»   »  ವಿಮರ್ಶೆ:ಯಾವ ಜನ್ಮದ 'ಪೂಜಾ' ಫಲ?!

ವಿಮರ್ಶೆ:ಯಾವ ಜನ್ಮದ 'ಪೂಜಾ' ಫಲ?!

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಇಲ್ಲಿ ಪೂಜಾ ಗಾಂಧಿ ಮಿಸ್ ಮೆಂಟಲ್ ಮಂಜಿ, ಕಲ್ಪನಾ' ಲೋಕದ ಮಾನಸ ಸರೋವರದಲ್ಲಿ ಮಿಂದೆದ್ದ ಅಭಿನವ ಶರಪಂಜರಿ, ಮಂಜರಿ ರತ್ನಮಂಜರಿ! ಇಲ್ಲಿ ಇಟ್ಟಿದ್ದೇ ಕ್ಯಾಮೆರಾ, ಮಾಡಿದ್ದೇ ನಟನೆ, ತೋರಿಸಿದ್ದೇ ಸೀನು, ಆಡಿದ್ದೇ ಆಟ. ನಾಯಕಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆ. ಬಾಲ್ಯದಲ್ಲಿ ಕಂಡ ಕಷ್ಟ ಆಕೆಯನ್ನು ಹಾಗೆ ಮಾಡಿರುತ್ತದೆ.

ಬೆಕ್ಕನ್ನು ಹುಲಿ ಎನ್ನುತ್ತಾಳೆ, ಹುಲಿಯನ್ನು ಇಲಿಗೆ ಹೋಲಿಸುತ್ತಾಳೆ. ಹಗ್ಗ ಕಂಡರೆ ಹಿಗ್ಗಾ ಮಗ್ಗಾ ಹೆದರುತ್ತಾಳೆ, ಹೆದರಿಸುತ್ತಾಳೆ... ಹುಚ್ಚಿ...ಹೆಸರೇ ಹೇಳುವಂತೆ ಇದೊಂದು ಮಾನಸಿಕ ಅಸ್ವಸ್ಥ ಹುಡುಗಿಯ ಹುಚ್ಚುಮೆಚ್ಚಿನ ಕತೆ. ನಿರ್ದೇಶಕ ವೆಂಕಟೇಶ್ ಪಂಚಾಂಗಮ್ ಇಲ್ಲಿ ಕಡಿಮೆ ಬಜೆಟ್‌ಗೆ ಮೊರೆ ಹೋಗಿದ್ದಾರೆ. ಇಡೀ ಕತೆ ಒಂದು ಮನೆಯ ಸುತ್ತ ಗಿರ್ರನೆ ಗಿರಕಿ ಹೊಡೆಯುತ್ತದೆ.

ಪೂಜಾ ಗಾಂಧಿ ಇದ್ದಕ್ಕಿದ್ದಂತೆ ಕಿರುಚುತ್ತಾಳೆ, ಅರಚುತ್ತಾಳೆ, ನಾಲಿಗೆ ಮಡಚುತ್ತಾಳೆ, ಪರದೆಯ ಮುಂದಿರುವ ಮಂದಿಯನ್ನು ಪರಚುತ್ತಾಳೆ! ಇದೊಂಥರಾ ಮ್ಯಾಡ್ ಸ್ಟೋರಿ. ಹಾಗಂತ ಕ್ರೈಮ್ ಸ್ಟೋರಿಯಲ್ಲ, ಲವ್ ಸ್ಟೋರಿ ಅಲ್ಲವೇ ಅಲ್ಲ. ಈ ಸ್ಟೋರಿಯಲ್ಲಿ ಪೋರಿ ಠಪೋರಿ ಪೂಜಾ ಪ್ರೇಕ್ಷಕರ ಜತೆ ಲಗೋರಿ ಆಡುತ್ತಾಳೆ. ನಗುತ್ತಾಳೆ, ನಡುಗುತ್ತಾಳೆ, ಗುಡುಗುತ್ತಾಳೆ. ಹಗಲ ಹೊತ್ತೇ ನಕ್ಷತ್ರದಂತೆ ಮಿನುಗು'ತ್ತಾಳೆ... ಬಟಾಣಿ ವರ್ಸಸ್ ಕಡಲೆಕಾಯಿ!

