»   » ಚಿತ್ರವಿಮರ್ಶೆ: ಕೃಷ್ಣ ನೀ ಲೇಟ್ ಆಗಿ ಬಾರೋ

ಚಿತ್ರವಿಮರ್ಶೆ: ಕೃಷ್ಣ ನೀ ಲೇಟ್ ಆಗಿ ಬಾರೋ

By: *ವಿನಾಯಕರಾಮ್ ಕಲಗಾರು,
Subscribe to Filmibeat Kannada

ಒಬ್ಬ ಕನ್ನಡದ ಗಜನಿ. ಕೇಳಿದ್ದನ್ನು ಹದಿನೈದೇ ನಿಮಿಷದಲ್ಲಿ ಮರೆತುಬಿಡುತ್ತಾನೆ. ಮೈ ತುಂಬಾ ಊರಿನವರ ಹೆಸರನ್ನೆಲ್ಲ ಬರೆದುಕೊಂಡಿರುತ್ತಾನೆ.ಆತನಿಗೆ ಹೆಣ್ಣು ಒಂದು ಮಾಯೆ ಎಂಬ ಭ್ರಮೆ. ನೀರ ಮೇಲೆ ಕುಳಿತು ತಪಸ್ಸು ಮಾಡುವ ಜಲಸ್ವಾಮಿಯ ಆರಾಧಕ ಆತ. ಎದುರಿಗೆ ಜಿಲೇಬಿ ಇದ್ದರೂ ಆತ ಕೈಕಟ್ಟಿ ಕೂತಿರುತ್ತಾನೆ.

ಇನ್ನೊಬ್ಬ ವೈಯಾರ ಮಾಡುವ ಮಾನವ ಬೊಂಬೆ. ನುಲಿಯುತ ನಲಿಯುತ ಬಾ... ಎಂದು ಒಂಬತ್ತನೇ ಮನೆಯಲ್ಲಿ ನಿಂತು ಒಲಿದಾಡುತ್ತಾನೆ. ಆಕೆ ರೈಲು ಶಬ್ದ ಕೇಳಿದರೆ ನಿಂತಲ್ಲೇ ಕುಣಿಯಲು ಶುರುಮಾಡುತ್ತಾಳೆ-ಶಿವಪ್ಪಾ ಕಾಯೋ ತಂದೇ... ಮೂರು ಲೋಕ ಸ್ವಾಮಿ ದೇವಾ... ಎಂದು ಕಣ್ ಮುಚ್ಚುತ್ತಾಳೆ!.

ಮತ್ತೊಬ್ಬನಿಗೆ ಎಲ್ಲ ಸರಿ ಇರುತ್ತದೆ. ಕುತ್ತಿಗೆ ಮಾತ್ರ ಆಗಾಗ ಎಡಭಾಗಕ್ಕೆ ವಾಲುತ್ತಲೇ ಇರುತ್ತದೆ. ಎದುರಿಗೆ ನಿಂತವನಿಗೆ ಇವನು ಯಾವ ಪುರುಷಾರ್ಥಕ್ಕೆ ಕರೆಯುತ್ತಿದ್ದಾನೆ ಎಂಬ ಅನುಮಾನ ಕಾಡುತ್ತದೆ!
***
ಹೀಗೆ ಒಂದೊಂದು ಪಾತ್ರವೂ ವಿಚಿತ್ರಾನ್ನ. ನಿರ್ದೇಶಕ ಮೋಹನ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ ಎಂಬ ಕಾರಣಕ್ಕೆ ಸಣ್ಣಪುಟ್ಟ ತಪ್ಪುಗಳಿಗೆ ಮಾಫಿ ಮಾಡಬೇಕು. ಕಾಮಿಡಿ ಚಿತ್ರ ಮಾಡುವಾಗ ಎದುರಾಗುವ ಗೋಳೇ ಅದು. ಇದ್ದಕ್ಕಿದ್ದಂತೇ ಸೀರಿಯಸ್ ವಿಷಯ ಹೇಳಹೋರಟರೆ ಜನಕ್ಕೆ ಅದು ಬೇಸರ ತರುತ್ತದೆ. ಹೀಗಿದ್ದೂ ಮೋಹನ್ ಒಂದು ಹಂತ ದಾಟಿದ ಮೇಲೆ ಕತೆಗೆ ಒಂದು ಓಘ ಕೊಡುತ್ತಾರೆ. ದ್ವಿತಿಯಾರ್ಧದ ನಂತರ ನಿರೂಪಣೆಯಲ್ಲಿ ವೇಗ ಕಾಣಬಹುದು.

ರಮೇಶ್ ಮತ್ತಷ್ಟು ಯಂಗ್ ಆಗಿ ಕಾಣುತ್ತಾರೆ. ನಟನೆ ಹಾಗೂ ಅವರ ಉಡುಗೆ ತೊಡುಗೆ ವ್ಯವಸ್ಥಿತ ರೂಪದಲ್ಲಿದೆ. ಮೋಹನ್ ಎಂದಿನಂತೇ ಕಾಮಿಡಿ ಮಾಡುತ್ತಾರೆ. ನಿಧಿ ಸುಬ್ಬಯ್ಯ ನಟನೆಯಲ್ಲಿ ಸುಧಾರಣೆ ಕಾಣಬಹುದು. ನೀತು ಎಂದಿನಂತೇ ಎಗರಾಡುತ್ತಾರೆ. 'ಬಡವರ ಬಟ್ಟೆ' ತೊಟ್ಟು, 'ಮೈ'ಕಲ್ ಜಾಕ್ಸನ್ ಮೈಮೇಲೆ ಬಂದಂತೆ ಆಡುತ್ತಾರೆ. ಟೆನ್ನಿಸ್, ಸುಂದರ ರಾಜ್, ಸುಂದರ್, ದತ್ತಣ್ಣ ಎಲ್ಲರಿಗೂ ನೂರಕ್ಕೆ ನೂರು ಅಂಕ ಕೊಡಬಹುದು. ಗೋಡ್ಖಿಂಡಿ ಸಂಗೀತ ಪರವಾಗಿಲ್ಲ. ಹಾಡಿನ ಸೆಟ್‌ಗಳ ಬಗ್ಗೆ ಮರುಮಾತಿಲ್ಲ. ಅಂದಹಾಗೇ ಈ ಕತೆ ಶೇಕ್ಸ್‌ಪೀಯರ್‌ನ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ನಾಟಕದ ಎಳೆ ಆಧರಿಸಿದ ಚಿತ್ರ. ಆ ಕತೆಯನ್ನು ಈಗಿನ ಕಾಲಘಟ್ಟಕ್ಕೆ ಹೊಂದಿಸುವಲ್ಲಿ ಮೋಹನ್ ಗೆದ್ದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada