twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರವಿಮರ್ಶೆ: ನೀನೆ ನೀನೆ ಸಿಂಪಲ್ ಲವ್ ಸ್ಟೋರಿ

    By Super
    |

    ಒಂದು ಸಿಂಪಲ್ ಲವ್ ಸ್ಟೋರಿ ಹೇಗಿದ್ದರೆ ಚಂದ? ಹೀಗಿದ್ದಾಗ ಮಾತ್ರ ಅದು ಅಂದ/ಚಂದ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನಿರ್ದೇಶಕ ಶಿವಧ್ವಜ್. ಕತೆಯಲ್ಲಿ ಹೊಸತನ ಖಂಡಿತ ಇಲ್ಲ. ಆದರೆ ಅಲ್ಲಿ ಲವಲವಿಕೆ ಇದೆ. ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರ ಜೀವನಗಾಥೆಯಿದೆ. ಸಿನಿಮಾ ಅಷ್ಟು ನೀಟಾಗಿ ಮೂಡಿಬರಲು ಕಾರಣ- ಇದು ಬದುಕಿನ ಕತೆ. ಘಟಿಸಿದ ದುರಂತ. ಅಥವಾ ಶಿವಧ್ವಜ್ ಉಂಡ ನೋವಿನ ವ್ಯಥೆ !

    *ವಿನಾಯಕರಾಮ್ ಕಲಗಾರು

    ಅದೇ ನೋವಿನ ಕತೆಯನ್ನು ಎರಡೂವರೆ ಗಂಟೆ ಕುಳಿತು ನೋಡುವಂತೆ ಮಾಡಿದ್ದಾರೆ. ಹಾಗಂತ ಎಲ್ಲವನ್ನೂ ಮಕ್ಕಿ ಕಾ ಮಕ್ಕಿ ಬಟ್ಟಿ ಇಳಿಸಿದ್ದಾರೆ ಎಂದರೆ ಅದು ತಪ್ಪಾಗುತ್ತದೆ. ಕೆಲವು ಕಾಲ/ ಸನ್ನಿವೇಶಗಳಿಗೆ ಸರಿಹೊಂದುವ ಪ್ರಸ್ತುತ ವಿದ್ಯಮಾನಗಳು ಇಲ್ಲಿವೆ. ಇದು ಸಾಫ್ಟ್ ವೇರ್ ಯುಗ. ಇಲ್ಲಿ ಭಾವನೆಗಳಿಗಿಂತ ಹೆಚ್ಚು ಮಾತನಾಡೋದು ತಂತ್ರಜ್ಞಾನ. ಒಟ್ಟಾರೆ ಹೇಳುವುದಾದರೆ : ಲ್ಯಾಪ್‌ಟಾಪ್‌ನಲ್ಲಿ ಸಂಸಾರ. ಮೊಬೈಲ್‌ನಲ್ಲಿ ವ್ಯವಹಾರ. ಅದರಿಂದ ಯಾರೂ ಹೊರತಲ್ಲ. ಐಟಿಬಿಟಿ ಕಂಪನಿಯಲ್ಲಿ ಅಭಿಷೇಕ್ ಎಂಬ ಹುಡುಗ ಕೆಲಸ ಮಾಡುತ್ತಿರುತ್ತಾನೆ. ಸಾಫ್ಟ್‌ವೇರ್ ಕಿಂಗ್ ರಾಜಶೇಖರ್ ಮಗಳು ನಂದಿನಿಯನ್ನು ಪ್ರೀತಿಸುತ್ತಾನೆ. ಕೋಟಿ ಕಂಡ ಅವಳ ಇಷ್ಟಾರ್ಥ ಸಿದ್ಧಿಗೆ ಸಾಲ ಮಾಡುತ್ತಾನೆ. ಹೆಚ್ಚು ಮೊತ್ತದ ಬಾಡಿಗೆ ಮನೆ ಹಿಡಿಯುತ್ತಾನೆ. ಸಾಲ ಮಾಡಿ ತುಪ್ಪ ತಿನ್ನಲು ಹೋಗಿ ಶೂಲಕ್ಕೆ ತಲೆ ಕೊಡುತ್ತಾನೆ. ಸುಳ್ಳು ಹೇಳಿ ಸಿಕ್ಕಿಬೀಳುತ್ತಾನೆ. ಪ್ರೀತಿಸಿದ ನಂದಿನಿಯೊಂದಿಗೆ ನನ್ ದಾರಿ ನಂಗೆ...ನಿನ್ ದಾರಿ ನಿಂಗೆ ಎನ್ನುತ್ತಾನೆ....

    ಮೂರು ಫೈಟು, ಆರು ಡ್ಯೂಯೆಟ್ಟು, 12 ಮರ್ಡರ್... ಎನ್ನುವ ಮಾಸ್(!)' ಚಿತ್ರಗಳಿಗಿಂತ ನೀನೇ ನೀನೇ ನೂರು ಪಾಲು ವಾಸಿ. ಎಲ್ಲಿಯೂ ಆಭಾಸವೆನಿಸದ ಅಚ್ಚುಕಟ್ಟಾದ ನಿರೂಪಣೆ, ಕತೆಗೆ ತಕ್ಕುದಾದ ಪಾತ್ರಗಳ ಆಯ್ಕೆ... ಎಲ್ಲವನ್ನೂ ಶಿವಧ್ವಜ್ ಪ್ರೀ-ಪ್ಲ್ಯಾನ್ ಮಾಡಿಕೊಂಡೇ ಮಾಡಿದ್ದಾರೆ. ಅವರ ಮೊದಲ ಪ್ರಯತ್ನ ಖಂಡಿತ ಶ್ಲಾಘನೀಯ.

    ಆದರೆ ಕತೆಯಲ್ಲಿ ಕೆಲವು ದೃಶ್ಯಗಳು ಹೀಗೂ ಉಂಟೆ ಎಂಬ ಪ್ರಶ್ನೆ ಮೂಡಿಸುತ್ತವೆ. ಆದರೂ ಅದು ತರ್ಕಕ್ಕೆ ನಿಲುಕದ್ದು! ರಿಯಲ್ ಸ್ಟೋರಿಯನ್ನು ರೀಲ್‌ನಲ್ಲಿ ತೋರಿಸಲು ಹೋದರೆ ಇಂಥ ಕಷ್ಟ ಸಾಮಾನ್ಯ. ಆದರೂ ಅದನ್ನು ಕಟ್ಟುನಿಟ್ಟಾಗಿ, ನೀಟಾಗಿ ನಿಭಾಯಿಸಲು ಇನ್ನಷ್ಟು ಅನುಭವ ಬೇಕು. ಆದರೆ ಶಿವಧ್ವಜ್‌ಗೆ ಅವೆಲ್ಲಕ್ಕಿಂತ ನಟನೆಯ ಮೇಲೆಯೇ ಹೆಚ್ಚು ಆಸಕ್ತಿ ಇತ್ತೆಂದೆನಿಸುತ್ತದೆ. ಹೇಳಬೇಕಾದ್ದನ್ನು ಇನ್ನೂ ವೇಗವಾಗಿ ಹೇಳಿ ಮುಗಿಸಬಹುದಿತ್ತು. ಚಿತ್ರದಲ್ಲಿ ಹೆಚ್ಚು ಅಭಿನಯಕ್ಕೆ ಪ್ರಾಧಾನ್ಯತೆ ಕೊಟ್ಟಿಲ್ಲ. ಏಕೆಂದರೆ ಸಾಫ್ಟ್‌ವೇರ್ ಕಂಪನಿಯಲ್ಲಿ ಬಾಸ್ ಆದವ ಸಿಬ್ಬಂದಿಯೊಂದಿಗೆ ಮಾತನಾಡುವಾಗಲೂ ಆತನ ಕಣ್ಣು ಲ್ಯಾಪ್‌ಟಾಪ್ ಸ್ಕ್ರೀನ್ ಮೇಲೆಯೇ ಇರುತ್ತದೆ. ಅವ ಹೇಳಿದ್ದು ಕೇಳಿಸಿಕೊಂಡು ಮಾಡುವುದಷ್ಟೇ ಉಳಿದವರ ಕೆಲಸ!

    ಮಂಜು ಮಾಂಡವ್ಯ ಸಂಭಾಷಣೆ ಚೆನ್ನಾಗಿದೆ. ಚೊಚ್ಚಲ ಪ್ರಯತ್ನದಲ್ಲಿ ಸಂಗೀತ ನಿರ್ದೇಶಕ ಶ್ರೀ ಮುರಳಿ ಗೆದ್ದಿದ್ದಾರೆ. 'ಏನೊ ಇದು ಏನೊ...'ಹಾಡು ಇಷ್ಟವಾಗುತ್ತೆ. ಶರಣ್ ಕಾಮಿಡಿಗೆ ಫುಲ್ ಮಾರ್ಕ್ಸ್ ಕೊಡಬಹುದು. ದಿನೇಶ್ ಬಾಬು ಛಾಯಾಗ್ರಹಣ ಕೆಲವು ಕಡೆ ಇಷ್ಟವಾಗುತ್ತೆ. ಇನ್ನು ಕೆಲವು ಕಡೆ ಕ್ಯಾಮೆರಾ ಫೋಕಸಿಂಗ್ ಕೈಕೊಟ್ಟಿದೆ. ಧ್ಯಾನ್ ಸಾಫ್ಟ್‌ವೇರ್ ಕಂಪನಿ ನೌಕರನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾನೆ. ಶಿವಧ್ವಜ್ ಕನ್ನಡಕ್ಕೆ ಒಬ್ಬ ಸ್ಪುರದ್ರೂಪಿ ನಾಯಕಿಯನ್ನು ಬಳುವಳಿ ನೀಡಿದ್ದಾರೆ. ಐಶ್ವರ್ಯ ನಾಗ್ ಲವಲವಿಕೆಯ ಅಭಿನಯ ಇಡೀ ಚಿತ್ರದ ಹೈಲೈಟ್.

    ಪೂರಕ ಓದಿಗೆ:
    ನೀನೆ ನೀನೆ ಚಿತ್ರ ಏಕಕಾಲಕ್ಕೆ ವಿದೇಶದಲ್ಲಿ ತೆರೆಗೆ
    ರಸಿಕರ ಹೃದಯ ದರೋಡೆಗೆ ಬಂದ ಕೊಂಕಣಿ ಬೆಡಗಿ

    English summary
    Kannada movie review by vinayak ram kalagaru.
    Monday, July 2, 2012, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X