»   » ಮತ್ತೊಂದು ರಕ್ತಕಣ್ಣೀರು, ಶಿವಣ್ಣ ನಿಜಕ್ಕೂ ಸ್ಟಾರು!

ಮತ್ತೊಂದು ರಕ್ತಕಣ್ಣೀರು, ಶಿವಣ್ಣ ನಿಜಕ್ಕೂ ಸ್ಟಾರು!

Posted By:
Subscribe to Filmibeat Kannada

ಒಂದಂತೂ ಸತ್ಯ. ಮಾದೇಶ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಕೋಟಿ ನಿರ್ಮಾಪಕ ಹುಟ್ಟಿಕೊಂಡಿದ್ದಾರೆ. ಒಂದು ಸಿನಿಮಾದಲ್ಲಿ ಅದ್ಧೂರಿತನ ಹೇಗಿರಬೇಕು ಎನ್ನುವುದನ್ನು ಕನ್ನಡಿಗರಾಗಿ ಗೋವರ್ಧನ್ ಮೂರ್ತಿ ನಿರೂಪಿಸಿದ್ದಾರೆ.

*ವಿನಾಯಕರಾಮ್ ಕಲಗಾರು

ಸಿನಿಮಾ ಶುರುವಾಗಿ ಹತ್ತೇ ಹತ್ತು ನಿಮಿಷ ಕಳೆಯೋದೇ ತಡ, ಒಂದು ಅನುಮಾನ : ಇದು ನಿಜಕ್ಕೂ ಕನ್ನಡ ಚಿತ್ರವಾ?
ಆಸ್ಟ್ರೇಲಿಯಾದಲ್ಲಿ ನಾಯಕ ಹೆಲಿಕಾಪ್ಟರ್‌ನಿಂದ ಝಗಮಗಿಸುತ್ತಾ ಇಳಿದುಬರುತ್ತಿದ್ದರೆ, ಹಿನ್ನೆಲೆಯಲ್ಲಿ ಕೋರಸ್ : ಮಾ... ದೇ... ಶ..., ಅವನ ಅಕ್ಕಪಕ್ಕ ತಲಾ ಇಬ್ಬಿಬ್ಬರು. ಒಬ್ಬರಿಗಿಂತ ಒಬ್ಬರು ಅಸುರಾಸುರರು. ಎಲ್ಲರೂ ಮಾದೇಶನೊಂದಿಗೆ ಮಾರುದ್ದದ ಕಾರು ಏರುತ್ತಾರೆ; ಮತ್ತದೇ
ಮಾ... ದೇ... ಶ...!
ಆತ ಆಸ್ಟ್ರೇಲಿಯಾದಲ್ಲಿದ್ದುಕೊಂಡು ಇಡೀ ಬೆಂಗಳೂರಿನ ಭೂಗತಲೋಕ ಆಳುತ್ತಾನೆ. ಅಲ್ಲಿಯೇ ಎಲ್ಲ ಕೇಸನ್ನೂ ಖುಲಾಸೆಗೊಳಿಸಬಲ್ಲ ಕೆಪ್ಯಾಸಿಟಿ ಅವನಿಗಿರುತ್ತದೆ. ಒಟ್ಟಾರೆ : 'ಮಾ'ತು ಕಡಿಮೆ. 'ದೇ"ಹಕ್ಕೆ ಕೆಲಸ ಕೊಡೋದು ಹೆಚ್ಚು. 'ಶ"ತ್ರುಗಳಿಗಳಿಗಂತೂ ಸಿಂಹಸ್ವಪ್ನ.

ಆರಂಭದಿಂದಲೇ ಒಂದು ವೇಗವನ್ನು ತಂದು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾರೆ ನಿರ್ದೇಶಕ ರವಿ ಶ್ರೀವತ್ಸ. ನಂಜನಗೂಡಿನಿಂದ ಕತೆ ಬಿಚ್ಚಿಕೊಳ್ಳುತ್ತದೆ. ದೇವಸ್ಥಾನ, ಗಜರಾಜ ಗಣೇಶ, ಅದರ ಮಾವುತ, ಅವನ ಮಗ ಮೀಸೆ ಮೂಡದ ಮಾದೇಶ. ಹಳ್ಳಿ ಪರಿಸರ... ಹೀಗೆ ಸಿನಿಮಾದ ದಿಕ್ಕು ಬದಲಾಗುತ್ತದೆ. ಅಲ್ಲೊಂದಿಷ್ಟು ತಾಯಿ-ಮಗನ ಸೆಂಟಿಮೆಂಟ್. ಅಲ್ಲೊಬ್ಬ ಮಾದೇಶನ ತಾಯಿಯ ಮೇಲೆ ಕಣ್ಣು ಹಾಕುತ್ತಾನೆ. ಅವನ ತಲೆಯನ್ನು ತೆಂಗಿನಕಾಯಿಯಂತೆ ಒಡೆದು ಮಾದೇಶ ಜೈಲು ಸೇರುತ್ತಾನೆ. ಆದರೂ ತಾಯಿಗೆ : ಕೊನೆತನಕ ಮರೆಯಲ್ಲ ಮಾದೇಶ ಎಂದು ಭಾಷೆ ಕೊಡುತ್ತಾನೆ. ೧೪ ವರ್ಷ ಜೈಲು ಸೇರಿ ಬಂದು ನಂಜನಗೂಡು ಸೇರುತ್ತಾನೆ. ಕಾಸು, ಹೆಸರು ಮಾಡುವ ಆಸೆಯಿಂದ ಮತ್ತೆ ಬೆಂಗಳೂರಿಗೆ ಹೋಗುತ್ತಾನೆ. ಸರ್ಕಾರ್ ಎಂಬ ರೌಡಿಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಸಿಗುತ್ತದೆ. ಅಲ್ಲಿ ಮತ್ತೊಬ್ಬ ರೌಡಿ, ಸ್ನೇಹಿತನ ಗೆಳತಿಯ ಮೇಲೆ ಕೈ ಹಾಕುತ್ತಾನೆ. ಮಾದೇಶ ಅವನ ತಲೆಯನ್ನೂ ಮುಲಾಜಿಲ್ಲದೆ ಸುತ್ತಿಗೆಯಿಂದ ಕೊಚ್ಚುತ್ತಾನೆ. ನೆನಪಿರಲಿ, ಇವೆಲ್ಲವನ್ನೂ ಆತ ಮಾಡುತ್ತಿರುವುದು ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಕ್ಕಾಗಿ. ಅಲ್ಲಿಂದ ಸರ್ಕಾರ್, ಮಾದೇಶನ ಫ್ರೆಂಡ್‌ಶಿಪ್ ಮಾಡುತ್ತಾನೆ. ಅವನನ್ನು ಅಸ್ತ್ರ ಮಾಡಿಕೊಂಡು, ಗುರುನಾರಾಯಣ್ ಎಂಬ ಭೂಗತ ದೊರೆಯ ಬುಡಕ್ಕೆ ಬತ್ತಿ ಇಟ್ಟು ಉಡಾಯಿಸುತ್ತಾನೆ. 'ನಾನೇ ಕಿಂಗ್ " ಎಂದು ಮೆರೆಯುತ್ತಾನೆ. ಅಷ್ಟು ಹೊತ್ತಿಗೆ ಮಾದೇಶ ಬೆಂಗಳೂರಿನ ಭಗವಂತನಾಗಿರುತ್ತಾನೆ. ಅದನ್ನು ಸಹಿಸಲಾರದ ಸರ್ಕಾರ್...

ಹೀಗೆ ಕತೆ ಶರವೇಗದಲ್ಲಿ ಸಾಗುತ್ತದೆ. ಆ ಮಟ್ಟಿಗೆ ರವಿ ಶ್ರೀವತ್ಸ ಗೆದ್ದಿದ್ದಾರೆ. ಶಿವಣ್ಣನ ಆಕ್ಷನ್‌ನ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ವತ್ಸ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಶಿವರಾಜ್‌ಕುಮಾರ್ ಅಭಿನಯದಲ್ಲಿ ಲವಲವಿಕೆಯಿದೆ. ಮಾದೇಶನ ಪಾತ್ರವನ್ನು ಶಿವಣ್ಣ ಬಿಟ್ಟು ಬೇರೆ ಯಾರಾದರೂ ಮಾಡಿದ್ದರೆ ಅದರಲ್ಲಿ ವಿಶೇಷತೆ ಇರುತ್ತಿರಲಿಲ್ಲ. ಅವರು ಈ ಸಿನಿಮಾದ ಮೂಲಕ ಜೋಗಿಯ ಮಾದೇಶನ ಪಾತ್ರವನ್ನು ನೆನಪಿಸಿದ್ದಾರೆ. ಆದರೆ ಅವರ ಹೇರ್‌ಸ್ಟೈಲ್ ಮಾತ್ರ ತಲೆಯ ಮೇಲೆ ಇಟ್ಟ ಕಿರೀಟದಂತೆ ಕಂಗೊಳಿಸುತ್ತದೆ. ನಾಯಕಿ ಸೋನು ಭಾಟಿಯಾ, ಶಿವಣ್ಣನ ಜತೆ ಡ್ಯಾನ್ಸ್ ಮಾಡುವಾಗ ಬೆಲ್ಲದಚ್ಚಿನಂತೆ ಕಾಣುತ್ತಾಳೆ. ಆದರೆ ಅದೇ ಅಚ್ಚುಕಟ್ಟುತನವನ್ನು ಅಭಿನಯದಲ್ಲಿ ತೋರಿಸಿಲ್ಲ. ನಿರ್ದೇಶಕರು 'ವಿ" ಶೇಷವಾದ, 'ಕೃತ"ಕವಾಗಿ ಸೃಷ್ಟಿಸಿರುವ ಬುಲೆಟ್ ಪ್ರಕಾಶ್‌ರ 'ಹಿಜಡಾ ವೇಷದ ಹಾಸ್ಯ" ಸಹಿಸಲಸಾಧ್ಯ. ಆ ಮೂಲಕ ಅವರು ಪ್ರೇಕ್ಷಕರ ಎದೆಗೇ ಬುಲೆಟ್ ಹೊಡೆದಿದ್ದಾರೆ.

ಖಳನಟನ ಪಾತ್ರದಲ್ಲಿ ಮುನಿರಾಜು ಯಾವೊಬ್ಬ ಪರಭಾಷಾ ನಟನಿಗೂ ಕಮ್ಮಿ ಇಲ್ಲ. ಅದೇ ರೀತಿ ಕೋಟೆ ಪ್ರಭಾಕರ್, ಹರೀಶ್ ರೈ, ರಘು ಎಲ್ಲರೂ ಪಾತ್ರಕ್ಕೆ ಸರಿಯಾಗಿ ಮ್ಯಾಚ್ ಆಗುತ್ತಾರೆ. ರವಿ ಬೆಳಗೆರೆಯವರ ರಾಕಿಂಗ್ ಸ್ಟೈಲ್ ಕೆಲವು ಹೊತ್ತು ಭಯ ಹುಟ್ಟಿಸುತ್ತದೆ. ಮೊದಲಿಂದ ಕೊನೇವರೆಗೆ ಒಂದು ಕನ್ಸಿಸ್ಟೆನ್ಸಿಯನ್ನು ಅಭಿನಯದಲ್ಲಿ ಬೆಳಗೆರೆ ಉಳಿಸಿಕೊಂಡಿದ್ದಾರೆ. ಹಾಗೇ ರವಿ ಕಾಳೆಯಿಂದ ಸಾಕಷ್ಟು ಕೆಲಸ ತೆಗೆಸಲಾಗಿದೆ.