ಒಟ್ಟು ಕತೆಯ ಎಳೆ ಮೊದಲೇ ಗೊತ್ತಾಗುತ್ತದೆ. ಗೊತ್ತು ಗುರಿ ಇಲ್ಲದ ಹಾದಿಯಲ್ಲಿ ಸಾಗುವ ಚಿತ್ರಕತೆ ನೀರಸಧಾರೆ ಹರಿಸುತ್ತದೆ. ಇಲ್ಲಿ ಹಾಡಿಲ್ಲ, ಪಾಡಿಲ್ಲ, ಎಲ್ಲಾ ಕಡೆ ಗೋಳಿನ ಗೋಳಗುಂಬಜ್. ತಾಜಾತನವಿಲ್ಲದ ಪೂಜಾ'ತನ. ತಾರಾಗಣ ಬಲು ಜೋರಾಗಿದೆ. ಅನಂತನಾಗ್, ಧರ್ಮ, ಸುಧಾರಾಣಿ, ಮನದೀಪ್ ರಾಯ್, ತಿಲಕ್... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅನಂತನಾಗ್ ನಟನೆ ಬಗ್ಗೆ ಎರಡು ಮಾತಿಲ್ಲ. ತಿಲಕ್ ಅತ್ಯುತ್ತಮ ಪೋಷಕನಟ ಎನ್ನುವುದರಲ್ಲಿ ಮೂರು ಮಾತಿಲ್ಲ, ಕತೆಯಲ್ಲ'! ಪುಟಾಣಿ ಪಾಪುವೊಂದು ಹುರಿದ ಬಟಾಣಿಯಂತೆ ಮಾತನಾಡುತ್ತದೆ.

ಅದು ಇಷ್ಟವಾಗುತ್ತದೆ. ಆಕೆಯ ಎದುರಿಗೆ ಪೂಜಾ ಗಾಂಧಿ ನಟನೆಯೂ ಅರ್ಧ ಬೆಂದ ಕಡಲೆಕಾಯಿ. ಧರ್ಮ/ ಸುಧಾರಾಣಿ ಜೋಡಿ ನೋಡಲು ಬಲು ಸೊಗಸು. ಕ್ಯಾಮೆರಾ ಬಳಕೆಯಲ್ಲಿ ಹೊಸ ಸಾಧ್ಯತೆ ಬಳಸಿಕೊಳ್ಳಬಹುದಿತ್ತು. ಅದು ನೆಟ್ಟ ಆಲದ ಮರದಂತೆ ಇಟ್ಟಲ್ಲೇ ಇರುತ್ತದೆ. ಹಿನ್ನೆಲೆ ಸಂಗೀತ ಕೇಳುತ್ತಾ ಕೇಳುತ್ತಾ, ತೂಕಡಿಸಿ, ತೂಕಡಿಸಿ ಬೀಳದಿರು ತಮ್ಮಾ... ಮಹಾ ಮಂಗಳಾರತಿ ಒಟ್ಟಾರೆ ಇದೊಂದು ಅದ್ಭುತ' ಹಾಗೂ ಎಂದೂ ಮರೆಯದ ಅನುಭವ ರೆಡಿಮೇಡ್ ಮ್ಯಾಡ್ ಚಿತ್ರ. ಪೂಜಾ ಗಾಂಧಿ ಯಾವ ಜನ್ಮದಲ್ಲಿ ಮಾಡಿದ ಪೂಜಾ ಫಲವೋ ನಾ ಕಾಣೆ ರಾಮನಾಥಾ, ಜಗನ್ನಾಥಾ, ವಿಶ್ವನಾಥಾ, ಪಾರ್ಶ್ವನಾಥಾ... ಸಿನಿಮಾ ಮುಗಿಯುವ ಹೊತ್ತಿಗೆ ಪ್ರೇಕ್ಷಕರು ನಿದ್ರೆಯಿಂದ ಎದ್ದೇಳು ಮಂಜುನಾಥಾ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada