»   » ಮಿಂಚು ಗುಡುಗು ಮಳೆ ತಂಗಾಳಿಯ 'ಸಂಗಮ'

ಮಿಂಚು ಗುಡುಗು ಮಳೆ ತಂಗಾಳಿಯ 'ಸಂಗಮ'

Posted By: ಪ್ರಸಾದ ನಾಯಿಕ
Subscribe to Filmibeat Kannada
Sangama : Kannada movie review
ಗಣೇಶ್ ಚಿತ್ರದುದ್ದಕ್ಕೂ ಮೋಡಗಳಂತೆ ಆವರಿಸಿಕೊಂಡಿದ್ದರೂ ಕವಿರಾಜ್ ಹನಿಸಿರುವ ಆರು ಹಾಡುಗಳ ಮಳೆ ಮೋಡಗಳಿಗೂ ಮಹತ್ವ ತಂದುಕೊಟ್ಟಿವೆ. ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ರಚಿಸಿರುವ ಹಾಡುಗಳು ಚಿತ್ರದ ಓಟಕ್ಕೆ ಒಂದು ಮೆರುಗನ್ನು ತಂದುಕೊಟ್ಟಿವೆ. ದೇವಿಶ್ರೀ ಪ್ರಸಾದ್ ಸಂಗೀತದ ಬಗ್ಗೆಯಂತೂ ಮಾತಾಡುವ ಹಾಗೆಯೇ ಇಲ್ಲ.

ಗಣೇಶ್ ಮಾತಿನ ಗುಡುಗಿನ ನಡುನಡುವೆ ಬಳುಕುವ ಬಳ್ಳಿಯಂತೆ ವೇದಿಕಾಳ ಕೋಲ್ಮಿಂಚು, ಮಳೆಯ ಕೊರತೆಯನ್ನು ತಣಿಸುವಂತೆ ಹನಿಯುವ ಕವಿರಾಜ್ ಲೇಖನಿಯಿಂದ ಜಿನುಗಿದ ಮಳೆಯ ಹನಿಗಳು, ಜೊತೆಗೆ ಆಂಧ್ರದ ನಾಡಿನಿಂದ ಬೀಸಿಬಂದಿರುವ ದೇವಿಶ್ರೀ ಪ್ರಸಾದ್ ಆಹ್ಲಾದಕರ ಸಂಗೀತದ ತಂಗಾಳಿ. ಇವೆಲ್ಲದರ ಸಮಾಗಮವೇ ಸಂಜಯ್ ಬಾಬು ನಿರ್ಮಾಣದ ಚಿತ್ರ 'ಸಂಗಮ'. ಇವೆಲ್ಲವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿರುವ ನಿರ್ದೇಶಕ ರವಿವರ್ಮ ಸಕಾಲದಲ್ಲಿ ಹದವಾದ ಮಳೆಚಿತ್ರ ಬಿಡಿಸಿದ್ದಾರೆ.

ಕಾರ್ಮೋಡವಿಲ್ಲದೆ ಮಿಂಚಿಗೆ ಅರ್ಥವಿಲ್ಲ, ಗುಡುಗದೆ ಮಳೆ ಸುರಿಯುವುದಿಲ್ಲ. ಹಾಗಾಗಿ ಇಲ್ಲಿ ಎಲ್ಲವೂ ಬೇಕು ಮತ್ತು ಎಲ್ಲವೂ ಪ್ರಾಮಖ್ಯತೆಯನ್ನು ಪಡೆದಿವೆ ಎನ್ನುವುದಕ್ಕೆ ನಿರ್ದೇಶಕರ ಜಾಣ್ಮೆಯೇ ಸಾಕ್ಷಿ. ಇದು ರವಿವರ್ಮಗೆ ಪ್ರಥಮ ಪ್ರಯತ್ನವಾದ್ದರಿಂದ ಬೆನ್ನುತಟ್ಟಲೇಬೇಕು. ಗಣೇಶ್ ಚಿತ್ರದುದ್ದಕ್ಕೂ ಮೋಡಗಳಂತೆ ಆವರಿಸಿಕೊಂಡಿದ್ದರೂ ಕವಿರಾಜ್ ಹನಿಸಿರುವ ಆರು ಹಾಡುಗಳ ಮಳೆ ಮೋಡಗಳಿಗೂ ಮಹತ್ವ ತಂದುಕೊಟ್ಟಿವೆ. ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ರಚಿಸಿರುವ ಹಾಡುಗಳು ಚಿತ್ರದ ಓಟಕ್ಕೆ ಒಂದು ಮೆರುಗನ್ನು ನೀಡಿವೆ. ದೇವಿಶ್ರೀ ಪ್ರಸಾದ್ ಸಂಗೀತದ ಬಗ್ಗೆಯಂತೂ ಮಾತಾಡುವ ಹಾಗೆಯೇ ಇಲ್ಲ. ಕವಿರಾಜ್ ಮತ್ತು ದೇವಿಶ್ರೀ ಹಾಡು-ಸಂಗೀತಗಳ ಜುಗಲಬಂದಿ ಪ್ರೇಕ್ಷಕರನ್ನು ತೊಯ್ದು ತೊಪ್ಪೆ ಮಾಡಿಸಿಬಿಡುತ್ತದೆ.

ನಿರ್ದೇಶಕ ರವಿವರ್ಮ ಅವರದೇ ಆದ ಕಥೆ ಮತ್ತು ಚಿತ್ರಕಥೆಯಲ್ಲಿ ಅಂಥ ವಿಶೇಷವೇನೂ ಇಲ್ಲ. ಅತ್ಯಂತ ಮಾಮೂಲಿ ಕಥೆಗೆ ಸರಾಗವಾದ ನಿರೂಪಣೆ ನೀಡಿ ಚಿತ್ರಕಥೆಯಲ್ಲಿನ ಹುಳುಕುಗಳನ್ನು ಮುಚ್ಚಿಹಾಕಿದ್ದಾರೆ. ಅನೇಕ ಸನ್ನಿವೇಶಗಳಲ್ಲಿ ಕನ್ನಡದಲ್ಲಿಯೇ ಬಂದುಹೋದ ಅನೇಕ ಚಿತ್ರಗಳ ಛಾಯೆಯಿದೆ. ನಾಯಕಿಯ ಅಪ್ಪ ರಂಗಾಯಣ ರಘುಗೆ ಕುಟುಂಬದ ಸ್ನೇಹಿತನಂತಿರುವ ಗಣೇಶ್ ಮೇಲೆ ತನ್ನ ಬಂಧುಗಳಿಗಿಂತ ಹೆಚ್ಚಿನ ನಂಬಿಕೆ. ನಾಯಕಿ ವೇದಿಕಾಳ ಮದುವೆಗಾಗಿ ಹುಡುಗನನ್ನು ಹುಡುಕಬೇಕೆಂದರೂ ಗಣೇಶನೇ ಬೇಕು. ಆದರೆ ನಾಯಕಿಗೋ ತೋರಿಸುವ ಬೇರೆ ಹುಡುಗರನ್ನು ಬಿಟ್ಟು ಗಣೇಶನ ಮೇಲೆ ಪ್ರೀತಿ. ಈ ಪ್ರೀತಿಗಿಂತ ತನ್ನ ಮೇಲೆ ಇಟ್ಟಿರುವ ನಂಬಿಕೆಯೇ ದೊಡ್ಡದು ಎಂಬುದನ್ನು ಬಲವಾಗಿ ನಂಬಿರುವ ನಾಯಕ.

ನಾಯಕಿ ನಾಯಕನನ್ನು ಪ್ರೀತಿಸುವುದು, ನಾಯಕನಿಗೆ ಅದು ಇಷ್ಟವಿದ್ದರೂ ಅದನ್ನು ತೋರ್ಪಡಿಸಿಕೊಳ್ಳದಿರುವುದು, ನಿಶ್ಚಯವಾಗಿರುವ ನಾಯಕಿಯ ಮದುವೆಯನ್ನು ತನ್ನ ಪ್ರೀತಿಗಾಗಿ ಬಲಿಕೊಡಲು ನಿಶ್ಚಯಿಸಿರುವ ನಾಯಕ ನಾಯಕಿಯಿಂದ ದೂರ ಹೋಗಲು ಪ್ರಯತ್ನಿಸುವುದು... ನಾಯಕ ಮತ್ತು ನಾಯಕಿಯನ್ನು ಅದಲು ಬದಲು ಮಾಡಿದರೆ ಈ ಕಥೆಯನ್ನು ಎಲ್ಲಿಯೋ ಕೇಳಿದ್ದೀವಲ್ಲಾ, ಯಾವುದೋ ಚಿತ್ರದಲ್ಲಿ ನೋಡಿದ್ದೀವಲ್ಲಾ ಅಂತ ಅಂದುಕೊಂಡರೆ ನೀವು ಖಂಡಿತ ಮೋಸ ಹೋಗಿಲ್ಲ ಅಂತೇ ಅರ್ಥ.

