For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ 'ತಮಸ್ಸು'ವಿವಾದಾತೀತ ಚಿತ್ರ

  By *ರಾಜೇಂದ್ರ ಚಿಂತಾಮಣಿ
  |

  ಚಿತ್ರದಲ್ಲಿ ಕಥೆಯಿದೆ. ಅಣ್ಣ ತಂಗಿಯ ಭಾವನಾತ್ಮಕ ಸಂಬಂಧಗಳಿವೆ . ಅನುರಾಗಕ್ಕೆ ಜಾಗವಿದೆ. ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳಿವೆ.ಸಂಭಾಷಣೆ ಸೊಗಸಾಗಿದೆ. ಬಿಗಿಯಾದ ನಿರೂಪಣೆಯಿದೆ. ಆದರೆ ಕಥೆ ವೇಗವಾಗಿ ಸಾಗುವುದಿಲ್ಲ. ಕಾಮಿಡಿಗೆ ಜಾಗವಿಲ್ಲ. ನಿಸ್ಸಂಶಯವಾಗಿ ಇದೊಂದು ಅಪ್ಪಟ ವಿವಾದಾತೀತ ಚಿತ್ರ.ಕ್ಲಾಸ್ ಚಿತ್ರಕ್ಕೆ ಇರಬೇಕಾದ ಎಲ್ಲ ಲಕ್ಷಣಗಳು 'ತಮಸ್ಸು' ಚಿತ್ರದಲ್ಲಿವೆ .

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾವೊಬ್ಬ ಮಹಾನ್ ಕಲಾವಿದ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ''ಭೀಕರ ಹಿಂಸೆಯ ದಾರಿಯಲ್ಲೂ ಅರಳುತ್ತವೆ ಪ್ರೀತಿಯ ಹೂಗಳು'' ಎಂಬ ಚಿತ್ರದ ಕಾವ್ಯಾತ್ಮಕ ಆಶಯಕ್ಕೆ ಅಗ್ನಿ ಶ್ರೀಧರ್ ನಿರ್ದೇಶನ ನೀರೆರೆದಿದೆ. ಚಿತ್ರದ ಮೊದಲರ್ಧ ಕೋಮುಗಲಭೆಗೆ ಮೀಸಲಾಗಿದ್ದರೆ. ದ್ವಿತೀಯಾರ್ಧ ಭಾವನಾತ್ಮಕ ಸಂಘರ್ಷಗಳ ತಾಕಲಾಟವಾಗಿದೆ.

  ಬೆಂಗಳೂರಿನಲ್ಲಿ ನಡೆಯುವ ಕೋಮು ಗಲಭೆ ಮೂಲಕ ಚಿತ್ರ ಆರಂಭವಾಗುತ್ತದೆ. ತ್ರಿಶೂಲ ಮತ್ತು ಖಡ್ಗಗಳಿಗೆ ಅಮಾಯಕ ಜನ ಬಲಿಯಾಗುತ್ತಾರೆ. ಒಂದು ಕಡೆ ಅಲ್ಲಾಹು ಅಕ್ಬರ್ ಮತ್ತೊಂದು ಕಡೆ ಜೈ ಶ್ರೀರಾಮ್ ಎಂಬ ನಿನಾದಗಳು. ಕೈಮಿರುತ್ತಿರುವ ಕಾನೂನು ಸುವ್ಯವಸ್ಥೆಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ವ್ಯವಸ್ಥೆ ಚುರುಕಾಗುತ್ತದೆ.

  ದಕ್ಷ ಪೊಲೀಸ್ ಅಧಿಕಾರಿ ಶಂಕರ್ (ಶಿವರಾಜ್ ಕುಮಾರ್) ಕೋಮುಗಲಭೆಯನ್ನು ಮಟ್ಟ ಹಾಕಲು ತನ್ನ ತಂಡದೊಂದಿಗೆ ಹೊರಡುತ್ತಾನೆ. ಮಫ್ತಿಯಲ್ಲಿದ್ದ ಅವರು ದಾಳಿಕೋರರರ ಕೈಗೆ ಸಿಕ್ಕಿ ತಲೆಗೆ ಬಲವಾದ ಪೆಟ್ಟು ತಿನ್ನುತ್ತಾರೆ. ಅಲ್ಲೇ ಇದ್ದ ಮುಸ್ಲಿಂ ಮನೆಯೊಂದರಲ್ಲಿ ತಲೆ ಮರೆಸಿಕೊಳ್ಳುತ್ತಾರೆ.

  ಇಲ್ಲಿಂದ ಚಿತ್ರಕಥೆ ಹೊಸ ತಿರುವು ಪಡೆಯುತ್ತದೆ. ಆ ಮುಸ್ಲಿಂ ಮನೆಯಲ್ಲಿ ಶಿವಣ್ಣನಿಗೆ ಒಳ್ಳೆಯ ಆದರ ಆತಿಥ್ಯಗಳು ಲಭಿಸುತ್ತವೆ. ಭಯ್ಯಾ ಎಂದು ಕರೆಯುವ ಮುಸ್ಲಿಂ ಹುಡುಗಿಯಲ್ಲಿ ಶಿವಣ್ಣನ ತಂಗಿಯೊಬ್ಬಳನ್ನು ಹುಡುಕಿಕೊಳ್ಳುತ್ತಾನೆ. ಆಕೆಯ ಹೆಸರು ಅಮ್ರೀನ್ ಸಭಾ. ಮುಂಜಾನೆ ಮಂಜಿನಂತೆ ಆಕೆ ಶಿವಣ್ಣನನ್ನು ಆವರಿಸಿಕೊಳ್ಳುತ್ತಾಳೆ. ಹಾಗೆಯೇ ಆಕೆಯ ತಂದೆಯ ಕಣ್ಣಲ್ಲಿ ತನ್ನ ತಂದೆಯನ್ನು ಕಾಣುತ್ತಾನೆ.

  ಇಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ. ತನ್ನ ಪ್ರೀತಿಯ ಮಡದಿ. ಮೊದಲ ಭೇಟಿ. ಅನುರಾಗ ಅರಳಿದ ಸಮಯ. ಚಿಗುರಿದ ಕನಸುಗಳಲ್ಲಿ ಶಿವಣ್ಣ ವಿಹರಿಸುತ್ತಾರೆ. ಜೊತೆ ಗೆಅಮ್ರೀನ್ ಳೊಂದಿಗಿನ ಅಣ್ಣ ತಂಗಿಯ ಸೆಂಟಿಮೆಂಟೂ ಬಲವಾಗುತ್ತಾ ಹೋಗುತ್ತದೆ. ಶಿವಾಜಿ ನಗರ, ಟ್ಯಾನರಿ ರಸ್ತೆ ಮತ್ತು ಗೌರಿಪಾಳ್ಯಗಳಲ್ಲಿ ಜೈಶ್ರೀರಾಮ್, ಅಲ್ಲಾಹು ಅಕ್ಬರ್ ನಿನಾದಗಳು ಕಿವಿ ತೂತಾಗಿಸುತ್ತವೆ.

  ಅಮ್ರೀನ್ ಳ ಅಣ್ಣ ಇಮ್ರಾನ್ ನನ್ನು ಭಯೋತ್ಪಾಕ ಎಂದು ತಿಳಿದು ಶಂಕರ್ ಹಿಂದು ಮುಂದು ನೋಡದೆ ತಲೆಗೆ ಪಿಸ್ತೂಲ್ ಇಟ್ಟು ಉಡಾಯಿಸಿರುತ್ತಾನೆ. ಬಳಿಕ ಶಂಕರ್ ಗೆ ಗೊತ್ತಾಗುತ್ತದೆ ತಾನು ಸಾಯಿಸಿದ್ದು ಉಗ್ರನನಲ್ಲ ಒಬ್ಬ ಅಮಾಯಕನನ್ನು ಎಂಬ ಸತ್ಯ ಸಂಗತಿ. ಇದರಿಂದ ಪಶ್ಚಾತ್ತಾಪ ಪಡುತ್ತಾನೆ. ತನ್ನಲ್ಲೇ ನೋವು ಅನುಭವಿಸುತ್ತಾನೆ.

  ತಮ್ಮ ಅಣ್ಣನನ್ನು ಸಾಯಿಸಿದ್ದು ಶಂಕರ್ ಎಂಬುದು ಅಮ್ರೀನ್ ಹಾಗೂ ಆಕೆಯ ತಂದೆಗೆ ಗೊತ್ತಾಗುತ್ತದೆ. ತಂಗಿ ದೂರವಾಗುತ್ತಾಳೆ. ಆಕೆಯ ತಂದೆ ಕಣ್ಣಿನಲ್ಲಿ ಶಂಕರ್ ವಿಲನ್ ಆಗುತ್ತಾನೆ. ಕಡೆಗೆ ಇವರಿಬ್ಬರ ಪ್ರೀತಿ ಮಮಕಾರಗಳನ್ನು ಹೇಗೆ ಗಳಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕೊನೆಯ ಘಟ್ಟದಲ್ಲಿ ಕಾಣಬಹುದು .

  ಶಿವರಾಜ್ ಕುಮಾರ್ ಅವರ ಮಡದಿ ಪಾತ್ರದಲ್ಲಿ ಪದ್ಮಪ್ರಿಯಾ ಅವರ ಅಭಿನಯ ಗಮನಸೆಳೆಯುತ್ತದೆ. ಇಬ್ಬರ ನಡುವಿನ ಭಾವನಾತ್ಮಕ ಸಂಘರ್ಷಗಳು ರಾಜ್ ಕುಮಾರ್ ಹಾಗೂ ಲಕ್ಷ್ಮಿ ನಟನೆಯನ್ನು ನೆನಪಿಸುತ್ತದೆ. ಇಮ್ರಾನ್ ಆಗಿ ಯಶ್ ಮಿಂಚುತ್ತಾರೆ. ಉಳಿದಂತೆ ನಾಸಿರ್ ಅಭಿನಯನ್ನು ಬೆಟ್ಟು ಮಾಡಿ ತೋರಿಸುವಂತಿಲ್ಲ. ಹರ್ಷಿಕಾ ಪೂಣಚ್ಚ ಹಾಗೂ ಶಿವಣ್ಣ ಜೋಡಿ ರಾಧಿಕಾ ಶಿವಣ್ಣನ ಅಣ್ಣ ತಂಗಿ ಸೆಂಟಿಮೆಂಟನ್ನು ಮೀರಿಸುವಂತಿದೆ.

  ಚಿತ್ರದ ನಿಜವಾದ ಜೀವಾಳ ಹಾಡುಗಳು. ಸಂಧೀಪ್ ಚೌಟ ಅವರ ಸಂಗೀತ ಮಾಧುರ್ಯ ಮನಮಿಡಿಯುವಂತಿದೆ. ರಮ್ಯ ಶ್ರೀಧರ್ ಹಾಗೂ ಅಗ್ನಿ ಶ್ರೀಧರ್ ಅವರ ಸಾಹಿತ್ಯ ಅರ್ಥಪೂರ್ಣವಾಗಿದೆ. ಮಸ್ತಾನ್ ಬಾಯ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ಪಾತ್ರ ಗಮನಾರ್ಹವಾಗಿದೆ.ಸುಂದರನಾಥ್ ಸುವರ್ಣ ಅವರ ಛಾಯಾಗ್ರಹಣ ಸುಂದರವಾಗಿದೆ.

  ಗಿರೀಶ್ ಮಟ್ಟಣ್ಣನವರ್, ಸತ್ಯ ಮುಂತಾದ ಪಾತ್ರಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕೋಮುವಾದ ಕುರಿತ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ. ಆದರೆ ತನ್ನದೇ ನಿರೂಪಣೆಯಿಂದ ಅಗ್ನಿ ಶ್ರೀಧರ್ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ಕಥೆಯಲ್ಲಿ ವೇಗವಿಲ್ಲದೆ ಇರುವುದು ಪ್ರೇಕ್ಷಕರ ತಾಳ್ಮೆಗೆ ಸವಾಲೊಡ್ಡುತ್ತದೆ. ಹಾಗೆಯೇ ಕಥೆಗೆ ಒಂಚೂರು ಕತ್ತರಿ ಹಾಕಿ ಕಾಮಿಡಿಗೆ ಒತ್ತು ಕೊಡಬಹುದಿತ್ತು.

  ಕೆಲವೊಂದು ಸನ್ನಿವೇಶಗಳು ನಾಟಕೀಯವಾಗಿದೆ. ಉದಾಹರಣೆ ಬಾಂಬ್ ಸ್ಫೋಟದಲ್ಲಿ ಸತ್ತು ಬಿದ್ದಿದ್ದ ಚಿಕ್ಕ ಹುಡುಗಿಯೊಬ್ಬಳನ್ನು ನೋಡಿ ಶಂಕರ್ ಮನಕಲಕುತ್ತದೆ. ಆಕೆಯ ಮುಖದ ಮೇಲೆ ಕೈಯಿಟ್ಟಾಗ ಆಕೆ ಕಣ್ಣ್ಣು ರೆಪ್ಪೆಗಳಲ್ಲಿ ಚಲನೆ ಉಂಟಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಕಥೆ ಸುದೀರ್ಘವಾಗಿದೆ ಅನ್ನಿಸುತ್ತದೆ. ಕಡೆಗೆ ಕಥೆ ಹೀಗೇ ಆಗುತ್ತದೆ ಎಂಬುದು ಪ್ರೇಕ್ಷಕನಿಗೆ ಗೊತ್ತಗುತ್ತದೆ. ಹಾಗಾಗಿ ಅಗ್ನಿ ಶ್ರೀಧರ್ ನಿರ್ದೇಶನದಲ್ಲಿ ಇನ್ನೂ ಏನೋ ಇರಬೇಕಾಗಿತ್ತು ಎಂದು ಪ್ರೇಕ್ಷಕರು ಬಯಸುತ್ತಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X