For Quick Alerts
  ALLOW NOTIFICATIONS  
  For Daily Alerts

  'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!

  By Staff
  |

  A scene from Slum Dog Millionaire
  ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರೆಹಮಾನ್ ಮತ್ತಿತರರಿಗೆ ಆಸ್ಕರ್ ಬಂದಿದ್ದು ಸಂತೋಷವೆ. ಆದರೆ, ಆ ಚಿತ್ರ ಅಷ್ಟು ಹೊಗಳಿಕೆಗೆ ಅರ್ಹವೆ? ಖಂಡಿತ ಇಲ್ಲ. ನಮ್ಮ ಭಾರತೀಯ ಚಿತ್ರರಂಗ ಅದಕ್ಕಿಂತಲೂ ಅತ್ಯದ್ಭುತ ಸಾಧನೆ ಮಾಡಿದೆ. ಅಜರಾಮರ ಅನ್ನಿಸುವಂಥ ಸಂಗೀತ ನೀಡಿದವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಒಂದು ಹೆಜ್ಜೆ ಮುಂದೇ ಹೋಗಿ ಸ್ಲಂಡಾಗ್ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುತ್ತಿವೆ. ಇದಲ್ವೆ ದುರಂತ?

  * ಎಚ್. ಆನಂದರಾಮ ಶಾಸ್ತ್ರೀ

  'ಸ್ಲಂಡಾಗ್ ಮಿಲಿಯನೇರ್' ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ದೊರೆತದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಎಂಟೂ ಪ್ರಶಸ್ತಿಗಳಿಗೂ ಚಿತ್ರವು ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಎ.ಆರ್.ರೆಹಮಾನ್‌ಗೆ, ನಮ್ಮ ಗುಲ್ಜರ್‌ಗೆ, ನಮ್ಮ ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿದ್ದು ನಮಗೆ ನಿಜಕ್ಕೂ ಖುಷಿ ಸುದ್ದಿ. ಕೊಳೆಗೇರಿಯ ಬಾಲಕನೊಬ್ಬ ತನ್ನ ಜೀವನಾನುಭವದ ನೆರವಿನಿಂದಲೇ ರಸಪ್ರಶ್ನೆ ಕಾರ್ಯಕ್ರಮವೊಂದರ ಎಲ್ಲ ಪ್ರಶ್ನೆಗಳಿಗೂ ಸರಿಯುತ್ತರ ನೀಡಿ ಎರಡು ಕೋಟಿ ರೂಪಾಯಿಗಳನ್ನು ಗೆಲ್ಲುವ, ಅಪ್ರತಿಮವೇನೂ ಅಲ್ಲದ ಮತ್ತು ಸಂಭಾವ್ಯವೂ ಅಲ್ಲದ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ವಿಶೇಷವೆಂದರೆ ಕಥೆಯ ನಿರೂಪಣೆಯ ಶೈಲಿ.

  ಚಾಯ್‌ವಾಲಾ ಹುಡುಗನೊಬ್ಬ 'ಕ್ಲಿಷ್ಟ' ಪ್ರಶ್ನೆಗಳಿಗೂ ಲೀಲಾಜಾಲವಾಗಿ ಸರಿಯುತ್ತರಗಳನ್ನು ನೀಡುತ್ತಹೋದಾಗ ಆ ಬಾಲಕನನ್ನು 'ಫ್ರಾಡ್' ಎಂದು ಭಾವಿಸಿ ವಿಚಾರಣೆಗಾಗಿ ಪೋಲೀಸ್ ವಶಕ್ಕೆ ನೀಡಲಾಗುತ್ತದೆ. ಪೋಲೀಸ್ ಒದೆಗಳ ಮಧ್ಯೆ, ಆ ಬಾಲಕನ ಜೀವನಾನುಭವವೆಂಬ ಸತ್ಯದ ಅನಾವರಣವಾಗತೊಡಗುತ್ತದೆ. ಈ ಅನಾವರಣ ಕ್ರಿಯೆಯಲ್ಲಿ, ಭಾರತದ ಕೊಳೆಗೇರಿಯಿಂದ ಮೊದಲ್ಗೊಂಡು ಸಕಲ ಕೊಳಕುಗಳೂ ತೆರೆಯಮೇಲೆ ಕಾಣಿಸಿಕೊಳ್ಳುತ್ತವೆ. ಈ ಕೊಳಕುಗಳನ್ನು ಚೆನ್ನಾಗಿ ಪೋಣಿಸಿ, ರಂಗು ನೀಡಿ, ಕಣ್ಣಿಗೆ ರಾಚುವಂತೆ ಪ್ರಸ್ತುತಪಡಿಸಿದಾಗ ಆಸ್ಕರ್ ಬರದಿದ್ದೀತೇ?

  'ಕಲೆಯ ಪ್ರಕಾರಗಳಿಗಾಗಿ ಆಸ್ಕರ್ ಎಂಬ ಒಂದು ಪ್ರಶಸ್ತಿ' ಎಂದಷ್ಟೇ ಆದಲ್ಲಿ ಎಲ್ಲರಂತೆ ನಾನೂ ಸ್ವಾಗತಿಸುತ್ತೇನೆ, ಹರ್ಷಿಸುತ್ತೇನೆ. ಭಾರತೀಯನೊಬ್ಬ ಬರೆದ ಭಾರತೀಯ ಶೈಲಿಯ ಕಥೆಯನ್ನು, ಭಾರತೀಯ ಚಲನಚಿತ್ರಪರಂಪರೆಯ ಹಲವು ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು, ಪಾಶ್ಚಾತ್ಯ ಶೈಲಿಯ ತಂತ್ರಗಾರಿಕೆ ಮತ್ತು ಚುರುಕಿನ ನಿರೂಪಣೆಗಳಿಂದ ಪ್ರಸ್ತುತಪಡಿಸಿದಾಗ ಸಹಜವಾಗಿಯೇ ಆ ಚಿತ್ರವು ಉಭಯ ಶೈಲಿಯ ಧನಾತ್ಮಕ ಗುಣಗಳ ಹದವರಿತ ಮಿಶ್ರಣವಾದ ಒಂದು ವಿಶಿಷ್ಟ ಚಿತ್ರವಾಗುತ್ತದೆ. ಈ ವೈಶಿಷ್ಟ್ಯದಿಂದಲೇ 'ಸ್ಲಂಡಾಗ್ ಮಿಲಿಯನೇರ್' ಚಿತ್ರವು ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ, ಇದರಲ್ಲಿ ಆಶ್ಚರ್ಯವೂ ಇಲ್ಲ, ಈ ಬಗ್ಗೆ ಅಪಸ್ವರವೂ ಸಲ್ಲ. ಆದರೆ, 'ಸ್ಲಂಡಾಗ್..'ನ ಆಸ್ಕರ್‌ನ ಅಬ್ಬರದಲ್ಲಿ ಭಾರತೀಯ ಚಲನಚಿತ್ರರಂಗದ ಅಪ್ರತಿಮ ಕಲಾವಂತಿಕೆಯಾಗಲೀ ಇದುವರೆಗಿನ ಸಾಧನೆಗಳಾಗಲೀ ಸಾಧಕರಾಗಲೀ ಜನಮಾನಸದಲ್ಲಿ ಮಂಕಾಗಬಾರದಷ್ಟೆ. ಮಾಧ್ಯಮಗಳಲ್ಲಿ 'ಸ್ಲಂಡಾಗ್..'ನ ಆಸ್ಕರ್ ಗಳಿಕೆಯ ವೈಭವೀಕರಣವು ಭಾರತದ ಯುವಪೀಳಿಗೆಯಲ್ಲಿ ಇಂಥದೊಂದು ಅಪಾಯವನ್ನು ಸೃಷ್ಟಿಸುತ್ತಿರುವುದು ಮಾತ್ರ ಕಳವಳದ ಸಂಗತಿ.