'ಸಂಗಮ' ಯಾವುದೇ ಚಿತ್ರದ ರಿಮೇಕ್ ಇರಲಿ, ಸನ್ನಿವೇಶಗಳು ಮತ್ತಾವುದೋ ಚಿತ್ರವನ್ನು ಹೋಲುತ್ತಿರಲಿ ನಿರ್ದೇಶಕರ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಎರಡು ಮಾತಾಡುವ ಹಾಗಿಲ್ಲ. ರವಿವರ್ಮ ಪೋಷಕ ಪಾತ್ರಗಳನ್ನು ಸರಿಯಾಗಿ ದುಡಿಸಿಕೊಂಡಿದ್ದಾರೆ. ಧೋಧೋ ಸುರಿಯುವ ಮಳೆಯಲ್ಲಿ ಬೆಚ್ಚಗಿನ ಬಜಿಯಂತಿರುವ ರಂಗಾಯಣ ರಘು ನಟನೆ ಇಲ್ಲಿ ಎಲ್ಲಿಯೂ ಎಲ್ಲೆಯನ್ನು ಮೀರಿಲ್ಲ. ಕೋಮಲ್ ಕುಮಾರ್ 'ಕಾಮಿಡಿ ಟೈಂ ಗಣೇಶ'ನನ್ನು ಮೀರಿಸಿದ್ದಾನೆಂದರೆ ತಪ್ಪಾಗುವುದಿಲ್ಲ. ಮೊಟ್ಟಮೊದಲ ಮಳೆಯಲ್ಲಿ ನೆನೆಯುವಾಗ ಸಿಗುವ ಹಿತವೇ ಕೋಮಲ್ ಅಭಿನಯದಲ್ಲಿದೆ. ಕಾಸ್ಮೋಪಾಲಿಟನ್ ನಗರದ ಮಳೆಯನ್ನು ನಂಬಲು ಸಾಧ್ಯವಿಲ್ಲದ್ದರಿಂದ ಗಣೇಶ್ ಕಣ್ಣೀರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದಕ್ಕೆ ನಿರ್ದೇಶಕರು ಅವಕಾಶವನ್ನೂ ನೀಡಿಲ್ಲ.ದಂತದ ಗೊಂಬೆಯಂತಿರುವ ವೇದಿಕಾ ಕನ್ನಡದ ಮಟ್ಟಿಗೆ ಕಪ್ಪಡರಿದ ಮೋಡದಲ್ಲಿ ಛಳ್ಳನೆ ಮಿನುಗುವ ಮಿಂಚು. ಭಾವಾಭಿನಯದಲ್ಲಿ, ತೆಳ್ಳನೆಯ ನಡುವನ್ನು ಕುಣಿಸುವಾಗ ಸುಳಿಮಿಂಚು.

ಕಥೆಯನ್ನು ಹೊಸತನವಿಲ್ಲದಿದ್ದರೂ ನಿರೂಪಣೆಯಲ್ಲಿ ಚುರುಕುತನ ತೋರಿಸಿರುವ ರವಿವರ್ಮ ಭಾವೋತ್ಕಟತೆಯನ್ನು ಬಿಂಬಿಸುವ ಸನ್ನಿವೇಶಗಳಲ್ಲಿ ಸೋತಿದ್ದಾರೆ. ಶೇಖರ್ ಚಂದ್ರು ಅವರ ಫೋಟೋಗ್ರಫಿ ಪ್ರತಿಯೊಂದು ಪ್ರೇಮನ್ನು ಅತ್ಯಂತ ಶ್ರೀಮಂತವಾಗಿಸಿದೆ. ವಿ ಉಮಾಕಾಂತ್ ಸಂಭಾಷಣೆಯಲ್ಲಿ ಅಂಥ ಕುಸುರಿಗಾರಿಕೆ ಕಂಡುಬರದಿದ್ದರೂ ಕ್ಲೈಮ್ಯಾಕ್ಸಲ್ಲಿ ಉಳಿದೆಲ್ಲವೂ ಮರೆಮಾಚುವಂತೆ ಬರೆದಿದ್ದಾರೆ.

ಹವಾಮಾನ ಮುನ್ಸೂಚನೆ : ರಾಜ್ಯಾದ್ಯಂತ ನಿರೀಕ್ಷೆಯ ಕಾರ್ಮೋಡ ಕವಿದಿದೆ. ಮುಂದಿನ ಮೊದಲ ವಾರದಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆಯಿದೆ. ನಂತರ ಕ್ರಮೇಣ ಮಳೆಯ ಪ್ರಮಾಣ ತಗ್ಗಲಿದೆಯಾದರೂ ಲಾಭದ ಬೆಳೆ ತಂದುಕೊಡುವುದರಲ್ಲಿ ಆಶ್ಚರ್ಯವಿಲ್ಲ.

ಕೊನೆಯ ಹನಿ : ಈಗ ಅಕ್ಟೋಬರ್ ಕಾಲವಾದ್ದರಿಂದ ಬೀಳಲಿರುವುದು ಮುಂಗಾರು ಮಳೆಯಲ್ಲ ಹಿಂಗಾರು ಮಳೆ!

English summary
Golden Ganesh starrer Sangama Kannada movie review by Prasad Naik. Actress Vedika, Rangayana Raghu, Komal are in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada