For Quick Alerts
  ALLOW NOTIFICATIONS  
  For Daily Alerts

  ಪಲ್ಟಿಗಳು ಸಾರ್ ಪಲ್ಟಿಗಳು! ಓಂಬ್ಲ್ಯಾಸ್ಟಿಂಗಾಯ ನಮಃ!

  By * ವಿನಾಯಕರಾಮ್ ಕಲಗಾರು
  |

  ಕನ್ನಡದ ಮಟ್ಟಿಗೆ ಇತ್ತೀಚೆಗೆ ಈ ಮಟ್ಟದ ಅದ್ಧೂರಿ ಚಿತ್ರ ನೋಡಿಯೇ ನೆನಪಿಲ್ಲ! ಹೌದು, ನಿರ್ದೇಶಕ ಓಂ ಪ್ರಕಾಶ್‌ರಾವ್ ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದ್ದಾರೆ. ಎಕೆ 47 ಚಿತ್ರದ ನಂತರ ಮತ್ತೊಂದು ಫುಲ್‌ಪ್ಯಾಕ್ ಎಂಟರ್‌ಟೈನರ್ ಎನಿಸುವ ಬ್ರಹ್ಮಾಸ್ತ್ರವನ್ನು ಬೆಳ್ಳಿತೆರೆ ಮೇಲೆ ಬಿಟ್ಟಿದ್ದಾರೆ. ಎಕೆ56!

  ಹೆಸರಿಗೆ ತಕ್ಕಂತೇ ಇಡೀ ಚಿತ್ರ ಟೆರರಿಸಂ ವಿರುದ್ಧ ಧಂಗೆ ಏಳುತ್ತದೆ. ಭಯೋತ್ಪಾದನೆಯ ಹೆಸರಲ್ಲಿ ಭಯ ಹುಟ್ಟಿಸುವ ವರ್ಗದವರ ವಿರುದ್ಧ ಸಮರ ಸಾರುತ್ತದೆ. ನಿರ್ದೇಶಕರು ಕಥೆಯನ್ನು ಆರಂಭಿಸುವ ಮುಂಚೆಯೇ ಈ ಬಗ್ಗೆ ಮಾಹಿತಿ ಕೊಡುತ್ತಾ ಹೋಗುತ್ತಾರೆ. ಚಿತ್ರವನ್ನು ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕರಿಗೆ ಅರ್ಪಿಸುತ್ತೇನೆ ಎಂದು ಸ್ಟೇಟ್‌ಮೆಂಟ್ ಕೊಡುವ ಮೂಲಕ ರೋಚಕತೆಗೆ ಸುಣ್ಣ-ಬಣ್ಣ ಬಳಿಯುತ್ತಾರೆ!

  ಚಿತ್ರದುದ್ದಕ್ಕೂ ಹಣದ ಹೊಳೆ ಹರಿಯುತ್ತದೆ. ನಾಯಕ ನಟ ಸಿದ್ಧಾಂತ್ ಎಂಟ್ರಿಯಿಂದ ಹಿಡಿದು, ಚೇಸಿಂಗ್ ದೃಶ್ಯಗಳು, ಫೈಟಿಂಗ್ ಸನ್ನಿವೇಶಗಳು ಪ್ರತೀ ಹಂತದಲ್ಲೂ ಒಂದಲ್ಲಾ ಒಂದು ಕಾರು-ಬೈಕನ್ನು ಪಲ್ಟಿ ಮಾಡಿಸುತ್ತಾರೆ. ಸಿದ್ಧಾಂತ್ ಲೆವೆಲ್ಲಿಗೆ ಇದು ಅಚ್ಚರಿ ಮೂಡಿಸುವ ಮಟ್ಟಕ್ಕೆ ಅದ್ದೂರಿ ಚಿತ್ರ. ಗಾಂಧಿನಗರದ ರೆಗ್ಯುಲರ್ ನಿರ್ಮಾಪಕರೇ ಆಗಿದ್ದರೆ ಒಂದೇ ಒಂದು ಚೇಸಿಂಗ್‌ಗೆ, ಅದೂ ಹೊಸ ಹುಡುಗನನ್ನು ಇಟ್ಟುಕೊಂಡು-ಕಟ್ಟಿಕೊಂಡು ಐದು ಆರು ಕೋಟಿ ಸುರಿಯಲು ಖಂಡಿತ ಮುಂದಾಗಿರುತ್ತಿರಲಿಲ್ಲ.

  ಇದು ಸಿದ್ಧಾಂತ್‌ಅವರೇ ನಿರ್ಮಿಸಿರುವುದರಿಂದ ಓಂ ಪ್ರಕಾಶ್ ಪಲ್ಟಿ ಮೇಲೆ ಪಲ್ಟಿ ಹೊಡೆಸಿದ್ದಾರೆ. ಸಿದ್ಧಾಂತ್ ಕಿಸೆಯಿಂದ ಕೋಟಿ ಕೋಟಿ ಚೆಲ್ಲಿಸಿದ್ದಾರೆ. ಅದಕ್ಕೆ ತಕ್ಕಂತೆ ನ್ಯಾಯ ಸಲ್ಲಿಸಿದ್ದಾರೆ. ಕೋಟಿ ರಾಮು ಚಿತ್ರಗಳಲ್ಲಷ್ಟೇ ಕಾಣಬಹುದಾದ ದೃಶ್ಯಗಳಿವು ಎಂದು ಪ್ರೇಕ್ಷಕ ಮಾತನಾಡಿಕೊಳ್ಳುವ ಮಟ್ಟಕ್ಕೆ ಸಿನಿಮಾದಲ್ಲಿ ರಿಚ್‌ನೆಸ್ ಎದ್ದುಕಾಣುತ್ತದೆ!

  ಇನ್ನು ಸಿದ್ಧಾಂತ್ ಬಗ್ಗೆ. ಈತ ಒಂಥರಾ ವಿಚಿತ್ರವಾಗಿ ಕಾಣುತ್ತಾನೆ. ದೂರದಿಂದ ನಡೆದು ಬರುತ್ತಿದ್ದರೆ ಬಳ್ಳಾರೀ ಭೀಮ ಶ್ರೀರಾಮುಲು ಕಂಡಂತೇ ಕಾಣುತ್ತಾನೆ. ಹತ್ತಿರದಿಂದ ಮುಖಕ್ಕೆ ಮಾತ್ರ ಕ್ಯಾಮೆರಾ ಹಿಡಿದರೆ ಟೈಗರ್ ಪ್ರಭಾಕರ್‌ನನ್ನೇ ಹೋಲುತ್ತಾನೆ.

  ವಿಚಿತ್ರ ಎಂದರೆ, ಶ್ರೀರಾಮುಲು ಅವರು ಹತ್ತು ವರ್ಷ ಹಿಂದೆ ಹೀಗೇ ಇದ್ದರೇನೋ ಎಂಬಂತೆ ಭಾಸವಾದರೆ, ಪ್ರಭಾಕರ್ ಅವರನ್ನು ಹತ್ತು ಮಾರು ದೂರ ನಿಲ್ಲಿಸಿದಾಗ ಕಾಣುವಂತೇ ಕಂಗೊಳಿಸುತ್ತಾರೆ ಸಿದ್ಧಾಂತ್. ನಟನೆಯಲ್ಲಿ ಕೊಂಚ ಪಕ್ವತೆ, ಬಾಡಿ-ಲ್ಯಾಂಗ್ವೇಜ್‌ನಲ್ಲಿ ಇನ್ನಷ್ಟು ತೀವ್ರತೆ ರೂಢಿಸಿಕೊಂಡರೆ ಖಂಡಿತ ಸಿದ್ಧಾಂತ್ ಕನ್ನಡಕ್ಕೆ ಕೋಟಿ ಆಸ್ತಿಯಾಗುವುದರಲ್ಲಿ ನಿಸ್ಸಂಶಯ!

  ಚಿತ್ರದುದ್ದಕ್ಕೂ ಕಾಡುವುದು ಸುಮಲತಾ ಅಂಬರೀಷ್‌ರ ನಾಯಕನ ತಾಯಿಯ ಪಾತ್ರ. ಅವರ ಕಣ್ಣಲ್ಲಿ ಮಿಂಚು ಮೂಡುತ್ತದೆ. ತಾಯಿಯ ಪರಿಷ್ಕೃತ ರೂಪ ತಾಂಡವವಾಡುತ್ತದೆ. ಶರತ್‌ಬಾಬು ಮತ್ತೊಮ್ಮೆ ಭೇಷ್ ಎನಿಸಿಕೊಂಡು, ಚಿತ್ರದ ಅರ್ಧ ಭಾಗದಲ್ಲೇ ಕಣ್ಮರೆಯಾಗುತ್ತಾರೆ.

  ಲೋಕನಾಥ್ ಅಂಕಲ್, ಪದ್ಮಜಾ ರಾವ್, ಆ ದಿನಗಳುಸತ್ಯ ಮೊದಲಾದವರನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವಿಲನ್ ಅತುಲ್ ಕುಲಕರ್ಣಿ ಟೆರರಿಸ್ಟ್ ಪಾತ್ರದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತಾರೆ. ಹಂತಹಂತವಾಗಿ ಭಯಮಿಶ್ರಿತ ಭೀತಿ ಹುಟ್ಟಿಸುತ್ತಾರೆ!