ಮನೋಮೂರ್ತಿ ಸಂಗೀತದಲ್ಲಿ ಹೇಳುವಂಥ ತಾಕತ್ತಿಲ್ಲ. 'ಲಹರಿ ಮೋಹ ಲಹರಿ.." ಹಾಡು ಒಮ್ಮೆ ಕೇಳಿ ಆನಂದಿಸಿರಿ ಎನ್ನುವುದಕ್ಕೆ ಮಾತ್ರ ಸೀಮಿತ. ಐಟಂ ಸಾಂಗ್‌ನ ಟ್ರ್ಯಾಕು ತೆಲುಗಿನ ಪೋಕ್ರಿಯ ಹಾಡನ್ನು ಹೋಲುತ್ತದೆ. ಸೀತಾರಾಂ ಕ್ಯಾಮರಾ ಕಣ್ಣಿನ ಬಗ್ಗೆ ಎರಡು ಮಾತಿಲ್ಲ. ನಿರ್ದೇಶಕರ 'ರಕ್ತಸಿಕ್ತ" ಕಲ್ಪನೆಗೆ ಅವರು ಕಮರ್ಷಿಯಲ್ ಸಿನಿಮಾ ರೂಪ ಕೊಟ್ಟಿದ್ದಾರೆ. ಪೆಟ್ರೋಲ್ ಬಂಕ್ ಮತ್ತು ಕೆ.ಆರ್. ಮಾರ್ಕೆಟ್‌ನ ಹೊಡೆದಾಟದ ದೃಶ್ಯ ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಕತೆಯ ವೇಗ ಕಾಯ್ದುಕೊಂಡು ಹೋಗುವಲ್ಲಿ ಸಂಕಲನಕಾರ ಯಶಸ್ವಿಯಾಗಿದ್ದಾರೆ. ಥ್ರಿಲ್ಲರ್ ಮಂಜು ತುಂಬಾ ವರ್ಷಗಳ ನಂತರ ಮೈ ನವಿರೇಳಿಸುವ ಸ್ಟಂಟ್‌ಗಳಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.

ಶ್ರೀವತ್ಸಗೆ ಕೊನೆಗೊಂದು ಮಾತು : ಇದು ಕಾಲ್ಪನಿಕ ಕತೆ ಆಗಿದ್ದರೂ ರಕ್ತಪಾತ, ಸರಣಿ ಕೊಲೆ, ಕಣ್ಣುಗುಡ್ಡೆ ಕೀಳುವ ಪರಿಗಳು ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂದು ಒಮ್ಮೆ ಯೋಚಿಸಬೇಕಿತ್ತು. ಸರಕಾರವೇ 'ಸರ್ಕಾರ್"ಗೆ ಸುಪಾರಿ ಕೊಟ್ಟು, ಸಿಕ್ಕಸಿಕ್ಕವರನ್ನು ಸರ್ವನಾಶ ಮಾಡಿಸುತ್ತದೆ ಎಂಬ ಅಮೂರ್ತ ಕಲ್ಪನೆಗೆ ಹ್ಯಾಟ್ಸ್ ಆಫ್. ಹಾಗೇ ಪೊಲೀಸ್ ಇಲಾಖೆಯನ್ನು ಬುಲೆಟ್ ಪ್ರಕಾಶ್ ಕಾಮಿಡಿಗೆ ಹೋಲಿಸಿದ್ದೂ ...

ಒಟ್ಟಿನಲ್ಲಿ ಹೊಸತನ ಇಲ್ಲದ ಕತೆ ಇದ್ದರೂ, ಅದೇ ತಾಯಿ ಮಗನ ಸೆಂಟಿಮೆಂಟ್ ಪ್ಲಸ್ ರಕ್ತಪಾತವೇ ಮರುಕಳಿಸಿದ್ದರೂ ಮಾಸ್‌ಗೆ ಇದು ಇಷ್ಟವಾಗಬಹುದು. ಶಿವಣ್ಣನ ಅಭಿಮಾನಿಗಳಿಗೆ ಹಬ್ಬವಾಗಲೂಬಹುದು. ಉಳಿದದ್ದನ್ನು ಮಲೆ ಮಾದೇಶ್ವರನಿಗೆ ಬಿಡಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada