For Quick Alerts
  ALLOW NOTIFICATIONS  
  For Daily Alerts

  ನಾನು ನನ್ನ ಕನಸು...ನಾನು ನನ್ನ ಅನಿಸಿಕೆ

  By * ಭವಾನಿ ಬಿಜಲಿ
  |

  Naanu Nanna Kanasu
  ನಾನು ನನ್ನ ಕನಸು ತುಂಬಾ ಒಳ್ಳೆಯ ಚಿತ್ರ ಎಂದು ತುಂಬಾ ಜನ ಹೇಳಿದ್ದುದರಿಂದ, ನಾನು ನನ್ನ ಗಂಡ ಕಳೆದ ವಾರ ಆ ಚಿತ್ರವನ್ನು ನೋಡಿದೆವು. ಚಿತ್ರ ನೋಡುವ ಮೊದಲು, ಈ ಚಿತ್ರದ ಬಗ್ಗೆ ನಾನು ಕೆಳಕಂಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ:

  *ಮಗಳ ಜೀವನದ ಬಹುಮುಖ್ಯ ಘಟ್ಟಗಳಲ್ಲಿ, ಅವಳ ಸ್ವಂತ ನಿರ್ಧಾರಗಳಿಂದ ತಂದೆಯ ಭಾವನೆಗಳಿಗೂ, ಸ್ವಾಭಿಮಾನಕ್ಕೂ ಪೆಟ್ಟು ಬೀಳುವದರ ಬಗ್ಗೆ ಸೆನ್ಸಿಟಿವ್ ಚಿತ್ರಣವಿರುತ್ತದೆ.

  *ಅತಿಯಾದ ಅಟ್ಯಾಚ್‌ಮೆಂಟ್ ಇಟ್ಟುಕೊಂಡಿರುವಂಥವರು ಅನುಭವಿಸುವ ಖಾಲಿತನ, ಸ್ವಂತಿಕೆಯಿಲ್ಲದ ಜೀವನ ಮತ್ತು ಇನ್‌ಸೆಕ್ಯೂರಿಟಿ ಫೀಲಿಂಗ್ಸ್ ...ಇವುಗಳ ಕುರಿತಾದ ಮನಮುಟ್ಟುವ ಸನ್ನಿವೇಶಗಳಿರುತ್ತವೆ.

  *ಈ ಚಿತ್ರವು, ಎಲ್ಲಾ ತಂದೆಗಳಿಗೂ ಒಂದು ಮನಮುಟ್ಟುವಂತಹ ಪರಿಣಾಮಕಾರಿಯಾದ ಸಂದೇಶವನ್ನು ತಲುಪಿಸುತ್ತದೆ.

  ಚಿತ್ರ ನೋಡಿ ಬಂದ ಮೇಲೆ ನನಗನ್ನಿಸಿದ್ದೇನೆಂದರೆ, ಚಿತ್ರದ ಪ್ರತಿಯೊಂದು ದೃಶ್ಯದಿಂದಲೂ ಮನರಂಜನೆಯಾಯಿತು. ಆದರೆ ನನ್ನ ನಿರೀಕ್ಷೆಗಳು ಈಡೇರಲೇ ಇಲ್ಲ ಎಂದು. ಅತ್ಯುನ್ನತ ಮಟ್ಟದ ಚಿತ್ರ ಮಾಡಬಹುದಾದಂತಹ ಕಥಾವಸ್ತು ಇಟ್ಟುಕೊಂಡು ಉತ್ತಮ ಚಿತ್ರ ಮಾಡಿದ್ದಾರೆ. ಕಥಾವಸ್ತು ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರಿತವಾಗಬಹುದಿತ್ತು. ಈ ಚಿತ್ರದ ಕಥೆ ನನ್ನ ಸ್ವಂತ ಅನುಭವಕ್ಕೆ ಹತ್ತಿರವಾಗಿರುವುದರಿಂದ ನನಗೆ ಈ ಲೇಖನ ಬರೆಯುವ ಹುಮ್ಮಸ್ಸಾಯಿತು.

  ನನ್ನ ಗಮನ ಸೆಳೆದ ಅಂಶಗಳು:
  1. ಕೋರಿಲೇಶನ್
  ಸಾಮಾನ್ಯವಾಗಿ ಮಗು ಹುಟ್ಟಿ ಯೌವನಾವಸ್ಥೆಗೆ ಬರುವವರೆಗೂ ತಂದೆಯು ತನ್ನ ವೃತ್ತಿಯಲ್ಲಿ ಅಂದರೆ ಹೊಟ್ಟೆಪಾಡಿಗೆ ದುಡಿಯುವುದರಲ್ಲಿ ತಲ್ಲೀನನಾಗಿರುತ್ತಾನೆ. ಮಗುವಿನ ದೈನಂದಿನ ಬಾಲ್ಯ ಲೀಲೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳೇ ಕಡಿಮೆ. ಆದರೆ ಚಿತ್ರದಲ್ಲಿ ಮುತ್ತಪ್ಪನಿಗೆ, ಹೊಟ್ಟೆಪಾಡಿಗೆ ದುಡಿಯುವ ಅವಶ್ಯಕತೆಯಿರಲಿಲ್ಲ. ಎಸ್ಟೇಟ್ ಕೆಲಸಗಳ ಮೇಲ್ವಿಚಾರಣೆಗೂ ಆತ ಹೆಚ್ಚು ಗಮನ ಕೊಡಬೇಕಾಗಿರಲಿಲ್ಲ. ಆದ್ದರಿಂದ ಮಗಳ ಲಾಲನೆಪಾಲನೆಗಳಲ್ಲಿ ಒಬ್ಬ ತಾಯಿಯಂತೆ ಆತನೂ ಪಾಲ್ಗೊಳ್ಳುತ್ತಿದ್ದ.

  ಹೀಗಾಗಿ ಮಗಳ ಬಗ್ಗೆ ಅಸಹಜವಾದ ಅಕ್ಕರೆ, ಕಾಳಜಿ, ಅಟ್ಯಾಚ್‌ಮೆಂಟ್ ಅಸಹಜವಾದುದೇನಲ್ಲ. ಮುತ್ತಪ್ಪನು ವಿಶೇಷ ಸನ್ನಿವೇಶಗಳಿಂದಾದ ವಿಶೇಷ ತಂದೆಯಾದುದರಿಂದ ಇಲ್ಲಿ ಒಬ್ಬ ಸಾಮಾನ್ಯ ತಂದೆಯ ಚಿತ್ರಣವಾಗಲಿಲ್ಲ. ಅಂದರೆ, ಪ್ರತಿಯೊಬ್ಬ ತಂದೆಗೂ ಮುತ್ತಪ್ಪನೊಂದಿಗೆ ಕೋರಿಲೇಟ್ ಮಾಡಿಕೊಳ್ಳಲು ಅಥವಾ ಆ ಪಾತ್ರದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು ಕಷ್ಟವಾಗಬಹುದು. ಈ ಕೋರಿಲೇಶನ್ ಫ್ಯಾಕ್ಟರ್ ಇನ್ನೂ ಚೆನ್ನಾಗಿ ಮೂಡಿಬರಬೇಕಾಗಿತ್ತು.

  2. ಫೇರಿ ಟೇಲ್
  ಕಥೆಯಲ್ಲಿ, ಮಗಳು ಕೈಗೊಂಡ ಯಾವ ನಿರ್ಧಾರಗಳೂ ಅಸಫಲವಾಗಲಿಲ್ಲ. ಇದರ ತಾತ್ಪರ್ಯವೇನೆಂದರೆ, ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಸರಿಯಾಗಿರುವುದರಿಂದ, ತಂದೆ-ತಾಯಿ ಮಕ್ಕಳ ಭವಿಷ್ಯದ ಬಗ್ಗೆ ತಲೆ ಹಾಕುವ ಅವಶ್ಯಕತೆಯಿಲ್ಲ ಎಂದು. ಈ ವಿಷಯದಲ್ಲಿ ಸ್ವಲ್ಪ ವಾಸ್ತವಿಕತೆಯನ್ನು ತೋರಿಸಬೇಕಾಗಿತ್ತು. ಪ್ರಧಾನ ಮಂತ್ರಿಗಳೊಡನೆ ಫೋನ್ ನಲ್ಲಿ ಮಾತನಾಡುವಷ್ಟು ಉನ್ನತ ಹುದ್ದೆಯಲ್ಲಿರುವ ಅಳಿಯನ ಬದಲು ಒಬ್ಬ ಸಾಮಾನ್ಯ ಹುದ್ದೆಯಲ್ಲಿರುವ ಅಳಿಯನನ್ನು ತೋರಿಸಬಹುದಾಗಿತ್ತು. ಏಕೆಂದರೆ ಮಗಳು ಒಬ್ಬ ಸಾಧಾರಣ ಹುಡುಗನನ್ನು ಪ್ರೀತಿಸಿದ್ದಾಳೆಯೆಂದೇ ಸಾಮಾನ್ಯವಾಗಿ ಅಪ್ಪ-ಮಗಳ ನಡುವೆ ಭಿನ್ನಾಭಿಪ್ರಾಯ ಬರುವುದು.

  ಮೇಲಾಗಿ ಮುತ್ತಪ್ಪನಿಗೆ ತನ್ನ ಮಗಳ ಮೇಲೆ ತುಂಬಾ ವಿಶ್ವಾಸ ಮತ್ತು ಅವಳ ನಿರ್ಧಾರಗಳು ಸರಿಯಾಗಿಯೇ ಇರುತ್ತವೆಯೆಂದು ಹೆಮ್ಮೆ ಇರುತ್ತದೆ. ಆದರೆ ಎಲ್ಲ ತಂದೆಗಳ ವಿಷಯ ಹಾಗಿರುವುದಿಲ್ಲ. ಹಾಗೆಯೇ ಎಲ್ಲಾ ಮಕ್ಕಳ ನಿರ್ಧಾರಗಳೂ ಯಾವಾಗಲೂ ಸರಿಯಾಗಿರುವುದಿಲ್ಲ. ಅಪ್ಪನ ವಿರುದ್ಧ ಯಾವುದೋ ನಿರ್ಧಾರ ತೆಗೆದುಕೊಂಡು ಮಗಳು ನಷ್ಟ ಅನುಭವಿಸುವ ಒಂದಾದರೂ ಸನ್ನಿವೇಶವನ್ನು ತೋರಿಸಬಹುದಾಗಿತ್ತು. ಆದರೆ ಫೇರಿ-ಟೇಲ್ ಥರ ಎಲ್ಲವನ್ನೂ ಸುಂದರವಾಗಿ ತೋರಿಸಲಾಗಿದೆ.

  3. ಸ್ವಲ್ಪ ತೂಕದ ಕೊರತೆ
  ಅಪ್ಪ ಮಗಳ ನಡುವೆ ಭಿನ್ನಾಭಿಪ್ರಾಯಗಳಾದಾಗ ಮಗಳು ತನಗೆ ಸರಿ ಅನ್ನಿಸಿದ್ದನ್ನೇ ಮಾಡುತ್ತಾಳೆ. ಅಪ್ಪನಿಗೆ ಇದರಿಂದ ಚುರುಕು ಮುಟ್ಟುತ್ತದೆ. ಈ ರೀತಿ ಚುರುಕು ಅಥವ ಶಾಕ್ ಟ್ರೀಟ್‌ಮೆಂಟ್ ಆದಾಗ ಮುತ್ತಪ್ಪನ ವರ್ತನೆಯಲ್ಲಿ ಗಾಂಭೀರ್ಯತೆ ಅಥವ ಸೀರಿಯಸ್‌ನೆಸ್ ಸ್ವಲ್ಪ ಕಡಿಮೆಯಾಗಿತ್ತು. ಅವನ ಮುಖದ ಭಾವನೆ-ಭಂಗಿಗಳು ಮತ್ತು ಆಡುವ ಮಾತುಗಳು ಹಲವು ಬಾರಿ ಹಾಸ್ಯಾಸ್ಪದವಾಗಿದ್ದವು (ಬಹುಶಃ, ಮಗಳ ನಿರ್ಧಾರಗಳು ಸರಿಯಾಗಿಯೇ ಇರುತ್ತವೆಯೆಂದು ಅವನಿಗೆ ನಂಬಿಕೆ ಇದ್ದುದೇ ಇದಕ್ಕೆ ಕಾರಣವಿರಬಹುದು).

  ಮಗಳು ಎರಡು ಗಂಟೆಗಳ ಅಥವ ಎರಡು ವರ್ಷಗಳ ಕಾಲ ದೂರವಾದರೆ ಕಾಡುವ ಖಾಲಿತನವನ್ನು ಗಂಭೀರವಾಗಿ ಚಿತ್ರೀಕರಿಸಬಹುದಾಗಿತ್ತು. ಮಗಳು ತನ್ನ ಪ್ರಿಯಕರನ ಸಾನಿಧ್ಯದಲ್ಲಿ ಅಪ್ಪ ಅಮ್ಮನನ್ನು ಮರೆತು ಸುಖವಾಗಿರುವಾಗ ಅಪ್ಪನಿಗಾಗುವ ಇನ್ಸೆಕ್ಯೂರಿಟಿ ಫೀಲಿಂಗ್ ಬಗ್ಗೆಯೂ ಇದೇ ಗಮನವನ್ನು ವಹಿಸಬಹುದಾಗಿತ್ತು. ಹೀಗಾಗಿ ಕೆಲವೆಡೆ ಅಪ್ಪನ ವರ್ತನೆ ಮನಮುಟ್ಟುವಂತೆ ಇರದೆ ಸ್ವಲ್ಪ ತೂಕ ಕಳೆದುಕೊಂಡಂತೆ ಕಾಣುತ್ತಿತ್ತು. ಅಷ್ಟೆ ಅಲ್ಲದೆ ಚಿತ್ರ ನೋಡಿ ಬಂದ ಮೇಲೆ ಮಗಳ ಪಾತ್ರ ನೆನಪಿನಲ್ಲಿ ಉಳಿದೇ ಇಲ್ಲ. ಆದರೆ ಮನೆಕೆಲಸದ ಪಟೇಲನ ಹಾಗೂ ಪ್ರಾಕ್ಟಿಕಲ್ ತಾಯಿಯ ಮುಖ ಮಾತ್ರ ಕಣ್ಣಿನಲ್ಲಿ ಅಚ್ಚಳಿಯದೆ ನಿಂತಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X