  ಆಸ್ಕರ್‌ನ ಈ ವೈಭವೀಕರಣದಿಂದ ಮತ್ತು ಈ ಇಡೀ ಚಿತ್ರವನ್ನು ಭಾರತದ ಸಾಧನೆಯೆಂಬಂತೆ ಬಿಂಬಿಸಲಾಗುತ್ತಿರುವುದರಿಂದ ಒಂದು ರೀತಿಯಲ್ಲಿ ಭಾರತೀಯ ಚಲನಚಿತ್ರರಂಗಕ್ಕೆ ಅಪಚಾರವಾದಂತಲ್ಲವೆ? ನಮ್ಮ ಇದುವರೆಗಿನ ಸಾಧಕರ ಸಾಧನೆಗಳನ್ನು ಅಪಮೌಲ್ಯಗೊಳಿಸಿದಂತಾಗಲಿಲ್ಲವೆ? ಎ.ಆರ್.ರೆಹಮಾನ್‌ನ ಸಂಗೀತದಷ್ಟೇ ಅದ್ಭುತವಾಗಿ, ಆತನ ಗೀತೆಗಳಿಗಿಂತ ಸುಶ್ರಾವ್ಯವಾಗಿ ಸಂಗೀತ ನೀಡಿರುವ ಅದೆಷ್ಟು ದಿಗ್ಗಜಗಳು ನಮ್ಮ ದೇಶದಲ್ಲಿ ಆಗಿಹೋಗಿಲ್ಲ, ಇಂದಿಗೂ ಇಲ್ಲ?

  ಮಾಧುರ್ಯದಲ್ಲಿ ನೌಷದ್, ಜಾನಪದ ಮಟ್ಟುಗಳ ಬಳಕೆಯಲ್ಲಿ ಎಸ್.ಡಿ.ಬರ್ಮನ್, ಪಾಶ್ಚಾತ್ಯ ಛಾಪು ಮೆರೆಸುವಲ್ಲಿ, ಬೆರೆಸುವಲ್ಲಿ ಆರ್.ಡಿ.ಬರ್ಮನ್, ಸಂಗೀತವನ್ನೂ ವಾದ್ಯಗಳನ್ನೂ ದುಡಿಸಿಕೊಳ್ಳುವಲ್ಲಿ ಇಳಯರಾಜಾ, ಗಾಯನದಲ್ಲಿ ರಫಿ, ಮುಕೇಶ್, ಕಿಶೋರ್, ಲತಾ, ಆಶಾ ಹೀಗೆ ಅದೆಷ್ಟೊಂದು ಉದಾಹರಣೆಗಳನ್ನು ನೀಡಬಹುದಲ್ಲವೆ? ಗುಲ್ಜಾರ್‌ರಷ್ಟೇ ಹಾಗೂ ಅವರಿಗಿಂತ ಉತ್ತಮವಾಗಿ ಗೀತರಚನೆ ಮಾಡಿರುವವರು ಅದೆಷ್ಟು ಮಂದಿ ನಮ್ಮಲ್ಲಿಲ್ಲ? ಕವಿ ಪ್ರದೀಪ್‌ರಿಂದ ಮೊದಲ್ಗೊಂಡು ಜಾವೇದ್ ಅಖ್ತರ್‌ವರೆಗೆ ಅದೆಷ್ಟು ರಚನಕಾರರ ಚಿತ್ರಗೀತೆಗಳು ಅದ್ಭುತವಾಗಿಲ್ಲ? ಕನ್ನಡವೂ ಸೇರಿದಂತೆ ನಾನಾ ಭಾರತೀಯ ಭಾಷೆಗಳಲ್ಲಿ ರೆಹಮಾನ್-ಗುಲ್ಜಾರ್‌ರನ್ನು ಸರಿಗಟ್ಟುವ/ಮೀರುವ ಸಾಧನೆ ಮಾಡಿರುವವರು ಅದೆಷ್ಟು ಮಂದಿ ಇಲ್ಲ?

  'ಸ್ಲಂಡಾಗ್..'ನ 'ಜೈ ಹೋ..' ಗೀತೆ, ಮತ್ತು, ಹಿನ್ನೆಲೆ ಸಂಗೀತವೂ ಸೇರಿದಂತೆ ಒಟ್ಟು ಸಂಗೀತ ಇವು ಭಾರತೀಯ ಚಲನಚಿತ್ರರಂಗದ ಅತ್ಯುಚ್ಚ ಕೃತಿಗಳು ಎಂಬಂತೆ ನಮ್ಮ ಮಾಧ್ಯಮಗಳು ಬಿಂಬಿಸುತ್ತಿರುವುದು ಈ ವಿಭಾಗಗಳ ಇತರ ಭಾರತೀಯ ಸಾಧಕರಿಗೆ ಮತ್ತು ಅವರ ಕೃತಿಗಳಿಗೆ ಎಸಗಿದ ಅನ್ಯಾಯವಲ್ಲವೆ? ಪ್ರಸ್ತುತ ಆಸ್ಕರ್ ಹಂಗಾಮಾ ಬಗ್ಗೆ ಒಳಗೊಳಗೇ ನಮ್ಮ ನೌಷದ್ ಸಾಬ್, ಲತಾ ದೀದೀ, ಆಶಾ ದೀದೀ, ಜಾವೇದ್ ಸಾಬ್ ಇವರುಗಳಿಗೆ ಏನೆನ್ನಿಸುತ್ತಿರಬೇಡ?

  'ನಾನು ಎಷ್ಟೋ ಇಂಥ ಉತ್ತಮ ಗೀತೆಗಳನ್ನು ಹಾಡಿದ್ದೇನೆ; ಆದರೆ ಅವಕ್ಕೆ ಸೂಕ್ತ ಮನ್ನಣೆ ಸಿಗಲಿಲ್ಲ', ಎಂದು ಈಚೆಗಷ್ಟೇ ಆಶಾ ದೀದೀ ಮಾರ್ಮಿಕವಾಗಿ ನುಡಿದದ್ದನ್ನು ನಾವು ಗಮನಿಸಿದ್ದೇವಷ್ಟೆ. ಅದೆಲ್ಲ ಹೋಗಲಿ, ಇದೇ ರೆಹಮಾನ್ ಮತ್ತು ಗುಲ್ಜಾರ್‌ರ ಕೃತಿಗಳೇ ಬೇರೆ ಹಲವು ಚಿತ್ರಗಳಲ್ಲಿ 'ಸ್ಲಂಡಾಗ್..'ಗಿಂತಲೂ ಚೆನ್ನಾಗಿಲ್ಲವೆ? ಆಸ್ಕರ್‌ನ ಮಿತಿಯ ಪ್ರಜ್ಞೆ ನಮ್ಮ ಮಾಧ್ಯಮಗಳಿಗಿರಬೇಕಿತ್ತು; ಆ ಪ್ರಜ್ಞೆಯಿಂದಾಗಿ ಅವು ತಮ್ಮ 'ಆಸ್ಕರ್ ಅಬ್ಬರ'ಕ್ಕೊಂದು ಮಿತಿ ಹಾಕಿಕೊಳ್ಳಬೇಕಾಗಿತ್ತು.

  'ಸ್ಲಂ'ನಲ್ಲೇನಿದೆ? : ಇಷ್ಟಾಗಿ, 'ಸ್ಲಂಡಾಗ್ ಮಿಲಿಯನೇರ್' ಚಿತ್ರ ಹೇಗಿದೆ, ಅದರಲ್ಲಿ ಏನೇನಿದೆ, ಒಂದು ಸ್ಥೂಲ ನೋಟ ಹರಿಸೋಣ.

  ಚಿತ್ರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲೇ ಮುಂಬೈನ ಧಾರಾವಿ ಕೊಳೆಗೇರಿಯನ್ನು ವಿವಿಧ ಕೋನಗಳಲ್ಲಿ ಕಣ್ಣಿಗೆ ರಾಚುವಂತೆ ತೋರಿಸಲಾಗುತ್ತದೆ. ಕಥೆಯ ನೆಪದಲ್ಲಿ ಅರ್ಧ ಗಂಟೆಯೊಳಗೆ ಆ ಕೊಳೆಗೇರಿಯ ಎಲ್ಲ ಕೊಳಕು ದೃಶ್ಯಗಳನ್ನೂ ಪ್ರೇಕ್ಷಕನೆದುರು ಬಿಚ್ಚಿಡಲಾಗುತ್ತದೆ. ಚಲನಚಿತ್ರದುದ್ದಕ್ಕೂ ಕೊಳೆಗೇರಿ ಮಾತ್ರವಲ್ಲ, ಕಳ್ಳತನ, ಭಿಕ್ಷಾಟನೆ, ಮೋಸ, ಹಿಂಸೆ, ಬಡತನ, ಅಜ್ಞಾನ, ವೇಶ್ಯಾವೃತ್ತಿ, ಶೋಷಣೆ, ವಿವಿಧ ಮಾಫಿಯಾ, ಕೊಲೆ.... ಇವೇ ವಿಜೃಂಭಿಸುತ್ತವೆ. ಈ ಚಿತ್ರವನ್ನು ನೋಡಿದ ಅಮಾಯಕ ವಿದೇಶೀಯರಿಗೆ ಹಾಗೂ ಮುಗ್ಧ ಎನ್ನಾರೈ ಎಳೆಮೆದುಳುಗಳಿಗೆ 'ಭಾರತ ಒಂದು ದುಷ್ಟ ಹಾಗೂ ದರಿದ್ರ ದೇಶ' ಎಂಬ ಭಾವನೆ ಉಂಟಾದರೆ ಆಶ್ಚರ್ಯವಿಲ್ಲ.

  ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಗೊತ್ತಾಗುವ ಇನ್ನೊಂದು ಅಂಶವೆಂದರೆ, ಮಕ್ಕಳನ್ನು ಹೊರತುಪಡಿಸಿ ಚಿತ್ರದಲ್ಲಿ ಬರುವ ಬಹುತೇಕ ಭಾರತೀಯ ಪಾತ್ರಗಳು ದುಷ್ಟ ಪಾತ್ರಗಳು! ಇದು ಭಾರತೀಯರ ಬಗ್ಗೆ ವಿದೇಶೀಯರಲ್ಲಿ ಎಂಥ ಕಲ್ಪನೆಯನ್ನು ಮೂಡಿಸುತ್ತದೆಂದು ಯೋಚಿಸಿದರೆ ಗಾಬರಿಯಾಗುತ್ತದೆ! ಚಿತ್ರದ ದೃಶ್ಯವೊಂದರಲ್ಲಿ, ಕಾರೊಂದರ ಬಿಡಿಭಾಗಗಳನ್ನು ಕೊಳೆಗೇರಿ ಮಕ್ಕಳು ಕಳವು ಮಾಡಿದಾಗ, ನಷ್ಟಕ್ಕೊಳಗಾದವರ ಪೈಕಿ ಭಾರತೀಯನು 'ಗೈಡ್' ಬಾಲಕನಮೇಲೆ ಹಿಂಸಾಚಾರಕ್ಕಿಳಿದರೆ ಬಿಳಿ ತೊಗಲಿನ ವಿದೇಶೀ ದಂಪತಿಗಳು ಕರುಣೆ ಮೆರೆದು ಆ ಬಾಲಕನಿಗೆ ಕಾಸು ನೀಡುತ್ತಾರೆ! ಈ ದೃಶ್ಯವು ಜಗತ್ತಿಗೆ ನೀಡುವ ಸಂದೇಶವನ್ನು ಊಹಿಸಿರಿ. ಚಿತ್ರದ ನಿರ್ಮಾಪಕರ/ನಿರ್ದೇಶಕರ ಉದ್ದೇಶವನ್ನೂ ಊಹಿಸಿರಿ.

  ಇನ್ನೊಂದು ದೃಶ್ಯ: ಪಾಯಿಖಾನೆಯಲ್ಲಿ ಕೂಡಿಹಾಕಲ್ಪಟ್ಟಿದ್ದ ಬಾಲಕನೋರ್ವ (ಅವನೇ ಹೀರೊ) ಅಮಿತಾಭ್ ಬಚ್ಚನ್‌ನನ್ನು ನೋಡಲು ಪಾಯಿಖಾನೆಯ ಮಲದ ಗುಂಡಿಯೊಳಗೆ ಇಳಿದು ಮುಳುಗಿ ಸಾಗಿ ಇನ್ನೊಂದು ದ್ವಾರದಿಂದ ಹೊರಕ್ಕೆ ಬಂದು, ಮಲಭರಿತ ದೇಹದೊಂದಿಗೇ ಜನಸಮೂಹವನ್ನು ಛೇದಿಸಿಕೊಂಡು ಮುನ್ನುಗ್ಗಿ ಅಮಿತಾಭ್‌ನ ಹಸ್ತಾಕ್ಷರ ಪಡೆಯುತ್ತಾನೆ! ಭಾರತದ ಯಾವ ಕೊಳೆಗೇರಿಯ ಮಕ್ಕಳೂ ಈ ಮಟ್ಟಕ್ಕೆ 'ಇಳಿದದ್ದನ್ನು' ನಾನಂತೂ ನೋಡಿಲ್ಲ, ಓದಿಲ್ಲ, ಕೇಳಿಲ್ಲ. ಇಂಥ ದೃಶ್ಯಗಳನ್ನು ತೋರಿಸುವ ನಿರ್ಮಾಪಕ-ನಿರ್ದೇಶಕರ ಉದ್ದೇಶವನ್ನು ಲಘುವಾಗಿ ಪರಿಗಣಿಸಲಾದೀತೇ? ಭಾರತದ ಬಗ್ಗೆ ಪಾಶ್ಚಾತ್ಯರಿಗಿರುವ ಭಾವನೆ ಎಂಥದೆಂದು ನಮಗೆ ಗೊತ್ತಷ್ಟೆ.

  ಇಷ್ಟಾಗಿ, ಈ ಚಿತ್ರವು ಭಾರತದ ಬಗ್ಗೆಯಾಗಲೀ ಭಾರತೀಯರ ಬಗ್ಗೆಯಾಗಲೀ, ಕನಿಷ್ಠಪಕ್ಷ ಕೊಳೆಗೇರಿ ನಿವಾಸಿಗಳ ಬಗ್ಗೆಯಾಗಲೀ ಏನಾದರೂ ಧನಾತ್ಮಕ ಸಂದೇಶ ಬೀರುತ್ತದೆಯೇ? ಊಹ್ಞೂಂ. ಎರಡು ಕೋಟಿ ರೂಪಾಯಿ ಗೆಲ್ಲುವ ಹುಡುಗ ತನ್ನ ಪ್ರತಿಭೆಯಿಂದಾಗಲೀ ಪರಿಶ್ರಮದಿಂದಾಗಲೀ ಗೆಲ್ಲುವುದಿಲ್ಲ, ಜೀವನದಲ್ಲಿ ತಾನು ಅಕಸ್ಮಾತ್ತಾಗಿ ಅನುಭವಿಸಿದ ಘಟನೆಗಳಿಗೆ ಸಂಬಂಧಿಸಿದ ರಸಪ್ರಶ್ನೆಗಳೇ ಅದೃಷ್ಟವಶಾತ್ ಎದುರಾಗಿದ್ದರಿಂದಾಗಿ ಆತ ಕರೋಡ್‌ಪತಿಯಾಗುತ್ತಾನೆ, ಅಷ್ಟೆ.

  ರಸಪ್ರಶ್ನೆಯ ಕಥಾವಸ್ತು ಈ ಚಿತ್ರದಲ್ಲಿರುವುದು ಕೇವಲ ಕುತೂಹಲ ಹುಟ್ಟಿಸಲಿಕ್ಕಾಗಿ ಮತ್ತು 'ಭಾರತದ ಕೊಳೆಗೇರಿಯ ದರಿದ್ರ ಜೀವನವನ್ನೂ ಅದರಾಚೆಯ ದುಷ್ಟ ಜೀವನವನ್ನೂ' ಇದುವೇ ಭಾರತ ಎಂದು ಜಗತ್ತಿಗೆ ಸಾರಿ ತೋರಿಸುವುದಕ್ಕಾಗಿ. ಇಂಥ ಬ್ರಿಟಿಷ್ ಚಿತ್ರಕ್ಕೆ ಅಮೆರಿಕನ್ನರು ಆಸ್ಕರ್ ಕೊಟ್ಟರೆ ಅದು ನಿರೀಕ್ಷಿತವೇ. ಶತಮಾನಗಳಿಂದಲೂ ಅವರ ನಾಡಿಮಿಡಿತ ನಮಗೆ ಗೊತ್ತಿಲ್ಲವೆ? ಆದರೆ, ಆಸ್ಕರ್ ಬಂತೆಂದಾಕ್ಷಣ ನಮ್ಮವೇ ಮಾಧ್ಯಮಗಳು 'ಸ್ಲಂಡಾಗ್ ಮಿಲಿಯನೇರ್' ಚಿತ್ರವನ್ನು ಈ ಪಾಟಿ ಹಾಡಿ ಹೊಗಳುತ್ತಿವೆಯಲ್ಲಾ, ಇದಕ್ಕೇನೆನ್ನಬೇಕು? ದೇಶದ ಘನತೆ-ಗೌರವಗಳಿಗಿಂತ ಒಂದು ಚಲನಚಿತ್ರ ಹೆಚ್ಚೇ? ಈ ಮಾಧ್ಯಮಗಳಿಗೆ ನೋ ಆಸ್ಕರ್, ನೋ ಟೆಲ್ಲರ್!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X