  ನಾಯಕಿ ಶಿರಿನ್ ಶಿಲಾಯುಗದ ಶಿಲ್ಪಕಲೆಗಳನ್ನು ನೆನಪಿಸುತ್ತಾರೆ. ಆ ಮಟ್ಟಕ್ಕೆ ಕಡಿಮೆ ಬಟ್ಟೆಸಿಕ್ಕಿಸಿಕೊಂಡು, ಪಡ್ಡೆ ಹುಡುಗರ ನಾಲಗೆ ಮೇಲೆ ಬರೆಎಳೆಯುತ್ತಾರೆ. ಸಿದ್ಧಾಂತ್-ಶಿರಿನ್ ಕುಣಿಯುತ್ತಿದ್ದರೆ ಪ್ರೇಕ್ಷಕರ ಕುರ್ಚಿಯೂ ಗಡಗಡಗಡನೆ...

  ಅಭಿಮಾನ್ ರಾಯ್ ಸಂಗೀತದಲ್ಲಿ ಕಿಕ್ ಇಲ್ಲ ಎನ್ನುವುದನ್ನು ಬಿಟ್ಟರೆ ಅದನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತೋರಿಸಲಾಗಿದೆ. ಅಭಿಮಾನ್ ಬದಲಾಗಬೇಕು. ತಾಜ್‌ಮಹಲ್ಹ್ಯಾಂಗೋವರ್‌ನಿಂದ ಹೊರಬರಬೇಕು. ಬರದಿದ್ದರೆ ಮುಂದಿನ ದಿನಗಳಲ್ಲಿ ಮನೆ-ಮಹಲ್‌ನಿಂದ ಹೊರಬರುವುದು ಕಷ್ಟವಾಗಬಹುದು!

  ಫಳನಿ ರಾಜ್ ಸಾಹಸನಿರ್ದೇಶನಕ್ಕೆ ಹ್ಯಾಟ್ಸ್ ಆಫ್. ಛಾಯಾಗ್ರಹಣದಲ್ಲಿ ಹೆಲಿಕ್ಯಾಫ್ಟರ್ ಶಾಟ್ಸ್ ನೋಡುತ್ತಿದ್ದರೆ ಹಾಲಿವುಡ್ ಸಿನಿಮಾ ನೆನಪಾಗುತ್ತದೆ. ಅದು ಮನೋಹರ್ ಅವರಿಗೆ ಸಲ್ಲಬೇಕಾದ ಗೌರವ. ಉಳಿದಂತೇ ಇಡೀ ಸಿನಿಮಾ ಫೋರ್ಸ್‌ನಿಂದ ಶುರುವಾಗಿ ಅದೇ ಫೋರ್ಸ್‌ನಿಂದ ಕ್ಲೈಮ್ಯಾಕ್ಸ್ ಕಾಣುತ್ತದೆ.

  ಈ ಗ್ಯಾಪ್‌ನಲ್ಲಿ ಅದೆಷ್ಟೋ ಕಾರುಗಳು ಪುಡಿಪುಡಿಯಾಗುತ್ತವೆ. ಜೀಪುಗಳು ಸೊಂಟ ಮುರಿದುಕೊಳ್ಳುತ್ತವೆ. ಬೈಕುಗಳ ಬೆನ್ನಿನ ಹುರಿ ಜಾರಿಕೊಳ್ಳುತ್ತದೆ. ಪ್ರೇಕ್ಷಕರ ಎದೆ ಬಡಿತ ಹೆಚ್ಚುತ್ತಾ ಹೋಗುತ್ತದೆ. ಎರಡು ತಾಸಿನಲ್ಲಿ ಬರೋಬ್ಬರಿ ಹತ್ತು ಚಿಲ್ಲರೆ ಕೋಟಿ ಚೆಲ್ಲು ಚೆಲ್ಲೆನುತಾ ಕೋಟಿ ಚೆಲ್ಲು ಚೆಲ್ಲೆನುತಾ...ಎಲ್ಲಾ ಮುಗಿದೇಹೋಯಿತು ಎನ್ನುವ ಹೊತ್ತಿಗೆ ಓಂ ಪ್ರಕಾಶಿಸುತ್ತದೆ, ಎಕೆ 56 ಮೊಳಗುತ್ತದೆ!

  English summary
  Read Kannada Movie AK 56 Review by Vinayakaram Kalagaru. N Omprakash Rao's good action movie. Siddanth, Shirin, Atul Kulkarni, Sumalatha Ambarish, Sharath Babu, Suchindra Prasad, Sangeetha, Kishori Ballal, Lokanath, Ananthavelu and others are in cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X