಚಿಲಿಪಿಲಿಯನ್ನು ತೆಲುಗಿನ ರಿಮೇಕ್ ಅಂದ್ರೂ ಪರವಾಗಿಲ್ಲ, ಕನ್ನಡದ ಎರಡು ಚಿತ್ರಗಳ ಪ್ರಭಾವದಿಂದ ನಿರ್ಮಿತವಾದ ಕನ್ನಡ ಚಿತ್ರ ಅಂದ್ರೂ ನೋ ಪ್ರಾಬ್ಲಮ್. ಆದ್ರೆ, ಪ್ರಾಬ್ಲಮ್ ಏನಂದ್ರೆ, ತೆಲುಗಿನಂತೆ ಸೂಪರ್ ಹಿಟ್ ಆಗುವ ಲಕ್ಷಣಗಳನ್ನೂ ಚಿಲಿಪಿಲಿ ಹೊಂದಿಲ್ಲ ಮತ್ತು ಕನ್ನಡ ಎರಡು ಚಿತ್ರಗಳು ಮಾಡಿದ ಮೋಡಿಯನ್ನೂ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ, ನಾರಾಯಣ್ ಅತೀ ಮುದ್ದಿನಿಂದ ತಯಾರಿಸಿದ (ಬೆಳೆಸಿದ) ತಮ್ಮ ಮುದ್ದಿನ ಚಿತ್ರವನ್ನು (ಕಂದನನ್ನು) ತಾವೇ ಹಾಳು ಮಾಡಿದ್ದಾರೆ.

  ಅಮ್ಮನ ವಿಪರೀತ ಮುದ್ದಿನಿಂದ ಬೆಳೆದ ಕಂದ ದೊಡ್ಡವನಾಗುತ್ತ ಹೆತ್ತವರಿಂದ ದೂರವಾಗುತ್ತಾನೋ ಎಂಬ ಭಯ ತಾಯಿಗೆ. ಎಂಥದೇ ತಪ್ಪು ಮಾಡಿದರೂ ತನಗೆ ಹೇಳದೇ ಮಾಡುವುದಿಲ್ಲ ಎಂಬ ಭರವಸೆಯಿಟ್ಟು ಸಾಲಸೋಲ ಮಾಡಿ ಕಾಲೇಜಿನಲ್ಲಿ ಓದಿಸುವ ಅಪ್ಪ. ಆದರೆ ಮಗ ಅಪ್ಪನ ಭರವಸೆಯನ್ನು ಸುಳ್ಳು ಮಾಡುತ್ತಾನೆ, ಹುಚ್ಚು ಪ್ರೀತಿಗೆ ಬಿದ್ದು ತನ್ನ ವಿದ್ಯಾಭ್ಯಾಸವನ್ನೇ ಹಾಳುಗೆಡವುವ ಹಂತ ತಲುಪುತ್ತಾನೆ. ಹುಡುಗರು ಟೀನೇಜ್ 'ಜೋಶ್'ನಲ್ಲಿ ಏನೇನು ತಪ್ಪು ಮಾಡುತ್ತಾರೆ ಎಂಬ ಸಂದೇಶ ಇಲ್ಲಿದೆ. ಹಾಗೆಯೇ ಜವಾಬ್ದಾರಿ ಬಂದಾಗ ಹೇಗೆ ಪರಿವರ್ತಿತರಾಗುತ್ತಾರೆ ಎಂಬ ಪಾಠವೂ ಇಲ್ಲಿದೆ.

  ಇನ್ನೊಂದೆಡೆ ಮುದ್ದು ಮುದ್ದಾದ ನಾಯಕಿಗೆ ಕೆಟ್ಟ ಅಪ್ಪ ಮತ್ತು ರೌಡಿಯಂಥ ಅಮ್ಮ. ಮಗಳು ಮುಗ್ಧೆ ಕಾಲೇಜಿನಲ್ಲಿ ತನ್ನಷ್ಟಕ್ಕೆ ತಾನು ಓದಿಕೊಂಡಿರುತ್ತಾಳೆ ಅಂದ್ರೆ ಅವಳು ನಾಯಕ ಮಾಡಿದ ತಪ್ಪೇ ಮಾಡುತ್ತಾಳೆ. ಪ್ರೀತಿ ಎಂಬ 'ಚೆಲುವಿನ ಚಿತ್ತಾರ'ದಲ್ಲಿ ಮುಳುಗಿ ಹೋಗಿರುತ್ತಾಳೆ. ನಾಯಕ ನಾಯಕಿ ಲವ್ ಮಾಡೋದು ತಿಳಿದು ಅಪ್ಪ ಮಗಳನ್ನು ಕೂಡಿ ಹಾಕುತ್ತಾನೆ. ನಾಯಕಿ ಮತ್ತು ನಾಯಕ ಇನ್ನೇನು ಓಡಿ ಹೋಗಬೇಕು, ಚಿತ್ರ ವಿಚಿತ್ರ ತಿರುವು ಪಡೆದುಕೊಳ್ಳುತ್ತದೆ.

  ಆ ವಿಚಿತ್ರ ತಿರುವು ಪಡೆದುಕೊಳ್ಳುವ ಕೊನೆಯ ಹದಿನೈದಿಪ್ಪತ್ತು ನಿಮಿಷ ಮಾತ್ರ ಕಲಾ ಸಾಮ್ರಾಟರಿಗೆ ಚಿತ್ರದ ಮೇಲೆ ಹಿಡಿತ ಸಿಕ್ಕಿದೆ. ಮತ್ತು ಪ್ರೇಕ್ಷಕ ಊಹಿಸದ ತಿರುವು ಪಡೆದುಕೊಳ್ಳುತ್ತದೆ. ಕೊನೇ ಎರಡು ಮೂರು ದೃಶ್ಯಗಳನ್ನು ಹೊರತುಪಡಿಸಿದರೆ ಅದೇ ಆಕರ್ಷಣೆ ಅಂದ್ರೇನು, ಪ್ರೀತಿ ಅಂದ್ರೇನು ತಿಳಿಯದ ಎರಡು ಮುಗ್ಧ ಪ್ರೇಮಿಗಳ ಆಟ, ಹುಡುಗಾಟ, ಪ್ರೀತಿ, ಪ್ರೇಮ. ಆಟ ಹುಡುಗಾಟದಲ್ಲಿರಬೇಕಾದ 'ಜೋಶ್' ಮಿಸ್ ಆಗಿದೆ ಮತ್ತು ಪ್ರೀತಿ ಪ್ರೇಮದಲ್ಲಿರಬೇಕಾದ 'ಚೆಲುವಿನ ಚಿತ್ತಾರ'ವೂ ಕಾಣೆಯಾಗಿದೆ.

  ಎರವಲು ತಂದ ಚಿತ್ರದ ಹಳಸಲು ಕಥೆಯನ್ನು ನವಿರಾಗಿ, ಕಲಾತ್ಮಕವಾಗಿ ಹೇಳುವಲ್ಲಿ ಕಲಾ ಸಾಮ್ರಾಟ್ ಬೋರು ಹೊಡೆಸುತ್ತಾರೆ. ಅನಂತನಾಗ್, ದ್ವಾರಕೀಶ್, ಸುಮಲತಾ, ರಾಜೇಂದ್ರ ಕಾರಂತ್ ಮತ್ತು ಸುಂದರ್ ಅಂಥ ಪ್ರತಿಭಾವಂತ ನಟರಿದ್ದರೂ ಅವರನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಮತ್ತು ಚಿತ್ರಕಥೆಯನ್ನು ಬಿಗಿಯಾಗಿ ನಿರೂಪಿಸುವಲ್ಲಿ ನಾರಾಯಣ್ ಸೋತಿದ್ದಾರೆ. ಅವರೇ ಬರೆದಿರುವ ಸಂಭಾಷಣೆಯಂತೂ ನೀರಸ ನೀರಸ. 'ಯಾವುದೋ ಏನದೋ ನನ್ನಲಿ ಹೊಸತನ' ಹಾಡನ್ನು ಬಿಟ್ಟರೆ ಉಳಿದವು ಮನಸಲ್ಲಿ ಉಳಿಯುವುದಿಲ್ಲ.

  ನಾಯಕ ಪಂಕಜ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾನೆ. ನಾಯಕಿ ಕನ್ನಡತಿ ರೂಪಿಕಾ ಪ್ರಥಮ ಚಿತ್ರದಲ್ಲೇ ಮುಗ್ಧವಾದ ಚೆಲುವಿನಿಂದ ಚಿತ್ತಾರ ಬಿಡಿಸುತ್ತಾಳೆ. ನಕ್ಕರಂತೂ ಉಲ್ಲಾಸದ ಹೂಮಳೆ. ಅಭಿನಯವನ್ನು ಒರೆಗೆ ಹಚ್ಚುವ 'ಅಮೂಲ್ಯ' ಅವಕಾಶ ಆಕೆಗೆ ದೊರೆತಿದೆ, ಆದರೆ ಅಷ್ಟಾಗಿ ಬಳಸಿಕೊಂಡಿಲ್ಲ.

  Monday, August 31, 2009, 17:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X